ಮಂಗಳೂರು : ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ಕೇಂದ್ರ ‘ನೃತ್ಯ ಭಾರತಿ’ಯ 39ನೇ ವರ್ಷದ ಸಂಭ್ರಮಾಚರಣೆ ಸಂದರ್ಭ ವಿದುಷಿ ವೈಷ್ಣವಿ ವಿ. ಪ್ರಭು ಇವರ ‘ನಟರಾಜ ವಂದನಂ’ ಮೂಲಕ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮವು ದಿನಾಂಕ 02-02-2024 ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ “ಜೀವನದಲ್ಲಿ ಪರಿಶ್ರಮ, ಛಲ ಇದ್ದರೆ ಸಾಧನೆ ಸಾಧ್ಯ. ಆ ಛಲ ವೈಷ್ಣವಿ ಪ್ರಭು ಅವರಲ್ಲಿದೆ. ಅವರು ಇನ್ನಷ್ಟು ಕ್ಷೇತ್ರದಲ್ಲಿ ಗುರುತಿಸಿ, ಸಾಧನೆಗೈದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಕಲಾವಿದೆಯಾಗಲಿ.” ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಚಿಂತಕ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ “ರಂಗಪ್ರವೇಶ ಅಂದರೆ ಸಾಮಾನ್ಯ ಸಂಗತಿಯಲ್ಲ. ಅದು ಆಧ್ಯಾತ್ಮಿಕ ಭಾವನೆಗೆ ಹೊರಡಲು ಸಿಗುವಂತಹ ಅವಕಾಶವಾಗಿದೆ. ಅವರವರ ವೃತ್ತಿಗೆ, ಗುಣಕ್ಕೆ ತಕ್ಕಂತೆ ಕಲಾಪ್ರಾಕಾರಗಳು ಆನಂದ ನೀಡುತ್ತದೆ. ಯಾವಾಗ ಮನುಷ್ಯ ಅಂತರ್ಮುಖಿಯಾಗಲು ಆರಂಭವಾಗುತ್ತಾನೋ ಆಗ ಆತನಿಗೆ ಭಾರತ ಅದ್ಭುತ ಎನಿಸಲು ಆರಂಭವಾಗುತ್ತದೆ. ಆದರೆ, ಅಲ್ಲಿಯವರೆಗೆ ಕಾಯಬೇಕು. ಇತ್ತೀಚಿನ ದಿನಗಳಲ್ಲಿ ನೃತ್ಯ ಅಂದರೆ ಶಾಸ್ತ್ರೀಯವಾಗಿ ಕಲಿಯಬೇಕೆಂದಿಲ್ಲ ಟಿವಿ ಮುಂದೆ ಕುಳಿತವರನ್ನು ಮನಸ್ಸು ಸಂತೃಪ್ತಿಗೊಳಿಸುವಷ್ಟು ಕಲಿತರೆ ಸಾಕು ಎಂಬಂತಾಗಿದೆ. ಆದರೆ ದೇಹ, ಪ್ರಾಣ ಶಕ್ತಿ, ಮನಸ್ಸಿನ ದೃಷ್ಟಿಯಿಂದ ವೈಷ್ಣವಿ ಕಾಮತ್ ಅವರ ಮನೋಜ್ಞ ಅಭಿನಯ ವಿಶೇಷವಾಗಿತ್ತು.” ಎಂದು ಹೇಳಿದರು.
ಉದ್ಯಮಿ ಪ್ರದೀಪ್ ಜಿ. ಪೈ ಮಾತನಾಡಿ “ಭರತನಾಟ್ಯ, ಭಾರತದ ಪ್ರಾಚೀನ ಕಲೆ. ತಂಜಾವೂರಿನಲ್ಲಿ ಆರಂಭವಾಗಿ, ತಮಿಳುನಾಡಿನಲ್ಲಿ ಅತ್ಯುತ್ತಮ ಕಲೆಯಾಗಿ ಹೊಮ್ಮಿ ದಕ್ಷಿಣ ಭಾರತದಲ್ಲಿ ಬೆಳೆಯಿತು. ವೈಷ್ಣವಿ ಕಾಮತ್ ಅವರ 15 ವರ್ಷಗಳ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ.” ಎಂದು ಹೆಳಿದರು.
ಭರತನಾಟ್ಯ ಕಲಾವಿದೆ ವೈಷ್ಣವಿ ಕಾಮತ್ ಮಾತನಾಡಿ “ಪ್ರಥಮವಾಗಿ ನನ್ನಲ್ಲಿರುವ ನಾಟ್ಯದ ಆಸಕ್ತಿಯನ್ನು ಗುರುತಿಸಿದ್ದು ತಾಯಿ. ಪೋಷಕರು ಹಾಗೂ ಗುರುಗಳ ಪ್ರೋತ್ಸಾಹದಿಂದ ನಾಟ್ಯ ಕ್ಷೇತ್ರದ ಬೆಳವಣಿಗೆ ಸಾಧ್ಯವಾಯಿತು.” ಎಂದರು.
ಕಾರ್ಯಕ್ರಮದಲ್ಲಿ ನಾಟ್ಯನಿಕೇತನ ಕೋಟೆಕಾರಿನ ಗುರು ವಿದ್ವಾನ್ ಉಳ್ಳಾಲ ಮೋಹನ ಕುಮಾರ್, ಸಿ. ಎ. ಜಗನ್ನಾಥ ಕಾಮತ್, ವಿವೇಕ್ ಆರ್. ಪ್ರಭು, ಶಾಂತೇರಿ ಪ್ರಭು, ಸಿದ್ದಾರ್ಥ್ ವಿ. ಪ್ರಭು, ನೃತ್ಯ ಭಾರತಿಯ ಗೀತಾ ಸರಳಾಯ, ರಶ್ಮಿ ಸರಳಾಯ ಸೇರಿದಂತೆ ವಿವಿಧ ಸಂಸ್ಥೆಯ ಭರತನಾಟ್ಯ ಗುರುಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೃತ್ಯ ಗುರು ವಿದುಷಿ ಗೀತಾ ಸರಳಾಯ ಮತ್ತು ರಶ್ಮಿ ಸರಳಾಯ ಇವರಿಗೆ ಗುರುಕಾಣಿಕೆ ನೀಡಿ ಸಮ್ಮಾಸಲಾಯಿತು.