ಮುಂಬಯಿ : ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಾಗೂ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ್ದ ವಿಕಾಸ ವಾರ್ಷಿಕ ಪ್ರಶಸ್ತಿ ಹಾಗೂ ವಿಕಾಸ ಪುಸ್ತಕ ಬಹುಮಾನ ವಿತರಣೆ ಕಾರ್ಯಕ್ರಮವು ದಿನಾಂಕ 21 ಫೆಬ್ರವರಿ 2026ರ ಶನಿವಾರ ಮರಾಠಿ ವಿಭಾಗ ವಿದ್ಯಾನಗರಿಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಉದ್ಯಮಿ, ಸಮಾಜಸೇವಕ ಸುರೇಂದ್ರ ಪೂಜಾರಿ “ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವ ಭಾಗ್ಯ ನನ್ನದಾಗಿದೆ. ಇಲ್ಲಿನ ಹಲವು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೇನೆ. ಇಲ್ಲಿನ ಶಿಸ್ತು, ಸಮಯ ಪಾಲನೆ ಕಾರ್ಯಕ್ರಮದ ಅಚ್ಚುಕಟ್ಟುತನಕ್ಕೆ ಬೆರಗಾಗಿದ್ದೇನೆ. ನನಗೆ ಗೊತ್ತಿಲ್ಲದ ಎಷ್ಟೋ ವಿಚಾರಗಳನ್ನು ಇಲ್ಲಿ ಬಂದು ತಿಳಿದುಕೊಂಡಿದ್ದೇನೆ. ವಿಶ್ವನಾಥ ಕಾರ್ನಾಡ್ ಅವರ ಹಾಗೆ ನಾನು ಕೂಡಾ ಮದರ್ ಇಂಡಿಯಾ ಶಾಲೆಯ ಹಳೆಯ ವಿದ್ಯಾರ್ಥಿಗಳು. ಅವರೊಂದಿಗೆ ನನಗೆ ತುಂಬಾ ಆತ್ಮೀಯ ಒಡನಾಟವಿದೆ. ಅವರ ಸಾಹಿತ್ಯ ಸಾಧನೆ ನೋಡಿ ನಾನು ಸಂತೋಷ ಪಡುತ್ತೇನೆ. ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸ್ಯುತ್ಯರ್ಹ. ಇಂದು ಪ್ರಶಸ್ತಿ, ಬಹುಮಾನ ಪಡೆದ ಎಲ್ಲರಿಗೂ ಅಭಿನಂದನೆಗಳು” ಎಂದು ಶುಭ ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಜಿ.ಎನ್. ಉಪಾಧ್ಯ “ಕನ್ನಡಿಗರು ಬಹು ದೊಡ್ಡ ಸಂಸ್ಕೃತಿಯ ವಾರಸುದಾರರು. ನಮಗಿರುವ ಸಾಹಿತ್ಯ ಪರಂಪರೆ ಸಹ ಗಟ್ಟಿಯಾದುದು. ಮುಂಬೈ ಸಾಹಿತ್ಯ ವಲಯವಾಗಿ ಬೆಳೆದು ಬಂದಿದೆ. ಅದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲೆ ಇದೆ. ಇದನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಕೆಲಸ ಮಾಡುತ್ತಾ ಬಂದಿದೆ. ಪ್ರತಿ ವರ್ಷ ಕೆಲವು ಉತ್ತಮ ಕೃತಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲು ಸಾಧ್ಯವಾಗುತ್ತಿದೆ. ಇದು ಹೆಮ್ಮೆಯ ಸಂಗತಿ. ಡಾ. ವಿಶ್ವನಾಥ ಕಾರ್ನಾಡ್ ಅವರದು ಬಹುಮುಖ ಸಾಧನೆ. ಸಣ್ಣ ಪ್ರಾಯದಲ್ಲಿಯೇ ಮುಂಬಯಿಗೆ ಬಂದು ಬದುಕು ಕಟ್ಟಿಕೊಂಡು ತಮ್ಮ ಕ್ರಿಯಾಶೀಲತೆಯಿಂದ ಮುಂಬೈಯಲ್ಲಿ ಕನ್ನಡವನ್ನು ಲೋಕ ಸಂಚಾರಕ್ಕೆ ಅಣಿಗೊಳಿಸಿದವರು. ನಿವೃತ್ತಿಯ ಬಳಿಕವೂ ಅವರು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಉನ್ನತಿಗೆ ಶ್ರಮಿಸುತ್ತಾ ಬಂದಿದ್ದಾರೆ. ಈಗ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಕಾಸ ಬಹುಮಾನಗಳನ್ನು ಕೊಡುತ್ತ ಬಂದಿದ್ದಾರೆ. ಇದೊಂದು ಮಾದರಿ ಉಪಕ್ರಮ” ಎಂದು ನುಡಿದರು.
ಪ್ರತಿಷ್ಠಾನ ಸಂಸ್ಥಾಪಕರಾದ ಡಾ. ವಿಶ್ವನಾಥ ಕಾರ್ನಾಡ್ ಅವರು ಮಾತನಾಡುತ್ತಾ “ನಮ್ಮ ಪ್ರತಿಷ್ಠಾನದ ಮೂಲಕ ಪ್ರಶಸ್ತಿ ನೀಡುವ ಮುಖ್ಯ ಉದ್ದೇಶ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವುದು ಮತ್ತು ಸಾಧಕರ ಶ್ರಮವನ್ನು ಸಮಾಜಕ್ಕೆ ಪರಿಚಯಿಸುವುದು. ಇಂದು ಪ್ರಶಸ್ತಿ ಸ್ವೀಕರಿಸಿದ ಎಲ್ಲರೂ ಅರ್ಹರು. ಅವರಿಗೆ ಅಭಿನಂದನೆಗಳು. ಪ್ರತಿಷ್ಠಾನ ಸ್ಥಾಪಿಸುವುದು ಮುಖ್ಯವಲ್ಲ. ಅದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಗಳನ್ನು ವಹಿಸಿ ಅಚ್ಚುಕಟ್ಟಾಗಿ ಇಂತಹ ಕಾರ್ಯಕ್ರಮವನ್ನು ಆಯೋಜಿಸುವ ಡಾ. ಜಿ.ಎನ್. ಉಪಾಧ್ಯರವರಿಗೆ ಧನ್ಯವಾದಗಳು .ಎಲ್ಲರೂ ಸೇರಿ ಸಾಹಿತ್ಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸೋಣ” ಎಂದು ನುಡಿದರು.
ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧಕ್ಷರಾಗಿರುವ ಶೋಭಾ ಅಮರನಾಥ ಶೆಟ್ಟಿ ಅವರು ಮಾತನಾಡುತ್ತಾ “ನಾನು ಭಾಗವಹಿಸಿದ ಕಾರ್ಯಕ್ರಮಗಳಲ್ಲಿಯೇ ಇದು ಭಿನ್ನವಾದುದು. ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನ್ನ ಪಾಲಿಗೆ ಒದಗಿ ಬಂದಿರುವುದು ಸಂತೋಷ ತಂದಿದೆ. ಮುಂಬಯಿಯಲ್ಲಿ ಕನ್ನಡವನ್ನು ಕಲಿಸುವ, ಕಲಿಯುವ ಕೆಲಸವನ್ನು ಉನ್ನತ ಮಟ್ಟದಲ್ಲಿ ಇಲ್ಲಿ ತಾವೆಲ್ಲರೂ ಮಾಡುತ್ತಿದ್ದೀರಿ. ಭಾಷೆ ಎಂದರೆ ಅದು ಸಂಸ್ಕೃತಿ. ನಮ್ಮ ಸಮಾಜದ ಆತ್ಮವೂ ಹೌದು. ಪುಸ್ತಕಗಳು ಅದರ ಜೀವಾಳ. ನಾನು ಕಾಲೇಜಿನ ದಿನಗಳಲ್ಲಿ ಕತೆ, ಕಾದಂಬರಿ ಓದುವ ಹವ್ಯಾಸವಿತ್ತು. ಇಲ್ಲಿ ಅದನ್ನು ಜೀವಂತವಾಗಿಟ್ಟುಕೊಳ್ಳುವ ಕಾರ್ಯವನ್ನು ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮತ್ತು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಿರಂತರವಾಗಿ ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ” ಎಂದು ನುಡಿದು ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿ, ನಿರೂಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಪ್ರತಿಷ್ಠಾನದ ಕೋಶಾಧಿಕಾರಿ ಶರತ್ ಕಾರ್ನಾಡ್, ಡಾ. ಪಲ್ಲವಿ, ಸುಚಿತ್ರಾ ಕಾರ್ನಾಡ್, ವಿಭಾಗದ ಸಂಶೋಧನ ವಿದ್ಯಾರ್ಥಿಗಳಾದ ಕಲಾ ಭಾಗ್ವತ್, ಅನಿತಾ ಪೂಜಾರಿ ತಾಕೊಡೆ ಅವರು ಸಹಕರಿಸಿದರು. ಮುಂಬಯಿಯ ಸಂಘಟಕರು, ಕಲಾವಿದರು ಉಪಸ್ಥಿತರಿದ್ದರು.
