ಉಡುಪಿ : ಖ್ಯಾತ ಭರತನಾಟ್ಯ ಕಲಾವಿದೆಯರಾದ ವಿದುಷಿ ಚೈತ್ರ ಆಚಾರ್ಯ ಮತ್ತು ವಿದುಷಿ ಕು. ವಿದ್ಮಹಿ ಇವರು ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ.
ಉಡುಪಿ : ಶ್ರೀ ಚಂದ್ರಶೇಖರ ಆಚಾರ್ಯ ಮತ್ತು ರೂಪಶ್ರೀ ದಂಪತಿಗಳ ಪುತ್ರಿಯಾದ ಚೈತ್ರ ಆಚಾರ್ಯ ಕಳೆದ ಸುಮಾರು ಹದಿನೈದು ವರುಷಗಳಿಂದ ನೃತ್ಯನಿಕೇತನ ಕೊಡವೂರಿನ ಗುರುಗಳಾದ ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಶ್ರೀಮತಿ ಮಾನಸಿ ಸುಧೀರ್ ಇವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. 2019ನೇ ಸಾಲಿನಲ್ಲಿ ನಡೆದ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು. ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿರುತ್ತಾರೆ. ತಾನು ಕಲಿತ ನೃತ್ಯ ಸಂಸ್ಥೆಯೊಂದಿಗೆ ಸುಮಾರು 500ಕ್ಕೂ ಅಧಿಕ ಕಾರ್ಯಕ್ರಮಗಳನ್ನು ರಾಜ್ಯ ಮತ್ತು ದೇಶದ ಬೇರೆ ಬೇರೆ ಭಾಗಗಳಲ್ಲಿ ನೀಡಿದ್ದು, ಸಂಸ್ಥೆಯ “ನಾರಸಿಂಹ”, “ಶ್ರೀನಿವಾಸ ಕಲ್ಯಾಣ”, “ನಂದಗೋಕುಲ”, “ಶಬರಿ” ಮುಂತಾದ ನೃತ್ಯನಾಟಕಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ತನ್ನ ಸಹೋದರಿ ಚೈತನ್ಯಳೊಂದಿಗೆ ಹಲವಾರು ಕಡೆ ಯುಗಳ ನೃತ್ಯಪ್ರದರ್ಶನ ನೀಡಿರುವುದರೊಂದಿಗೆ ಪ್ರತಿಭಾ ಕಾರಂಜಿ,ಯುವ ಜನೋತ್ಸವ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿರುತ್ತಾರೆ. ಈ ಕಲಾವಿದೆ ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಯಿಂದ ಕೊಡಮಾಡುವ ವಿದ್ಯಾರ್ಥಿವೇತನವನ್ನೂ ಪಡೆದಿರುವುದು ಶ್ಲಾಘನೀಯ.
ಶ್ರೀಮತಿ ಭಾಗ್ಯಲಕ್ಷ್ಮೀ ಹಾಗೂ ಶ್ರೀ ಪ್ರಸಾದ್ ರಾವ್ ಮಟ್ಟು ದಂಪತಿಗಳ ದ್ವಿತೀಯ ಸುಪುತ್ರಿಯಾದ ವಿದುಷಿ ಕು. ವಿದ್ಮಹಿ ನೃತ್ಯನಿಕೇತನ ಕೊಡವೂರು (ರಿ) ಇದರ ನಿರ್ದೇಶಕರಾದ ವಿದ್ವಾನ್ ಶ್ರೀ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಶ್ರೀಮತಿ ಮಾನಸಿ ಸುಧೀರ್ ಇವರಿಂದ ಕಳೆದ ಹದಿಮೂರು ವರ್ಷಗಳಿಂದ ನೃತ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2020-21ನೇ ಸಾಲಿನ ಶಿಷ್ಯವೇತನ ಪಡೆದು, 2023ರಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ವಿದ್ವತ್ ಪರೀಕ್ಷೆಯನ್ನು ಉತ್ತಮ ಅಂಕಗಳೂಂದಿಗೆ ಉತ್ತೀರ್ಣಳಾಗಿದ್ದು, ಸಂಸ್ಥೆಯ ಮೂಲಕ ದೇಶದಾದ್ಯಂತ ಸುಮಾರು 500ಕ್ಕೂ ಹೆಚ್ಚಿನ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಮಾತ್ರವಲ್ಲದೆ ಸಂಸ್ಥೆಯ ಚಿತ್ರಾ, ಶಬರಿ, ನೃತ್ಯ ಅಂತಾಕ್ಷರಿ ಮುಂತಾದ ಪ್ರಯೋಗಗಳಲ್ಲಿ ಪಾತ್ರವಹಿಸಿದ್ದು, ರಥಬೀದಿ ಗೆಳೆಯರು (ರಿ.) ಉಡುಪಿ ಹಾಗೂ ಸಂಗಮ ಕಲಾವಿದೆರ್ (ರಿ) ಮಣಿಪಾಲ ಇವರ ಹಲವು ನಾಟಕಗಳಲ್ಲಿ ಅಭಿನಯಿಸಿರುತ್ತಾರೆ. ನೃತ್ಯ ಹಾಗೂ ನಾಟಕಾಭಿನಯದೊಂದಿಗೆ ಕರಾಟೆಯಲ್ಲೂ ಆಸಕ್ತಿ ಬೆಳೆಸಿಕೊಂಡಿರುವ ಈಕೆ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿರುವ ಈಕೆ ಪ್ರಸ್ತುತ ಮಾಹೆಯ ಮಣಿಪಾಲ್ ಸೆಂಟರ್ ಫಾರ್ ಹ್ಯುಮಾನಿಟೀಸ್ ಇಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.