ಮಂಗಳೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಘಟಕದ ಆಶ್ರಯದಲ್ಲಿ ದಿನಾಂಕ 29-07-2023ರಂದು ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆದ ವಿದ್ವಾನ್ ರಘುಪತಿ ಭಟ್ ರಚಿಸಿದ ‘ನಾನು ಮತ್ತು ನಾನು’ ಭಾವ ಸಂಕಲನ ಕೃತಿಯನ್ನು ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಡಾ. ವಸಂತ ಕುಮಾರ್ ಪೆರ್ಲ ಇವರು ಮಾತನಾಡುತ್ತಾ “ಸಾಹಿತ್ಯವು ಭಾವನೆಗಳೊಂದಿಗೆ ಹುಟ್ಟಿಕೊಳ್ಳುತ್ತದೆ ಹೊರತು ಆಧುನಿಕ ಯಂತ್ರಗಳಿಂದಲ್ಲ. ಮನುಷ್ಯನು ಭಾವಜೀವಿ ಹಾಗಾಗೀ ಮನಸ್ಸಿನಲ್ಲಿ ಉಂಟಾಗುವ ಭಾವ ಪ್ರಪಂಚದ ಕಥೆ ವ್ಯಥೆಗಳೇ ಕಾವ್ಯಕ್ಕೆ ವಸ್ತುಗಳು ಆಗುತ್ತವೆ.” ಎಂದು ಹೇಳಿದರು.
ಸಾಹಿತಿ ಶಶಿರಾಜ್ ಕಾವೂರು ಮಾತನಾಡಿ, “ರಘುಪತಿ ಭಟ್ ಅವರು ‘ನಾನು ಮತ್ತು ನಾನು’ ಭಾವ ಸಂಕಲನದಲ್ಲಿ ಸಮಕಾಲೀನ ಮನುಷ್ಯ ಮತ್ತು ಆಧ್ಯಾತ್ಮಿಕ ಭಾವ ಪ್ರಪಂಚದ ವಸ್ತುಗಳನ್ನು ಕೇಂದ್ರಿಕರಿಸಿ ಕಾವ್ಯವನ್ನು ರಚಿಸಿದ್ದಾರೆ. ಕಾವ್ಯವು ಮಾನವ ಸಂಬಂಧಗಳನ್ನು ಒಟ್ಟುಗೂಡಿಸುವ ಮೂಲಕ ನಮಗೆ ಒಂದು ರೀತಿಯ ಸುಖವನ್ನು ನೀಡುತ್ತದೆ.” ಎಂದು ಹೇಳಿದರು.
ಕ.ಸಾ.ಪ. ಮಂಗಳೂರು ಘಟಕದ ಅಧ್ಯಕ್ಷ ಡಾ.ಮಂಜುನಾಥ್ ರೇವಣಕರ್, ಸಾಹಿತಿ, ನ್ಯಾಯವಾದಿ ಶಶಿರಾಜ್ ಕಾವೂರು, ಕೃತಿಕಾರ ವಿದ್ವಾನ್ ರಘುಪತಿ ಭಟ್, ಎನ್. ಸುಬ್ರಾಯ ಭಟ್, ಶ್ರೀಕೃಷ್ಣ ಭಟ್ ಉಪಸ್ಥಿತರಿದ್ದರು. ಎನ್. ಗಣೇಶ್ ಪ್ರಸಾದ್ ಜಿ, ಸ್ವಾಗತಿಸಿದರು. ಎನ್. ಸುಬ್ರಾಯ ಭಟ್ ವಂದಿಸಿ, ರತ್ನಾವತಿ ಜೆ.ಬೈಕಾಡಿ ನಿರೂಪಿಸಿದರು. ಜಿಲ್ಲೆಯ ಪ್ರಸಿದ್ಧ ಕವಿಗಳಿಂದ ಮೌಲಿಕವಾದ ಮತ್ತು ಪ್ರೌಢ ಕವಿತೆಗಳ ವಾಚನ ಕಾರ್ಯಕ್ರಮವು ನಡೆಯಿತು.