ಮಂಗಳೂರು : ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ, ಸಸಿಹಿತ್ಲು ಘಟಕ ಆತಿಥ್ಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಕಾರ, ವಿಶುಕುಮಾರ್ ದತ್ತಿನಿಧಿ ಸಂಚಾಲನ ಸಮಿತಿ ಸಹಯೋಗದಲ್ಲಿ ‘ವಿಶುಕುಮಾರ್ ತುಳು ಸಾಹಿತ್ಯೋತ್ಸವ, ತುಳು ಕುಣಿತ ಭಜನಾ ಸ್ಪರ್ಧೆ ಮತ್ತು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 09 ನವೆಂಬರ್ 2025ರಂದು ಬೆಳಗ್ಗೆ ಗಂಟೆ 8-30ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ನಟ, ನಿರ್ದೇಶಕ, ಕಥೆ, ಕಾದಂಬರಿಕಾರರಾಗಿ, ಸಾಹಿತಿ, ಪತ್ರಕರ್ತರಾಗಿ, ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಮಾಡಿ, ಕರಾವಳಿ, ವಿಪ್ಲವ, ಕಪ್ಪುಸಮುದ್ರ, ನೆತ್ತರಗಾನದಂತಹ 12 ಸಾಹಿತ್ಯ ಕೃತಿಗಳನ್ನು ನೀಡಿ, ಕೋಟಿ ಚೆನ್ನಯ್ಯದಂತಹ ಅಪೂರ್ವ ಸಿನಿಮಾ ನೀಡಿ ಐವತ್ತು ವರುಷಗಳ ಕಾಲ ಕನ್ನಡ ಸಾರಸ್ವತ ಲೋಕದಲ್ಲಿ ಮಿಂಚಿ ಮರೆಯಾದ ಚೇತನ, ಅಗ್ರಮಾನ್ಯ ಸಾಹಿತಿ ವಿಶುಕುಮಾರ್ ಇವರ ನೆನಪಿನಲ್ಲಿ ಯುವವಾಹಿನಿ ಸಂಸ್ಥೆ ವಿಶುಕುಮಾರ್ ದತ್ತಿನಿಧಿಯನ್ನು ಸ್ಥಾಪಿಸಿ, ಆ ಮೂಲಕ ಕಳೆದ 23 ವರುಷದಿಂದ ಸಾಹಿತ್ಯ ಸಾಧಕರಿಗೆ ವಿಶುಕುಮಾರ್ ಪ್ರಶಸ್ತಿ ನೀಡುತ್ತಿದೆ. ಈ ಬಾರಿಯ ವಿಶುಕುಮಾರ್ ಪ್ರಶಸ್ತಿಯನ್ನು ಹಿರಿಯ ಸಾಹಿತಿ, ಸಂಶೋಧಕ ಬೆನೆಟ್ ಜಿ. ಅಮ್ಮಣ್ಣ ಇವರಿಗೆ ನೀಡಲಾಗುವುದು.
ಬೆಳಿಗ್ಗೆ 9-30 ಗಂಟೆಗೆ ಸಸಿಹಿತ್ಲು ಅಗ್ಗಿದಕಳಿಯ ಬಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ಚಂದಯ್ಯ ಬಿ. ಕರ್ಕೇರಾ ಇವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದು, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಭಜಕ ಮಾಧವ ಅಂಚನ್ ಇವರಿಗೆ ‘ದಾಸಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ‘ವಿಶುಕುಮಾರ್ ಪುರಸ್ಕಾರ’ವನ್ನು ತೇಜೋಮಯ, ಪರಮಾನಂದ ವಿ. ಸಾಲ್ಯಾನ್, ದಿನೇಶ್ ಮಾಸ್ಟರ್ ಇವರಿಗೆ ಪ್ರದಾನ ಮಾಡಲಾಗುವುದು. ಸಂಜೆ ಗಂಟೆ 4-30ಕ್ಕೆ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರ ಅಧ್ಯಕ್ಷತೆಯಲ್ಲಿ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಬೆನೆಟ್ ಜಿ. ಅಮ್ಮಣ್ಣ ಇವರಿಗೆ ಸಾಹಿತಿ ಎಂ.ಜಿ. ಮೋಹನ್ ಪ್ರಶಸ್ತಿ ಪ್ರದಾನ ಮಾಡುವರು. ಹಿರಿಯ ಸಾಹಿತಿ ಡಾ. ವಿ.ಕೆ. ಯಾದವ್ ಅಭಿನಂದನಾ ಭಾಷಣ ಮಾಡುವರು. ವಕೀಲರಾದ ವಿಜಯಲಕ್ಷ್ಮಿ ವಿಶುಕುಮಾರ್, ಸಾಹಿತಿ ವಾಮನ್ ಇಡ್ಯಾ ಭಾಗವಹಿಸುವರು.

