ಮಂಗಳೂರು : ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇದರ ವತಿಯಿಂದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ರಥಬೀದಿ ಮಂಗಳೂರು ಇದರ ಆಶ್ರಯದಲ್ಲಿ ‘ವಿಶ್ವಕರ್ಮ ಕಲಾ ಸಿಂಚನ 2024’ ಭಕ್ತಿ ಸಿಂಚನ, ಜ್ಞಾನ ಸಿಂಚನ, ಚಿತ್ರ ಸಿಂಚನ ಮತ್ತು ಪ್ರತಿಭಾ ಸಿಂಚನ, ಕೃತಿ ಬಿಡುಗಡೆ ಮತ್ತು ಸಾಧಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ದಿನಾಂಕ 15 ಡಿಸೆಂಬರ್ 2024ರಂದು ಪೂರ್ವಾಹ್ನ 9-00 ಗಂಟೆಗೆ ಮಂಗಳೂರು ರಥಬೀದಿಯ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇದರ ಅಧ್ಯಕ್ಷರಾದ ಡಾ. ಎಸ್.ಪಿ. ಗುರುದಾಸ್ ಇವರ ಅಧ್ಯಕ್ಷತೆಯಲ್ಲಿ ಸ್ಪೂರ್ತಿ ಮೆಡಿಕಲ್ ಅಕಾಡೆಮಿಯ ನಿರ್ದೇಶಕರಾದ ಡಾ. ಜ್ಯೋತಿ ಜಗದೀಶ್ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಲೇಖಕಿ ಕಲಾವಿದೆ ಶ್ರೀಮತಿ ಲಲಿತಾ ಕೆ. ಆಚಾರ್ ಇವರ ‘ಸುಲಲಿತ ಕಾವ್ಯ ಚಿತ್ತಾರ’ ಎಂಬ ಕೃತಿಯು ಲೋಕಾರ್ಪಣೆಗೊಳ್ಳಲಿದೆ. ಸಭಾ ಕಾರ್ಯಕ್ರಮದ ಬಳಿಕ ಭಕ್ತಿಗೀತೆ ಗಾಯನ, ಚಿನ್ನದ ಆಭರಣ ವಿನ್ಯಾಸ, ರಸಪ್ರಶ್ನೆ ಮತ್ತು ಏಕ ಪಾತ್ರಾಭಿನಯ ಸ್ಪರ್ಧೆಗಳು ನಡೆಯಲಿದೆ.
ಸಂಜೆ 5-00 ಗಂಟೆಗೆ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇದರ ಅಧ್ಯಕ್ಷರಾದ ಡಾ. ಎಸ್. ಪಿ. ಗುರುದಾಸ್ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮಂಗಳೂರು ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಕೆ. ಕೆ. ಆಚಾರ್ಯ ಇವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಧಕರಾದ ಡಾ. ಎಸ್.ಆರ್. ಹರೀಶ್ ಆಚಾರ್ಯ, ಶ್ರೀ ಪ್ರದೀಪ್ ಕುಮಾರ್ ಆಚಾರ್ಯ, ಶ್ರೀಮತಿ ಯಮುನಾ ಕೆ. ಮತ್ತು ಡಾ. ನಿತಿನ್ ಆಚಾರ್ಯ ಇವರುಗಳನ್ನು ಗೌರವಿಸಲಾಗುವುದು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.