ಪುತ್ತೂರು: ಪುತ್ತೂರಿನ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ. ಬಿ. ಎಸ್. ಇ. ಸಂಸ್ಥೆಯಲ್ಲಿ ವಿಶ್ವ ಸಂಸ್ಕೃತ ದಿನಾಚರಣೆ ಮತ್ತು ರಕ್ಷಾ ಬಂಧನ ಕಾರ್ಯಕ್ರಮವು 19 ಆಗಸ್ಟ್ 2024ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಬಪ್ಪಳಿಗೆ ಅಂಬಿಕಾ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಶಶಿಕಲಾ ವರ್ಕಾಡಿ ಮಾತನಾಡಿ “ಸಂಸ್ಕೃತ ಕೇವಲ ಭಾಷೆಯಲ್ಲ ಅದು ಭಾರತಾಂಬೆಯ ಆತ್ಮದ ಧ್ವನಿ. ಹಿಂದೆ ಭಾರತದ ಸಾಧನೆ ಹೇಗಿತ್ತು ಎಂಬುದನ್ನು ಸಂಸ್ಕೃತ ತೋರಿಸಿ ಕೊಡುತ್ತದೆ. ಈ ಭಾಷೆ ದೇಹದ ನರನಾಡಿಗಳ ಆರೋಗ್ಯ ವೃದ್ಧಿಗೂ ಕಾರಣೀಭೂತವಾಗಿದೆ. ನ್ಯಾಯಾಲಯ, ವಾಯು ಸೇನೆ, ನೌಕಾ ಸೇನೆ, ಭೂ ಸೇನೆ ಇತ್ಯಾದಿ ಎಲ್ಲಾ ಸ್ಥಳಗಳಲ್ಲಿ ಸಂಸ್ಕೃತದ ಧ್ಯೇಯವಾಕ್ಯಗಳನ್ನು ನಾವು ಕಾಣಬಹುದು.” ಎಂದು ಹೇಳಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ “ರಕ್ಷೆಯಲ್ಲಿನ ಎಲ್ಲಾ ದಾರಗಳ ಒಗ್ಗೂಡುವಿಕೆಯು ಹೇಗೆ ಏಕತೆ ಸೂಚಿಸುತ್ತದೆಯೋ ಅದರಂತೆ ನಾವೆಲ್ಲರೂ ಒಗ್ಗಟ್ಟಿನಿಂದ ದೇಶದ ರಕ್ಷಣೆ ಮಾಡಬೇಕು.” ಎಂದರು.
ಅಂಬಿಕಾ ವಿದ್ಯಾಲಯ ಸಿ. ಬಿ. ಎಸ್. ಇ. ಸಂಸ್ಥೆಯ ಸಂಸ್ಕೃತ ಉಪನ್ಯಾಸಕಿ ಶ್ರೀಮತಿ ಸಾರಿಕಾ ಇವರು ರಕ್ಷಾ ಬಂಧನದ ಮಹತ್ವವನ್ನು ತಿಳಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ಮತ್ತು ಪ್ರಾಂಶುಪಾಲೆ ಮಾಲತಿ ಡಿ. ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿ ಆಕರ್ಷ್ ಸಂಸ್ಕೃತದ ಮಹತ್ವವನ್ನು ತಿಳಿಸಿದರು. ಇಂಚರ ಎಸ್. ಮಯ್ಯ ಹಾಗೂ ಹೃನ್ಮಯಿ ಪ್ರಾರ್ಥಿಸಿ, ಹಿತಾಲಿ ಪಿ. ಶೆಟ್ಟಿ ಸ್ವಾಗತಿಸಿ, ನಿಯತಿ ಭಟ್ ನಿರೂಪಿಸಿ, ಅದ್ವೈತ ಕೃಷ್ಣ ವಂದಿಸಿದರು