ಉಡುಪಿ : ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ.) ಇದರ ವತಿಯಿಂದ ‘ವಿದ್ಯಾದಶಮಿ ಸಂಗೀತೋತ್ಸವ -2025’ವನ್ನು ದಿನಾಂಕ 02 ಅಕ್ಟೋಬರ್ 2025ರಂದು ಬೆಳಿಗ್ಗೆ 7-40 ಗಂಟೆಯಿಂದ ಕುಕ್ಕುದಕಟ್ಟೆಯಲ್ಲಿರುವ ಸರಿಗಮ ಭಾರತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 7-40 ಗಂಟೆಗೆ ಮಣಿಪಾಲದ ಹಿಂದುಸ್ತಾನಿ ಗಾಯಕ ಪಂಡಿತ್ ರವಿಕಿರಣ್ ಇವರ ಹಿಂದುಸ್ತಾನಿ ಗಾಯನ. 9-00 ಗಂಟೆಗೆ ವಿದುಷಿ ಸುರೇಖಾ ಭಟ್ ಇವರ ಕರ್ನಾಟಕ ಸಂಗೀತ ಹಾಡುಗಾರಿಕೆಗೆ ಪ್ರಮಥ್ ಭಾಗವತ್ ಇವರು ವಯೊಲಿನ್ ಮತ್ತು ಡಾ. ಬಾಲಚಂದ್ರ ಆಚಾರ್ ಮೃದಂಗ ಸಹಕಾರ ನೀಡಲಿದ್ದಾರೆ. 10-00 ಗಂಟೆಗೆ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಪಿಳ್ಳಾರಿ ಗೀತೆಗಳು, ಬೆಳಗ್ಗ 10-20ಕ್ಕೆ ಕಾರ್ಯಕ್ರಮದ ಉದ್ಘಾಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಹರಿಕೃಷ್ಣ ಪುನರೂರು, ಪ್ರದೀಪ್ ಕಲ್ಕೂರ, ಮಂಜುನಾಥ ಉಪಾಧ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭದಲ್ಲಿ ಬಹುಮುಖ ಪ್ರತಿಭೆಗಳಾದ ಶಿಲ್ಪಾ ಜೋಶಿ, ಮಾನಸಿ ಸುಧೀರ್ ಇವರನ್ನು ಗೌರವಿಸಿ ಸನ್ಮಾನಿಸಲಾಗುವುದು.
ಗಂಟೆ 11-45ರಿಂದ ತನ್ಮಯಿ ಉಪ್ಪಂಗಳ ಇವರ ಸಂಗೀತ ಕಛೇರಿಗೆ ಸಿ.ವಿ. ಶ್ರುತಿ ಮೈಸೂರು ವಯೊಲಿನ್ ಮತ್ತು ಸುನಾದಕೃಷ್ಣ ಅಮೈ ಮೃದಂಗ ಸಾಥ್ ನೀಡಲಿದ್ದಾರೆ. 2-00 ಗಂಟೆಗೆ ವಿದ್ಯಾಲಯದ ಮಕ್ಕಳಿಂದ ಕೃತಿಗಳ ಪ್ರಸ್ತುತಿ, ನಂತರ ಪಂಚರತ್ನ ಗೋಷ್ಠಿ ಗಾಯನ ನಡೆಯಲಿದೆ. ಸಂಜೆ 4-00 ಗಂಟೆಗೆ ಮೈಸೂರಿನ ಎ. ಚಂದನ್ ಕುಮಾರ್ ಇವರ ಕೊಳಲವಾದನ- ಇವರೊಂದಿಗೆ ವಯೊಲಿನ್‌ನಲ್ಲಿ ವಿದುಷಿ ಚಾರುಲತಾ ರಾಮಾನುಜಂ, ಮೃದಂಗದಲ್ಲಿ ವಿದ್ವಾನ್ ಅರ್ಜುನ್ ಕುಮಾರ್ ಬೆಂಗಳೂರು ಮತ್ತು ವಿದ್ವಾನ್ ಸುನಾದಕೃಷ್ಣ ಅಮೈ ಸಾಥ್ ನೀಡುವರು. ಸಂಜೆ 7-30ರಿಂದ ಮಂಗಳೂರಿನ ‘ನೃತ್ಯಾಂಗನ್’ನ ಅದಿತಿ ಲಕ್ಷ್ಮಿ ಭಟ್ ಹಾಗೂ 8-30ರಿಂದ ಪುತ್ತೂರಿನ ದೀಪಕ್ ಕುಮಾರ್ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದು ವಿದ್ಯಾಲಯದ ನಿರ್ದೇಶಕಿ ಉಮಾಶಂಕರಿ ತಿಳಿಸಿರುತ್ತಾರೆ.