ತೆಕ್ಕಟ್ಟೆ : ತೆಕ್ಕಟ್ಟೆ ಹಯಗ್ರೀವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಘ ಸಂಸ್ಥೆಗಳಿಗೆ ಧನ ಸಹಾಯ ಯೋಜನೆಯಡಿಯಲ್ಲಿ ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಪ್ರಸ್ತುತಿಯ ಯಕ್ಷಗಾನ ಎಮ್.ಜಿ. ಭಟ್ ಬರವಣಿ ವಿರಚಿತ ‘ವಿದ್ರೂಪ ವಿಜಯ’ ಪ್ರಸಂಗವು ದಿನಾಂಕ 24-03-2034ರಂದು ಪ್ರದರ್ಶನಗೊಂಡಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯಕ್ಷಗುರು ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ “ಯಕ್ಷ ಕವಿಗಳನೇಕರು ಹಗಲಿರುಳೂ ಯೋಚಿಸಿ ಪ್ರಸಂಗ ರಚನೆ ಮಾಡುವಲ್ಲಿ ಅತಿಯಾದ ಸಾಹಸವನ್ನೆಸಗುತ್ತಾರೆ. ಕೆಲವು ಕಾರಣಗಳಿಂದ ಒಳ್ಳೆಯ ಹಲವು ಪ್ರಸಂಗಗಳು ಪ್ರಸಿದ್ಧಿಗೆ ಬಾರದೇ ಉಳಿದಿರುತ್ತದೆ. ಒಂದಿಷ್ಟು ಕಾಲ ರಂಗದಿಂದ ಹೊರಗುಳಿದ ಪ್ರಸಂಗಗಳನ್ನು ಮತ್ತೆ ಓದದೇ ಆಡಿದ ಪ್ರಸಂಗವನ್ನೇ ಆಡುತ್ತ ಇರುವುದನ್ನು ಕಂಡಿದ್ದೇವೆ. ಆದರೆ ಇಂತಹ ಹಲವು ಸಂಘ ಸಂಸ್ಥೆಗಳು ಬಹು ಕ್ಲಿಷ್ಠವಾದ ನಡೆಯ ಪ್ರಸಂಗವನ್ನೋ ಅಥವಾ ರಂಗದಿಂದ ಮರೆಯಾದ ಪ್ರಸಂಗಗಳನ್ನೋ ಮತ್ತೆ ಕೈಗೆತ್ತಿಕೊಂಡು ರಂಗದಲ್ಲಿ ಪ್ರದರ್ಶನ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ, ‘ವಿದ್ರೂಪ ವಿಜಯ’ ಯಶಸ್ಸು ಕಂಡಿದೆ” ಎಂದು ಹೇಳಿದರು.
ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಖ್ಯಾತ ಚಂಡೆ ವಾದಕ ಶಿವಾನಂದ ಕೋಟ, ಮೋಹನಚಂದ್ರ ಪಂಜಿಗಾರು, ಮಲ್ಯಾಡಿ ಸೀತಾರಾಮ ಶೆಟ್ಟಿ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಆಶ್ರಯದಲ್ಲಿ ನಡೆಯುತ್ತಿರುವ ‘ಸಿನ್ಸ್ 1999 ಶ್ವೇತಯಾನ’ದ 10ನೇ ಸರಣಿ ಕಾರ್ಯಕ್ರಮದಲ್ಲಿ ಈ ಯಕ್ಷಗಾನ ಪ್ರಸಂಗವು ಪ್ರದರ್ಶನಗೊಂಡಿತು. ಹೆರಿಯ ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.