Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನನ್ನ ಚಿತ್ತ ನೃತ್ಯದತ್ತ – ವಿದ್ವಾನ್ ಮಂಜುನಾಥ್ ಎನ್. ಪುತ್ತೂರು
    Article

    ನನ್ನ ಚಿತ್ತ ನೃತ್ಯದತ್ತ – ವಿದ್ವಾನ್ ಮಂಜುನಾಥ್ ಎನ್. ಪುತ್ತೂರು

    April 16, 2023No Comments6 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನನ್ನ ಮನಸ್ಸಿನ ಜೊತೆಗೆ ಸಂವಾದ ನಡೆಸಲು ನಾನು ಬಳಸಿಕೊಂಡ ಮಾಧ್ಯಮ ನೃತ್ಯ ಕ್ಷೇತ್ರ. ನೃತ್ಯದ ಕಲಿಕೆಯ ಜೊತೆಗೆ, ಅದರ ವಿಭಿನ್ನವಾದ ಆಯಾಮಗಳನ್ನು ತಿಳಿದುಕೊಳ್ಳುತ್ತಾ, ಅದರೊಂದಿಗೆ ನಡೆಸುವ ಸೂಕ್ಷ್ಮ ಸಂವೇದನೆಯನ್ನು ತಿಳಿಸುವ ಸಾಧನವೇ ಮನಸ್ಸು. ಮನಸ್ಸು ಮರ್ಕಟನಂತೆ, ಈಗೊಮ್ಮೆ ಆಗೊಮ್ಮೆ ಬದಲಾಗುತ್ತಾ ಹೋಗುತ್ತದೆ. ಕೆಲವೊಂದನ್ನು ಸ್ವೀಕರಿಸುತ್ತಾ, ಇನ್ನೂ ಕೆಲವನ್ನು ವಿರೋಧಿಸುತ್ತಾ, ವಿಭಿನ್ನ ಗತಿಯೊಳಗೆ ಚಲಿಸುತ್ತದೆ. ನೃತ್ಯ ಮಾಧ್ಯಮವಿಂದು ಸಮಾಜದ ಒಳಿತು ಕೆಡುಕುಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಾ, ಸಾಮಾಜಿಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ತನ್ನದೇ ಆದ ಪ್ರಯತ್ನವನ್ನು ಮಾಡುತ್ತಾ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಿದೆ. ನೃತ್ಯವು ಮನೋವಿಕಾರಗಳನ್ನು ಶಮನ ಮಾಡಿ, ಮಾನಸಿಕ ಆಘಾತಗಳನ್ನು ನಿವಾರಿಸಿ, ವ್ಯಕ್ತಿಗಳ ಆತ್ಮಸಂವೇದನೆಯನ್ನು ಉತ್ತಮ ರೀತಿಯಲ್ಲಿ ಪ್ರಚುರಪಡಿಸುವ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾದ ಫಲಿತಾಂಶಗಳನ್ನು ನೀಡುತ್ತಾ ಬರುತ್ತಿರುವ ಶ್ರೇಷ್ಠ ಮಾಧ್ಯಮಗಳಲ್ಲೊಂದು.

    ‘ನನ್ನ ಮಗನನ್ನು ನೃತ್ಯಪಟುವಾಗಿ ರೂಪಿಸಿಯೇ ತೀರುತ್ತೇನೆ’ ಎಂಬ ಹಠ ಹೊತ್ತ ಕೆಚ್ಚೆದೆಯ ತಾಯಿಯ ಆಸೆಯಂತೆ ನೃತ್ಯವನ್ನು ನನ್ನ ಆರನೆಯ ವಯಸ್ಸಿನಲ್ಲಿಯೇ ಕಲಿಯಲು ಪ್ರಾರಂಭಿಸಿದೆ. ಗಾತ್ರದಲ್ಲಿ ಸಣ್ಣಕ್ಕಿದ್ದ ನನ್ನನ್ನು ನೋಡಿದ ನೃತ್ಯ ಗುರುಗಳು, “ಇನ್ನೊಂದು ವರ್ಷದ ಬಳಿಕ ನೃತ್ಯ ಕಲಿಕೆ ಪ್ರಾರಂಭಿಸಲಿ” ಅಂದಿದ್ದರಂತೆ. ಇದಕ್ಕೆ ಗುರುಗಳು ಕೊಟ್ಟ ಕಾರಣ, ದೈಹಿಕ ಸದೃಢತೆ ಮತ್ತು ಮುಖ್ಯವಾಗಿ ನೃತ್ಯವೆನ್ನುವ ದೈವಿಕ ಕಲೆಯನ್ನು ಸಿದ್ಧಿಸಿಕೊಳ್ಳಲು ಇರಲೇಬೇಕಾದ ಮಾನಸಿಕ ಸಾಮರ್ಥ್ಯ ಹೊಂದಿಸಿಕೊಳ್ಳಲು ಕಠಿಣವೆಂದು. ಸ್ವಲ್ಪ ಹೊತ್ತು ನನ್ನನ್ನೇ ಅವಲೋಕಿಸಿ, ಮಾತನಾಡಿಸಿದ ನಂತರ ನನ್ನ ಗುರುಗಳು “ಒಂದು ತಿಂಗಳ ಅವಧಿಗೆ ತರಗತಿಗೆ ಸೇರಿಕೊಂಡು ನೋಡಿ, ಈ ಮಗುವಿನ ಮನಸ್ಸು ಕಲಿಕೆಗೆ ಒಪ್ಪುತ್ತಿದೆ ಎಂದಾದರೆ ಮುಂದುವರಿಸಿ. ಇಲ್ಲವಾದರೆ ಮುಂದಿನ ವರ್ಷದವರೆಗೂ ಕಾಯಲೇಬೇಕು” ಎಂದರಂತೆ. ನನಗೂ ನನ್ನಮ್ಮನಿಗೂ ಇದೊಂದು ಸತ್ವ ಪರೀಕ್ಷೆ. ಕಠಿಣವಾದ ಕಲಿಕೆಗೆ ತಮ್ಮನ್ನು ತಾವು ಒಳಪಡಿಸಿಕೊಳ್ಳುವ ಮೂಲಕ ತಮಗಿರುವ ಮಾನಸಿಕ ಶಕ್ತಿ ಸಾಮರ್ಥ್ಯಗಳನ್ನು ಒರೆಗೆ ಹಚ್ಚಿಸಿಕೊಳ್ಳುವ ಸಾಹಸ.  ಕಠಿಣವಾದ ತರಬೇತಿಯ ಮಧ್ಯೆಯೂ, ತನ್ನ ನೋವನ್ನು ತೋರಿಸಿಕೊಳ್ಳದೆ ದೈಹಿಕ ಶ್ರಮದ ಜೊತೆಗೆ ಮಾನಸಿಕ ಸದೃಢತೆಯನ್ನು ಸೃಷ್ಟಿಸಿಕೊಳ್ಳುವ ಕಾರ್ಯ ನನ್ನಿಂದ ಪ್ರಾರಂಭವಾಯಿತು. ಮನಸ್ಸು ಎಂಬುದು ಸಮಯದಿಂದ ಸಮಯಕ್ಕೆ ವಿಚಲಿತಗೊಳ್ಳುತ್ತದೆ. ಆ ಒಂದು ತಿಂಗಳ ಸಮಯ ನನ್ನ ಅಮ್ಮನಿಗೆ ಬಹುದೊಡ್ಡ ಚಾಲೆಂಜ್ ಆಗಿಹೋಗಿತ್ತು. ಸಣ್ಣ ಮಕ್ಕಳಲ್ಲಿ ಮಾನಸಿಕ ಜಾಗೃತಿಯನ್ನು ತುಂಬಿ ಹೊಸ ಚೈತನ್ಯವನ್ನು ಸೃಷ್ಟಿಸುವ ಕೆಲಸವು ಮಹತ್ತರವಾದದ್ದು. ಅದರಲ್ಲೂ ನೃತ್ಯದಂತಹ ಕಠಿಣತೆಯುಳ್ಳ ಕಲೆಯೊಳಗೆ ಪುಟ್ಟ ಮಗುವನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ರೂಪಿಸುವುದು ಸಾಮಾನ್ಯದ ಮಾತಲ್ಲ. ಸಾಲದ್ದಕ್ಕೆ ಗುರುಗಳ ಕಠಿಣ ತರಬೇತಿ ಮತ್ತು ಶಿಸ್ತಿನ ತರಗತಿಗೆ ನಾನು ನನ್ನ ಮನಸ್ಸನ್ನು ತೊಡಗಿಸಿಕೊಳ್ಳಬೇಕಿತ್ತು. ಕೈಯಲ್ಲಿ ಬೆತ್ತವನ್ನು ಹಿಡಿದು, ನನ್ನ ವಿದ್ಯಾರ್ಥಿಗಳನ್ನು ಉತ್ತಮ ನರ್ತಕರನ್ನಾಗಿ ರೂಪಿಸುತ್ತೇನೆ ಎಂದು ಛಲವೆತ್ತ ಗುರುಗಳ ಮನಸ್ಸು, ಆರನೆಯ ವಯಸ್ಸಿನ ಮಗುವಿಗೆ ಅರ್ಥವಾಗಬೇಕೆಂದರೆ ಪರೋಕ್ಷವಾಗಿ ಯಾರಾದರೂ ಒಬ್ಬರು ತಿಳಿ ಹೇಳುವವರು ಬೇಕಾಗುತ್ತದೆ. ಇದಕ್ಕೆ ನನ್ನ ಅಮ್ಮನ ಕಡೆಯಿಂದ ತಿಳುವಳಿಕೆ, ಪ್ರೋತ್ಸಾಹ ಮತ್ತು ಪ್ರೇರಣೆ ದಕ್ಕುವ ಮೂಲಕ ನನ್ನಲ್ಲಿ ಸಾಧಿಸುವ ಛಲ ಆ ವಯಸ್ಸಿನಿಂದಲೇ ಮೊಳಕೆಯೊಡೆಯಲು ಪ್ರಾರಂಭಿಸಿತು.

    ಶಾಲೆಯ ದಿನಗಳಲ್ಲಿ ನೃತ್ಯ, ಸಂಗೀತ, ಯಕ್ಷಗಾನ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತಿದ್ದೆ. ಅದಕ್ಕೆ ನನ್ನ ಮನಸ್ಸು ಯಾವತ್ತೂ ಸಿದ್ಧವಾಗಿರುತ್ತಿತ್ತು. ಇದು ಕಾಲೇಜು ದಿನಗಳಲ್ಲಿಯೂ ಮುಂದುವರಿಯಿತು. ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಯೆಂಬ ಹೆಸರನ್ನು ಗಳಿಸಿದ್ದೆ. ಇದಕ್ಕೆಲ್ಲ ಪ್ರೇರಕ ಶಕ್ತಿ ನನ್ನ ಮನಸ್ಸು ಮತ್ತು ಮನೋ ಧೈರ್ಯ. ಸ್ಪರ್ಧೆ ಎನ್ನುವಾಗ ನನ್ನ ಕಾಲದ ವಿದ್ಯಾರ್ಥಿಗಳಲ್ಲಿ ಅದೇನೋ ನಡುಕ, ಅಳುಕು. ಆದರೆ ಇವತ್ತಿನ ಮಕ್ಕಳಲ್ಲಿ ಅದನ್ನ ನೋಡುವುದಕ್ಕೆ ಸಾಧ್ಯವಿಲ್ಲ. ನನ್ನಲ್ಲಿದ್ದ ಒಂದು ನ್ಯೂನ್ಯತೆ ಎಂದರೆ ಸ್ಪರ್ಧೆಯಲ್ಲಿ ಯಾವುದಾದರೊಂದು ಬಹುಮಾನ ಬರಲೇಬೇಕು ಎಂದು ಮನಸ್ಸನ್ನು ಅದಕ್ಕೆ ಒಪ್ಪಿಸಿಕೊಳ್ಳುವುದು. ಇಂತಹ ಮನಸ್ಥಿತಿಯನ್ನು ಇಂದು ಅನೇಕ ಮಕ್ಕಳಲ್ಲಿ ಕಾಣುತ್ತೇವೆ. ಸ್ಪರ್ಧೆ ಎಂದ ಮೇಲೆ ಬಹುಮಾನ ಕಟ್ಟಿಟ್ಟ ಬುತ್ತಿ ಏನೂ ಅಲ್ಲ. ಬರುವ ಎಲ್ಲಾ ರೀತಿಯ ಬದಲಾವಣೆಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳುವುದು ಅತೀ ಮುಖ್ಯ. ಆದರೆ ನಾನು ಈ ವಿಷಯದಲ್ಲಿ ಮಾತ್ರ ಯಾರ ಮಾತೂ ಕೇಳುತ್ತಿರಲಿಲ್ಲ. ಒಂದಲ್ಲ ಒಂದು ಬಹುಮಾನವನ್ನು ಪಡೆಯಲೇಬೇಕು ಎಂಬ ಹಠವನ್ನು ಬೆಳೆಸಿಕೊಂಡಿದ್ದೆ. ಬರಬರುತ್ತಾ ಕಾಲೇಜಿನ ದಿನಗಳಲ್ಲಿ, ಈ ಮನಸ್ಥಿತಿ ಬದಲಾಯಿತು. ಇದು ನಮ್ಮನ್ನು ಕೊರತೆಯತ್ತ ನೂಕುತ್ತದೆ ಎಂದು ಚೆನ್ನಾಗಿ ಅರ್ಥವಾಗತೊಡಗಿತ್ತು. ಮನಸ್ಸು ಒಂದು ಮಟ್ಟಕ್ಕೆ ಪರಿಪಕ್ವವಾಗತೊಡಗಿತ್ತು. ಬಂದದ್ದೆಲ್ಲವನ್ನೂ ಎದುರಿಸುತ್ತೇನೆ, ಸಂತೋಷದ ವಿಷಯವಾದರೂ ಸರಿಯೇ! ದುಃಖದ ವಿಚಾರವಾಗಿದ್ದರೂ ಸಹ! ಎಂಬುದಾಗಿ ಮನಸ್ಸು ತೀರ್ಮಾನಿಸಿ ಅದನ್ನು ಚಾಚೂ ತಪ್ಪದೇ ಪಾಲಿಸತೊಡಗಿತ್ತು. ನೃತ್ಯವು ವ್ಯಕ್ತಿನಿಷ್ಠವಾದದ್ದು ಮತ್ತು ಮನಸ್ಸಿಗೆ ಸಂಬಂಧಿಸಿದ್ದು. ನೃತ್ಯವನ್ನು ಪ್ರಾಯೋಗಿಕವಾಗಿ ಬಳಸುವ ಕ್ರಮದಲ್ಲಿ ಮತ್ತು ಅದನ್ನು ವ್ಯಕ್ತಪಡಿಸುವ ರೀತಿಯಲ್ಲಿ ಅನೇಕ ವ್ಯತ್ಯಾಸಗಳನ್ನು ಗಮನಿಸಬಹುದು. ನೃತ್ಯ ಸ್ಪರ್ಧೆಗಳೂ ಕೂಡಾ ಹೀಗೆಯೇ. ತೀರ್ಪುಗಾರರ ಮನೋನಿರ್ಣಯಕ್ಕೆ ಬಿಟ್ಟದ್ದು. ಅದು ಪ್ರಬಲವಾಗಿ ಅವರ ವೈಯಕ್ತಿಕ ಅಭಿವ್ಯಕ್ತತೆಯನ್ನು ಪ್ರತಿನಿಧಿಸುತ್ತದೆ. ಮನಸ್ಸಿನ ನಿರ್ಣಯಗಳಲ್ಲಿ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಅನೇಕ ವ್ಯತ್ಯಾಸಗಳು ಇರುವುದರಿಂದ ಎಲ್ಲರಿಗೂ ನಾನು ಮಾಡುತ್ತಿರುವ ನೃತ್ಯದ ಚಟುವಟಿಕೆಗಳು ಪ್ರಿಯವಾಗಬೇಕೆಂದೇನಿಲ್ಲ ಎಂಬ ಕಟು ಸತ್ಯ ನನಗೆ ಅರ್ಥವಾಗತೊಡಗಿತ್ತು. ಒಂದು ಹೊಸ ಪ್ರಯೋಗವನ್ನು ನಡೆಸಿದಾಗ, ಪ್ರಯೋಗಕ್ಕೆ ಒದಗಿ ಬರುವ ಧನಾತ್ಮಕ ಪ್ರತಿಕ್ರಿಯೆಗಳನ್ನು ಸ್ವೀಕರಿಸುವ ಮನಸ್ಥಿತಿ ಹೇಗಿರುತ್ತದೋ, ಹಾಗೆಯೇ ಋಣಾತ್ಮಕ ಪ್ರತಿಕ್ರಿಯೆಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿ, ತನ್ನಲ್ಲಿ ಆ ಕೊರತೆಗಳಿದ್ದಾಗ ಅದನ್ನು ಅತೀ ಶೀಘ್ರವಾಗಿ ಪರಿಹರಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ ಮತ್ತು ಇದಕ್ಕೆ ಮನಸ್ಸನ್ನು ಸೂಕ್ಷ್ಮವಾಗಿ ಹೊಂದಿಸಿಕೊಳ್ಳಬೇಕಾಗುತ್ತದೆ. ಪ್ರಾರಂಭದಲ್ಲಿ ನೃತ್ಯದಲ್ಲಿ ನನ್ನ ಪ್ರಯತ್ನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಗಳ ಜೊತೆಗೆ ಋಣಾತ್ಮಕ ಪ್ರತಿಕ್ರಿಯೆಗಳು ಬಂದಾಗ, ನಕಾರಾತ್ಮಕ ಅಂಶಗಳನ್ನು ನನ್ನ ಮನಸ್ಸು ಸ್ವಾಗತಿಸಲು ಇಷ್ಟಪಡುತ್ತಿರಲಿಲ್ಲ. ಋಣಾತ್ಮಕ ಪ್ರತಿಕ್ರಿಯೆಗಳನ್ನು ಕೇಳಿದ ಸುಮಾರು ಒಂದು ವಾರದವರೆಗೂ ದುಃಖಪಟ್ಟದ್ದುಂಟು. ಕಾಲಕ್ರಮೇಣ ಮನಸ್ಸು ಎರಡು ಪ್ರತಿಕ್ರಿಯೆಗಳನ್ನು ಒಂದೇ ಎಂಬಂತೆ ಸ್ವೀಕರಿಸಲು ಪ್ರಾರಂಭಿಸಿತು. ಇದುವೇ ಮಾನಸಿಕ ಸಾಮರ್ಥ್ಯವನ್ನು ಒಂದೇ ಮಟ್ಟದಲ್ಲಿ ಹಿಡಿದಿಟ್ಟುಕೊಳ್ಳುವುದು. ಇಂತಹ ಬದಲಾವಣೆಗೆ ಒಗ್ಗಿಕೊಳ್ಳಲು ಮನಸ್ಸು ಸಮಯ ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಕಾಲ ಸರಿದರೂ ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ.

    ನೃತ್ಯ ಕಲಾವಿದನಾಗಿ ದೀರ್ಘಕಾಲಿಕವಾಗಿ ನೃತ್ಯಕ್ಷೇತ್ರದಲ್ಲಿ ಸಾಗಬೇಕೆಂದರೆ ಅವಮಾನಗಳನ್ನು ಎದುರಿಸುವ ಸಾಮರ್ಥ್ಯ ನಮ್ಮಲ್ಲಿರಲೇಬೇಕು. ಅವಮಾನಗಳನ್ನು ಎದುರಿಸುವುದು ಎಂದ ಮಾತ್ರಕ್ಕೆ ನಮ್ಮ ಮೇಲಾಗುವ ದೌರ್ಜನ್ಯಕ್ಕೆ ಪ್ರತಿ ಮಾತಾಡದೆ ಸುಮ್ಮನಿರುವುದು ಎಂದಲ್ಲ. ಇಂದಿನ ಅವಮಾನಗಳೇ ನಾಳಿನ ಸನ್ಮಾನಗಳು ಎಂಬ ವಾಕ್ಯವನ್ನು ನಿಜವಾಗಿಸಲು ಪ್ರಯತ್ನಿಸಬೇಕು. ಆದರೆ ಇಂದು ಕಲಿತು, ನಾಳೆ ಫೇಮಸ್ ಆಗುತ್ತೇನೆ ಎನ್ನುವುದು ಕನಸಿನ ಮಾತು. ನಾನು ಇಪ್ಪತ್ತರ ಹರೆಯದಲ್ಲಿ, ಅವಮಾನದ ಸನ್ನಿವೇಶಗಳು ನಡೆದಾಗ, ಸಹಿಸಲಾರದೆ ಕುಸಿದು ಹೋಗಿಬಿಡುತ್ತಿದ್ದೆ. ಕೋಪ, ನಿರಾಸೆ, ದುಃಖ- ದುಮ್ಮಾನಗಳನ್ನು ನನ್ನಿಂದ ಎದುರಿಸಲು ಸಾಧ್ಯವಿಲ್ಲವೆಂದು ಒಂದು ವರ್ಷಗಳ ಕಾಲ ನೃತ್ಯಕ್ಷೇತ್ರದಿಂದ ದೂರವೇ ಉಳಿದೆ. ಕಾಲ ಸರಿದಂತೆ ನನಗನ್ನಿಸಿದ್ದು, ಇಂತಹ ಅವಮಾನದ ಸನ್ನಿವೇಶಗಳು ನಡೆದಾಗಲೇ, ಮನಸ್ಸು ಗಟ್ಟಿಗೊಳ್ಳುವುದು ಮತ್ತು ಮುಂದೆ ಬರಲಿರುವ ಸಂತೋಷದ ಕ್ಷಣಗಳನ್ನೂ ಸಹ ಬೀಗದೆ ಸಾಮಾನ್ಯ ರೀತಿಯಲ್ಲಿ ಎದುರಿಸಲು ಪ್ರೇರೇಪಿಸುತ್ತದೆ.

    ಸಾಮಾನ್ಯವಾಗಿ ರೂಢಿಯಲ್ಲಿರುವ ಮಾತೆಂದರೆ, ನೃತ್ಯವು ಹೆಣ್ಣುಮಕ್ಕಳಿಗೆ ಒಪ್ಪುತ್ತದೆ. ಆದರೆ ಗಂಡುಮಕ್ಕಳು ನೃತ್ಯ ಕಲೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಅವರ ಹಾವಭಾವಗಳಲ್ಲಿ ಅನೇಕ ಬದಲಾವಣೆಗಳಾಗುತ್ತವೆ ಎಂಬುದಾಗಿ. ಇಂತಹ ಮಾತುಗಳಿಗೆ ಕಟ್ಟುಬಿದ್ದು ನೃತ್ಯವನ್ನು ಅರ್ಧದಲ್ಲಿಯೇ ಮೊಟುಕುಗೊಳಿಸಿದ ಅನೇಕ ಉದಾಹರಣೆಗಳಿವೆ. ನೃತ್ಯವನ್ನು ಪ್ರದರ್ಶಿಸುವಾಗ  ಸಮಾಜದ ಎದುರು ನಿಂತು, ಕೆಲವೊಂದು  ಕಟುಮಾತುಗಳನ್ನು ಎದುರಿಸಿ, ಮನಸ್ಸನ್ನು ಆ ಪ್ರಕ್ರಿಯೆಗೆ ಸಿದ್ದಪಡಿಸುವುದು ಪುರುಷ ಕಲಾವಿದರಿಗೆ ಒಂದು ದೊಡ್ಡ ಸಾಹಸವೇ ಆಗಿರುತ್ತದೆ. ಇಂದು ಕಾಲ ಬದಲಾಗಿರಬಹುದು. ಆದರೆ ನನ್ನ ಬಾಲ್ಯದಲ್ಲಿ ನೃತ್ಯ ಮತ್ತು ಪುರುಷ ಎಂಬ ಪರಿಕಲ್ಪನೆಯನ್ನು ಅದೆಷ್ಟೋ ಮಂದಿ ಒಪ್ಪಿಕೊಳ್ಳುತ್ತಿರಲಿಲ್ಲ. ಕೆಲವರು ಪ್ರತ್ಯಕ್ಷವಾಗಿ, ಇನ್ನೂ ಕೆಲವರು ಪರೋಕ್ಷವಾಗಿ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಮಾಡುತ್ತಿದ್ದರು. ನಾನು ನೃತ್ಯ ಕಲಿಯಲು ಪ್ರಾರಂಭಿಸಿದಾಗ, ನನ್ನ ಕುಟುಂಬದವರಿಂದಲೇ ಅನೇಕ ಋಣಾತ್ಮಕ ಪ್ರತಿಕ್ರಿಯೆಗಳು ಬಂದಿದ್ದವು. ಇದನ್ನು ಎದುರಿಸಿ ನಿಲ್ಲುವುದಕ್ಕೆ ದೃಢಮನಸ್ಸು ಮತ್ತು ಪರೋಕ್ಷವಾದ ಬೆಂಬಲ ಬೇಕಾಗುತ್ತದೆ. ಪುರುಷ ನೃತ್ಯ ವಿದ್ಯಾರ್ಥಿಗಳು ಮುಖ್ಯವಾಗಿ ಕಾಲೇಜಿನಲ್ಲಿ  ತಮ್ಮ ಸಹಪಾಠಿಗಳಿಂದಲೇ ಅನೇಕ ಚುಚ್ಚುಮಾತುಗಳನ್ನು ಎದುರಿಸಬೇಕಾಗುತ್ತದೆ. ಈ ಕಲೆಯ ಸಾತ್ವಿಕತೆಯ ತಿಳುವಳಿಕೆ ಆ ಮಕ್ಕಳಿಗೆ ಇರುವುದಿಲ್ಲ ಮತ್ತು ಅದನ್ನು ತಿಳಿಹೇಳುವ ಪರಿಪಕ್ವತೆ ಪುರುಷ ನೃತ್ಯ ವಿದ್ಯಾರ್ಥಿಗಳಲ್ಲೂ ಇರುವುದಿಲ್ಲ. ತಮಗಾಗುವ ಅವಮಾನವನ್ನು ಎದುರಿಸಲಾಗದೆ ಅನೇಕ  ವಿದ್ಯಾರ್ಥಿಗಳು ನೃತ್ಯವನ್ನು ಅರ್ಧದಲ್ಲೇ ಮೊಟುಕುಗೊಳಿಸಿರುತ್ತಾರೆ. ಪುರುಷ ನೃತ್ಯ ಕಲಾವಿದನಾಗಿ, ನನ್ನ ಕಾಲೇಜಿನ ದಿನಗಳಲ್ಲಿ ನನ್ನ ನೃತ್ಯ ಕಲೆಯನ್ನು ಆಸ್ವಾದಿಸಿದವರೇ ಹೆಚ್ಚು. ಆದರೂ ಅಲ್ಲೊಮ್ಮೆ ಇಲ್ಲೊಮ್ಮೆ ಕೆಲವೊಂದು ಅವಮಾನಗಳನ್ನು ಎದುರಿಸಿದ್ದೂ ಇದೆ, ಕಂಗೆಟ್ಟು ಕೂತದ್ದೂ ಇದೆ. ನೋವನ್ನು ನಲಿವಾಗಿ ಪರಿವರ್ತಿಸಲು ಸಮಯ ಹಿಡಿದುಕೊಳ್ಳುತ್ತದೆ ಮತ್ತು ಈ ಪ್ರಕ್ರಿಯೆಗೆ ನಮ್ಮವರ ಬೆಂಬಲವೂ ಬೇಕಾಗುತ್ತದೆ. ಸಾಧಿಸುವ ಛಲ ಮತ್ತು ಕಲೆಯ ಮೇಲಿನ ಪ್ರೀತಿ ನಮ್ಮ ಮನಸ್ಸಿನ ಹಿಡಿತವನ್ನು ಸಾಧಿಸಿ, ಯಾವುದು ತಪ್ಪು? ಯಾವುದು ಸರಿ? ಎಂಬುದನ್ನು ನಮಗೆ ನಾವೇ ನಿರ್ಧರಿಸಿಕೊಳ್ಳಲು ದಾರಿ ಮಾಡಿಕೊಡುತ್ತವೆ.

    ನಾನು ಆಯ್ದುಕೊಂಡ ನೃತ್ಯ ಕ್ಷೇತ್ರವು ಯಾವತ್ತೂ ಚಲನಶೀಲವಾದದ್ದು. ಒಂದು ಪರಿಕಲ್ಪನೆಯನ್ನು ಆಯ್ದುಕೊಂಡು, ಅದಕ್ಕೆ ಬಗೆ ಬಗೆಯ ನವೀನವಾದ ರೂಪಗಳನ್ನು ನೀಡಿ, ವಿಭಿನ್ನವಾಗಿ ಪ್ರಯೋಗಿಸುವ ಅನೇಕ ತಂತ್ರಗಳನ್ನು ನಾವಿಲ್ಲಿ ನೋಡಬಹುದು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಸರಾಗವಾಗಿ ನಡೆಯುತ್ತಿರುವ ಈ ನವೀನ ಕಾರ್ಯಗಳೆಲ್ಲವೂ ಸಾಂಪ್ರದಾಯಿಕ ರೂಪುರೇಷೆಗಳನ್ನು ಮನದಲ್ಲಿ ಇರಿಸಿಕೊಂಡು ನಡೆದಿರುತ್ತವೆ. ಸಾಂಪ್ರದಾಯಿಕ ರೂಪುರೇಷೆಗಳಲ್ಲಿರುವ ಅಚ್ಚುಕಟ್ಟುತನಗಳು, ವಿದ್ವಾಂಸರ ಜ್ಞಾನ ಶಕ್ತಿ ಮತ್ತು ಮನಸ್ಸಿನ ಧನಾತ್ಮಕ ಚಿಂತನೆಗಳ ಕೊಡುಗೆಗಳು. ಸಾಂಪ್ರದಾಯಿಕತೆಗೆ ಯಾವ ಧಕ್ಕೆಯೂ ಬಾರದಂತೆ ನವ ನವೀನ ವಿಚಾರಗಳನ್ನು ಕಲಾರಸಿಕರ ಜೊತೆ ಹಂಚಿಕೊಳ್ಳುವ, ವೈಶಿಷ್ಟಪೂರ್ಣವಾದ ಪ್ರಕ್ರಿಯೆಯನ್ನು ನಾವಿಲ್ಲಿ ಕಾಣಬಹುದು. ಹೊಸ ಬಗೆಯ ವಿಚಾರಗಳು, ಪ್ರಯೋಗಗಳು, ತಂತ್ರಗಳು ಇವೆಲ್ಲವೂ ಕೂಡ ವ್ಯಕ್ತಿಗಳ ಮನಸ್ಸಿಗೆ ಸಂಬಂಧಪಟ್ಟು ರೂಪುಗೊಳ್ಳುತ್ತವೆ. ಕಲಾವಿದನ ಮನಸ್ಸಿನಲ್ಲಾಗುವ ಹೊಸ ಚೈತನ್ಯದ ಫಲವಾಗಿ ನವೀನ ಪ್ರಯೋಗಗಳು ಸೃಷ್ಟಿಯಾಗುತ್ತವೆ ಮತ್ತು ಇವು ಪ್ರೇಕ್ಷಕರನ್ನು ಅಥವಾ ಕಲಾ ರಸಿಕರನ್ನು ಮುಟ್ಟುವುದು ಸಹ ಮನಸ್ಸಿನ ಮೂಲಕ. ನೃತ್ಯದಲ್ಲಿ ನಡೆಯುವ ವಿಭಿನ್ನ ಪ್ರಯೋಗಗಳು ಎಲ್ಲಾ ಕಲಾಸಕ್ತರಿಗೂ ಇಷ್ಟವಾಗಬೇಕೆಂದೇನಿಲ್ಲ. ಇಷ್ಟವಾಗುವುದು ಅಥವಾ ಇಷ್ಟವಾಗದಿರುವುದು ಅವರ  ಮನಸ್ಸಿಗೆ ಸಂಬಂಧಿಸಿದ್ದು. ಉದಾಹರಣೆಗೆ, ನಾನು ನನ್ನ ಸಂಸ್ಥೆ ಶ್ರೀ ಮಂಜುನಾಥ ನೃತ್ಯ ಕಲಾ ಶಾಲೆಯ ನನ್ನ ವಿದ್ಯಾರ್ಥಿಗಳ ಮೂಲಕ ಸಂಯೋಜಿಸಿದ “ವೀರ ಸಂನ್ಯಾಸಿ” ಎಂಬ ನೃತ್ಯರೂಪಕದ ಪ್ರಯೋಗವು ವಿಶ್ವಗುರು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಆಧರಿಸಿ ವೇದಿಕೆಯಲ್ಲಿ ರೂಪಗೊಂಡಿತು. ಮಾಡಿದ್ದು ಕೇವಲ ಮೂರು ಪ್ರಯೋಗವಾದರೂ, ಪ್ರದರ್ಶಿಸಿದ ಸ್ಥಳಗಳಲ್ಲಿ ಜನರನ್ನು ಮುಟ್ಟಿತು ಮತ್ತು ಒಳ್ಳೆಯ ವಿಮರ್ಶೆಯನ್ನು ಹುಟ್ಟು ಹಾಕಿತು. ಆದರೆ ಶುದ್ಧ ನೃತ್ಯಶೈಲಿಯನ್ನು ಇಷ್ಟಪಡುವ ಕಲಾ ರಸಿಕರಿಗೆ ಇಂತಹ  ಸಾಮಾಜಿಕ ಜೀವನಾಧಾರಿತ, ಜಾನಪದ ಶೈಲಿಯ  ವಿಚಾರ ಮೌಲ್ಯಗಳನ್ನು ನೃತ್ಯದಲ್ಲಿ ಅಳವಡಿಸುವುದು ಅಷ್ಟು ಖುಷಿ ಕೊಡುವುದಿಲ್ಲ ಎಂಬುದನ್ನೂ ಕೇಳಿದ್ದೇನೆ. ಇನ್ನೊಂದು ಉದಾಹರಣೆಯನ್ನು ಕೊಡುವುದಾದರೆ ನಾನು ಇತ್ತೀಚೆಗೆ ಭರತನಾಟ್ಯಕ್ಕೆ ಸಂಬಂಧಪಟ್ಟ ಕೆಲವೊಂದು ಪರಿಕಲ್ಪನೆಗಳನ್ನು ಒಟ್ಟುಗೂಡಿಸಿ, “ಭರತನಾಟ್ಯದಲ್ಲಿ ತಾಳವಧಾನ” ಎಂಬ ಪ್ರಯೋಗಾತ್ಮಕ ಪರಿಕಲ್ಪನೆಯನ್ನು ರೂಪಿಸಿದೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಅಂತಲೂ ಅಂದುಕೊಂಡಿದ್ದೆ. ಆದರೆ ಸಾಮಾನ್ಯ ಕಲಾರಸಿಕರಿಗೆ ಅದನ್ನು ಅರ್ಥ ಮಾಡಿಸುವುದು ಬಹಳ ಕಠಿಣವಾದ ವಿಚಾರ, ಜೊತೆಗೆ ಪ್ರದರ್ಶಿಸುವುದು ಕೂಡ. ಆಗ ನಾನು ಆಯ್ದುಕೊಂಡ ಬಹುಸುಲಭ ಆಯ್ಕೆಯೆಂದರೆ – ವಿವರಣೆಗಳ ಮೂಲಕ ಅರ್ಥ ಮಾಡಿಸುವುದು ಮತ್ತು ಅತ್ಯಂತ ಕ್ಲಿಷ್ಟಕರವಾದ ಪರಿಕಲ್ಪನೆಗಳನ್ನು ಬಳಸದೆ, ಸುಲಲಿತವಾಗಿ ಸಾಗುವ ಮತ್ತು ಎಲ್ಲರಿಗೂ ಅರ್ಥವಾಗುವ ಪ್ರಯೋಗಗಳನ್ನು ಪ್ರಸ್ತುತಪಡಿಸುವುದು. ಇದರ ಮೂಲಕ ಎಲ್ಲಾ ಜನರನ್ನು ನನ್ನ ಕಲಾಕೈಂಕರ್ಯದತ್ತ ಹಿಡಿದಿಡುವ ಮತ್ತು ಅವರ ಮನಸ್ಸನ್ನು ಕಲೆಯೊಳಗೆ ಧನಾತ್ಮಕವಾಗಿ ಹೊಂದಿಸಿಕೊಳ್ಳುವ ಕಾರ್ಯಕ್ಕೆ ನಾಂದಿಯಾಯಿತು. ಯಾವುದೇ ಒಂದು ಹೊಸ ಪ್ರಯೋಗ ಗೆಲ್ಲುವುದು ಅಥವಾ ಸೋಲುವುದು ಮನಸ್ಸಿಗೆ ಸಂಬಂಧಿಸಿಯೇ. ಪ್ರಾರಂಭದಲ್ಲಿ ಕಲಾವಿದರಾದ ನಾವು ಪ್ರಯೋಗಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸುವಾಗ, ಅಲ್ಲಿರುವ ಸೂಕ್ಷ್ಮ ವಿಚಾರಗಳನ್ನು ಮನಸ್ಸಿಗೆ ತಂದುಕೊಳ್ಳಬೇಕು. ಕಲಾವಿದ ಮತ್ತು ಅವನ ಮನಸ್ಸು ಕಲಾಸೇವೆಯಲ್ಲಿ  ಒಂದಾಗಿದೆ ಎಂದಾದರೆ, ಅದು ಕಲಾರಸಿಕರ ಮನಸ್ಸನ್ನು ತಲುಪಿ, ಕಲಾವಿದನ ಮತ್ತು ಆತನ ಕಲಾಪ್ರದರ್ಶನದ ಚೈತನ್ಯದ ಮಟ್ಟ ಶಾಶ್ವತವಾಗಿಯೇ ನೆಲೆಗೊಂಡಿದೆ ಎಂದೇ ಅರ್ಥ.

    ಕಲಾವಿದ ಮತ್ತು ಆತನ ಮನಸ್ಸಿನ ನಡುವಿನ ಸಂವಾದ ನೆಲೆಗೊಳ್ಳುವುದು ಕಲಾವೇದಿಕೆಗಳಲ್ಲಿ. ಯಾವುದೇ ಕಲಾವಿದರು ಕ್ರಿಯಾಶೀಲರಾಗಿರಬೇಕಾದರೆ, ಕಲಾ ವೇದಿಕೆಗಳ ಬಾಗಿಲು ಯಾವತ್ತೂ ತೆರೆದಿರಬೇಕು. ಎರಡು ವರ್ಷಗಳ ಹಿಂದೆ, ಕರೋನಾ ಸಮಯದಲ್ಲಿ, ಕಲಾವಿದರ ಮನಸ್ಸು ಜರ್ಜರಿತವಾಗಿ ಹೋಗಿತ್ತು. ಮಾನಸಿಕ ಶಕ್ತಿ ಸಾಮರ್ಥ್ಯಗಳು ಪಾತಾಳಕ್ಕೆ ಕುಸಿದಿದ್ದವು. ಕಾರಣವಿಷ್ಟೇ, ಕಲಾ ಪ್ರದರ್ಶನಗಳು ಸಂಪೂರ್ಣವಾಗಿ ನಿಂತಿದ್ದವು. ಆದರೆ ಈ ಸಂದರ್ಭವನ್ನು ಧನಾತ್ಮಕವಾಗಿ ಬಳಸಿ ಕಲಾರಸಿಕರ ಮುಂದೆ ಗುರುತಿಸಿಕೊಂಡ ಅನೇಕ ಕಲಾವಿದರೂ ಇದ್ದಾರೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ, ಸುಮ್ಮನೆ ಮನೆಯಲ್ಲಿ ಕೂರುವ ಬದಲು ಏನಾದರೊಂದು ಮಾಡಿಯೇ ತೀರಬೇಕು ಎಂಬ ಕನಸು ಹೊತ್ತ ನಾನು ಯುವ ಕಲಾವಿದರಿಗಾಗಿ ಆನ್ಲೈನ್ ನಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿ ವೇದಿಕೆಯನ್ನು ಸೃಷ್ಟಿಸಿದೆ. ಅನೇಕ ಯುವ ಕಲಾವಿದರು ವೇದಿಕೆಯನ್ನು ಉತ್ತಮವಾಗಿ ಬಳಸಿಕೊಂಡರು. ಇದು ಅವರ ಮನೋ ಕೌಶಲ್ಯದ ಸಂಕೇತ. ಬಂದಿರುವ ನೋವನ್ನು ಎದುರಿಸಿ ಮುನ್ನುಗ್ಗಬೇಕೇ ಹೊರತು ನೋವಿನಲ್ಲೇ ಹೂತುಹೋಗುವುದಲ್ಲ. ಹಾಗೆಯೇ ಕಲೆಯ ಪ್ರಪಂಚದೊಳಗೆ ನಾವೊಬ್ಬರೇ ಬೆಳೆಯದೆ, ಪರರ ಅಭ್ಯುದಯವನ್ನೂ ಬಯಸುವ ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡುವ ವಿಶಾಲವಾದ ಮನಸ್ಸು ನಮ್ಮದಾಗಬೇಕು. ಪರರ ಬೆಳವಣಿಗೆಯಲ್ಲಿರುವ ನಮ್ಮ ಶ್ರಮ ನೀಡುವ ಮಾನಸಿಕ ಸಂತೋಷವು, ಹೊಸ ಗುರುತಿಸುವಿಕೆಯನ್ನು ನೀಡುತ್ತದೆ. ಆ ಮೂಲಕ ತನ್ನ ಬೆಳವಣಿಗೆಯನ್ನು ವಿಶಿಷ್ಟವಾಗಿ ಸಾಧಿಸಲು ದಾರಿ ಮಾಡಿಕೊಡುತ್ತದೆ.

    • ವಿದ್ವಾನ್ ಮಂಜುನಾಥ್ ಎನ್ ಪುತ್ತೂರು

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನಲ್ಲಿ ಬಿಸು ಹಬ್ಬದ ಮಹತ್ವ ಮತ್ತು ಆಚರಣೆಯ ಮಾಹಿತಿಯೊಂದಿಗೆ ಮೂರು ಕೃತಿಗಳ ಲೋಕಾರ್ಪಣೆ
    Next Article ‘ರಜತ ಯಕ್ಷಮಣಿ’ ವಸುಂಧರಾ ಹರೀಶ್ ಶೆಟ್ಟಿ
    roovari

    Add Comment Cancel Reply


    Related Posts

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ‘ಸುಮಂಜುಳ’ | ಮೇ 10

    May 6, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ನೃತ್ಯ ಭಾನು’ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ | ಮೇ 09

    May 6, 2025

    ಪರಿಚಯ ಲೇಖನ | ‘ಬೆಳೆಯುವ ಯಕ್ಷಸಿರಿ’ ಸಚಿನ್ ಶೆಟ್ಟಿ ನಾಗರಕೊಡಿಗೆ

    May 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.