ಮೂಡುಬಿದಿರೆ : ಸಂಗೀತ ಲೋಕದ ದಿಗ್ಗಜರಾದ ವಯೋಲಿನ್ ವಾದಕ ಮೈಸೂರು ಮಂಜುನಾಥ, ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಹಾಗೂ ಖ್ಯಾತ ಚಲನಚಿತ್ರ ಹಿನ್ನೆಲೆಗಾಯಕ ವಿಜಯ ಪ್ರಕಾಶ್ ಇವರಿಗೆ ದಿನಾಂಕ 17-12-2023 ರಂದು ‘ಆಳ್ವಾಸ್ ವಿರಾಸತ್-2023’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲುರಂಗ ಮಂದಿರದ ವಿಶಾಲ ವೈಭವದ ವೇದಿಕೆಯಲ್ಲಿ ಆಸೀನರಾದ ಮೂವರು ಸಾಧಕರಿಗೆ ಅವರದ್ದೇ ರಾಗ ಸಂಯೋಜನೆಯ ವಯೋಲಿನ್, ಬಾನ್ಸುರಿ ಹಾಗೂ ಸಂಗೀತದ (ಜೈ ಹೋ) ಮೂಲಕ ಅಭಿಮಾನದ ಪ್ರೀತಿಯನ್ನು ಧಾರೆ ಎರೆಯಲಾಯಿತು. ಶಾಲು, ಹೂಹಾರ, ಸ್ಮರಣಿಕೆ, ಪ್ರಶಸ್ತಿ ಪತ್ರದ ಜೊತೆಗೆ ಒಂದು ಲಕ್ಷ ರೂಪಾಯಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪನ್ನೀರು, ತಿಲಕ, ಪುಷ್ಪಾರ್ಚನೆ ಹಾಗೂ ಆರತಿ ಮೂಲಕ ಗೌರವಿಸಲಾಯಿತು. ಆಳ್ವಾಸ್ ಸಾಂಸ್ಕೃತಿಕ ತಂಡವು ‘ಸ್ವರಗಾನದ ಆರತಿ’ ಗಾನಸುಧೆ ಹರಿಸಿತು.
ಪ್ರಶಸ್ತಿಗೆ ಪ್ರತಿಕ್ರಿಯಿಸಿ ವಿನಮ್ರತೆಯಿಂದ ಮಾತನಾಡಿದ ಮೈಸೂರು ಮಂಜುನಾಥ, “ನನ್ನ ಲೋಕದ ಸಮಸ್ತ ಸಂಭ್ರಮ ಮೂಡುಬಿದಿರೆಗೆ ಆಳ್ವರು ತಂದಿದ್ದಾರೆ. ದೇವೇಂದ್ರ ನಾಚುವ ಹಾಗೆ ವಿರಾಸತ್ ಭಾಸವಾಗುತ್ತಿದೆ. ಅವರು ಕೇವಲ ವೈಭವ ಸೃಷ್ಟಿಸಿಲ್ಲ. ಅದನ್ನು ಜನರಿಗೆ ಸಮರ್ಪಿಸಿ ಶ್ರೇಷ್ಠರಾಗಿದ್ದಾರೆ. ಮೂಡುಬಿದಿರೆ ಎಂಬ ಸಾಮಾನ್ಯ ಊರನ್ನು ವಿಶ್ವ ಭೂಪಟಕ್ಕೆ ಸೇರಿಸಿದ್ದಾರೆ” ಎಂದು ಬಣ್ಣಿಸಿದರು. “ಕಲೆಗೆ ಗೌರವ ಹಾಗೂ ವೈಭವವನ್ನು ತಿಳಿಯಲು ಜಗತ್ತಿಗೆ ಇಂದು ಮೂಡುಬಿದಿರೆ ಮಾಪಕವಾಗಿದೆ. ಇಲ್ಲಿ ಪಾಲ್ಗೊಳ್ಳಲು ಬಯಸಿದ ಕಲಾವಿದರ ಸಂಖ್ಯೆ ಬಹು ದೊಡ್ಡದಿದೆ. ಇಲ್ಲಿ ಇಲ್ಲದಿರುವುದು ಏನು?” ಎಂದು ಭಾವುಕರಾದರು. ಕಲೆಯ ಮೂಲ ಉದ್ದೇಶವೇ ಸೌಂದರ್ಯ ಅರಿತು ಆಸ್ವಾದಿಸುವುದು. ಅದನ್ನು ಆಳ್ವರು ಮಾಡುತ್ತಿದ್ದು, ಇಲ್ಲಿ ನೂರಾರು ಕಲಾವಿದರು ಹುಟ್ಟಿಕೊಳ್ಳುತ್ತಾರೆ. ಆಳ್ವರು ಸಾಂಸ್ಕೃತಿಕ ರಾಯಭಾರಿ ಹಾಗೂ ವಿರಾಸತ್ ಪ್ರಶಸ್ತಿಯು ರಾಷ್ಟ್ರೀಯ ಪ್ರಶಸ್ತಿಗೂ ಮಿಗಿಲು” ಎಂದು ವಿನಮ್ರತೆ ವ್ಯಕ್ತ ಪಡಿಸಿದರು.
ಸಂಸದ ನಳಿನ್ ಕುಮಾರ್‌ಕಟೀಲ್ ಮಾತನಾಡಿ, “ಆಳ್ವರ ನೇತೃತ್ವದಲ್ಲಿ ಮೂಡಬಿದಿರೆಯಲ್ಲಿ ಸ್ವರ್ಗ ಲೋಕ ಸೃಷ್ಟಿಯಾಗಿದೆ. ಮನಸ್ಸು ಅರಳಿಸುವ ಭಾರತೀಯ ಸಂಸ್ಕೃತಿಯನ್ನು ಗೌರವಿಸುವ ಆಳ್ವರ ಪರಿಶ್ರಮದ ಫಲ ಇದು. ಆಳ್ವಾಸ್ ವಿರಾಸತ್ ಪ್ರಶಸ್ತಿ ಪದ್ಮಶ್ರೀಗೂ ಮಿಗಿಲು” ಎಂದು ಬಣ್ಣಿಸಿದರು.
ಅತಿಥಿಗಳನ್ನು ಬರಮಾಡಿಕೊಂಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, “ವಿರಾಸತ್ ಕೇವಲ ಮನೋರಂಜನಾ ಕಾರ್ಯಕ್ರಮ ಅಲ್ಲ, ದೇಶದ ಕಲೆಯನ್ನು ಗೌರವಿಸುವ ಹಬ್ಬ. ನಾಡಿನಲ್ಲಿ ಕಲೆ ಗೌರವಿಸುವ ಸಂಘಟಕ ಹಾಗೂ ಸೌಂದರ್ಯ ಪ್ರಜ್ಞೆ ಇರುವ ಪ್ರೇಕ್ಷಕ ವರ್ಗ ಬೇಕು. ಭ್ರಷ್ಟತೆ ಎಲ್ಲಿಯೂ ಸೋಂಕ ಬಾರದು. ಕೃಷಿಕ, ಯೋಧ, ಕಲಾವಿದರನ್ನು ಗೌರವಿಸುವ ಆಳ್ವಾಸ್ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ 7 ಮೇಳಗಳನ್ನು ಈ ಬಾರಿ ಸಂಘಟಿಸಿದೆ. ನಮ್ಮ ಮನೆಯ ಶ್ರೇಷ್ಠ ಕಲಾವಿದರನ್ನು ಗೌರವಿಸುತ್ತಿದ್ದೇವೆ” ಎಂದು ಧನ್ಯತೆ ವ್ಯಕ್ತಪಡಿಸಿದರು.
ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಸಂಸದ ನಾರಾ ಸಿಂಗ್, ಕರ್ನಾಟಕ ಸ್ಕೌಟ್ಸ್ ಮತ್ತುಗೈಡ್ಸ್ಆಯುಕ್ತ ಪಿ.ಜಿ.ಆರ್.ಸಿಂಧ್ಯ, ಶಾಸಕ ವೇದವ್ಯಾಸಕಾಮತ್, ಮಾಜಿ ಸಚಿವ ಅಭಯಚಂದ್ರ ಜೈನ್, ಶಾರದಾ ವಿದ್ಯಾಲಯದ ಎಂ.ಬಿ.ಪುರಾಣಿಕ್, ಉದ್ಯಮಿ ಶ್ರೀಪತಿ ಭಟ್ ಉಪಸ್ಥಿತರಿದ್ದರು.
ಆಳ್ವಾಸ್ ವಿರಾಸತ್ ಪ್ರಶಸ್ತಿ ಪುರಸ್ಕೃತ ಮೂವರ ಕಛೇರಿಯು ಅಭಿಮಾನಿಗಳನ್ನು ಸಂಗೀತ ಲೋಕಕ್ಕೆ ಕೊಂಡೊಯ್ದಿತು. ಅದು ವಿರಾಸತ್ ವೇದಿಕೆಯಲ್ಲಿ ನಡೆದ ‘ತಾಳ ವಾದ್ಯ ಸಂಗೀತ’ ಕಾರ್ಯಕ್ರಮದ ನಿನಾದ, ವಿಜಯ ಪ್ರಕಾಶ್ ಅವರ ಸ್ವರಮಾಧುರ್ಯ, ಮೈಸೂರು ಮಂಜುನಾಥ ಅವರ ವಯೋಲಿನ್ ವೈಭವ ಹಾಗೂ ಪ್ರವೀಣ್ ಗೋಡ್ಖಿಂಡಿ ಅವರ ಕೊಳಲಿನ ನಾದ ಹಾಲು ಬೆಳದಿಂಗಳು ಚೆಲ್ಲಿದ ವಿದ್ಯುದಲಂಕಾರದ, ತುಂಬಿ ತುಳುಕುತ್ತಿರುವ ಸಭಾಂಗಣದಲ್ಲಿ ಸೇರಿದ ಶ್ರೋತೃಗಳ ಮನಸೂರೆಗೊಂಡಿತು.
ಆರಂಭದಲ್ಲಿ ಹಂಸಧ್ವನಿ ರಾಗದ ಆಲಾಪನೆ ಮೂಲಕ ಕಛೇರಿ ಆರಂಭಗೊಂಡಿತು. ಗೋಡ್ಖಿಂಡಿ ಬಾನ್ಸುರಿಗೆ ಮೈಸೂರು ಮಂಜುನಾಥ್ ಜುಗಲ್ ಬಂಧಿಯಾದರು. ಮುಸ್ಸಂಜೆಯ ಗೋಧೋಳಿ ಲಗ್ನದಲ್ಲಿ ಮನೆ ಮನೆಗಳಲ್ಲಿ ದೀಪ ಬೆಳಗಿದಂತೆ, ಬೆಳಂದಿಗಳು ತುಂಬಿದ ವೇದಿಕೆಯಲ್ಲಿ ಗಣೇಶ ಸ್ತುತಿ ಮೂಲಕ ಹಂಸಧ್ವನಿ ರಾಗದ ‘ವಾತಾಪಿ ಗಣಪತಿಂ ಭಜೇ..; ನಾದ ಹೊನಲಾಯಿತು. ನಾದಸುಧೆಯ ಏರಿಳಿತವು ಸಭಾಂಗಣದಲ್ಲಿ ಸಂಭ್ರಮದ ಅಲೆಯನ್ನು ಸೃಷ್ಟಿಸಿತು. ಜುಗಲ್ ಬಂಧಿಯು ಉಚ್ಛ್ರಾಯ ಸ್ಥಿತಿಯನ್ನು ಸಿಂಗರಿಸಿದಾಗ, ಎಲ್ಲರಿಗೂ ರೋಮಾಂಚನ. ಆಗ ಸಭಾಂಗಣದಲ್ಲಿ ಚಪ್ಪಾಳೆಯ ಸುರಿಮಳೆ.
ಬಳಿಕ ಅವರ ಜೊತೆಗೂಡಿದ ಕರ್ನಾಟಕ ಸಂಗೀತ ಖ್ಯಾತಿಯ ವಿಜಯ ಪ್ರಕಾಶ್, ಉಡುಪಿ ಶ್ರೀಕೃಷ್ಣ ಆರಾಧನೆಯ ‘ಕೃಷ್ಣಾ ನೀ ಬೇಗನೇ ಬಾರೋ…’ ಹಾಡಿದರು. ಯಮನ ಕಲ್ಯಾಣಿ ಮಿಶ್ರಛಾಪುರಾಗದಲ್ಲಿ ‘ಕೃಷ್ಣಾ’ ಎಂದು ಆಲಾಪನೆ ಆರಂಭಿಸಿದ ವಿಜಯ ಪ್ರಕಾಶ್ ನಾದ ಸುಧೆ ಹರಿಸಿದರು. ‘ತಾಯಿಗೆ ಬಾಯಲ್ಲಿ ಜಗವನ್ನುತೋರಿದ’ ಎಂಬ ಸಾಲುಗಳು ಮೂಡುಬಿದಿರೆಯಲ್ಲಿ ವಿರಾಸತ್ ದರ್ಶನವನ್ನು ವಿಶ್ಲೇಷಿಸುವಂತೆ ಅಪ್ಯಾಯಮಾನವಾಯಿತು. ಪ್ರವೀಣ್‌ಗೋಡ್ಖಿಂಡಿ ಅವರ ರಾಗ ಸಂಯೋಜನೆಯ ‘ಕೃಷ್ಣಾ’ ಆಲ್ಬಮ್’ನ ಮೋಹನ ರಾಗದ ತುಣುಕೊಂದನ್ನು ಆರಿಸಿಕೊಂಡ ವಿದ್ವಾಂಸತ್ರಯರು ನಾದಲೋಕವನ್ನೇ ಸೃಷ್ಟಿಸಿದರು. ನಿಮ್ಮ ಪ್ರೇರಣೆಯಿಂದ ಇದೆಲ್ಲ ಸಾಧ್ಯವಾಗಿದೆ ಎಂದು ವಿಜಯ ಪ್ರಕಾಶ್ ಧನ್ಯತೆ ವ್ಯಕ್ತಪಡಿಸಿದರು. ಪಿಯಾನೋದಲ್ಲಿ (ಕೀ ಬೋರ್ಡ್) ಪ್ರವೀಣ್ ಡಿ. ರಾವ್, ಮೃದಂಗದಲ್ಲಿ ತುಮಕೂರು ಡಿ. ರವಿಶಂಕರ್, ತಬಲದಲ್ಲಿ ವೇಣುಗೋಪಾಲ ಹಾಗೂ ಡ್ರಮ್ಸ್ ನಲ್ಲಿ ಅರುಣ್‌ಕುಮಾರ್ ಸಾಥ್ ನೀಡಿದರು. ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿ ಪ್ರಖ್ಯಾತ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ವಿಜಯ್ ಪ್ರಕಾಶ್ ಹಾಗೂ ಸಂಗಡಿಗರ ‘ಸಂಗೀತ ರಸಸಂಜೆ’ಯಲ್ಲಿ ರಾಗಗಳದ್ದೇ ನರ್ತನ, ಕನ್ನಡ ಹಾಡುಗಳ ರೋಮಾಂಚನ. `ಭಜರಂಗಿ’ ಸಿನಿಮಾದ ‘ನಂದ ನಂದ ಶ್ರೀ ಕೃಷ್ಣ ನನ್ನ ಬಂಧುವೇ ನೀ ಶ್ರೀ ಕೃಷ್ಣ’ ಹಾಡಿನ ಮೂಲಕ ಕಾಮನಬಿಲ್ಲಿನ ಬೆಳಕಿನ ವೇದಿಕೆಗೆ ಬಂದ ಮುದ್ದು ಮೊಗದ ಅಪ್ಪನ ಪ್ರೀತಿಯ ಹುಡುಗಿ ಅನುರಾಧ ಭಟ್, ಸಂಗೀತ ರಸಸಂಜೆಗೆ ಮುನ್ನುಡಿ ಬರೆದರು. ತಂದೆಯ ಬೆವರ ಹನಿಗೆ ಮಕ್ಕಳ ಪ್ರೀತಿಯ ಮುತ್ತುಗಳನ್ನು ತೊಡಿಸಿದ, ತಾನೇ ‘ಚೌಕ’ ಸಿನಿಮಾಕ್ಕೆ ಹಾಡಿದ ‘ನಾನು ನೋಡಿದ ಮೊದಲ ವೀರ … ಅಪ್ಪಾ ಐ ಲವ್ ಯೂ ಪಾ ..’ ಹಾಡಿದಾಗ ಪ್ರೇಕ್ಷಕ ವರ್ಗದಲ್ಲಿನ ತಂದೆ-ಮಗಳು-ಮಗ ಮಾತ್ರವಲ್ಲ ತಾಯಿಯಂದಿರೂ ಭಾವುಕರಾದರು.
ವರನಟ ರಾಜ್‌ಕುಮಾರ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ತಂದ ‘ಜೀವನಚೈತ್ರ’ ಸಿನಿಮಾದ ‘ನಾದಮಯ.. ಈ ಲೋಕವೆಲ್ಲ’ ಹಾಡನ್ನು ಶ್ರೀ ಹರ್ಷ ಸುಧೆಯಾಗಿಸಿದರು. ಸೇರಿದ ಪ್ರೇಕ್ಷಕರಿಗೆ ಕಾಶಿ ಹರಿದ್ವಾರ ದದರ್ಶನವನ್ನು ವಿರಾಸತ್ ಸಭಾಂಗಣದಲ್ಲಿ ನೀಡಿದರು. “ಈ ರೀತಿಯ ನಾದ ಕೇಳಲು ಮೂಡುಬಿದಿರೆಗೇ ಬರಬೇಕು. ಪ್ರತಿ ಹಾಡೂ ಮತ್ತೆ ಮತ್ತೆ ಹಾಡುವಾಗ ನನಗೆ ಹೊಸತು. ಅದಕ್ಕೆ ಕೇಳುಗರೇ ಕಾರಣ” ಎಂದ ವಿಜಯ್ ಪ್ರಕಾಶ್ ಅವರು, “ಡಾ.ಮೋಹನ ಆಳ್ವ ಅವರಿಗೆ ನಾವೆಲ್ಲ ಸೇರಿ ಗೌರವಿಸುವ” ಎನ್ನುತ್ತಲೇ, ‘ಗೊಂಬೆ ಹೇಳುತ್ತೈತೆ ಮತ್ತೆ ಹೇಳುತ್ತೈತೆ…’ ಎಂದು ತಮ್ಮ ನಿಷ್ಕಲ್ಮಶ ಮುಗ್ಧ ಭಾವ ಲಹರಿಯಲ್ಲೇ ಮುದ್ದಾಡಿದರು. ಪಿಯಾನೋ ನಾದಕ್ಕೆ ಪ್ರೇಕ್ಷಕರೆಲ್ಲ`ಗೊಂಬೆ ಹೇಳುತ್ತೈತೆ… ಭಾರತ ಹೇಳುತ್ತೈತೆ ನೀನೇ ರಾಜಕುಮಾರ..’ ಎಂದು ಹಾಡಿಡಾ.ಎಂ.ಮೋಹನ ಆಳ್ವ ಅವರನ್ನು ತೋರಿಸಿದರು.
`ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ’ ಎಂಬ `ಕಿರಕ್ ಪಾರ್ಟಿ’ ಹಾಡಿಗೆ ಪ್ರೇಕ್ಷರದ್ದೇ ಕೋರಸ್… `ಅರ್ರರೇಅರ್ರರೇ… ಅಯ್ಯಯ್ಯೋ’ ಎಂಬ ಝೇಂಕಾರ. ಕೈ ಬೀಸುತ್ತಾ ಸಾಗರದ ಅಲೆಯನ್ನೇ ಪ್ರೇಕ್ಷಕರು ಸೃಷ್ಟಿಸಿದರು. ವಿಜಯ್ ಪ್ರಕಾಶ್ ಹಾಡಿನ ವೇಗ ಹೆಚ್ಚಿಸಿದಾಗ ವಿದ್ಯಾರ್ಥಿಗಳೆಲ್ಲ ಜೊತೆ ಹಾಡಿದರು. ಆಗ ತಮ್ಮ ಮೊಬೈಲ್ ಲೈಟ್ ತೆಗೆದ ಜನರು ‘ಮಿಂಚುಳ್ಳಿ ಲೋಕ’ವನ್ನೇ ಸೃಷ್ಟಿಸಿದರು.
ಬಳಿಕ ‘ಕಾಂತಾರಾ’ದ ‘ಸಿಂಗಾರ ಸಿರಿ…’ ಪ್ರೇಮ ಪರ್ವ. ವಿಜಯ್ ಪ್ರಕಾಶ್ ಜೊತೆ ಅನುರಾಧ ಭಟ್ ಯುಗಳ ಗೀತೆ ಹಾಡಿದರು. ‘…ಮನದ ಮಗು ಹಠಮಾಡಿದೆ..’ ಎಂದಾಗ ವಿದ್ಯಾರ್ಥಿಗಳ ‘ಕೊಂಗಾಟ’, ‘ಸಂಜೆಯ ಕೆನ್ನೆಯ ಮೇಲೆ …’ ಎಂದು ವಿಜಯ್ ಪ್ರಕಾಶ್ ಹಾಡುವಾಗ ಪ್ರೀತಿಯ ಕೆಂಬಣ್ಣದಂತೆ ವಿರಾಸತ್ ವೇದಿಕೆ ಕಂಗೊಳಿಸಿತು.
ಗಾಯಕಿ ಐಶ್ವರ್ಯ ರಂಗರಾಜನ್ ಅವರು, ‘ಅಯಿಗಿರಿ ನಂದಿನಿ’ ಹಾಡಿನ ಮೂಲಕ ಭಕ್ತಿ ಲಯ ಹೊಮ್ಮಿಸಿದರು. ‘ಎಲ್ಲಿಕಾಣಿ… ಎಲ್ಲಿಕಾಣಿರಾ… ಎಲ್ಲವ್ವ ನಿಮ್ಮ…’ ಸಾಲಿನಲ್ಲಿ ಸವದತ್ತಿ ಎಲ್ಲಮ್ಮನ ಸ್ತುತಿಸಿದರು. ಆಗ ಹೊಮ್ಮಿದ್ದು ‘ಉಧೋಉಧೋ’ ಎಂಬ ಜೈಕಾರ.
ಮಲೈ ಮಹದೇಶ್ವರನನ್ನು (ಶಿವ) ಆರಾಧಿಸುವ ‘ಸೋಜುಗಾದ ಸೂಜಿ ಮಲ್ಲಿಗೆ .. ಮಹಾದೇವ ಮಂಡೆ ಮೇಲೆ ದುಂಡು ಮಲ್ಲಿಗೆ’ ಎಂದು ಗಾಯಕಿ ಶಾಶ್ವತಿ ಕಶ್ಯಪ್ ಹಾಡಿದಾಗ ‘ಮಹಾದೇವ… ಮಹಾದೇವ…’ ಅನುರಣನ.
ಸರಿಗಮ ಪಖ್ಯಾತಿಯ ಶ್ರೀ ಹರ್ಷ ಅವರು ‘ಬೆಂಕಿಯಲ್ಲಿ ಅರಳಿದ ಹೂ’ ಚಿತ್ರದ ‘ತಾಳಿ ಕಟ್ಟುವ ಶುಭ ವೇಳೆ..’ ಮಿಮಿಕ್ರಿ ಮಿಶ್ರಿತ ಗಾನ ಹರಿಸಿದರು. ಮೊಲ, ನರಿ, ಜಿಂಕೆ, ಗಿಳಿ, ಆನೆ, ಕೋಗಿಲೆ ಸೇರಿದಂತೆ ಪ್ರಾಣಿ ಪಕ್ಷಿಗಳ ಸ್ವರ ಹೊಮ್ಮಿಸಿದರು. ‘ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ’ ಹಾಡುವ ಮೂಲಕ ಗಾಯಕ ನಿಖಿಲ್ ಪಾರ್ಥಸಾರಥಿ, ಕನ್ನಡಿಗರ ಕಣ್ಮಣಿ ಪುನೀತ್ ರಾಜ್‌ಕುಮಾರ್ ನೆನಪಿಸಿದರು. ಆಗ ಎಲ್ಲೆಡ ‘ತನನಾನತನನಾನತನಾನನ…’ ನಿನಾದದ ಕಂಪನ. ಯುಗಳ ಗೀತೆಯನ್ನುಗಾಯಕಿ-ಗಾಯಕ ಹಾಡುತ್ತಾರೆ. ‘ಕೋಟಿಗೊಬ್ಬ’ ಸಿನಿಮಾಕ್ಕೆ ವಿಜಯ್ ಪ್ರಕಾಶ್ ಹಾಗೂ ಶ್ರೇಯಾ ಘೋಷಾಲ್, ‘ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ’ ಹಾಡಿದ್ದರು. ವಿರಾಸತ್ ವೇದಿಕೆಯಲ್ಲಿ ಶನಿವಾರ ಖುದ್ದು ಶ್ರೇಯಾ ಘೋಷಾಲ್ ಇದನ್ನು ಹಾಡಿದ್ದರೆ, ಭಾನುವಾರ ವಿಜಯ ಪ್ರಕಾಶ್ ಹಾಡಿದರು. ಅವರಿಗೆ ಐಶ್ವರ್ಯ ರಂಗರಾಜನ್ ಸಾಥ್ ನೀಡಿದರು.
ಅನಂತರ ತುಳುನಾಡಿನ ಪುಳಕ ನೀಡಿದ ವಿಜಯ್ ಪ್ರಕಾಶ್ ಅವರು ‘ಗಟ್ಟದಾ ಅಂಚಿದಾಯೆ ತೆನ್ ಕಾಯಿ ಬತ್ತ್ದ್ ತೂಯೇ… ಆಲೆನಾ ಪೊರ್ಲುಗು ಅಯ್ಯಯ್ಯೋ’ ಎಂದು ರಕ್ಷಿತ್ ಶೆಟ್ಟಿ ಅನನ್ಯ ಸಿನಿ ಪ್ರಯೋಗದ ‘ಉಳಿದವರು ಕಂಡಂತೆ’ಯ ದೃಶ್ಯಕಾವ್ಯದ ರಾಗ ಹರಿಸಿದರು. ‘ಇದು ಚರಿತ್ರೆ ಸೃಷ್ಟಿಸೋ ಅವತಾರ’ ಎಂದು ‘ಅವನೇ ಶ್ರೀಮನ್ ನಾರಾಯಣ’ ಸಿನಿಮಾದ ಹಾಡು ಹಾಡಿದರು. ರಾಬರ್ಟ್ ಸಿನಿಮಾದ ಗೆಳೆತನ ಸಾರುವ ‘ದೋಸ್ತಾ ಕಣೋ…’ ಹಾಡನ್ನು ನಿಖಿಲ್ ಪಾರ್ಥಸಾರಥಿ ಜೊತೆ ವಿಜಯ್ ಪ್ರಕಾಶ್ ಹಾಡಿದರು. ‘ಸಿಸ್ಟರ್ ಫ್ರಂ ಅನದರ್ ಮದರ್ ..’ ಎಂದು ಹೆಣ್ಣುಮಕ್ಕಳಿಗೆ ಗೌರವ ಸಲ್ಲಿಸಿದರು. ಅಲ್ಲದೇ, ‘ಇಲ್ಲಿರುವ ಎಲ್ಲರೂ ನನ್ನ ಸಹೋದರಿಯರು. ನನ್ನ ಹೆಂಡತಿ ಒಬ್ಬಳನ್ನು ಬಿಟ್ಟು’ ಎಂದು ವಿಜಯ್ ಪ್ರಕಾಶ್ ಹೇಳಿದಾಗ ನಗೆಗಡಲಲ್ಲಿ ಸಭಾಂಗಣ ಮಿಂದೆದ್ದಿತು.
ಬಳಿಕ ಅನುರಾಧಾ ಭಟ್ ಅವರು ಹಿಂದಿಯ ‘ಮೇರೆಡೋಲುನಾ’ ಹಾಡಿದರು. ರಸಸಂಜೆಯ ಕೊನೆ ಘಟ್ಟದಲ್ಲಿ ಹೊಮ್ಮಿದ್ದು ಶಿವನ ರುದ್ರ ನರ್ತನದ ಅಬ್ಬರದ ಸಂಗೀತ. ಶಿವನನ್ನು ಪಂಚಭೂತ ಕಲ್ಪನೆಯಲ್ಲಿ ಕರ್ನಾಟಕ, ಹಿಂದೂಸ್ತಾನಿ, ಜನಪದ, ಪಾಶ್ಚಾತ್ಯ ಪ್ರಕಾರಗಳ ಫ್ಯೂಷನ್ ನಲ್ಲಿ ಪ್ರಸ್ತುತ ಪಡಿಸಿದ ‘ಓಂಕಾರ ನಾದ’ವು ಪ್ರವೀಣ್ ಡಿ. ರಾವ್ ಸಂಯೋಜನೆಯಲ್ಲಿ ಮೂಡಿಬಂತು. ‘ಓಂ ನಮೋ ಶಿವಾಯಾ’ ನಾದವು ಮೇರೆ ಏರಿತು.
ಅಂತ್ಯದಲ್ಲಿ ‘ಜೈ ಹೋ’ ಝೇಂಕಾರವು ಮುಗಿಲು ಮುಟ್ಟಿತು. 2008ರಲ್ಲಿ ಆಸ್ಕರ್ ಗೆದ್ದ ‘ಜೈ ಹೋ’ ಹಾಡಿಗೆ ಮನ್ನಣೆ ಪಡೆದ ನಾಲ್ಕು ಕಲಾವಿದರಲ್ಲಿ ವಿಜಯ್ ಪ್ರಕಾಶ್ ಕೂಡ ಒಬ್ಬರು. ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಹಾಡು ಗ್ರ್ಯಾಪಮಿ ಪ್ರಶಸ್ತಿಯನ್ನು ಸಹ ಗೆದ್ದಿದೆ. ಹೀಗಾಗಿ ವಿಜಯ್ ಪ್ರಕಾಶ್ ಬದುಕಿಗೆ ‘ಜೈ ಹೋ’. ಅರುಣ್ ಕುಮಾರ್ (ಡ್ರಮ್ಸ್), ವೇಣುಗೋಪಾಲ್ ರಾಜು (ತಬಲ), ಪ್ರದ್ಯುಮ್ನ (ತಬಲ), ಪ್ರವೀಣ್ ಷಣ್ಮುಗಮ್ (ರಿಧಮ್ ಪ್ಯಾಡ್ಸ್), ಸುಮುಖ್ (ಪಾರ್ಕ್ಟ್ಯೂಷನ್), ಗೆರ್ರಿಅರ್ನೆಸ್ಟ್ (ಲೀಡ್‌ಗಿಟಾರ್), ಬೃತ್ವಕಾಲೆಬ್ (ಬಸ್ಸ್ಗಿಟಾರ್), ಹರ್ಷ ವರ್ಧನ್‌ರಾಜ್ (ಕೀ ಬೋರ್ಡ್), ಆಕಾಶ್‌ಪರ್ವ (ಕೀ ಬೋರ್ಡ್), ಬಿ. ರವಿಶಂಕರ್ (ಮೃದಂಗ), ಪ್ರವೀಣ್ ಡಿ. ರಾವ್ (ಸಂಯೋಜನೆ) ಸಹಕರಿಸಿದರು.