ಮಂಗಳೂರು : ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು, ಶ್ರೀ ರಾಮಕೃಷ್ಣ ಮಠ ಮಂಗಳಾದೇವಿ, ಬಹುವಚನಂ ಪುತ್ತೂರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಇದರ ಸಹಯೋಗದಲ್ಲಿ ‘ವಿಶ್ವ ಬನ್ನಂಜೆ 90ರ ನಮನ’ ಸಮಾರಂಭವನ್ನು ದಿನಾಂಕ 21 ಸೆಪ್ಟಂಬರ್ 2024ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಶ್ರೀ ರಾಮಕೃಷ್ಣ ಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಜಿತಕಾಮಾನಂದ ಸ್ವಾಮೀಜಿ ಇವರ ಅಧ್ಯಕ್ಷತೆಯಲ್ಲಿ ಈ ಸಮಾರಂಭವನ್ನು ಉಚ್ಛ ನ್ಯಾಯಮೂರ್ತಿಗಳಾದ ವೇದವ್ಯಾಸ ಆಚಾರ್ಯ ಶ್ರೀಶಾನಂದರು ಉದ್ಘಾಟನೆ ಮಾಡಲಿದ್ದಾರೆ. ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿಗಳಾದ ಸಿ.ಎ. ರಾಘವೇಂದ್ರ ರಾವ್ ಇವರಿಗೆ ‘ಬನ್ನಂಜೆ ಗೌರವ’ ಸನ್ಮಾನ ಮಾಡಲಾಗುವುದು. ಗೋಷ್ಠಿ 1ರಲ್ಲಿ ‘ಬನ್ನಂಜೆಯವರ ಅನುವಾದ ಸೌಂದರ್ಯ’ ಎಂಬ ವಿಷಯದ ಬಗ್ಗೆ ಪ್ರಾಧ್ಯಾಪಕರಾದ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಮತ್ತು ‘ಬನ್ನಂಜೆಯವರು ಸ್ತ್ರೀಯರಿಗೆ ಕೊಟ್ಟ ಧೈರ್ಯ’ ಎಂಬ ವಿಷಯದ ಬಗ್ಗೆ ಕುಮಾರಿ ಅಕ್ಷಯಾ ಗೋಖಲೆ ಇವರು ವಿಷಯ ಮಂಡನೆ ಮಾಡಲಿದ್ದಾರೆ. ಶ್ರೀಮತಿ ಕವಿತಾ ಉಡುಪ ಮತ್ತು ಶ್ರೀಮತಿ ಸುಮಾ ಶಾಸ್ತ್ರಿ ಇವರಿಂದ ಬನ್ನಂಜೆಯವರ ಹಾಡುಗಳು ಪ್ರಸ್ತುತಗೊಳ್ಳಲಿದೆ. ಗೋಷ್ಠಿ 2ರಲ್ಲಿ ‘ಬನ್ನಂಜೆಯವರು ಕಂಡ ಸ್ತ್ರೀ ಪಾತ್ರಗಳು’ ಎಂಬ ವಿಷಯದ ಬಗ್ಗೆ ವಿಭು ಅಕಾಡೆಮಿಯ ಅಧ್ಯಕ್ಷರಾದ ಡಾ. ವಿ.ಬಿ. ಆರತಿ, ‘ಯುವಕ ಬನ್ನಂಜೆ’ ಎಂಬ ವಿಷಯದ ಬಗ್ಗೆ ವಿದ್ವಾಂಸ ವಿಜಯ ಸಿಂಹ ಆಚಾರ್ಯರು, ‘ಬನ್ನಂಜೆಯೆಂಬ ಬಲ್ಲಿದನ ಬೆನ್ನು ಹಿಡಿದು’ ಎಂಬ ವಿಷಯದ ಬಗ್ಗೆ ಸಂಸ್ಕೃತ ಭಾರತಿ ಇದರ ಹಿರಿಯ ಕಾರ್ಯಕರ್ತರಾದ ಡಾ. ಎಚ್.ಆರ್. ವಿಶ್ವಾಸ, ‘ಮಂಗಳೂರಿನಲ್ಲಿ ಬೆಳೆದು ಬಂದ ಆಚಾರ್ಯರು’ ಎಂಬ ವಿಷಯದ ಬಗ್ಗೆ ವಿಶ್ರಾಂತ ಪ್ರಾಚಾರ್ಯರಾದ ಎಂ. ಪ್ರಭಾಕರ ಜೋಶಿ ಇವರು ವಿಷಯ ಮಂಡನೆ ಮಾಡಲಿದ್ದಾರೆ.
ಸಂಜೆ 3-30 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಶ್ರೀ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದಂಗಳವರು ವಹಿಸಲಿದ್ದು, ಜನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರು ಇವರು ನುಡಿನಮನ ಹಾಗೂ ರಂಗಕರ್ಮಿಗಳಾದ ಎಸ್.ಎನ್. ಸೇತುರಾಮ್ ಇವರು ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹೊಟೇಲ್ ವುಡ್ ಲ್ಯಾಂಡ್ ಮಾಲಕರಾದ ವೈ. ರಮೇಶ ಭಟ್, ವೇದ ಮೂರ್ತಿ ಶ್ರೀ ಗೋಪಾಲಕೃಷ್ಣ ಭಟ್ ತಂತ್ರಿ ಮತ್ತು ಉಡುಪಿ ಅದಮಾರು ಶಿಕ್ಷಣ ಸಂಸ್ಥೆಗಳ ನೈತಿಕ ಶಿಕ್ಷಣ ಸಮಿತಿಯ ಮುಖ್ಯಸ್ಥರಾದ ಶ್ರೀ ಓಂಪ್ರಕಾಶ್ ಭಟ್ ಇವರುಗಳಿಗೆ ‘ಬನ್ನಂಜೆ ಗೌರವ’ ಸನ್ಮಾನ ಮಾಡಲಾಗುವುದು. ಸಂಧ್ಯಾಕಾಲ 5-30 ಗಂಟೆಗೆ ಬೆಂಗಳೂರಿನ ವಿದ್ಯಾಭೂಷಣರು ಮತ್ತು ತಂಡದವರಿಂದ ಬನ್ನಂಜೆ ಸಂಗೀತ ಲೋಕ ಪ್ರಸ್ತುತಗೊಳ್ಳಲಿದೆ.