ಉಡುಪಿ : ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಗ್ರಾಮೀಣ ಭಾಗದಲ್ಲಿ ಸಂಯೋಜಿಸಿದ ಬಾಲ ಲೀಲಾ ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 13 ಏಪ್ರಿಲ್ 2025ರಂದು ಹಾವಂಜೆಯ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ “ವಿಶ್ವ ಕಲಾ ಸಿಂಧು” ಪುರಸ್ಕಾರವನ್ನು ಆರ್ಟಿಸ್ಟ್ ಫೋರಂ ಇದರ ಅಧ್ಯಕ್ಷರಾದ ರಮೇಶ್ ರಾವ್ ಇವರಿಗೆ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಯುತರು “ಚಿತ್ರಕಲೆ ಮಕ್ಕಳ ಮನಸ್ಸನ್ನು ಹದಗೊಳಿಸಲು ಬಹು ಮುಖ್ಯವಾದ ಕಲಾಪ್ರಕಾರ ಅಂತೆಯೇ ಚಿಣ್ಣರು ಸೃಜನಶೀಲರಾಗಿರಬೇಕಾದುದೂ ಮುಖ್ಯ. ಗ್ರಾಮೀಣ ಭಾಗದಲ್ಲಿ ಈ ತೆರನಾದ ಚಟುವಟಿಕೆಗಳು ಇಂದಿಗೆ ಅತ್ಯವಶ್ಯಕ” ಎಂಬುದಾಗಿ ಅಭಿಪ್ರಾಯಪಟ್ಟರು.
ಭಾವನಾ ಪುರಸ್ಕಾರವನ್ನು ಸ್ವೀಕರಿಸಿದ ಹಿರಿಯ ಪತ್ರಕರ್ತರಾದ ನಾಗರಾಜ್ ವರ್ಕಾಡಿ ಮಾತನಾಡಿ “ಈ ಪುರಸ್ಕಾರವು ನಮ್ಮ ಕಾರ್ಯ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಒಂದು ಎಚ್ಚರಿಕೆ. ಅಂತೆಯೇ ಇನ್ನಷ್ಟು ರಂಗಭೂಮಿ ವಲಯದಲ್ಲಿ ಕಾರ್ಯವನ್ನು ಮಾಡಲು ಪ್ರೇರಣೆ” ಎಂದರು.
ಮುಖ್ಯ ಅತಿಥಿಗಳಾದ ಯುವ ಉದ್ಯಮಿ ಸಂಪತ್ ಶೆಟ್ಟಿಯವರು ಚಿಣ್ಣರ ಶಿಬಿರವು ಹೇಗೆ ಮಕ್ಕಳ ಬದುಕನ್ನು ಹಸನಾಗುವಂತೆ ರೂಪಿಸಬಲ್ಲುದು ಎಂಬುದಾಗಿ ವಿವರಿಸಿದರಲ್ಲದೇ ಭಾವನಾ ಫೌಂಡೇಶನ್ ಸಂಘಟಿಸುತ್ತಿರುವ ಈ ಬೇಸಿಗೆ ಶಿಬಿರದಲ್ಲಿನ ಸಾಂಪ್ರದಾಯಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಹಾಗೂ ಮಕ್ಕಳಲ್ಲಿ ಆತ್ಮ ಸ್ಥೈರ್ಯ ತುಂಬುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂಬುದಾಗಿ ಅಭಿಪ್ರಾಯವಿತ್ತರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗುರು ಹಾವಂಜೆ ಮಂಜುನಾಥ ರಾವ್ ವಹಿಸಿದ್ದರು. ಅತಿಥಿ ಮಮತಾ ಮೊರಾರ್ಜಿ ಶೆಟ್ಟಿ ಉಪಸ್ಥಿತರಿದ್ದರು. ಶಿಬಿರ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ಕಾರ್ಯಕ್ರಮ ನಿರ್ವಹಿಸಿ, ವಿದುಷಿ ಅಕ್ಷತಾ ವಿಶು ರಾವ್ ಸನ್ಮಾನಪತ್ರ ವಾಚಿಸಿ, ವಿಶುರಾವ್ ಹಾವಂಜೆ ಧನ್ಯವಾದಗೈದರು.

									 
					