ಮಂಗಳೂರು : ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಮತ್ತು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳು ಹಾಗೂ ಸಮಾಜದ ಬಂಧುಗಳಲ್ಲಿ ಸಂಸ್ಕೃತಿ, ಪರಂಪರೆಗಳ ಅರಿವಿನ ಜಾಗೃತಿಗಾಗಿ ‘ವಿಶ್ವಕರ್ಮ ಕಲಾ ಸಿಂಚನ -2023’ ಎಂಬ ಹೆಸರಿನಲ್ಲಿ ದಿನಾಂಕ 08-10-2023ರಂದು ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ವಿಶ್ವಕರ್ಮ ಶ್ರೀ ಕಾಳಿಕಾಂಬೆಯ ಭಕ್ತಿಗೀತೆಗಳ ಗಾಯನದ-ಭಕ್ತಿ ಸಿಂಚನ, ವಿಶ್ವ ಬ್ರಾಹ್ಮಣರ ಕಲೆ, ಸಂಸ್ಕೃತಿ, ಪರಂಪರೆಗಳ ಕುರಿತಾದ ರಸಪ್ರಶ್ನೆ ಸ್ಪರ್ಧೆ – ಜ್ಞಾನ ಸಿಂಚನ ಹಾಗೂ ವಿಶ್ವಬ್ರಾಹ್ಮಣರ ಕಲೆ, ಸಂಸ್ಕೃತಿಗಳ ಕುರಿತಾದ ಛಾಯಾಚಿತ್ರ ಸ್ಪರ್ಧೆ – ಚಿತ್ರ ಸಿಂಚನವನ್ನು ಎಸೆಸೆಲ್ಸಿವರೆಗಿನ ಎಳೆಯರು ಹಾಗೂ ಪಿಯುಸಿ ಮತ್ತು ಮೇಲ್ಪಟ್ಟ ಹಿರಿಯರಿಗಾಗಿ ಏರ್ಪಡಿಸಲಾಗಿದೆ.
ಸ್ಪರ್ಧೆಗಳನ್ನು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ ಕೆ. ಕೇಶವ ಆಚಾರ್ಯ ಅವರು ಬೆಳಗ್ಗೆ 9.30ಕ್ಕೆ ಉದ್ಘಾಟಿಸಲಿದ್ದಾರೆ. ಶಿಲ್ಪಿ ಆನಂದ ಆಚಾರ್ಯ ಸುರತ್ಕಲ್, ಶ್ರೀ ವಿ. ಜಯ ಆಚಾರ್ಯ ಉರ್ವ, ಶ್ರೀಮತಿ ಶಕುಂತಳಾ ಬಿ. ರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪರಿಷತ್ತಿನ ಅಧ್ಯಕ್ಷ ಡಾ. ಎಸ್.ಪಿ. ಗುರುದಾಸ್ ವಹಿಸಲಿದ್ದು, ಕ್ಯಾಪ್ಟನ್ ಬ್ರಿಜೇಶ್ ಚೌಟ, ಎಂ.ಆರ್.ಪಿ.ಎಲ್.ನ ನಿವೃತ್ತ ಡಿಜಿಎಂ ಶ್ರೀ ವೈ.ಎಂ. ದೇವದಾಸ್, ವಿಪ್ರೊ ಕಂಪೆನಿಯಲ್ಲಿ ನಿರ್ದೇಶಕರಾದ ಶ್ರೀ ಹರಿದಾಸ್ ಎಸ್.ಪಿ. ಆಚಾರ್ಯ, ಯುವ ಸಮಾಜ ಸೇವಕ ಶ್ರೀ ಕೌಶಿಕ್ ಎಸ್. ಪಯ್ಯಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪರಿಷತ್ತಿನ ಗೌರವಾಧ್ಯಕ್ಷರಾದ ಪಿ.ಎನ್. ಆಚಾರ್ಯ ಹಾಗೂ ಬೆಳುವಾಯಿ ಸು೦ದರ ಆಚಾರ್ಯರು ಉಪಸ್ಥಿತರಿರುತ್ತಾರೆ.
ಖ್ಯಾತ ವೈದಿಕ ಹಾಗೂ ತಂತ್ರಿ ವರ್ಯರು ಬ್ರಹ್ಮಶ್ರೀ ವಿಶ್ವನಾಥ ಪುರೋಹಿತರು ಉದ್ಯಾವರ, ಸಂಗೀತ ವಿದ್ವಾಂಸ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಹಾಗೂ ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಹಿರಿಯರಾದ ಖ್ಯಾತ ಛಾಯಾಚಿತ್ರಗಾರ ಶ್ರೀ ಯಜ್ಞೇಶ್ವರ ಆಚಾರ್ಯ (ಯಜ್ಞ ಮಂಗಳೂರು) ಇವರನ್ನು ಇದೇ ಸಂದರ್ಭದಲ್ಲಿ ಗೌರವಿಸಿ ಅಭಿನಂದಿಸಲಾಗುವುದು.
ಶ್ರೀ ವಿಶ್ವಕರ್ಮ ಕಲಾಸಿಂಚನ -2023 ಗೌರವಾಭಿನಂದಿತ ಹಿರಿಯ ಸಾಧಕರ ಬಗ್ಗೆ :
ಬ್ರಹ್ಮಶ್ರೀ ಉದ್ಯಾವರ ವಿಶ್ವನಾಥ ಪುರೋಹಿತರು : ಉದ್ಯಾವರದಲ್ಲಿ ವೈದಿಕ ಮನೆತನದಲ್ಲಿ ಜನಿಸಿ, ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡು, ಕಡುಬಡತನದಲ್ಲಿ ಬೆಳೆದರೂ ಮೂಡಬಿದಿರೆಯ ಶ್ರೀ ಅಯ್ಯ ಜಗದ್ಗುರು ಮಠದಲ್ಲಿ ಬ್ರಹ್ಮಶ್ರೀ ರುದ್ರಯ್ಯ ಪುರೋಹಿತರ ಶಿಷ್ಯರಾಗಿ ವೈದಿಕ ಶಿಕ್ಷಣವನ್ನು ಪಡೆದು, ಮುಂದೆ ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ಹಾಗೂ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಕಾವ್ಯ-ಸಾಹಿತ್ಯ ವಿದ್ವತ್ ಶಿಕ್ಷಣವನ್ನು ಪಡೆದು, ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ವೈದುಷ್ಯವನ್ನು ಸಾಧಿಸಿ, ಸಮರ್ಥ ವೈದಿಕ ವಿದ್ವಾಂಸರಾಗಿ ಬೆಳೆದವರು ಉದ್ಯಾವರ ಶ್ರೀ ವಿಶ್ವನಾಥ ಪುರೋಹಿತರು. ಇಂದು ಸಾತ್ವಿಕ, ಸನ್ನಡತೆಯ, ಜನಾನುರಾಗಿ ವೈದಿಕರಾಗಿ, ತಂತ್ರಿವರ್ಯರಾಗಿ ಎಲೆಮರೆಯ ಕಾಯಿಯಂತೆ ಸಮಾಜದ ಅಭ್ಯುದಯಕ್ಕಾಗಿ ಜೀವತೇದಂತಹ ಸರಳತೆ, ಸಂಸ್ಕೃತಿ ಹಾಗೂ ಸನ್ನಡತೆಯ ಸಾಕಾರಮೂರ್ತಿ.
ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ : ಶ್ರೀಹರಿಕೇಶ ನಲ್ಲೂರು ಮುತ್ತಯ್ಯ ಭಾಗವತರ ಪರಂಪರೆಯ ವಿದ್ವಾನ್ ಕೆ. ವೆಂಕಟರಮಣರವರಲ್ಲಿ ಗುರುಕುಲ ಪದ್ಧತಿಯಲ್ಲಿ ಸಂಗೀತ ಶಿಕ್ಷಣ ಪಡೆದ ಕಲ್ಮಾಡಿ ಸದಾಶಿವ ಆಚಾರ್ಯ ಮುಂದೆ ಕಾಸರಗೋಡಿನ ವಿದ್ವಾನ್ ಬಾಬು ರೈಯವರಲ್ಲಿ ಶಿಕ್ಷಣವನ್ನು ಮುಂದುವರಿಸಿದರು. ನಾಡಿನಾದ್ಯಂತ ಸಂಗೀತ ಕಛೇರಿಗಳನ್ನು ನೀಡಿದ್ದು ಮಾತ್ರವಲ್ಲದೆ, ಪುಣ್ಯಕ್ಷೇತ್ರಗಳಲ್ಲಿ ಕಾರ್ಯಕ್ರಮ ನೀಡುವಾಗ ಆ ಕ್ಷೇತ್ರಾಧಿದೇವತೆಯ ಕುರಿತು ಸ್ಥಳದಲ್ಲೇ ಕೃತಿಯನ್ನು ರಚಿಸಿ, ರಾಗಸಂಯೋಜಿಸಿ ಹಾಡುವ ಅಪರೂಪದ ವಾಗ್ಗೇಯಕಾರರೂ ಹೌದು. ಕಾಸರಗೋಡಿನಲ್ಲಿ ಶ್ರೀ ಪುರಂದರದಾಸ ಸಂಗೀತ ಕಲಾಮಂದಿರವನ್ನು ಸ್ಥಾಪಿಸಿ, ನೂರಾರು ಶಿಷ್ಯಂದಿರಿಗೆ ಸಂಗೀತವಿದ್ಯೆಯನ್ನು ಧಾರೆಯೆರೆದ ಸಂಗೀತ ಗುರುಗಳು ಸದಾಶಿವ ಆಚಾರ್ಯರು. ಇವರ ಸಂಗೀತ ಸೇವೆಯನ್ನು ಗುರುತಿಸಿ ಹಲವು ಗುರುಪೀಠಗಳು, ಸಂಘಸಂಸ್ಥೆಗಳು ಬಿರುದುಗಳನ್ನಿತ್ತು ಗೌರವಿಸಿವೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ, ಕರ್ನಾಟಕ ಕಲಾಶ್ರೀ, ರಾಜ್ಯ ಪ್ರಶಸ್ತಿಗೂ ಭಾಜನರಾಗಿರುತ್ತಾರೆ.
ಶ್ರೀ ಯಜ್ಞೇಶ್ವರ ಆಚಾರ್ಯ (ಯಜ್ಞ ಮಂಗಳೂರು) : ಕರಾವಳಿಯ ಬದುಕಿನ ಸೂಕ್ಷ್ಮತೆಗಳನ್ನು ತನ್ನ ಕ್ಯಾಮರಾಕಣ್ಣಿನ ಮೂಲಕ ಸೆರೆ ಹಿಡಿದು ವಿಶ್ವಕ್ಕೆ ಪರಿಚಯಿಸಿದ ಅಪ್ರತಿಮ ಕಲಾವಿದರು, ಶ್ರೀ ಯಜೇಶ್ವರ ಆಚಾರ್ಯ. ನಾಡಿನ ಉದಯವಾಣಿ, ತರಂಗ, ಪ್ರಜಾವಾಣಿ, ದಿ ಹಿಂದೂ, ಡೆಕ್ಕನ್ ಹೆರಾಲ್ಡ್, ಇಲ್ಲಸ್ಟ್ರೇಟೆಡ್ ವೀಕ್ಲಿ ಮುಂತಾದ ಪ್ರಸಿದ್ಧ ಪತ್ರಿಕೆಗಳಲ್ಲಿ ಯಜ್ಞರು ಕ್ಲಿಕ್ಕಿಸಿದ ಭಾವಚಿತ್ರಗಳು ಅಪಾರ ಓದುಗರನ್ನು ಸೆಳೆಯುತ್ತಿದ್ದವು. ಕಪ್ಪು ಬಿಳುಪು ಚಿತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದವರು ಶ್ರೀ ಯಜ್ಞ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ಯಜ್ಞರ ಮುಡಿಗೇರಿವೆ.
ವಿಶೇಷ ಸೂಚನೆ : ಈ ಕಾರ್ಯಕ್ರಮದ ಸಂದರ್ಭದಲ್ಲಿ ಆರ್ಟಿಸನ್ ಕಾರ್ಡ್ ಮತ್ತು ಪಿ.ಎಂ. ವಿಶ್ವಕರ್ಮ ಕಾರ್ಡ್ ಮಾಡಲಿಚ್ಚಿಸುವವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಹಾಯ ಒದಗಿಸಲಾಗುವುದು.
ವಿಶ್ವಕರ್ಮ ಕಲಾ ಪರಿಷತ್ ನವೆಂಬರ್ ಒಂದನೇ ತಾರೀಕಿನಿಂದ ಸುಪ್ರಸಿದ್ಧ ಕಲಾವಿದರ ನೇತೃತ್ವದಲ್ಲಿ ಡ್ರಾಯಿಂಗ್, ಮದರಂಗಿ, ಎಂಬೋಸಿಂಗ್, ಕ್ಲೇ ಮಾಡಲಿಂಗ್, ಭಾವಗೀತೆ, ಜಾನಪದಗೀತೆ ಇತ್ಯಾದಿ ಕಲಾ ಪ್ರಕಾರಗಳ ಕುರಿತಾದ ತರಗತಿಗಳು ಪ್ರಾರಂಭಗೊಳ್ಳಲಿರುವವು. ಆಸಕ್ತರು ಈಗಲೇ ತಮ್ಮ ಹೆಸರನ್ನು ನೋಂದಾಯಿಸಲು ಅವಕಾಶವಿದೆ.
ಮಾಹಿತಿಗಾಗಿ: ಶ್ರೀಮತಿ ರಮ್ಯಾ ಲಕ್ಷ್ಮೀಶ ಆಚಾರ್ಯ, ಕಾರ್ಯದರ್ಶಿ 9482184197