ಮೈಸೂರು : ಸಮತಾ ಅಧ್ಯಯನ ಕೇಂದ್ರವು ಆಯೋಜಿಸಿದ್ದ ಡಾ.ವಿಜಯಾದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯಮಟ್ಟದ ಕಾವ್ಯ ಮತ್ತು ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ದಿನಾಂಕ 01-06-2023 ಗುರುವಾರ ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಶೋಧಕಿ ಟಿ.ಎನ್. ನಾಗರತ್ನಾ “ಸ್ತ್ರೀಪರ ವಾದ ಬಲವಾಗಿದ್ದ ಕಾಲದಲ್ಲಿ ಮಹಿಳೆಯರ ಹಕ್ಕಿನ ಜೊತೆಗೆ ಅವರ ಕರ್ತವ್ಯದ ಬಗ್ಗೆಯೂ ಎಚ್ಚರಿಸುವ ಮನೋಭಾವ ವಿಜಯಾದಬ್ಬೆ ಅವರಲ್ಲಿತ್ತು. ವಿಜಯಾ ಮಾತು ಕಡಿಮೆಯಾದರೂ ಉತ್ತಮ ನಡವಳಿಕೆ ಹೊಂದಿದ್ದರು. ಜಾತಿ-ಧರ್ಮ ಮೀರಿದ ವ್ಯಕ್ತಿತ್ವ ಅವರದ್ದು. ಅವರ ಸ್ತ್ರೀಪರ ಕಾಳಜಿಯಿಂದ ಸ್ಥಾಪಿತವಾದ ಸಮತಾ ಅಧ್ಯಯನ ಕೇಂದ್ರವು ಹಿಂಜರಿಕೆ ಮನೋಭಾವ ಹೊಂದಿದ್ದ ಅನೇಕರಿಗೆ ದಾರಿದೀಪವಾಗಿ ಕೆಲಸ ಮಾಡಿದೆ” ಎಂದು ಹೇಳಿದರು.
ಸಮತಾ ಅಧ್ಯಯನ ಕೇಂದ್ರದ ನಿಕಟಪೂರ್ವ ಅಧ್ಯಕ್ಷೆ ಎಂ.ಎನ್. ಸುಮನಾ ಮಾತನಾಡಿ, “ಇದೇ ಮೊದಲ ಬಾರಿಗೆ ಈ ಸಂಸ್ಥೆಯಿಂದ ಅವರ ಹೆಸರಿನಲ್ಲಿ ಕೃತಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಒಟ್ಟು 46 ಲೇಖಕಿಯರಿಂದ ವಿಮರ್ಶೆ ಮತ್ತು ಸಂಶೋಧನಾ ಕೃತಿಗಳು ಬಂದಿದ್ದು, ಇದರಲ್ಲಿ ಬಿ.ಎಂ. ರೋಹಿಣಿ ಅವರ ‘ವೇಶ್ಯಾವಾಟಿಕೆಯ ಕಥೆ- ವ್ಯಥೆ’ ಎಂಬ ದಮನಿತರ ಕುರಿತ ಅಧ್ಯಯನದ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕೃತರಾದ ಸಂಶೋಧಕಿ ಬಿ.ಎಂ. ರೋಹಿಣಿ ಮಾತನಾಡಿ, “ವಿಜಯಾ ವಿದ್ಯಾರ್ಥಿ ದೆಸೆಯಲ್ಲಿ ನಮಗೆ ರೋಲ್ ಮಾಡೆಲ್ ಆಗಿದ್ದವರು. ನಡೆ ಮತ್ತು ನುಡಿ ಎರಡೂ ಒಂದೇ ಎಂಬಂತೆ ಬದುಕಿದವರು. ಅವರ ಹೆಸರಿನ ಮೊದಲ ಪ್ರಶಸ್ತಿ ನನಗೆ ಸಿಕ್ಕಿದ್ದು ನನ್ನ ಭಾಗ್ಯ ಎಂದರು.
ಈ ಕಾರ್ಯಕ್ರಮದಲ್ಲಿ ‘ಕಾವ್ಯ ಮತ್ತು ಕಥಾ ಸ್ಪರ್ಧೆ’ಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾವ್ಯ ಸ್ಪರ್ಧೆಯ ತೀರ್ಪುಗಾರರಾದ ಲೇಖಕಿ ಎಂ.ಎಸ್. ವೇದಾ ಮಾತನಾಡಿ, “ವಿದ್ಯಾರ್ಥಿಗಳಿಗೆ ಮಹಿಳಾ ಕೇಂದ್ರಿತ ವಿಷಯವನ್ನು ಕಾವ್ಯ ಮತ್ತು ಕಥಾ ಸ್ಪರ್ಧೆಗೆ ನೀಡಲಾಗಿತ್ತು. 68 ಕವಿತೆಗಳು ಸ್ಪರ್ಧೆಗೆ ಬಂದಿದ್ದವು. ಅದರಲ್ಲಿ 26 ಕವಿತೆಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿದ್ದೆವು. ಭವಿಷ್ಯದಲ್ಲಿ ನವೀನತೆ ಹಾಗೂ ಹೊಸ ಚಿಂತನೆಗಳನ್ನು ಒಳಗೊಂಡಿರುವ ಉತ್ತಮ ಕವಿತೆಗಳನ್ನು ಬರೆಯಬಲ್ಲ ಭರವಸೆ ಇಲ್ಲಿ ಕಂಡಿದೆ” ಎಂದರು.
ಕಥೆ ವಿಭಾಗದ ತೀರ್ಪುಗಾರ ಚಿಕ್ಕಮಗಳೂರು ಗಣೇಶ್ ಹಾಗೂ ಸ್ಪರ್ಧೆಯ ವಿಜೇತರು ಮಾತನಾಡಿದರು. ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಆರ್. ಸುನಂದಮ್ಮ, ಲೇಖಕಿ ಎನ್. ಗಾಯತ್ರಿ ಉಪಸ್ಥಿತರಿದ್ದರು.
ಕಥೆ ಹಾಗೂ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ ರೂ.5,000/-, ದ್ವಿತೀಯ ರೂ.3,000/-, ತೃತೀಯ ರೂ.2,000/- ಮತ್ತು ತೀರ್ಪುಗಾರರು ಮೆಚ್ಚಿದ ಹತ್ತು ಕಥೆಗಳಿಗೆ ತಲಾ ರೂ.1,000/-ಪ್ರೋತ್ಸಾಹಕರ ಬಹುಮಾನ ನೀಡಲಾಯಿತು. ಮೀನಾ ಮೈಸೂರು, ಸಂತೋಷ್ ಚೊಕ್ಕಾಡಿ, ಎಂ.ಎಸ್. ವೇದಾ ಕವನ ವಿಭಾಗಕ್ಕೆ ಹಾಗೂ ಸುಮಾ ಎಂಬಾರ್, ಚಿಕ್ಕಮಗಳೂರು ಗಣೇಶ್, ಎಚ್.ಎಂ. ಕಲಾಶ್ರೀ ಇವರುಗಳು ಕಥಾ ವಿಭಾಗಕ್ಕೆ ತೀರ್ಪುಗಾರರಾಗಿದ್ದರು.