ಮಂಗಳೂರು : ತನ್ನ ಸೇವೆಯ 22ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ನಗರದ ಶಕ್ತಿನಗರದಲ್ಲಿರುವ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ, ಇಲ್ಲಿನ ವಿಶೇಷ ಮಕ್ಕಳಿಂದ ಇದೇ 23 ಫೆಬ್ರವರಿ 2025ರ ಆದಿತ್ಯವಾರದಂದು ಸಂಜೆ ಘಂಟೆ ಘಂಟೆ 5.00ಕ್ಕೆ ಸರಿಯಾಗಿ ಕದ್ರಿ ಉದ್ಯಾನದ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಅನಾವರಣಗೊಳ್ಳಲಿದೆ. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ, ವಿಧಾನ ಸೌಧದಲ್ಲಿ, ಸುತ್ತೂರು, ಮೈಸೂರು, ಕುಂಬ್ಳೆ, ಹಾಗೂ ದುಬೈ ಮತ್ತು ಕತಾರ್‌ನಲ್ಲಿ ತಮ್ಮ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸಿದ ‘ಸಾನಿಧ್ಯ’ದ ವಿಶೇಷ ಮಕ್ಕಳು ನಗರದ ಕದ್ರಿ ಉದ್ಯಾನದಲ್ಲಿ ಹವ್ಯಾಸಿ ಬಳಗ ಕದ್ರಿ ಇದರ ನಿರ್ದೇಶಕರರಾಗಿರುವ ಶ್ರೀ ಶರತ್ ಕದ್ರಿ ಇವರ ನಿರ್ದೇಶನದಲ್ಲಿ “ಕೃಷ್ಣ ಜನ್ಮ-ಕಂಸ ವಧೆ” ಎಂಬ ಯಕ್ಷಗಾನವನ್ನು ಹಾಗೂ ಡಾ. ವಸಂತ್ ಕುಮಾರ್ ಶೆಟ್ಟಿಯವರು ನಿರ್ದೇಶಿಸಿ, ಇದೇ ಜನವರಿ ತಿಂಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಜರುಗಿದ ರಾಜ್ಯಮಟ್ಟದ ಜನಪದ ನೃತ್ಯೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ “ಕರ್ನಾಟಕ ವೈಭವ”ವನ್ನು ಪ್ರದರ್ಶಿಸಲಿದ್ದಾರೆ.
22 ಫೆಬ್ರವರಿ 2025ನೇ ತಾರೀಕು ಶನಿವಾರದಂದು ಸಂಜೆ ಘಂಟೆ 5.30ಕ್ಕೆ ಸರಿಯಾಗಿ ಸಾನಿಧ್ಯ ವಿಶೇಷ ಮಕ್ಕಳು ತರಬೇತಿದಾರರ ನೆರವಿನಿಂದ ಹಾಗೂ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ (ಎಂಡೋಸಲ್ಫಾನ್ ಪೀಡಿತರಿಗಾಗಿ) ಉಜಿರೆ ಇವರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ‘ವಿಷನ್ -೨೦೨೫’ ಉದ್ಘಾಟನೆಗೊಳ್ಳಲಿದೆ. ದಕ್ಷಿಣ ಕನ್ನಡ ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿಯಾಗಿರುವ ಶ್ರೀ ಮನೀಶ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಾಪ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀ ದಿನೇಶ್ ಕುಮಾರ್ ಆಳ್ವ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು, ಪದವು ಉತ್ತರವಲಯದ ಕಾರ್ಪೋರೇಟರ್ ಶ್ರೀ ಕಿಶೋರ್ ಕೊಟ್ಟಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
23 ಫೆಬ್ರವರಿ 2025ನೇ ಆದಿತ್ಯವಾರದಂದು ಜರಗುವ ‘ಸಾನಿಧ್ಯ ಉತ್ಸವ’ವನ್ನು ಬೆಂಗಳೂರಿನ ಕ್ರಾಫ್ಟಿಸನ್ ಫೌಂಡೇಶನ್ ಇದರ ಸಂಸ್ಥಾಪಕರು ಮತ್ತು ಸಿ.ಇ.ಒ ಆಗಿರುವ ಕು. ಮಯೂರ ಬಾಲಸುಬ್ರಮಣ್ಯನ್‌ರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎನ್. ಎಸ್. ಶೆಟ್ಟಿ ಆಂಡ್ ಕಂ. ಮುಂಬೈ ಇದರ ಆಡಳಿತ ನಿರ್ದೇಶಕರು ಹಾಗೂ ಅರ್ಜುನ್ ಶೆಟ್ಟಿ ಫೌಂಡೇಶನ್ ಇದರ ಸಂಸ್ಥಾಪಕರಾಗಿರುವ ಲೆಕ್ಕ ಪರಿಶೋಧಕರಾದ ಶ್ರೀ ಎನ್. ಸುಧೀರ್ ಶೆಟ್ಟಿ ಹಾಗೂ ಮಂಗಳೂರಿನ ಸಂತೋಷ್ ಆರೇಂಜರ್ಸ್ ಇದರ ಮಾಲಕರಾಗಿರುವ ಶ್ರೀ ಸಂತೋಷ್ ಸಿಕ್ವೇರಾ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಣೆಬೆನ್ನೂರಿನ ಶ್ರೀ ರೇಣುಕಾ ಎಲ್ಲಮ್ಮ ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಶಾಲೆಯ ಸಂಸ್ಥಾಪಕರಾದ ಶ್ರೀ ಹೆಚ್.ಆರ್. ಶಿವಕುಮಾರ್ ಹಾಗೂ ಮೈಸೂರಿನ ಮಾತೃಮಂಡಳಿ ಸಂಸ್ಥೆಯ ಶಿಶುವಿಕಾಸ ಕೇಂದ್ರದ ಆಡಳಿತಾಧಿಕಾರಿಯಾಗಿರುವ ಶ್ರೀ ಪಾಂಡು ಬಿ. ವಿ. ಇವರನ್ನು ಸನ್ಮಾನಿಸಲಾಗುವುದು. ಉಜಿರೆ ಸಾನಿಧ್ಯ ಕೇಂದ್ರದ ಎಂಡೋಸಲ್ಫಾನ್ ಪೀಡಿತ ಮಕ್ಕಳಿಂದ ಹಾಗೂ ಮಂಗಳೂರಿನ ಸಾನಿಧ್ಯದ ಭಿನ್ನ ಸಾಮರ್ಥ್ಯದ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು.