ಮಂಗಳೂರು : ವಿ.ಆರ್.ವಿ. ಕ್ರಿಯೇಷನ್ಸ್ ಮಂಗಳೂರು ಮತ್ತು ಥಂಡರ್ ಕಿಡ್ಸ್ ಮಂಗಳೂರು ಇವರ ಸಂಯೋಜನೆಯಲ್ಲಿ ವಿನಮ್ರ ಇಡ್ಕಿದು ಹಾಡಿದ ಏಳು ದೃಶ್ಯ ಗೀತೆಗಳ ಬಿಡುಗಡೆ ಕಾರ್ಯಕ್ರಮವು ದಿನಾಂಕ 18 ಮೇ 2025ರಂದು ಮಂಗಳೂರಿನ ಕೆನರಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಜಾನಪದ ವಿದ್ವಾಂಸರು, ವಿಶ್ರಾಂತ ಕುಲಪತಿಗಳು ಆದ ಡಾ. ಕೆ. ಚಿನ್ನಪ್ಪಗೌಡ ಇವರು ಮಾತನಾಡಿ “ಕವಿ ಬರೆದಿರುವ ಕವನವೊಂದು ಹಾಡಾಗಿದೆಯೆಂದರೆ, ಕವಿಯ ಹಾಡಿನ ಬೆಳವಣಿಗೆಯಾಗಿದೆ, ಆ ಕವನ ಪರಿಸ್ಕೃತ ರೂಪ ಪಡೆದಿದೆ, ಅದು ವಿಸ್ತೃತಗೊಂಡಿದೆ, ಆ ಕವಿತೆ ಹೊಸ ಆವೃತ್ತಿಯಾಗಿ ಹೊರಹೊಮ್ಮಿದೆ ಎಂದು ಅರ್ಥ. ಹಾಡನ್ನು ಕೇಳುವುದು ಮಾತ್ರವಲ್ಲ ನೋಡುವ ಹಾಗೆ ಮಾಡುವುದು ಸೃಜನಶೀಲ ಕಲೆ. ಆ ಮೂಲಕ ಅನುಭವವೊಂದನ್ನು ದೀರ್ಘಕಾಲ ಕಾಡುವಂತೆ ಮಾಡುವುದು ಜಾಣ್ಮೆಯೇ ಸರಿ. ದೃಶ್ಯ ಗೀತೆಗಳಲ್ಲಿ ಕವಿ, ಸಂಗೀತ ನಿರ್ದೇಶಕ, ಅಭಿನಯಿಸುವ ಕಲಾವಿದರು, ನಿರ್ದೇಶಕ ಇವರೆಲ್ಲ ಮುಖ್ಯವಾಗುವ ಮೂಲಕ ಕವನವೊಂದು ವಿಸ್ತಾರವಾದ ರೂಪವನ್ನು ಪಡೆದುಕೊಳ್ಳುತ್ತದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ “ಹಿರಿಯ ಕವಿಗಳ ಕವನಗಳನ್ನು ಹೊಸ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಹಾಡುಗಾರರಿಂದ ನಡೆದಿರುವುದು ಶ್ಲಾಘನೀಯ” ಎಂದು ಹೇಳಿದರು. ಮಂಗಳೂರಿನ ಸೌಂಡ್ ವೇವ್ ಸ್ಟುಡಿಯೋದ ಮಾಲಕರು, ಗಾಯಕರು ಆದ ಮಹಮ್ಮದ್ ಫಯಾಜ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಹಾಡುಗಾರ ವಿನಮ್ರ ಇಡ್ಕಿದು, ಕವಿ ರಘು ಇಡ್ಕಿದು, ದೃಶ್ಯ ಗೀತೆಗಳ ಚಿತ್ರೀಕರಣ ಸಂಕಲನ ನಿರ್ದೇಶನ ಮಾಡಿದ ವಿದ್ಯಾ ಯು., ಹಾಡುಗಳ ಸಹ ಗಾಯಕಿಯರಾದ ಜೀ ಕನ್ನಡ ಸರಿಗಮಪದ ರನ್ನರ್ ಆಫ್ ತನುಶ್ರೀ, ಮಧುಶ್ರೀ ಕೋಡಿಕಲ್, ಕು. ನಿನಾದ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರೊ. ಅಮೃತ ಸೋಮೇಶ್ವರರ ‘ಊರ ಜಾತ್ರೆದ ದಿನ…’, ಮೋಹನಪ್ಪ ತಿಂಗಳಾಯರ ‘ತುಳುನಾಡ ಗೀತೆ’, ಮಮತಾ ಅಂಚನ್ ಪುಣೆ ಇವರ ‘ಮಲ್ಲಿಗೆ’, ರಘು ಇಡ್ಕಿದುರವರ ‘ಪುಣ್ಣಮೆ.., ಕೊರಗಜ್ಜ.., ಕನನೇ ಈಯೆನ….. ಮೋಹo….’ ಮೊದಲಾದ ಏಳು ಹಾಡುಗಳು ಬಿಡುಗಡೆಗೊಂಡವು. ಹಾಡುಗಳಿಗೆ ಸಂಗೀತ ನಿರ್ದೇಶನವನ್ನು ಎಲ್ಲೂರು ಶ್ರೀನಿವಾಸರಾವ್ ಮತ್ತು ಪ್ರಮೋದ್ ಸಪ್ರೆಯವರು ಮಾಡಿದ್ದಾರೆ. ಈ ದೃಶ್ಯ ಗೀತೆಗಳ ಪರಿಕಲ್ಪನೆ / ನಿರ್ಮಾಣ/ ನಿರ್ದೇಶನ / ಸಂಕಲನ/ ಚಿತ್ರೀಕರಣ: ವಿದ್ಯಾ ಯು., ರಿತೇಶ್ ಎ. ಮತ್ತು ಜಿತೇಶ್ ಎ. ಸಹಕರಿಸಿದ್ದಾರೆ. ಇದರಲ್ಲಿ ಉದಯೋನ್ಮುಖ ಕಲಾವಿದರಾದ ಸಾಕ್ಷಿ ಗುರುಪುರ, ಸಾನ್ವಿ ಗುರುಪುರ, ಸಾದ್ವಿನಿ ಗುರುಪುರ, ಸಾನ್ವಿ ಉಳ್ಳಾಲ್, ವಿಘ್ನೇಶ್ ಎಸ್. ಕೊಟ್ಟಾರಿ, ಕೃಪಾಲಿ ಆಚಾರ್ಯ, ಧನ್ಯ, ವಿಭಾ, ರಜಿತ ಕೊಟ್ಟಾರಿ, ಚಾರಿತ್ರ್ಯ, ಪ್ರಿಯಾಂಕ, ಆತ್ಮಿ ಯು.ವಿ., ಭೂಮಿಕಾ, ಹಂಸಿಕ ಕ್ಷಿತಿ, ಮಿತ್ರ ಅಭಿನಯಿಸಿದ್ದಾರೆ. ಕಾರ್ಯಕ್ರಮವನ್ನು ರಘು ಇಡ್ಕಿದು ನಿರ್ವಹಿಸಿ ವಂದಿಸಿ, ಕುಮಾರಿ ನಿನಾದ ಪ್ರಾರ್ಥಿಸಿದರು.