ಬೈಂದೂರು : ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಕುಂದ ಅಧ್ಯಯನ ಕೇಂದ್ರ ಹಾಗೂ ಕುಂದಾಪ್ರ ಡಾಟ್ ಕಾಂ ಸಂಯುಕ್ತ ಆಶ್ರಯದಲ್ಲಿ ಬೈಂದೂರು ರೋಟರಿ ಕ್ಲಬ್, ಜೆಸಿಐ ಬೈಂದೂರು ಸಿಟಿ, ಜೆಸಿಐ ಉಪ್ಪುಂದ, ಲಯನ್ಸ್ ಕ್ಲಬ್ ಬೈಂದೂರು – ಉಪ್ಪುಂದ, ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ಬೈಂದೂರು ಹಾಗೂ ಉಪ್ಪುಂದ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ದಿನಾಂಕ 18-07-2023 ಮಂಗಳವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಯು. ಚಂದ್ರಶೇಖರ ಹೊಳ್ಳರಿಗೆ ಉಳುಮೆಯ ನೊಗ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಅವರು ಮಾತನಾಡುತ್ತಾ “ಭಾಷೆ ಬಳಕೆಯ ಜೊತೆಗೆ ಅದನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಾದ್ದು ಬಹುಮುಖ್ಯ. ಕುಂದಾಪ್ರ ಕನ್ನಡ ಭಾಷೆಗೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಹಾಗೆಯೇ ಪ್ರದೇಶವಾರು ಮತ್ತು ಸಮುದಾಯವಾರು ಭಿನ್ನತೆಯೂ ಇದೆ. ಇದನ್ನು ದಾಖಲಿಸುವ ಕೆಲಸ ಮಾಡಬೇಕಿದೆ. ನಮ್ಮ ಭಾಷೆಯ ಬಗ್ಗೆ ಹೆಮ್ಮೆ ಇದ್ದರಷ್ಟೇ ಸಾಲದು. ಅದು ಇನ್ನಷ್ಟು ವಿಸ್ತಾರಗೊಳ್ಳಬೇಕು. ಅಧ್ಯಯನ, ದಾಖಲೀಕರಣ ನಡೆದಾಗಲೇ ಅದು ಸಾವಿರಾರು ವರ್ಷ ಉಳಿಯುತ್ತದೆ. ನಮ್ಮ ಮಣ್ಣಿಗೊಂದು ಸತ್ವವಿದೆ. ಈ ಸತ್ಯ ಅರಿವಾದರೆ ನೆಲ, ಸಂಸ್ಕೃತಿಯ ಬಗ್ಗೆ ಸಹಜವಾಗಿ ಅಭಿಮಾನ ಮೂಡುತ್ತದೆ” ಎಂದರು.
ಕುಂದಾಪ್ರ ಕನ್ನಡದ ಕಲಾವಿದ ಶ್ರೀ ಚೇತನ ನೈಲಾಡಿ ಮಾತನಾಡುತ್ತಾ “ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆ ಭಾಷೆಯ ಮೂಲಕವೇ ವ್ಯಕ್ತವಾಗುತ್ತದೆ. ನಮ್ಮ ಹಿರಿಯರು ಬಳಸುತ್ತಿದ್ದ ಭಾಷೆಯ ಬಗ್ಗೆ ಹೆಮ್ಮೆ ಹೊಂದಿರುವ ಜೊತೆಗೆ ಅದನ್ನು ಹೆಚ್ಚು ಬಳಸುವ ಬಗ್ಗೆಯೂ ಗಮನಹರಿಸಬೇಕಿದೆ. ನಮ್ಮ ಪ್ರತಿ ಆಚರಣೆ, ಸಂಪ್ರದಾಯಗಳೂ ಈಗ ಅಳಿವಿನಂಚಿನಲ್ಲಿದೆ. ಆದರೆ ಅದೆಲ್ಲವನ್ನೂ ಉಳಿಸಿ ಮುಂದಿನ ಜನಾಂಗಕ್ಕೆ ದಾಟಿಸುವ ಕೆಲಸವಾಗಬೇಕು. ಹೊಸತನಕ್ಕೆ ಹೊಂದಿಕೊಳ್ಳುವುದು ತಪ್ಪಲ್ಲ ಆದರೆ ನಮ್ಮತನವನ್ನು ಮರೆಯಬಾರದು” ಎಂದು ಹೇಳಿದರು.
ಈ ವೇಳೆ ಮೊಗೇರಿ ಗೋಪಾಲಕೃಷ್ಣ ಅಡಿಗ ಪ್ರತಿಷ್ಠಾನದ ಸಂಚಾಲಕ ಮೊಗೇರಿ ಜಯರಾಮ ಅಡಿಗ, ಬೈಂದೂರು ರೋಟರಿ ಅಧ್ಯಕ್ಷ ಪ್ರಸಾದ್ ಪ್ರಭು ಶಿರೂರು, ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್ ನಿಯೋಜಿತ ಗಿರೀಶ್ ಶ್ಯಾನುಭಾಗ್, ಬೈಂದೂರು ಸಿಟಿ ಜೆಸಿಐ ಅಧ್ಯಕ್ಷ ನರೇಂದ್ರ ಶೇಟ್, ಉಪ್ಪುಂದ ಜೆಸಿಐ ಅಧ್ಯಕ್ಷ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು.
ಕುಂದಾಪ್ರ ಕನ್ನಡದ ಅಧ್ಯಯನ ಹಾಗೂ ಭಾಷಾ ಬೆಳವಣಿಗೆಯ ದೃಷ್ಠಿಯಿಂದ ಅಧ್ಯಯನ ಕೇಂದ್ರ ಹಾಗೂ ಪ್ರತ್ಯೇಕ ಅಕಾಡೆಮಿ ಸ್ಥಾಪಿಸುವಲ್ಲಿ ಸರಕಾರದ ಗಮನ ಸೆಳೆಯುವ ನಿರ್ಣಯ ಮತ್ತು ಕುಂದಾಪ್ರ ಕನ್ನಡದ ಬಳಕೆಗೆ ಸಂಬಂಧಿಸಿದಂತೆ ಹೆಚ್ಚಿನ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಯೋಜನೆಯ ಬಗ್ಗೆ ಪ್ರಸ್ತಾಪಿಸಲಾಯಿತು.
ಕಲಾವಿದ ಗೋಪಾಲ ಬೈಂದೂರು ಹಾಗೂ ತಂಡದಿಂದ ಕುಂದಾಪ್ರ ಕನ್ನಡದಲ್ಲಿ ನಾಟಕ ಸನ್ನಿವೇಶಗಳ ಪ್ರದರ್ಶನ ಹಾಗೂ ಶಿಕ್ಷಕ ಗಣಪತಿ ಹೋಬಳಿದಾರ್ ಅವರ ಸಂಗ್ರಹದ ಜಾನಪದ ವಸ್ತುಗಳ ಪ್ರದರ್ಶನ ಜರುಗಿತು.
ಕುಂದ ಅಧ್ಯಯನ ಕೇಂದ್ರದ ಸಂಚಾಲಕ ಗಣಪತಿ ಹೋಬಳಿದಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಸ್ವಾಗತಿಸಿ, ನಿವೃತ್ತ ಶಿಕ್ಷಕ ವೆಂಕಟರಮಣ ಮಯ್ಯಾಡಿ ವಂದಿಸಿ, ಬೈಂದೂರು ರೋಟರಿ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜ್ಯೋತಿ ಗಣಪತಿ ಹೋಬಳಿದಾರ್ ಸಹಕರಿಸಿದರು.