ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಏರ್ಪಾಟಾಗಿದ್ದ ಹಿರಿಯ ವಿದ್ವಾಂಸ ಪ್ರೊ. ಅ.ರಾ. ಮಿತ್ರ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿದ್ಯಾರಣ್ಯ ಪ್ರತಿಷ್ಠಾನ ಸ್ಥಾಪಿಸಿರುವ ‘ವಿದ್ಯಾರಣ್ಯ ದತ್ತಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 06 ಏಪ್ರಿಲ್ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಪ್ರಾಧ್ಯಾಪಕ, ಚಿಂತಕ, ವಿಮರ್ಶಕ, ಮಾತುಗಾರ ಪ್ರೊ. ಅ.ರಾ. ಮಿತ್ರ ಇವರು ಕುಮಾರ ವ್ಯಾಸ ಭಾರತದ ವ್ಯಾಖ್ಯಾನ, ಹಾಸ್ಯೋತ್ಸವಗಳ ಮೂಲಕ ಕರ್ನಾಟಕದ ಮನೆ ಮನೆಯಲ್ಲಿಯೂ ಹೆಸರಾಗಿರುವವರು. ಕನ್ನಡ ಸಾಹಿತ್ಯವನ್ನು ಬಹುಮುಖಿಯಾಗಿ ಬೆಳೆಸಿದ ಅವರು ಪರಂಪರೆ ಮತ್ತು ಆಧುನಿಕತೆಗೆ ಕೊಂಡಿಯಾಗಿರುವವರು. ಪ್ರೊ. ಅ.ರಾ. ಮಿತ್ರ ಅವರ ‘ಛಂದೋಮಿತ್ರ’ ಸುಲಭವಾಗಿ ಎಲ್ಲರೂ ಕನ್ನಡ ಛಂದಸ್ಸನ್ನು ಅರಿಯಲು ನೆರವಾಯಿತು. ಹಾಸ್ಯ, ಮಿತ್ರ ಅವರ ಮಾರ್ಗವಾದರೂ ಗುರಿ ಗಂಭೀರ ಸಾಹಿತ್ಯದ ಅಧ್ಯಯನ, ಪ್ರಾಚೀನ ಕಾವ್ಯಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಅವರು ನಾಡಿನೆಲ್ಲೆಡೆ ಕುಮಾರ ವ್ಯಾಸನನ್ನು ತಲಪಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ–ಕನ್ನಡ ನಿಘಂಟು ರೂಪುಗೊಳ್ಳುವುದರಲ್ಲಿಯೂ ಅವರು ಮುಖ್ಯ ಪಾತ್ರವನ್ನು ವಹಿಸಿದ್ದರು. ಸಜ್ಜನರಲ್ಲಿ ಸಜ್ಜನರಾದ ಪ್ರೊ. ಅ.ರಾ. ಮಿತ್ರ ಬರಹದ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರು. ಅವರಿಗೆ ಮೊದಲ ವಿದ್ಯಾರಣ್ಯ ಪ್ರಶಸ್ತಿಯನ್ನು ನೀಡುವ ಮೂಲಕ ಮಹತ್ವದ ಪರಂಪರೆಯೊಂದು ಆರಂಭವಾದಂತಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಭಿಮಾನ ಮತ್ತು ಗೌರವದಿಂದ ವಿದ್ಯಾರಣ್ಯ ಪ್ರತಿಷ್ಠಾನವು ಇಪ್ಪತ್ತು ಲಕ್ಷ ರೂಪಾಯಿಗಳ ದೊಡ್ಡ ಮೊತ್ತದ ದತ್ತಿಯನ್ನು ಇರಿಸಿದ್ದು, ಇದು ಕನ್ನಡ ಸಾಹಿತ್ಯ ಪರಂಪರೆಗೆ ದೊಡ್ಡ ಕೊಡುಗೆಯಾಗಿದೆ” ಎಂದು ಸಂತೋಷ ವ್ಯಕ್ತಪಡಿಸಿದರು.
ವಿಶ್ರಾಂತ ಕರ್ನಾಟಕ ಲೋಕಾಯುಕ್ತರಾದ ನ್ಯಾಯಮೂರ್ತಿ ಎನ್.ಸಂತೋಷ ಹೆಗಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿ “ಸಮಾಜಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದವರನ್ನು ಗೌರವಿಸುವುದು ಉತ್ತಮ. ಪರಂಪರೆಯ ಜೊತೆಗೆ ಸಮಾಜಕ್ಕೆ ಧನಾತ್ಮಕ ಸಂದೇಶವನ್ನು ನೀಡುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಇಂತಹ ಧನಾತ್ಮಕ ಭಾವವನ್ನು ಹರಡುವ ಅಗತ್ಯವಿದೆ” ಎಂದು ಒತ್ತಿ ಹೇಳಿ, ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದ್ದಕ್ಕಾಗಿ ಸಂತೋಷವನ್ನು ವ್ಯಕ್ತಪಡಿಸಿದರು.
ಹಿರಿಯ ಜನಪದ ತಜ್ಞರು ಮತ್ತು 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರೂ ಆದ ನಾಡೋಜ ಡಾ. ಗೊ.ರು. ಚನ್ನಬಸಪ್ಪನವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ “ಹಾಸ್ಯದ ಮೂಲಕ ಸಮಾಜದ ಡೊಂಕನ್ನು ತಿದ್ದುವ ಕೆಲಸವನ್ನು ಮಾಡಿದ ಪ್ರೊ. ಅ.ರಾ. ಮಿತ್ರರವರು ಗಂಭೀರ ಅಧ್ಯಯನವನ್ನು ಸಮಾಜದ ಎಲ್ಲರಿಗೂ ತಲುಪಿಸುವ ಬಹು ಮುಖ್ಯವಾದ ಕೆಲಸವನ್ನು ಮಾಡಿದವರು. ಇಂದಿಗೂ ಕ್ರಿಯಾಶೀಲರಾಗಿರುವ ಅವರಿಗೆ ವಿದ್ಯಾರಣ್ಯ ಮತ್ತು ಅ.ನ.ಕೃ. ಇಬ್ಬರ ಹೆಸರು ಸೇರಿರುವ ಪುರಸ್ಕಾರ ಸಂದಿರುವುದು ಅರ್ಥಪೂರ್ಣವಾಗಿದೆ. ಮಿತ್ರ ನಂತಹವರು ಯಾವುದೇ ಭಾಷೆಗೆ ಹೆಮ್ಮೆ, ಕನ್ನಡ ಸಂಸ್ಕೃತಿ ಇಲಾಖೆ ಅವರ ಸಮಗ್ರವನ್ನು ಪ್ರಕಟಿಸಬೇಕು, ಕನ್ನಡ ಸಾಹಿತ್ಯ ಪರಿಷತ್ತು ನಾಡಿನೆಲ್ಲೆಡೆ ಅವರ ಉಪನ್ಯಾಸಗಳನ್ನು ಏರ್ಪಡಿಸಬೇಕು” ಎಂದು ಸಲಹೆ ನೀಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಅ.ರಾ. ಮಿತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಂಗಣದಲ್ಲಿ ನಾಡಿನ ದಿಗ್ಗಜರನ್ನು ಭೇಟಿ ಮಾಡಿ ಒಡನಾಟದ ಸೌಭಾಗ್ಯ ಅನುಭವಿಸಿದ್ದೇನೆ, ಪರಿಷತ್ತಿನಿಂದ ವಿದ್ಯಾರಣ್ಯರ ಹೆಸರಿನಲ್ಲಿರುವ ಪುರಸ್ಕಾರ ನನಗೆ ಸಿಕ್ಕಿರುವುದು ಸಂತೋಷ ಕೊಟ್ಟಿದೆ. ನೀವೆಲ್ಲರೂ ವಿದ್ಯಾರಣ್ಯರೇ, ಎಲ್ಲರಿಂದಲೂ ಕಲಿಯಲು ಬಯಸುತ್ತೇನೆ ಎಂದು ಭಾವುಕರಾಗಿ ಹೇಳಿದರು. ದತ್ತಿ ದಾನಿಗಳಾದ ಎಂ.ವಿ. ಸತ್ಯನಾರಾಯಣ ದತ್ತಿ ಆಶಯದ ಕುರಿತು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು ಕಾರ್ಯಕ್ರಮವನ್ನು ನಿರೂಪಿಸಿದರೆ, ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ ಸ್ವಾಗತಿಸಿ, ಡಾ. ಪದ್ಮಿನಿ ನಾಗರಾಜು ವಂದಿಸಿದರು. ಪ್ರೊ. ಅ.ರಾ. ಮಿತ್ರ ಅವರ ಅಭಿಮಾನಿಗಳೂ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.