ಮಂಗಳೂರು : ಮಂಗಳೂರು ವಿವಿಯ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ‘ಬ್ಯಾರಿ ಜನಾಂಗ- ಬ್ಯಾರಿ ಬದುಕು- ಸಂಶೋಧನಾತ್ಮಕ ಅಧ್ಯಯನ’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣವು ದಿನಾಂಕ 05-03-2024ರ ಮಂಗಳವಾರದಂದು ಮಂಗಳೂರಿನ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ. ಜಯರಾಜ್ ಅಮೀನ್ ಮಾತನಾಡಿ “ತುಳುನಾಡಿನ ಬ್ಯಾರಿಗಳು ಕೇವಲ ‘ಬ್ಯಾರ’ಕ್ಕೆ ಮಾತ್ರ ಸೀಮಿತವಾಗಿಲ್ಲ. ಬೇರೆ ಬೇರೆ ಕ್ಷೇತ್ರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ನಾಡಿನ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಭಿನ್ನ ಸಂಸ್ಕೃತಿಯ ಮಧ್ಯೆಯೂ ಏಕತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಬ್ಯಾರಿ ಜನಾಂಗದ ಹಿರಿಮೆಯಾಗಿದೆ. ಬ್ಯಾರಿಗಳು ಮನೆಯಲ್ಲಿ ಬ್ಯಾರಿ ಭಾಷೆಯಲ್ಲಿ ಮಾತನಾಡಿದರೂ ಕೂಡ ಹೊರಗಡೆ ವ್ಯವಹಾರಿಕವಾಗಿ ತುಳು, ಕನ್ನಡ ಮಾತನಾಡುತ್ತಾರೆ. ಸಾಮರಸ್ಯಕ್ಕೆ ಒತ್ತು ನೀಡುತ್ತಾರೆ. ಇದು ಬ್ಯಾರಿಗಳ ವೈಶಿಷ್ಟವಾಗಿದೆ. ಇಂತಹ ಜನಾಂಗದ ಸಂಸ್ಕೃತಿಯ ಬಗ್ಗೆ ವಿಸ್ತ್ರತ ಅಧ್ಯಯನದ ಅಗತ್ಯವಿದೆ.” ಎಂದು ಹೇಳಿದರು.
ಕಣಚೂರು ಇಸ್ಲಾಮಿಕ್ ಏಜುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಹಾಜಿ ಯು. ಕೆ. ಮೋನು ವಿಚಾರ ಸಂಕಿರಣ ಉದ್ಘಾಟಿಸಿ, ಅತಿಥಿಗಳಾಗಿ ಭಾಗವಹಿಸಿದ್ದ ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಅಧ್ಯಕ್ಷ ಎಸ್. ಎಂ. ರಶೀದ್ ಹಾಜಿ, ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ ಮಾತನಾಡಿದರು.
ಅಧ್ಯಯನ ಪೀಠದ ಸಲಹಾ ಸಮಿತಿಯ ಮಾಜಿ ಸದಸ್ಯರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಸಂಶುದ್ದೀನ್ ಮಡಿಕೇರಿ, ಅಹ್ಮದ್ ಬಾವಾ ಪಡೀಲ್ ಅವರನ್ನು ಅಭಿನಂದಿಸಲಾಯಿತು. ಹಾಲಿ ಸದಸ್ಯ ಡಾ. ಎನ್. ಇಸ್ಮಾಯೀಲ್ ಅಭಿನಂದನಾ ಮಾತುಗಳನ್ನಾಡಿದರು. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್ ಸ್ವಾಗತಿಸಿ, ಉಪನ್ಯಾಸಕಿ ಶಹಲಾ ರೆಹಮಾನ್ ಕಾರ್ಯಕ್ರಮ ನಿರೂಪಿಸಿ, ಸದಸ್ಯ ಖಾಲಿದ್ ತಣ್ಣೀರುಬಾವಿ ವಂದಿಸಿದರು.
ಯೆನೆಪೋಯ ವಿವಿಯ ಸಹ ಪ್ರಾಧ್ಯಾಪಕಿ ಡಾ. ಶಕೀರಾ ಇರ್ಫಾನ, ಅಜ್ಜರಕಾಡಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಅಬ್ದುಲ್ ರಝಾಕ್, ಕಡಬ ಏಮ್ಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಸಮೀರಾ ಕೆ. ಎ., ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಹೈದರಾಲಿ, ಮಂಗಳೂರು ವಿವಿ ಇಂಗ್ಲಿಷ್ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಜೈಬುನ್ನಿಸಾ ಅಬ್ದುಲ್ ರಝಾಕ್ ವಿಚಾರ ಮಂಡಿಸಿದರು. ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯ ಹಂಝ ಮಲಾರ್ ಸಮನ್ವಯಕಾರರಾಗಿ ಸಹಕರಿಸಿದರು.
ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಅಬ್ದುಲ್ ರಝಾಕ್ ಅನಂತಾಡಿ ಸಮಾರೋಪ ಭಾಷಣ ಮಾಡಿದರು. ಅತಿಥಿಯಾಗಿ ಬೆಳ್ತಂಗಡಿ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ಇಸ್ಮಾಯೀಲ್ ಕೆ. ಪೆರಂಜೆ ಭಾಗವಹಿಸಿದ್ದು, ಸಲಹಾ ಸಮಿತಿಯ ಸದಸ್ಯ ಮೊಯ್ದಿನ್ ಬಾದ್‌ಷಾ ವಂದಿಸಿದರು.