ಉಜಿರೆ : ಕನ್ನಡ ಸಾಹಿತ್ಯ ಪರಿಷತ್ ಸುವರ್ಣ ವರ್ಷಾಚರಣೆ ಪ್ರಯುಕ್ತ ದ.ಕ. ಜಿಲ್ಲಾ ಕ. ಸಾ. ಪ. ಆಶ್ರಯದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗದ ಸಹಯೋಗದೊಂದಿಗೆ ‘ವಿದ್ಯಾರ್ಥಿಗಳೆಡೆಗೆ ಸಾಹಿತ್ಯದ ನಡಿಗೆ’ ವಿಶೇಷ ಕಾರ್ಯಕ್ರಮವು ದಿನಾಂಕ 04 ಡಿಸೆಂಬರ್ 2024ರಂದು ಉಜಿರೆಯ ಹಳೆಪೇಟೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ. ಸಾ. ಪ. ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ಮಾತನಾಡಿ “ಪ್ರೌಢ ಶಾಲಾ ವಿದ್ಯಾರ್ಥಿಗಳ ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಪಾಠದ ಜತೆಗೆ ಸಾಹಿತ್ಯ, ಕ್ರೀಡೆ ಹಾಗೂ ಪತ್ಯೇತರ ಚಟುವಟಿಕೆಗಳು ಪೂರಕವಾಗಿದ್ದು, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿ, ಅಭಿರುಚಿ ಬೆಳೆಸಿ ಸಾಹಿತ್ಯಕ ಚಟುವಟಿಕೆಗಳನ್ನು ನಡೆಸಿ ಪ್ರೇರೇಪಿಸುವಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಪತ್ರಿಕೆ, ಪುಸ್ತಕ, ಸಾಹಿತ್ಯಕ ಕೃತಿಗಳನ್ನು ಓದುವ ಹವ್ಯಾಸ ಬೆಳೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗ ಕಾಲೇಜಿನ ವಿಸ್ತರಣಾ ಚಟುವಟಿಕೆಯನ್ವಯ ತಾಲೂಕಿನ ವಿವಿಧ ಪ್ರೌಢ ಶಾಲೆಗಳಲ್ಲಿ ಕಳೆದ ಒಂದು ವರ್ಷದಿಂದ ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕನ್ನಡ ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು.” ಎಂದರು.
ಶಾಲಾ ಶಿಕ್ಷಕಿಯರಾದ ವೀಣಾ ಜಿ.ಎಸ್., ಅಶೋಕ ಎಸ್.ವಿ., ಪ್ರಥಮ ದರ್ಜೆ ಸಹಾಯಕಿ ಸುಧಾ ಎಚ್., ದ್ವಿತೀಯ ಬಿ.ಎಡ್. ಪ್ರಶಿಕ್ಷಣಾರ್ಥಿ ಚಂದ್ರಶೇಖರ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಸ್. ಡಿ. ಎಂ. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಭೋಜಮ್ಮ ಪ್ರಸ್ತಾವಿಕವಾಗಿ ಮಾತನಾಡಿ, ಉಜಿರೆ ಹಳೆಪೇಟೆ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕೊರಗಪ್ಪ ಟಿ. ಸ್ವಾಗತಿಸಿ, ಶಾಲಾ ಶಿಕ್ಷಕಿ ಸುಮಾ ನಿರೂಪಿಸಿ, ಸತ್ಯವತಿ ವಂದಿಸಿದರು.