ಅರಿಜೋನಾ : ಅಮೆರಿಕದ ಟೆಂಪಿ ಅರಿಜೋನಾ ನಗರದಲ್ಲಿ ನವೆಂಬರ್ 5ನ್ನು ವಿಠ್ಠಲ ರಾಮಮೂರ್ತಿ ದಿನ’ ಎಂದು ಘೋಷಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಕಲಾವಿದರಾಗಿ ಹಾಗೂ ಗುರುವಾಗಿ ವಿಠ್ಠಲ ರಾಮಮೂರ್ತಿ ಅವರು ನೀಡಿರುವ ಜೀವಮಾನದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಟೆಂಪಿ ಅರಿಜೋನಾ ನಗರದ ಮೇಯರ್ ಕೋರಿ ವುಡ್ಸ್ ಅವರು ಈ ಗೌರವವನ್ನು ನೀಡಿ ಅಭಿನಂದಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕನ್ನಡಿಗ, ಅಂತರರಾಷ್ಟ್ರೀಯ ಖ್ಯಾತಿಯ ಈ ವಯಲಿನ್ ಸಾಧಕ ಮೂಲತಃ ಧರ್ಮಸ್ಥಳ ಸಮೀಪದ ನಿಡ್ಲೆಯವರು. ಚೆನ್ನೈಯ ನಿವಾಸಿಯಾಗಿರುವ ಅವರು ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದರು. ವಯಲಿನ್ ಮಾಂತ್ರಿಕ ಲಾಲ್ಗುಡಿ ಜಯರಾಮನ್ ಅವರ ಪಟ್ಟ ಶಿಷ್ಯ. ಭಾರತ ಹಾಗೂ ವಿದೇಶಗಳಲ್ಲಿ 6,000ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನೀಡಿರುವ ವಿಠ್ಠಲ ರಾಮಮೂರ್ತಿ ಶ್ರೇಷ್ಠ ಸಂಗೀತ ಗುರುಗಳೂ ಹೌದು. ಅವರ ಗರಡಿಯಲ್ಲಿ ಪಳಗಿದ ಅನೇಕ ಶಿಷ್ಯರು ವಿಶ್ವದಾದ್ಯಂತ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಂಪನ್ನು ಪಸರಿಸುತ್ತಿದ್ದಾರೆ.
ನಿಡ್ಲೆಯಲ್ಲಿರುವ ಅವರ ಮೂಲ ಮನೆಯಲ್ಲಿ ‘ಕರುಂಬಿತ್ತಿಲ್ ಶಿಬಿರ’ ಎನ್ನುವ ಸಂಗೀತ ಶಿಬಿರವನ್ನು ಕಳೆದ 20 ವರ್ಷಗಳಿಂದ ನಿರಂತರವಾಗಿ ನಡೆಸುತ್ತ ಬರುತ್ತಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತದ ಶ್ರೇಷ್ಠ ವಿದ್ವಾಂಸರನ್ನು ಈ ಪುಟ್ಟ ಹಳ್ಳಿಗೆ ಕರೆಸಿ ಅವರಿಂದ ವಿದ್ಯಾರ್ಥಿಗಳಿಗೆ ಸಂಗೀತದ ಪಾಠ ಹೇಳಿಸುತ್ತಿದ್ದಾರೆ. ಗುರುಕುಲ ಮಾದರಿಯ ಈ ಉಚಿತ ಶಿಬಿರ ವಿಶ್ವದಾದ್ಯಂತ ಹೆಸರಾಗಿದೆ. ಪ್ರತೀ ವರ್ಷ ಭಾರತ, ಅಮೆರಿಕ ಸೇರಿದಂತೆ ವಿವಿಧ ದೇಶಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.