30 ಮಾರ್ಚ್ 2023, ಮಂಗಳೂರು: ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಮತ್ತು “ಸಮರ್ಪಣಂ” ವಿಶ್ವಕರ್ಮ ಕಲೋತ್ಸವ ಇದರ ಉದ್ಘಾಟನಾ ಸಮಾರಂಭವು ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ದಿನಾಂಕ 26-03-2023 ಭಾನುವಾರದಂದು ಅದ್ದೂರಿಯಾಗಿ ನಡೆಯಿತು. ವಿಶ್ವಕರ್ಮ ಕಲಾ ಪರಿಷತ್ತನ್ನು ಶ್ರೀಮದ್ ಜಗದ್ಗುರು ಆನೆಗುಂದಿ ಸರಸ್ವತೀ ಪೀಠಾಧೀಶ್ವರರಾದ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಉದ್ಘಾಟಿಸಿ “ವಿಶ್ವಕರ್ಮ ಸಮಾಜದ ಕಲಾವಿದರು ಆರ್ಥಿಕವಾಗಿ ಹಿಂದುಳಿದಿದ್ದರೂ ಕಲಾವಂತಿಕೆಯಲ್ಲಿ ಶ್ರೀಮಂತರು. ನಮ್ಮ ಕಲೆಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ನಡೆಯಬೇಕಿದೆ. ವಿಶ್ವಕರ್ಮ ಸಮಾಜಕ್ಕೆ ಸರಕಾರದ ಪ್ರೋತ್ಸಾಹ ಮತ್ತಷ್ಟು ಬೇಕಾಗಿದೆ” ಎಂದು ಆಶೀರ್ವಚನ ನೀಡಿದರು.
ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಕೇಶವ ಆಚಾರ್ಯ “ಸಮರ್ಪಣಂ” ವಿಶ್ವಕರ್ಮ ಕಲೋತ್ಸವವನ್ನು ಉದ್ಘಾಟಿಸಿ, “ನಮ್ಮ ಸಮಾಜಕ್ಕೆ ಈ ದಿನ ಸುದಿನ. ಕಲಾತಪಸ್ವಿಗಳಿಗೆ ಕಲಾಸರಸ್ವತಿಯ ಅನುಗ್ರಹ ದೊರೆಯಲಿ” ಎಂದರು.
ವಿಶ್ವಕರ್ಮ ಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಎಸ್.ಪಿ. ಗುರುದಾಸ್ ಅಧ್ಯಕ್ಷ ಸ್ಥಾನದಿಂದ ಮಾತನಾಡಿ “ಸಮಾಜದ ಉನ್ನತಿಯಾಗಬೇಕಾದರೆ ನಾವು ಸಂಘಟಿತರಾಗಬೇಕು ಮತ್ತು ಜ್ಞಾನ ಕೌಶಲಗಳ ಕೊಳ್ಕೊಡುಗೆ ಇರಬೇಕು” ಎಂದರು. ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಎರಡನೇ ಮೊಕ್ತೇಸರ ಶ್ರೀ ಸುಂದರಚಾರ್ಯ ಬೆಳುವಾಯಿ ಶುಭಾಂಸನೆ ಗೈದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ದೇವರಾಜ್ ಕೆ., IEDS, ಜಂಟಿ ನಿರ್ದೇಶಕರು, ಬ್ರಾಂಚ್ ಎಂ.ಎಸ್.ಎಂ.ಇ. ಡೆವಲಪ್ ಮೆಂಟ್ ಇನ್ಸ್ಟಿಟ್ಯೂಟ್, ಭಾರತ ಸರ್ಕಾರ ಇವರು ಉಪಸ್ಥಿತರಿದ್ದು, ಕಲೋತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇವಳದ 3ನೇ ಮೊಕ್ತೇಸರ್ ಎ.ಲೋಕೇಶ್ ಆಚಾರ್ಯ, ಅಂತರಾಷ್ಟ್ರೀಯ ಚಿತ್ರಕಲಾವಿದ ಪಿ.ಎನ್.ಆಚಾರ್ಯ, ಪ್ರೊ. ಜಿ.ಯಶವಂತ ಆಚಾರ್ಯ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದಲ್ಲಿ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಒಪರೇಟಿವ್ ಸೊಸೈಟಿ (ಲಿ.) ಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಯಜ್ಞೇಶ್ ಆಚಾರ್ಯ ಸ್ವಾಗತಿಸಿ, ಅಕ್ಷತಾ ಬೈಕಾಡಿ ವಂದಿಸಿದರು. ಶ್ರೀ ದಾಮೋದರ ಶರ್ಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಕಲಾವಿದರ ಮತ್ತು ಕುಶಲ ಕರ್ಮಿಗಳ ಮೇಲೆ ಅಪಾರ ಅಭಿಮಾನ ಹೊಂದಿದ್ದು, ಅವರಿಗಾಗಿ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ಸ್ವರ್ಣಶಿಲ್ಪಿಗಳೂ ಮತ್ತು ಮಾಜಿ ಮೊಕ್ತೇಸರುಗಳೂ ಆದ ಕಂಕನಾಡಿ ಪಿ. ಶಿವರಾಮ ಆಚಾರ್ಯ, ಮುನಿಯಾಲ್ ದಾಮೋದರ ಆಚಾರ್ಯ, ಪೈಯಾಲ್ ಭಾಸ್ಕರ ಆಚಾರ್ಯ, ಹಿರಿಯ ಕಲಾ ಪೋಷಕಿ ಶಕುಂತಲಾ ಬಿ. ರಾವ್, ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಯೋಗೀಶ್ ಬೋಳೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಲಾವಿದರ ವೈವಿಧ್ಯಮಯ ಚಿತ್ರಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವು ಅಮೋಘವಾಗಿತ್ತು. ಪ್ರತೀಯೊಂದು ಕಲಾಕೃತಿಯಲ್ಲೂ ಕಲಾಕಾರರ ಕೈಚಳಕ ವಿಶೇಷವಾಗಿ ಎದ್ದು ಕಾಣುತ್ತಿತ್ತು. ಉದ್ಘಾಟನಾ ವೇದಿಕೆಯಲ್ಲಿ ಒಂದೇ ಹಾಡಿಗೆ ಎಂಟು ಮಂದಿ ಕಲಾವಿದರು ನೀಡಿದ “ಚಿತ್ರಕಲಾ ಕುಂಚ” (Live speed art) ಕಾರ್ಯಕ್ರಮವು ಕಿಕ್ಕಿರಿದ ಜನಮನದ ಮೆಚ್ಚುಗೆಗೆ ಪಾತ್ರವಾಯಿತು. ಹಾಡು, ನೃತ್ಯ, ಕವನ ವಾಚನ, ಸ್ವರಾನುಕರಣೆ (ಮಿಮಿಕ್ರಿ), ಪ್ರಹಸನ, ಇದು ಒಂದೆಡೆಯಾದರೆ, ಅವಿಭಕ್ತ ಕುಟುಂಬದ 6 ಮಂದಿ ಮಕ್ಕಳು ಮತ್ತು ಹಿರಿಯ ಕಲಾವಿದರಿಂದ ನಡೆದ ವಾದ್ಯ ಸಂಗೀತ ಮಧುರ ಮತ್ತು ಹೃದಯ ತಟ್ಟುವಂತಿತ್ತು. ಪುಟಾಣಿ ಮಕ್ಕಳಿಂದ ಹಿರಿಯರವರೆಗೂ ಕಾರ್ಯಕ್ರಮ ನೀಡುವಲ್ಲಿ ಸಾಂಸ್ಕೃತಿಕ ವೇದಿಕೆಯ ಸದ್ಬಳಕೆಯಾಗಿತ್ತು. ಅಂತೂ ಅಬ್ಬರದ ಕರತಾಡನದೊಂದಿಗೆ ವೇದಿಕೆಯಲ್ಲಿ ಮೂಡಿ ಬಂದ ವೈವಿಧ್ಯ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಅಮೋಘವಾಗಿದ್ದು, ಅವಿಸ್ಮರಣೀಯವಾಗಿತ್ತು. “ಸಮರ್ಪಣಂ” ಕಲೋತ್ಸವದ ಕಲಾವಿದರಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದ ಕಲಾವಿದರಿಗೆ ವೇದಿಕೆಯಲ್ಲಿ ಪ್ರಮಾಣಪತ್ರವನ್ನು ವಿತರಿಸಲಾಯಿತು.
ವಿಶ್ವಬ್ರಾಹ್ಮಣ ಸಮಾಜದ ಕಲಾವಿದರಿಗೆ ಸ್ಥಳದಲ್ಲೇ ಆರ್ಟಿಸನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಅಸಂಖ್ಯಾತ ಸೂಕ್ಷ್ಮ ಕಲಾಕೃತಿಗಳು, ನೂರಾರು ಚಿತ್ರಕಲೆಗಳು, ಪ್ರತಿಕೃತಿಗಳು, ಕಾಷ್ಟ್ಯ ಶಿಲ್ಪಗಳು, ಬೆಳ್ಳಿಯ ಪರಿಕರಗಳು ಮತ್ತು ಕೈ ಮಗ್ಗದ ವಸ್ತುಗಳು ಜನರ ಗಮನ ಸೆಳೆದವು.