ಮಂಗಳೂರು : ವಿಶ್ವಕರ್ಮ ಕಲಾ ಪರಿಷತ್, ಮಂಗಳೂರು ಇದರ ಆಶ್ರಯದಲ್ಲಿ ಟೆಂಪಲ್ ಸ್ಕ್ವಾಯರ್ ನಲ್ಲಿರುವ ಪ್ರೇಮ ಪ್ಲಾಝದ 2ನೇ ಮಹಡಿಯಲ್ಲಿರುವ ವಿಶ್ವಂ ಸ್ಕೂಲ್ ಅಫ್ ಆರ್ಟ್ ಇದರ ಕಚೇರಿಯ ಉದ್ಘಾಟನೆಯನ್ನು ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ಇವರು ಸೃಷ್ಟಿಕರ್ತ ಭಗವಾನ್ ಶ್ರೀ ವಿಶ್ವಕರ್ಮ ದೇವರ ಕಲಾಕೃತಿಯನ್ನು ಅನಾವರಣ ಮಾಡುವ ಮೂಲಕ ದಿನಾಂಕ 17-12-2023ರಂದು ನೆರವೇರಿಸಿದರು.
“ವಿಶ್ವಕರ್ಮ ಕಲಾ ಪರಿಷತ್ತಿನ ‘ವಿಶ್ವಂ ಸ್ಕೂಲ್ ಅಫ್ ಆರ್ಟ್’ನ ಮೂಲಕ ಮಹತ್ತರ ಕೊಡುಗೆಯನ್ನು ಕಲಾವಿದರಿಗೆ ಕೊಡುವ ಪ್ರಯತ್ನ ಮಾಡುತಿದ್ದಾರೆ. ಪುರಾತನ ಪ್ರಾಚೀನ ದೇಶ ಭಾರತ. ಆಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಪುನರ್ ನಿರ್ಮಾಣ ಸಂದರ್ಭದಲ್ಲಿ ಗತ ಕಾಲದ ಹಿಂದೆ ಮಂದಿರ ಇರುವ ಬಗ್ಗೆ ಸಾಕ್ಷ್ಯ ವಿಶ್ವಕರ್ಮರ ಅತ್ಯದ್ಭುತವಾದ ಕೈಚಳಕದಿಂದ ಕೆತ್ತನೆ ಕಾರ್ಯ ತಜ್ಞರ ಪರಿಶೀಲನೆ ಸಂದರ್ಭದಲ್ಲಿ ಲಭ್ಯವಾಗಿದ್ದು, ವಿಶ್ವಕರ್ಮರ ಕೊಡುಗೆ ಅಪಾರವಾದುದು ಎಂದು ನಮಗೆ ಕಾಣುತ್ತಿದೆ. ವಿಶ್ವಂ ಸ್ಕೂಲ್ ಅಫ್ ಆರ್ಟ್ ನ ಸದುಪಯೋಗ ವಿದ್ಯಾರ್ಥಿಗಳು ಪಡಕೊಳ್ಳಬೇಕು. ವಿದ್ಯಾರ್ಥಿಗಳಿಗೆ ತಾಳ್ಮೆ ಮುಖ್ಯ. ಕಲಿಕೆಯಲ್ಲಿ ನಿರಂತರ ಏಕಾಗ್ರತೆಯಿಂದ ಪರಿಶ್ರಮ ಮಾಡಬೇಕು. ಮುಂಬರುವ ದಿನಗಳಲ್ಲಿ ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಇದು ಪೂರಕವಾಗಲಿ” ಎಂದು ಶಾಸಕರಾದ ವೇದವ್ಯಾಸ ಕಾಮತ್ ಹೇಳಿದರು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಮತ್ತು ವಿಶ್ವಕರ್ಮ ಕಲಾ ಪರಿಷತ್ ಇದರ ಗೌರವಾಧ್ಯಕ್ಷ ಶ್ರೀ ಪಿ.ಎನ್. ಆಚಾರ್ಯರು ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ “ವಿಶ್ವಕರ್ಮ ಕಲಾ ಪರಿಷತ್ತಿನ ಸದಸ್ಯರೆಲ್ಲರೂ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿ ಕಲೆಯನ್ನು ಎಲ್ಲಾ ಕಡೆ ಪಸರಿಸುವಂತಹ ಕೆಲಸ ಮಾಡುತ್ತಿದ್ದಾರೆ. ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಚಿತ್ರ ಕಲಾವಿದರು, ಕರಾವಳಿ ಚಿತ್ರಕಲಾ ಚಾವಡಿ (ರಿ.) ಮಂಗಳೂರು ಇದರ ಗೌರವಾಧ್ಯಕ್ಷರಾದ ಗಣೇಶ್ ಸೋಮಯಾಜಿಯವರು “ವಿಶ್ವಕರ್ಮರಲ್ಲಿ ಕಲೆ ರಕ್ತಗತವಾಗಿ ಬಂದಿದೆ, ಕಲೆಯನ್ನು ಎಲ್ಲರಿಗೂ ಕಲಿಸುವಂತಹ ಕಾರ್ಯ ಸುತ್ಯಾರ್ಹ.” ಎಂದರು. ಇನ್ನೊರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಚಿತ್ರಕಲಾವಿದರು, ಲೇಖಕರು ಪರಿಸರ ರಕ್ಷಣಾ ಹೋರಾಟಗಾರರಾದ ದಿನೇಶ್ ಹೊಳ್ಳ ಕಲಾಕಾರರನ್ನು ಗುರುತಿಸುವಂತಹ ಕೆಲಸ ಪ್ರಶಂಸನೀಯ ಎನ್ನುತ್ತಾ ಪರಿಸರ, ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಮಾತನಾಡಿದರು.
“ಕಲಾವಿದರಿಗೆ, ಶಿಲ್ಪಿಗಳಿಗೆ, ಕುಶಲಕರ್ಮಿಗಳಿಗೆ ಸಂಘಟನೆಯ ಮೂಲಕ ಬಲ ತುಂಬುವ ಉದ್ದೇಶದಿಂದ ಹುಟ್ಟಿರುವ ವಿಶ್ವಕರ್ಮ ಕಲಾ ಪರಿಷತ್ ಸಂಸ್ಥೆಯು ಪರಂಪರೆ ಸಂರಕ್ಷಣೆ ಹಾಗೂ ಸೃಜನಶೀಲತೆಯ ಉದ್ದೀಪನದ ಉದ್ದೇಶದಿಂದ ‘ವಿಶ್ವಂ ಸ್ಕೂಲ್ ಆಫ್ ಆರ್ಟ್’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ನುರಿತ ಕಲಾವಿದರು ವಿಭಿನ್ನ ಕಲಾ ಪ್ರಕಾರಗಳನ್ನು ಕಲಾಸಕ್ತರಿಗೆ ಕಲಿಸಿಕೊಡಲಿದ್ದಾರೆ. ಡ್ರಾಯಿಂಗ್, ಪೋರ್ಟ್ರೈಟ್ ಮೇಕಿಂಗ್, ಕ್ರ್ಯಾಫ್ಟ್, ಶಿಲ್ಪ ಕಲೆ, ಗೆರಟೆ ಕಲೆ, ಆರಿ ವರ್ಕ್, ಜರ್ದೋಸಿ, ಮೆಹಂದಿ, ಸುಗಮ ಸಂಗೀತ, ಎಂಬೋಸಿಂಗ್, ರಂಗೋಲಿ ಇತ್ಯಾದಿ ವಿಭಿನ್ನ ಕಲಾ ಪ್ರಕಾರಗಳ ಶಿಕ್ಷಣವನ್ನು ಪರಿಣಾಮಕಾರಿಯಾಗಿ ನೀಡಲಾಗುವುದು” ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ವಕಲಾ ಪರಿಷತ್ ಅಧ್ಯಕ್ಷರಾದ ಡಾ. ಎಸ್.ಪಿ. ಗುರುದಾಸ್ ಹೇಳಿದರು.
ಈ ಸಂದರ್ಭದಲ್ಲಿ ಕಲಾ ಶಾಲೆಯ ಕಲಾವಿದರ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಪರಿಷತ್ತಿನ ಕೋಶಾಧಿಕಾರಿ ಎ.ಜಿ. ಸದಾಶಿವ ಪ್ರಸ್ತಾವನೆಗೈದರು. ಶ್ರೀಮತಿ ರತ್ನಾವತಿ ಬೈಕಾಡಿ ಸ್ವಾಗತಿಸಿ, ಭರತ್ ರಾಜ್ ಬೈಕಾಡಿ ಮತ್ತು ಎಸ್.ಕೆ.ಜಿ.ಐ. ಸೊಸೈಟಿಯ ಮಹಾ ಪ್ರಭಂದಕರಾದ ಯಜ್ಞೇಶ್ವರ ಕೆ. ಕಾರ್ಯಕ್ರಮ ನಿರೂಪಿಸಿ. ಜಗದೀಶ್ ಸಿದ್ದಕಟ್ಟೆ ವಂದಿಸಿದರು. ಸುಂದರ ಆಚಾರ್ಯ ಬೆಳುವಾಯಿ, ಪ್ರೊ. ಯಶವಂತ ಜಿ. ಆಚಾರ್ಯ, ಜಗದೀಶ್ ಸಿದ್ದಕಟ್ಟೆ, ವಿಶ್ವಕರ್ಮ ಕಲಾ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.