ಮಂಗಳೂರು : ಉರ್ವಸ್ಟೋರ್‌ನ ತುಳುಭವನದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಹಾಗೂ ವಿಶುಕುಮಾರ್ ದತ್ತಿನಿಧಿ ಸಮಿತಿ ವತಿಯಿಂದ ಹಾಗೂ ಯುವವಾಹಿನಿ ಪಣಂಬೂರು – ಕುಳಾಯಿ ಘಟಕದ ಅತಿಥ್ಯದಲ್ಲಿ ದಿನಾಂಕ 10 ನವೆಂಬರ್ 2024ರಂದು ಸಾಹಿತಿ, ಸಂಶೋಧಕ ಬಾಬು ಶಿವ ಪೂಜಾರಿ ಇವರಿಗೆ 2024ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಿತು.
ಈ ಸಮಾರಂಭವನ್ನು ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಇವರು ಮಾತನಾಡಿ “ಸಾಹಿತ್ಯ, ನಾಟಕ ಕ್ಷೇತ್ರದ ಮಿನುಗು ನಕ್ಷತ್ರವಾಗಿ, ದಂತ ಕಥೆಯಾಗಿದ್ದ ವಿಶು ಕುಮಾರ್ ಅನೇಕ ಪ್ರತಿಭಾವಂತರನ್ನು ಸೃಷ್ಟಿಸಿದ ಮಾನವ ಶಿಲ್ಪಿ. ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಕಥಾನಕವನ್ನು ನಾಟಕದ ಮೂಲಕ ದೇಶ ಗುರುತಿಸುವಂತೆ ಮಾಡಿದ್ದರು. ಎತ್ತಲೋ ಸಾಗುತ್ತಿರುವ ಯುವಮನಸ್ಸುಗಳನ್ನು ಒಗ್ಗೂಡಿಸಿ ತುಳು ಸಂಸ್ಕೃತಿಯ ಭಾತೃತ್ವ ಗುಣವನ್ನು ಉಳಿಸಿಕೊಂಡು ಮೂಢನಂಬಿಕೆ, ಜಾತೀಯತೆಯಿಂದ ದೂರವಾಗುವ ನಿಟ್ಟಿನಲ್ಲಿ ಯುವವಾಹಿನಿಯಂತಹ ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು” ಎಂದು ಅಭಿಪ್ರಾಯಪಟ್ಟರು.
‘ವಿಶುಕುಮಾರ್ ಪ್ರಶಸ್ತಿ’ ಪ್ರದಾನ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಇವರು ಮಾತನಾಡಿ “17-18ನೇ ಶತಮಾನದಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬರು ದ.ಕ. ಜಿಲ್ಲೆಯಲ್ಲಿ 16 ಕೈಫಿಯತ್ತುಗಳನ್ನು ರಚಿಸಿದ್ದರೂ ಅದರಲ್ಲಿ ತುಳುನಾಡಿನ ತಳ ಸಮುದಾಯಗಳ ಇತಿಹಾಸ, ಇಲ್ಲಿನ ಗರಡಿಗಳು, ಬಿಲ್ಲವ, ಒಕ್ಕಲಿಗರು, ಕಂಬಳ, ಭೂತಾರಾಧನೆ, ಯಕ್ಷಗಾನದ ಬಗ್ಗೆ ಕೈಫಿಯತ್ತುಗಳು ರಚನೆಯಾಗಿರಲಿಲ್ಲ. ಆದರೆ ವಿಶು ಕುಮಾರ್ ಮತ್ತು ಬಾಬು ಶಿವ ಪೂಜಾರಿಯವರು ಇದಕ್ಕಿಂತ ಭಿನ್ನವಾಗಿ ತುಳುನಾಡನ್ನು ಚಿತ್ರಿಸಿದ ರೀತಿ ವಿಶೇಷವಾಗಿದೆ” ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಾಬು ಶಿವ ಪೂಜಾರಿ “ತುಳು ಭಾಷೆಯ ಲಿಪಿಯ ಬಗ್ಗೆ ಚರ್ಚಿತ ವಿಚಾರ. 14ನೇ ಶತಮಾನದಲ್ಲಿ ತುಳು ಲಿಪಿಯನ್ನು ತಮ್ಮ ಸಾಹಿತ್ಯದಲ್ಲಿ ಬಳಸಲಾಗಿದೆ ಎಂಬ ಉಲ್ಲೇಖ ಮಲಯಾಳ ಸಾಹಿತ್ಯದಲ್ಲಿದ್ದು, ತುಳು ಲಿಪಿ ತುಳುವರದ್ದೇ ಎಂಬುದಕ್ಕೆ ಬೇರೆ ದಾಖಲೆ ಬೇಕಾಗಿಲ್ಲ. 2ನೇ ಶತಮಾನದ ತಮಿಳು ಸಾಹಿತ್ಯದಲ್ಲಿ ತುಳುವಿನ ಬಗ್ಗೆ ಉಲ್ಲೇಖವಿದೆ. 2010 ಮತ್ತು 12ರಲ್ಲಿ ಎರಡು ಬಾರಿ ತಮಿಳುನಾಡಿನ ಗ್ರಾಮಾಂತರ ಪ್ರದೇಶಕ್ಕೆ ಭೇಟಿ ನೀಡಿ ಅನೇಕ ತುಳು ಪೂರ್ವಿಕರನ್ನು ಭೇಟಿಯಾಗಿರುವುದರಿಂದ ತುಳು ಪ್ರಾಚೀನ ಭಾಷೆ. ಗ್ರೀಕ್‌ನಲ್ಲಿಯೂ ತುಳುವಿಗೆ ಸಂಬಂಧಿಸಿದ ವಿಚಾರವಿದೆ ಎಂಬ ವಿಷಯ ತಿಳಿದು ಬಂದಿದೆ. ವಿಜಯನಗರ ಸ್ಥಾಪನೆಯಲ್ಲಿ ಬಿಲ್ಲವರಿದ್ದಾರೆ ಎಂಬುದಕ್ಕೆ ಎರಡು ವೀರಗಲ್ಲುಗಳು ಸಾಕ್ಷಿಯಾಗಿವೆ” ಎಂದು ಹೇಳಿದರು.
‘ಡಾ. ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ’ಯನ್ನು ಉದಯೋನ್ಮುಖ ಬರಹಗಾರ್ತಿ ರಾಜಶ್ರೀ ಜೆ. ಪೂಜಾರಿ ಇವರಿಗೆ ಪ್ರದಾನ ಮಾಡಲಾಯಿತು. ಮಂಗಳೂರಿನಲ್ಲಿ ವಿಶುಕುಮಾರ್ ಸ್ಮರಣಾರ್ಥ ಭವನ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಯುವವಾಹಿನಿಯಿಂದ ಮನವಿ ಪತ್ರವನ್ನು ಸಿಎಂಗೆ ಸಲ್ಲಿಸಲಾಯಿತು. ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ, ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್., ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ. ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ., ಯುವವಾಹಿನಿ ಪಣಂಬೂರು- ಕುಳಾಯಿ ಘಟಕದ ಅಧ್ಯಕ್ಷರಾದ ಮನೀಷಾ ರೂಪೇಶ್, ಕಾರ್ಯದರ್ಶಿ ಸಚಿನ್ ಜಿ. ಅಮೀನ್, ವಿಶುಕುಮಾರ್ ದತ್ತಿನಿಧಿ ಸಮಿತಿ ಸಂಚಾಲಕ ಸುರೇಶ್ ಪೂಜಾರಿ, ಕಾರ್ಯದರ್ಶಿ ಸಚ್ಚೀಂದ್ರ ಅಂಬಾಗಿಲು ಉಪಸ್ಥಿತರಿದ್ದರು. ಟಿ. ಶಂಕರ ಸುವರ್ಣ ಪ್ರಸ್ತಾವಿಸಿ, ಸ್ಮಿತೇಶ್ ಬಾರ್ಯ ಮತ್ತು ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.