ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 26-02-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಮಂಗಳೂರಿನ ವಿದುಷಿ ರೆಮೊನಾ ಇವೈಟ್ ಪಿರೇರ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ತಮ್ಮ 3ನೇ ವಯಸ್ಸಿನಿಂದ ಭರತನಾಟ್ಯವನ್ನು ಪ್ರಾರಂಭಿಸಿರುವ ರೆಮೊನಾ ಇವೈಟ್ ಪಿರೇರ ಸೌರಭ ನೃತ್ಯ ಕಲಾ ಪರಿಷತ್ತಿನ ವಿದ್ಯಾರ್ಥಿನಿ. ಗುರು ಡಾ. ಶ್ರೀವಿದ್ಯಾ ಮುರಳೀಧರ್ ಇವರ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಕಲಿಯುತ್ತಿರುವ ಇವರು 2019ರಲ್ಲಿ ರಂಗ ಪ್ರವೇಶ ಮಾಡಿರುತ್ತಾರೆ. ಐದನೇ ವಯಸ್ಸಿನಲ್ಲಿ ‘ಅರಳು ಮಲ್ಲಿಗೆ ಪ್ರಶಸ್ತಿ’ ಹಾಗೂ ಕುಂದಾಪುರದಲ್ಲಿ ನಡೆದ ಭರತನಾಟ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿರುತ್ತಾರೆ.
ಕೇಂದ್ರ ಸರಕಾರದಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ, ಧಾರವಾಡದ ಬಾಲ ವಿಕಾಸ ಅಕಾಡೆಮಿಯಿಂದ ಬಾಲ ಗೌರವ್ ಪ್ರಶಸ್ತಿ, ಹೊಯ್ಸಳಾ ಕೆಳದಿ ಚೆನ್ನಮ್ಮ ಜಿಲ್ಲಾ ಮಟ್ಟದ ಪ್ರಶಸ್ತಿ, ರಾಷ್ಟ್ರೀಯ ಗೌರವ ಪ್ರಶಸ್ತಿ, ಕಲಾಶ್ರೀರತ್ನ, ನಾಟ್ಯಾ ಶಿರೋಮಣಿ, ನಾಟ್ಯ ಮಯೂರಿ ಹಾಗೂ ನೃತ್ಯ ಕಲಾ ಇತ್ಯಾದಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಎಂ. ಸಿ. ಸಿ. ಕತಾರ್ ಇವರು ನಡೆಸಿದ ಬೈಲಾ ನೃತ್ಯ ಸ್ಪರ್ಧೆಯಲ್ಲಿ ‘ಬೈಲಾ ಕ್ವೀನ್’ ಎಂಬ ಬಿರುದನ್ನು ಪಡೆದ ಇವರು ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿರುತ್ತಾರೆ. ರೆಮೊನಾ ಇವರು ನೃತ್ಯದ ಮೂಲಕ ತಮ್ಮ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಲಂಡನ್ ಮತ್ತು ಭಾರತ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಿಸಿದ್ದಾರೆ.