ಮೈಸೂರು : ರಂಗಾಯಣ ಮೈಸೂರು ಮತ್ತು ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ (ರಿ.) ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ಮತ್ತು ಕರ್ನಾಟಕ ನಾಟಕ ಅಕಾಡೆಮಿ ಇವುಗಳ ಸಹಕಾರದಲ್ಲಿ ‘ವಿಶ್ವ ರಂಗಸಂಭ್ರಮ 2025’ ಕಾರ್ಯಕ್ರಮವನ್ನು ದಿನಾಂಕ 22 ಮಾರ್ಚ್ 2025ರಿಂದ 27 ಮಾರ್ಚ್ 2025ರವರೆಗೆ ಮೈಸೂರಿನ ರಂಗಾಯಣದ ಭೂಮಿಗೀತ ಮತ್ತು ಕಾರಂತ ರಂಗ ಚಾವಡಿಯಲ್ಲಿ ಆಯೋಜಿಸಲಾಗಿದೆ. ನಾಟಕೋತ್ಸವ, ವಿಚಾರ ಸಂಕಿರಣ, ಜಾನಪದ, ರಂಗ ಗೀತೆಗಳು, ರಂಗ ಗೌರವ, ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ 22 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಇವರ ಅಧ್ಯಕ್ಷತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಶ್ರೀಮತಿ ಗಾಯಿತ್ರೀ ಕೆ.ಎಂ. ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ಗಂಟೆ 6-30ಕ್ಕೆ ಮಹಾದೇವ ಹಡಪದ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಧಾರವಾಡದ ಆಟ ಮಾಟ ತಂಡದವರಿಂದ ‘ಗುಡಿಯ ನೋಡಿರಣ್ಣ’ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 23 ಮಾರ್ಚ್ 2025ರಂದು ಬೆಳಗ್ಗೆ 10-00 ಗಂಟೆಗೆ ರಂಗಾಯಣದ ಕಾರಂತ ರಂಗಚಾವಡಿಯಲ್ಲಿ ವಿಚಾರ ಸಂಕಿರಣ ನಡೆಯಲಿದ್ದು, ರಂಗ ನಿರ್ದೇಶಕರಾದ ಪ್ರೊ. ಎಸ್.ಆರ್. ರಮೇಶ್ ಇವರ ಅಧ್ಯಕ್ಷತೆಯಲ್ಲಿ ಐ.ಪಿ.ಎಸ್. ಶ್ರೀಮತಿ ಧರಣಿದೇವಿ ಮಾಲಗತ್ತಿ ಇವರು ಉದ್ಘಾಟನೆ ಮಾಡಲಿದ್ದಾರೆ. ‘ಸಿ.ಜಿ.ಕೆ. ದೃಷ್ಟಿಯಲ್ಲಿ ಆಧುನಿಕ ಕನ್ನಡ ರಂಗಭೂಮಿಯಲ್ಲಿ ತಳ ಸಮುದಾಯಗಳ ನಿರೂಪಣೆ’ ಎಂಬ ವಿಷಯದ ಬಗ್ಗೆ ಶ್ರೀ ಹೆಚ್. ಜನಾರ್ದನ್ (ಜನ್ನಿ), ‘ಸಂಘಟನೆ ಸಮುದಾಯ, ಸಾಮಾಜಿಕ ಚಳುವಳಿಗಳಲ್ಲಿ ಸಿ.ಜಿ.ಕೆ. ಪಾತ್ರ’ ಎಂಬ ವಿಷಯದ ಬಗ್ಗೆ ಶ್ರೀ ಗುಂಡಣ್ಣ ಚಿಕ್ಕಮಗಳೂರು ಮತ್ತು ‘ಕತ್ತಾಲೆ ಬೆಳದಿಂಗಳೊಳಗ, ಕನ್ನಡ ರಂಗ ಭೂಮಿಯ ಆತ್ಮಚರಿತ್ರೆಯಾಗಿ’ ಎಂಬ ವಿಷಯದ ಬಗ್ಗೆ ಪ್ರೊ. ಎಸ್. ಆರ್. ರಮೇಶ್ ಇವರುಗಳು ವಿಷಯ ಮಂಡನೆ ಮಾಡಲಿರುವರು. ಪಾ.ಪು. ಶ್ರೀನಿವಾಸ್, ಶ್ರೀಮತಿ ನಂದ ಹಳೆ ಮನೆ, ಗಣೇಶ್ ಅಮೀನಗಡ ಮತ್ತು ರವಿ ಸಮುದಾಯ ಇವರು ಪ್ರತಿಕ್ರಿಯೆ ನೀಡಲಿದ್ದು, ಗುರುಸ್ವಾಮಿ ಪರಮೇಶ್ವರ ಇವರ ನಿರ್ದೇಶನದಲ್ಲಿ ಸಿ.ಜಿ.ಕೆ. ಅವರ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಸಂಜೆ 6-30 ಗಂಟೆಗೆ ಹೆಚ್.ಕೆ. ದ್ವಾರಕನಾಥ್ ಇವರ ರಂಗರೂಪ ವಿನ್ಯಾಸ ಮತ್ತು ನಿರ್ದೇಶನದಲ್ಲಿ ರಂಗಾಯಣ ಹಿರಿಯ ಕಲಾವಿದರು ಅಭಿನಯಿಸುವ ‘ಮಿ. ಬೋಗಿಸ್’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 24 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ರಮ್ಯಾ ಶೇಖರ್ ಮತ್ತು ಪಾವನ ಧನರಾಜ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೈಸೂರಿನ ಅರಳಿ ರಂಗತಂಡ ‘ಉರುವಿ’ ನಾಟಕ ಪ್ರಸ್ತುತ ಪಡಿಸಲಿದ್ದಾರೆ. ದಿನಾಂಕ 25 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಮಂಜುನಾಥ್ ಎಲ್. ಬಡಿಗೇರ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಬೆಂಗಳೂರಿನ ಅಭಿನಯ ತರಂಗ ತಂಡ ‘ಬಂಕಾಪುರದ ಬಯಲಾಟ’ ಜಾನಪದ ಶೈಲಿಯ ನಾಟಕವನ್ನು ಅಭಿನಯಿಸಲಿದ್ದಾರೆ. ದಿನಾಂಕ 26 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ನಾಗಾರ್ಜುನ ಆರಾಧ್ಯ ಇವರ ನಿರ್ದೇಶನದಲ್ಲಿ ಆಯಾಮ ರಂಗತಂಡದವರಿಂದ ‘ಕ್ಲ್ಯೆಟಮ್ನೆಸ್ಟ್ರ’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 27 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ನಡೆಯಲಿರುವ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಹಿರಿಯ ರಂಗ ಕಲಾವಿದೆ ಶ್ರೀಮತಿ ಮಾಲತಿ ಸುಧೀರ್, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಸಂಚಾಲಕರಾದ ಡಾ. ಜಾಹಿದಾ ಎಂ.ಎ. ಮತ್ತು ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ. ಸುದರ್ಶನ್ ಇವರುಗಳು ಭಾಗವಹಿಸಲಿದ್ದು, ಸಾಧಕರಿಗೆ ರಂಗ ಗೌರವ ನೀಡಲಾಗುವುದು. ಎನ್. ಹರೀಶ್ ಇವರಿಂದ ವಿಶ್ವ ರಂಗಭೂಮಿ ಸಂದೇಶ ವಾಚನ, ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ (ರಿ.) ಕಲಾವಿದರಿಂದ ಜಾನಪದ ಕಲೆಗಳ ಪ್ರದರ್ಶನ ಮತ್ತು ಮೈಸೂರಿನ ಹವ್ಯಾಸಿ ರಂಗಕರ್ಮಿಗಳಿಂದ ರಂಗಗೀತೆಗಳ ಕಾರ್ಯಕ್ರಮ ನಡೆಯಲಿದೆ.