ಉಡುಪಿ : ಕನ್ನಡದ ಹಿರಿಯ ಲೇಖಕಿ, ಕಾದಂಬರಿಗಾರ್ತಿ, ಕಥೆಗಾರ್ತಿ ಉಡುಪಿಯ ತಾರಾ ಭಟ್ ದಿನಾಂಕ 06-11-2023ರಂದು ನಿಧನರಾದರು. ಆಂಗ್ಲ ಮತ್ತು ಕನ್ನಡ ಎರಡು ಭಾಷೆಗಳಲ್ಲೂ ಇವರ ಕೃತಿ ಪ್ರಕಟವಾಗಿ ಜನಮನ್ನಣೆಗಳಿಸಿವೆ. ತಮ್ಮ ಕಥೆ ಕಾದಂಬರಿಗಳಲ್ಲಿ ಶೋಷಣೆಯ ಬಗ್ಗೆ ಧ್ವನಿ ಎತ್ತಿದ ಇವರು ಕನ್ನಡದ ಖ್ಯಾತ ಲೇಖಕಿ ಶಾರದ ಭಟ್ ಅವರ ಸಹೋದರಿಯಾಗಿದ್ದಾರೆ. ಅವರ ನಿಧನ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಹಿರಿಯ ಲೇಖಕ ಮತ್ತು ಪ್ರಕಾಶಕರಾದ ಕೋಟೇಶ್ವರದ ಡಾ. ಭಾಸ್ಕರಾಚಾರ್ಯರ ಜೊತೆ ತಾರಾ ಭಟ್ ಅವರು ಚಡಗ ಪ್ರಶಸ್ತಿ ತೀರ್ಪುಗಾರರ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ತಾರಾ ಭಟ್ ಇವರು 1944 ಸೆಪ್ಟಂಬರ್ 03ರಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ‘ಅವ್ಯಕ್ತ’, ಮತ್ತು ‘ಲೋಟಸ್ ಪಾಂಡ್’ ಅವರ ಪ್ರಸಿದ್ಧ ಕಾದಂಬರಿಗಳು. ‘ಹೊಕ್ಕಳ ಬಳ್ಳಿ’, ‘ಸರ್ವಾಧಿಕಾರಿ’ ಮತ್ತು ‘ಪಂಚಶತ್ತಮ’ ಇವು ನಾಟಕಗಳು. ‘ಗಾಳಿಯಲ್ಲಿ ಹೆಪ್ಪುಗಟ್ಟಿದ ಮೌನ’, ‘ಬೋಳು ಮರದ ಕೊಂಬೆಗಳು’, ‘ಸರಿದು ಹೋದ ಕಾಲ’ ಎಂಬ ಕಥಾಸಂಕಲನಗಳನ್ನೂ ರಚಿಸಿದ್ದಾರೆ. ‘ಲೋಟಸ್‌ಪಾಂಡ್’ ಕಾದಂಬರಿಗೆ ‘ವರ್ಧಮಾನ ಪ್ರಶಸ್ತಿ’ ಮತ್ತು ‘ರಾಮಮನೋಹರ ದತ್ತಿನಿಧಿ ಪ್ರಶಸ್ತಿ’ ಲಭಿಸಿದೆ. ಇವರ ‘ಅವ್ಯಕ್ತ’ ಕಾದಂಬರಿಗೆ ಪುತ್ತೂರು ಕರ್ನಾಟಕ ಸಂಘದಿಂದ ಕೊಡಮಾಡುವ ‘ಉಗ್ರಾಣ ಪ್ರಶಸ್ತಿ’ಯ ಗೌರವ ದೊರೆತಿದೆ.