ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ರಾಮಕೃಷ್ಣ ಮಿಷನ್ ಮಂಗಳೂರು ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕ ಜಾಗೃತಿ ಸರಣಿ ಉಪನ್ಯಾಸದ ಉದ್ಘಾಟನಾ ಕಾರ್ಯಕ್ರಮ ದಿನಾಂಕ 17-11-2023 ರಂದು ಮಂಗಳೂರಿನ ಕೊಡಿಯಾಲಬೈಲ್ ನಲ್ಲಿರುವ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ನಡೆಯಿತು.
ಈ ಉಪನ್ಯಾಸ ಸರಣಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಜಿತಕಾಮಾನಂದಜೀ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸುತ್ತಿದ್ದೇವೆ. ವಿವೇಕಾನಂದರು ಯುವಕರ ಮೇಲೆ ಅಪಾರ ಭರವಸೆಯನ್ನಿಟ್ಟಿದ್ದರು ಅವರ ಮಾತುಗಳು ಯುವಕರಿಗೆ ಇಂದಿಗೂ ಸ್ಫೂರ್ತಿ, ಶಿಕ್ಷಣವೆಂದರೆ ಕೇವಲ ಪುಸ್ತಕದ ವಿಷಯಗಳ ಕಲಿಕೆಯಲ್ಲ ಅದು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಬೇಕು. ಇಂತಹ ಶಿಕ್ಷಣದಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ. ವಿವೇಕ ಜಾಗೃತಿ ಕಾರ್ಯಕ್ರಮವು ಸ್ವಾಮಿ ವಿವೇಕಾನಂದರನ್ನು ಯುವ ಜನತೆಗೆ ಪರಿಚಯಿಸುವ ಮೂಲಕ ಸಮರ್ಥ ಯುವ ಜನಾಂಗ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಲಿದೆ” ಎಂದರು.
ಈ ಸಂದರ್ಭದಲ್ಲಿ ವಿವೇಕ ಜಾಗೃತಿ ಕಾರ್ಯಕ್ರಮದ ಲಾಂಛನವನ್ನು ಚಿಂತಕರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಾ. ಎಸ್. ಆರ್. ಲೀಲಾ ಅನಾವರಣಗೊಳಿಸಿದರು. ತದನಂತರ ನಡೆದ ವಿವೇಕ ಜಾಗೃತಿ ಕಾರ್ಯಕ್ರಮದ ಮೊದಲ ಉಪನ್ಯಾಸದಲ್ಲಿ ‘ಅಮೃತ ಕಾಲದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ’ ಎಂಬ ವಿಷಯದ ಕುರಿತು ಮಾತನಾಡಿದ ಅವರು. “ಬ್ರಿಟೀಷರು ಭಾರತೀಯರನ್ನು ದೈಹಿಕವಾಗಿ ಮಾನಸಿಕವಾಗಿ ಗುಲಾಮರನ್ನಾಗಿ ಮಾಡಿದರು. ಭಾರತದ ಈಗಿನ ಅಮೃತಕಾಲದಲ್ಲಿ ವಿವೇಕಾನಂದರ ತತ್ವ ಆದರ್ಶಗಳೇ ದಾರಿ. ಬಹಳಷ್ಟು ಒಳ ಹೊರಗಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಭಾರತ ಸ್ವಾವಲಂಬನೆ ಕಂಡುಕೊಳ್ಳಲು, ದೇಶ ಮೊದಲು ಎನ್ನುವ ವಿವೇಕಾನಂದರ ಆದರ್ಶಗಳೇ ಸ್ಪೂರ್ತಿ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವುಮೆನ್ಸ್ ನ್ಯಾಷನಲ್ ಎಜುಕೇಷನ್ ಸೊಸೈಟಿ ಇದರ ಅಧ್ಯಕ್ಷರಾದ ಮನೆಲ್ ಅಣ್ಣಪ್ಪ ನಾಯಕ್ ವಹಿಸಿದ್ದರು. ವುಮೆನ್ಸ್ ನ್ಯಾಷನಲ್ ಎಜುಕೇಷನ್ ಸೊಸೈಟಿ ಇದರ ಉಪಾಧ್ಯಕ್ಷರಾದ ಡಾ. ಮಂಜುಳಾ ಕೆ. ಟಿ. ಗೌರವ ಅಥಿತಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಂಗಳೂರಿನ ಬೆಸೆಂಟ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ಪ್ರೊ. ರಾಜಶೇಖರ್ ಹೆಬ್ಬಾರ್, ಬೆಸೆಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರವೀಣ್ ಕುಮಾರ್ ಕೆ.ಸಿ., ಬೆಸೆಂಟ್ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕರಾದ ಶ್ಯಾಮ್ ಕಾಮತ್, ನಿವೃತ್ತ ಯೋಧರಾದ ಬೆಳ್ಳಾಲ ಗೋಪಿನಾಥ್ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೆಸೆಂಟ್ ಮಹಿಳಾ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಮಂಗಳೂರು ರಾಮಕೃಷ್ಣ ಮಿಷನ್ ಇದರ ಯುವ ಕಾರ್ಯಕ್ರಮಗಳ ಮುಖ್ಯ ಸಂಯೋಜಕರಾದ ರಂಜನ್ ಬೆಳ್ಳಾರ್ಪ್ಪಾಡಿ ಸ್ವಾಗತಿಸಿ, ಬೆಸೆಂಟ್ ಮಹಿಳಾ ಕಾಲೇಜಿನ ಎನ್. ಎಸ್. ಎಸ್. ಸಂಯೋಜಕರಾದ ರವಿಪ್ರಭಾ ವಂದಿಸಿದರು.