ಬೆಂಗಳೂರು : ಬಸವ ಸಮಿತಿ ಬೆಂಗಳೂರು ವತಿಯಿಂದ ದಿನಾಂಕ 24-05-2023ರಂದು ಲಿಂ. ಎಸ್.ಜಿ. ಬಾಳೇಕುಂದ್ರಿಯವರ ಸಂಸ್ಮರಣಾರ್ಥ ವಚನಾಮೃತ ಸಾರದ ಭಕ್ತಿ ಸಂಗೀತ ಕಾರ್ಯಕ್ರಮವು ಬಸವ ಸಮಿತಿಯಲ್ಲಿ ಯಶಸ್ವಿಯಾಗಿ ನೆರವೇರಿತು. ಬಸವ ಸಮಿತಿ ಬೆಂಗಳೂರಿನ ಅಧ್ಯಕ್ಷರಾದ ಶ್ರೀ ಅರವಿಂದ ಜತ್ತಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಂಸ್ಮರಣಾ ಕಾರ್ಯಕ್ರಮದಲ್ಲಿ ಎರಡನೇ ಸರ್. ಎಂ.ವಿಶ್ವೇಶ್ವರಯ್ಯ ಎಂದೇ ಖ್ಯಾತರಾದ ಶ್ರೇಷ್ಠ ನೀರಾವರಿ ತಜ್ಞರಾದ ಎಸ್.ಜಿ. ಬಾಳೇಕುಂದ್ರಿರವರ 101ನೇ ಜನ್ಮ ಶತಮಾನೋತ್ಸವದ ಕಾರ್ಯಕ್ರಮದ ಸಂದರ್ಭದಲ್ಲಿ ಬೆಂಗಳೂರಿನ ಪ್ರೊ. ಎಮಿರಿಟಿಸ್ ಜಯದೇವ ಆಸ್ಪತ್ರೆಯ ಖ್ಯಾತ ಮಕ್ಕಳ ಹೃದ್ರೋಗ ತಜ್ಞರಾದ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿಯವರು ಸಂಸ್ಮರಣಾ ನುಡಿಗಳನ್ನಾಡಿದರು.
ಭಕ್ತಿ ಗಂಧರ್ವ ವಿದ್ವಾನ್ ಎಂ.ಎಸ್. ದೀಪಕ್ ಅವರು ‘ವಚನಾಮೃತ ಸಾರ’ ಎಂಬ ಬಸವಣ್ಣ ವಚನಗಳನ್ನು ವಿಶೇಷ ಸಂಗೀತ ಕಚೇರಿಯ ಮೂಲಕ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಬಹಳ ಸೊಗಸಾಗಿ ಪ್ರಸ್ತುತಪಡಿಸಿದರು. ಶ್ರೀಯುತ ದೀಪಕ್ ಅವರ ಗುರುಗಳಾದ ಗಾನ ಕಲಾಭೂಷಣ ಡಾ. ವಿದ್ವಾನ್ ಆರ್.ಕೆ. ಪದ್ಮನಾಭ ಅವರು ಕರ್ನಾಟಕ ಸಂಗೀತದಲ್ಲಿ ಮಾತ್ರ ಕೇಳ-ಸಿಗಬಹುದಾದ ಒಂದು ವಿಶೇಷ ಗೇಯ ಪ್ರಾಕಾರವಾದ ‘ವರ್ಣ’ಕ್ಕೆ ರೀತಿಗೌಳ ರಾಗ ಮತ್ತು ಆದಿತಾಳದಲ್ಲಿ ಅಳವಡಿಸಿರುವ ವಚನವನ್ನು ಸುಮಧುರವಾಗಿ ದೀಪಕ್ ರವರು ಪ್ರಸ್ತುತ ಪಡಿಸಿದರು. ಮುಂದೆ ಸಾಕಷ್ಟು ಮೌಲಿಕ ವಿಚಾರಗಳನ್ನೊಳಗೊಂಡ ವಚನಗಳಾದ ‘ಉಳ್ಳವರು ಶಿವಾಲಯವ ಮಾಡುವರು’ (ರಾಗ: ಹಂಸಧ್ವನಿ), ‘ಲೋಕದ ಡೊಂಕ ನೀವೇಕೆ ತಿದ್ದುವಿರಿ’ (ರಾಗ: ಚಾರುಕೇಶಿ), ‘ನುಡಿದರೆ ಮುತ್ತಿನ ಹಾರದಂತಿರಬೇಕು’ (ರಾಗ: ಅಠಾಣ), ಆಚಾರವನು ಅರಿಯಿರಿ (ರಾಗ: ಕೇದಾರ) ಮುಂತಾದ ಪ್ರಸ್ತುತಿಗಳನ್ನು ತಮ್ಮ ಕಂಚಿನ ಕಂಠದಿಂದ ಸುಶ್ರಾವ್ಯವಾಗಿ ಹಾಡಿ ದೀಪಕ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಕಚೇರಿಯ ಮುಖ್ಯ ಘಟ್ಟದಲ್ಲಿ ‘ವಾದಿರಾಜದಾಸ’ ಅಂಕಿತವನ್ನುಳ್ಳ ವಿದ್ವಾನ್ ದೀಪಕ್ ರವರು ಶಿವಪ್ಪ ಜಿ. ಬಾಳೇಕುಂದ್ರಿಯವರನ್ನು ಕುರಿತು ಮಾಡಿದ ಅವರದ್ದೇ ಸ್ವಂತ ರಚನೆಯಾದ ‘ನೀರಾವರಿ ತಜ್ಞ ಶಿವಪ್ಪ ಗುರು ಬಸಪ್ಪ ಬಾಳೇಕುಂದ್ರಿ’ ಎಂಬ ಕೃತಿಯನ್ನು ಶಿವಪ್ರಿಯ ರಾಗದಲ್ಲಿ ಪ್ರಸ್ತುತ ಪಡಿಸಿ ಎಲ್ಲಾ ಶ್ರೋತೃಗಳ ಹೃನ್ಮನಗಳನ್ನು ಸೆಳೆದರು. ಕೊನೆಯದಾಗಿ ಸಿಂಧುಭೈರವಿ ರಾಗದಲ್ಲಿ ಮನಮೋಹಕವಾಗಿ ‘ಅಳೆವುತ್ತ ಅಳೆವುತ್ತ ಬಳಲುವರಲ್ಲದೇ, ಕೊಳಗ ಬಳಲುವುದೇ?’ ಎಂಬ ಭಾವನಾತ್ಮಕವಾದ ವಚನವನ್ನು ಪ್ರಸ್ತುತ ಪಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಒಂದೊಂದು ವಚನದಲ್ಲೂ ದೀಪಕ್ ಅವರು ರಾಗಭಾವದ ಹೂರಣದೊಂದಿಗೆ ಕೂಡಲಸಂಗಮ ದೇವರನ್ನು ಸ್ತುತಿಸಿ ಒಂದು ದೈವಿಕವಾದ ನಾದ-ಸ್ವರ್ಗವನ್ನೇ ಸೃಷ್ಟಿಸಿಬಿಟ್ಟರು. ಈ ಕಾರ್ಯಕ್ರಮದ ಉಪಸ್ಥಿತಿ ವಹಿಸಿದ್ದ ಬಸವ ಸಮಿತಿಯ ಅಧ್ಯಕ್ಷರಾದ ಶ್ರೀ ಅರವಿಂದ ಜತ್ತಿ ಅವರು, ಖ್ಯಾತ ಮಕ್ಕಳ ಹೃದ್ರೋಗ ತಜ್ಞರಾದ ಶ್ರೀಮತಿ ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು ಹಾಗು ಎಸ್. ಜಿ. ಬಾಳೇಕುಂದ್ರಿ ಅವರ ಧರ್ಮಪತ್ನಿಯಾದ ಶ್ರೀಮತಿ ಕಮಲಾ ಬಾಳೇಕುಂದ್ರಿ ಅವರು ಕಚೇರಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ದೀಪಕ್ ರವರ ಗಾನಸೌಂದರ್ಯವನ್ನು ವಿಧವಿಧವಾದ ಕೊಂಡಾಡಿ ಶ್ಲಾಘಿಸಿದರು.