ಉಡುಪಿ : ರಂಗಭೂಮಿ ಉಡುಪಿ ವತಿಯಿಂದ ಎಂ. ಜಿ. ಎಂ. ಕಾಲೇಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ‘ವಿಶ್ವ ರಂಗಭೂಮಿ ದಿನಾಚರಣೆ’ಯು ದಿನಾಂಕ 27-03-2024ರಂದು ನಡೆಯಿತು. ರಂಗಭೂಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕಡಿಯಾಳಿ ಕಮಲಾಬಾಯಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸುದರ್ಶನ್ ನಾಯಕ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಾಹಿತಿ, ನಿವೃತ್ತ ಪ್ರಾಂಶುಪಾಲೆ ಡಾ. ಮಾಧವಿ ಎಸ್. ಭಂಡಾರಿ ಅವರನ್ನು ಸಮ್ಮಾನಿಸಲಾಯಿತು.


ಕಟಪಾಡಿ ರಂಜನ ಕಲಾವಿದರು ಸಂಸ್ಥೆಯ ರಾಘವೇಂದ್ರ ರಾವ್ ಮಾತನಾಡಿ, “ರಂಗದಲ್ಲಿ ನಟನೆ ಮಾಡುವರಿಗೆ ಮಾತ್ರ ವಿಶ್ವರಂಗಭೂಮಿ ದಿನದ ಆಚರಣೆ ಸೀಮಿತವಲ್ಲ. ರಂಗ ಕಲಾವಿದರು ಸಹಿತ ಈ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಎಲ್ಲರೂ ಮತ್ತು ಪ್ರೇಕ್ಷಕರು ಒಳಗೊಂಡು ಈ ದಿನವನ್ನು ಸಂಭ್ರಮಿಸಬೇಕು” ಎಂದರು.


ರಂಗಭೂಮಿ ಉಪಾಧ್ಯಕ್ಷ ರಾಜಗೋಪಾಲ್ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು. ರಂಗಭೂಮಿ ಸಂದೇಶವನ್ನು ವಿವೇಕಾನಂದ ಎನ್. ವಾಚಿಸಿದರು. ಅಮಿತಾಂಜಲಿ ಕಿರಣ್ ಸಮ್ಮಾನಿತರನ್ನು ಪರಿಚಯಸಿ, ರಂಗಭೂಮಿ ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು ಸ್ವಾಗತಿಸಿ, ಲೇಖಕಿ ಪೂರ್ಣಿಮಾ ಸುರೇಶ್ ನಾಯಕ್ ನಿರೂಪಿಸಿದರು. ಉಡುಪಿಯ ರಂಗಭೂಮಿ ತಂಡದವರಿಂದ ಶ್ರೀ ಗಣೇಶ್ ಮಂದಾರ್ತಿ ನಿರ್ದೇಶನದ ‘ಸೀತಾರಾಮ ಚರಿತಾ’ ನಾಟಕ ಪ್ರಸ್ತುತಗೊಂಡಿತು.

