ಮಂಗಳೂರು: ವಿದ್ವಾನ್ ರಾಮಚಂದ್ರ ಉಚ್ಚಿಲ್ ಜನ್ಮ ಶತಮಾನೋತ್ಸವ ಸಂಸ್ಮರಣ ಸಮಿತಿ, ಗುರು ಶಿಷ್ಯ ಒಕ್ಕೂಟ ಮತ್ತು ಚ. ರಾ. ಪ್ರಕಾಶನ ಇವರ ಆಶ್ರಯದಲ್ಲಿ ವಿದ್ವಾನ್ ರಾಮಚಂದ್ರ ಉಚ್ಚಿಲ್ ಜನ್ಮ ಶತಮಾನೋತ್ಸವ ಸಂಸ್ಮರಣೆ, ತಾಳಮದ್ದಳೆ ಮತ್ತು ಕೃತಿ ಬಿಡುಗಡೆ ಸಮಾರಂಭವು 20 ಏಪ್ರಿಲ್ 2025ರ ಭಾನುವಾರದಂದು ಸೋಮೇಶ್ವರ ಉಚ್ಚಿಲದ ಬೋವಿ ಹಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವ ಸ್ಮಾರಕ ಕಟ್ಟಡ ಸಭಾಗೃಹದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪಬೆಳಗಿ ಉದ್ಘಾಟಿಸಿದ ಹಿರಿಯ ವೈದ್ಯ ಮತ್ತು ಸಾಹಿತಿ ಡಾ. ರಮಾನಂದ ಬನಾರಿ ಮಾತನಾಡಿ “ಚರಾ ಎಂಬ ಅಭಿಧಾನದಲ್ಲಿ ಬರೆಯುತ್ತಿದ್ದ ರಾಮಚಂದ್ರ ಉಚ್ಚಿಲರ ಲೇಖನಗಳು ವಿಡಂಬನಾತ್ಮಕವಾಗಿದ್ದು ಓದುಗರನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದವು. ಅವರು ಮುಂಬೈ ಬಿಟ್ಟು ಊರಲ್ಲಿ ನೆಲೆಸಿದ 25 ವರ್ಷಗಳಲ್ಲಿ ತಾವಿಬ್ಬರೂ ಅತ್ಯಂತ ಆಪ್ತರಾಗಿದ್ದೆವು. ಮುಂಬೈಯ ಮರ್ಕೆಂಟೈಲ್ ಬ್ಯಾಂಕ್ ನಲ್ಲಿ ಉದ್ಯೋಗಕ್ಕೆ ನಿಷ್ಠರಾಗಿದ್ದು ಪತ್ರಿಕಾ ಅಂಕಣಕಾರರಾಗಿ, ರಾತ್ರಿ ಶಾಲೆಯ ಅಧ್ಯಾಪಕರಾಗಿ ಅಪಾರ ಶಿಷ್ಯ ಸಂಪತ್ತನ್ನು ಹೊಂದಿದ್ದ ಉಚ್ಚಿಲರು ತಮ್ಮ ಜ್ಞಾನ ಶಕ್ತಿ, ಸ್ಮರಣ ಶಕ್ತಿ ಮತ್ತು ಇಚ್ಛಾಶಕ್ತಿಗೆ ಹೆಸರಾಗಿದ್ದರು. ಅವರ ಬದುಕು – ಬರಹಗಳನ್ನು ದಾಖಲೀಕರಿಸಿದ ಪುತ್ರಿ ಡಾ. ವಾಣಿ ಉಚ್ಚಿಲ್ಕರ್ ಅವರದು ಶ್ರೇಷ್ಠ ಕಾರ್ಯ” ಎಂದು ನುಡಿದರು. ಹಿರಿಯ ಸಾಹಿತಿ, ಸಂಶೋಧಕ ಹಾಗೂ ಮುಂಬೈ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ತಾಳ್ತಜೆ ವಸಂತಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಮರಣ ಭಾಷಣ ಮಾಡಿದ ಹಿರಿಯ ವಿದ್ವಾಂಸ ಮತ್ತು ಯಕ್ಷಗಾನ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ ಮಾತನಾಡಿ “ರಾಮಚಂದ್ರ ಉಚ್ಚಿಲ್ ಬದುಕಿದ್ದಾಗ ಪ್ರೊ. ಅಮೃತ ಸೋಮೇಶ್ವರರ ಸಂಪಾದಕತ್ವದಲ್ಲಿ ‘ವಜ್ರ ಕುಸುಮ’ ಎಂಬ ಅಭಿನಂದನಾ ಗ್ರಂಥ ಸಮರ್ಪಣೆಯಾಗಿತ್ತು. ಅವರು ಹಾಗೆಯೇ ಬದುಕಿದವರು. ಮುಂಬೈಯಲ್ಲಿ ಖ್ಯಾತ ವಿಮರ್ಶಕರಾಗಿ, ಪತ್ರಕರ್ತರಾಗಿ ಅವರು ದೀರ್ಘಕಾಲ ದುಡಿದಿದ್ದಾರೆ. ಯಕ್ಷಗಾನದ ವಿಶೇಷ ಅಭಿಮಾನಿಯಾಗಿ ಅದರ ಲೋಪ ದೋಷಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಯಕ್ಷಗಾನ ತನ್ನ ಪರಂಪರೆಯನ್ನು ಬಿಟ್ಟು ಬೇರೆ ದಾರಿ ಹಿಡಿದಾಗ ಕಪ್ಪು ಬಾವುಟ ಹಿಡಿದು ಪ್ರತಿಭಟಿಸಿದ ಛಾತಿ ಅವರದು. ಕಾಲ್ಚೆಂಡಿನ ತರಬೇತುದಾರರಾಗಿ ಕ್ರೀಡಾ ಮನೋಭಾವ ಹೊಂದಿದ್ದ ಉಚ್ಚಿಲ್ ತಮ್ಮ ನಡೆ ನುಡಿಗಳಲ್ಲಿ ನಿರ್ಭಿಡೆ ಹಾಗೂ ಕಾಠಿಣ್ಯ ತೋರಿದರೂ ಸ್ನೇಹ ವಿಶ್ವಾಸಗಳಿಗೆ ತೆರೆದುಕೊಳ್ಳುವ ಹೂವಿನಂತಹ ಹೃದಯ ಹೊಂದಿದ್ದರು” ಎಂದರು.
ದಿ. ರಾಮಚಂದ್ರ ಉಚ್ಚಿಲರ ನೆನಪಿನ 4 ಸಂಪುಟಗಳು ಸೇರಿದಂತೆ ಒಟ್ಟು ಎಂಟು ಕೃತಿಸಂಚಯಗಳನ್ನು ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ಚರಾ ನೆನಪಿನ ಸಂಪುಟ 1,2,3 ಮತ್ತು 4 ಕೃತಿಗಳನ್ನು ಡಾ. ರಮಾನಂದ ಬನಾರಿ ಬಿಡುಗಡೆಗೊಳಿಸಿದರು. ಇದರೊಂದಿಗೆ ಡಾ.ವಾಣಿ ಎನ್. ಉಚ್ಚಿಲ್ಕರ್ ಅವರ ‘ಭಾವ ತರಂಗ’ ಕವನ ಸಂಕಲನ, ‘ಜ್ಞಾನ ದರ್ಶನ’ ಪ್ರಬಂಧ ಸಂಗ್ರಹ, ‘ನನ್ನ ಚೇತನ’ ಸಂಸ್ಮರಣ ಲೇಖನಗಳು ಹಾಗೂ ನವೀನ್ ಎನ್. ಉಚ್ಚಿಲ್ಕರ್ ಮತ್ತು ನವನೀತ ಎನ್.ಉಚ್ಚಿಲ್ಕರ್ ಸಂಪಾದಿಸಿದ ‘ಎಲೆಮರೆಯ ಬರಹಗಾರ ದಿವಂಗತ ನಾರಾಯಣ ಕೆ. ಉಚ್ಚಿಲ್ಕರ್’ ಕೃತಿಗಳನ್ನು ಡಾ. ತಾಳ್ತಜೆ ವಸಂತ ಕುಮಾರ್ ಬಿಡುಗಡೆಗೊಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ. ತಾಳ್ತಜೆ ವಸಂತ ಕುಮಾರ್ ಮಾತನಾಡಿ “ಮುಂಬೈಯಲ್ಲಿ ಸಾಹಿತಿಯಾಗಿ ಹಾಗೂ ಸಂಘಟಕರಾಗಿ ಅತ್ಯಂತ ಕ್ರಿಯಾಶೀಲರಾಗಿದ್ದ ರಾಮಚಂದ್ರ ಉಚ್ಚಿಲರು ಉತ್ತಮ ವಾಗ್ಮಿ ಮತ್ತು ಅಧ್ಯಯನಶೀಲ ಬರಹಗಾರರು. ಅವರ ಚಿಂತನಾರ್ಹವಾದ ಭಾಷಣ ಮತ್ತು ಪ್ರಬಂಧಗಳು ಪುನ: ಪುನ: ಕೇಳುವಂತಿರುತ್ತಿದ್ದವು. ಚರಾ ಅವರ ಸಮಗ್ರ ಕೃತಿಗಳ ವಿಮರ್ಶೆ ಸರಿಯಾದ ರೀತಿಯಲ್ಲಿ ಆಗಬೇಕಿದೆ” ಎಂದು ಅಭಿಪ್ರಾಯಪಟ್ಟರು.
ಚರಾ ಜನ್ಮ ಶತಮಾನೋತ್ಸವ ಸಲಹಾ ಸಮಿತಿ ಸದಸ್ಯರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಗ್ರಂಥ ಸಂಪಾದಕಿ ಹಾಗೂ ಚರಾ ಪ್ರಕಾಶನದ ಕಾರ್ಯದರ್ಶಿ ಡಾ. ವಾಣಿ ಎನ್. ಉಚ್ಚಿಲ್ಕರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕೃತಿ ಪರಿಚಯ ನೀಡಿ, ಕಲಾ ಗಂಗೋತ್ರಿಯ ಕೆ. ಸದಾಶಿವ ಮಾಸ್ಟರ್ ವಂದಿಸಿದರು. ಅಡ್ಕ ಭಗವತಿ ಕ್ಷೇತ್ರದ ಮೂಲ್ಯಚ್ಚ ರವೀಂದ್ರನಾಥ ಆರ್.ಉಚ್ಚಿಲ್, ಕಾರ್ಯಕಾರಿ ಸಮಿತಿಯ ಚಿದಾನಂದ ಆರ್. ಉಚ್ಚಿಲ್, ರಾಜಶೇಖರ ಆರ್. ಉಚ್ಚಿಲ್, ನವನೀತ ಎನ್. ಉಚ್ಚಿಲ್ಕರ್, ವಾಸುದೇವ ಉಚ್ಚಿಲ್, ನಿಧೀಶ್ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಂಗವಾಗಿ ಹಿರಿಯ ಕಲಾವಿದರಿಂದ ‘ಕರ್ಣ ಪರ್ವ’ ಯಕ್ಷಗಾನ ತಾಳಮದ್ದಳೆ ಜರಗಿತು. ಡಾ. ಎಂ.ಪ್ರಭಾಕರ ಜೋಶಿ, ಭಾಸ್ಕರ ರೈ ಕುಕ್ಕುವಳ್ಳಿ, ಸದಾಶಿವ ಆಳ್ವ ತಲಪಾಡಿ, ವಿನಯ ಆಚಾರ್ಯ ಹೊಸಬೆಟ್ಟು, ಪ್ರವೀಣ್ ರೈ ಎಲಿಯಾರ್ ಅರ್ಥಧಾರಿಗಳಾಗಿದ್ದರು. ರಾಜಾರಾಮ ಹೊಳ್ಳ ಕೈರಂಗಳ ಭಾಗವತಿಕೆ ಹಾಗೂ ಮಯೂರ್ ನಾಯಗ ಮಾಡೂರು ಮತ್ತು ಸ್ಕಂದ ಪ್ರಸಾದ್ ಮಯ್ಯ ವರ್ಕಾಡಿ ಹಿಮ್ಮೇಳದಲ್ಲಿ ಭಾಗವಹಿಸಿದ್ದರು.