ಪುತ್ತೂರು : ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ. ಯು. ಸಿ. ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಪ್ರತಿಭಾ ದಿನಾಚರಣೆ “ವಿವೇಕ ನಾವಿನ್ಯ -2024” ಕಾರ್ಯಕ್ರಮವು ದಿನಾಂಕ 22-06-2024 ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತುಳುನಾಡ ಮಾಣಿಕ್ಯ ಖ್ಯಾತಿಯ ಚಲನಚಿತ್ರ ನಟ ಅರವಿಂದ ಬೋಳಾರ್ ಮಾತನಾಡಿ
“ಪ್ರತಿಭೆ ಎನ್ನುವುದು ಭಗವಂತ ನೀಡಿದ ವರ. ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಸುಪ್ತವಾಗಿ ಅಡಕವಾಗಿರುತ್ತದೆ. ಅಂತರ್ಗತವಾಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತವಾದ ವೇದಿಕೆಯ ಅವಶ್ಯಕತೆಯಿದೆ. ಸಂಪತ್ತು ಎಂದಿಗೂ ಶಾಶ್ವತವಲ್ಲ. ಕಲಿತ ವಿದ್ಯೆ ಮಾತ್ರ ಶಾಶ್ವತವಾಗಿರುತ್ತದೆ. ವಿದ್ಯಾರ್ಥಿಗಳು ವಿದ್ಯೆಯ ಮಹತ್ವವನ್ನರಿತು ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಮಾತಾಪಿತರಿಗೆ ನೀಡುವ ಗೌರವ ವಿದ್ಯೆ ಕಲಿಸುವ ಗುರುವಿಗೂ ಸಲ್ಲಬೇಕು, ಆಗಲೇ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಆಗಲು ಸಾಧ್ಯ. ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಸನ್ಮಾನಿಸುವುದು ಅತ್ಯಂತ ಉತ್ತಮವಾದ ಕೆಲಸ.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ವತ್ಸಲಾರಾಜ್ಞಿ ಮಾತನಾಡಿ “ಯುವಜನತೆಗೆ ಧನಸಂಪಾದನೆಯ ಜತೆಗೆ ಸಮಯದ ಸದುಪಯೋಗದ ಅರಿವು ಮುಖ್ಯ. ಮನೋಬಲದಿಂದ ಎಲ್ಲವೂ ಸಾಧ್ಯ. ವಿದ್ಯಾರ್ಥಿಗಳ ಯೋಚನೆ ಕೇವಲ ವಿದ್ಯಾರ್ಜನೆಗೆ ಸೀಮಿತವಾಗದೆ, ಇತರ ಕಲೆಗಳನ್ನು ಕರಗತಗೊಳಿಸುವತ್ತ ಹರಿಯಬೇಕು. ಗುರಿಯ ಸ್ಪಷ್ಟತೆ ಇರಲಿ, ಸಾಧಿಸುವ ಛಲವಿರಲಿ.” ಎಂಬ ಸಂದೇಶವನ್ನಿತ್ತರು.
ಸಭಾ ಕಾರ್ಯಕ್ರಮದಲ್ಲಿ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಪ್ರಥಮ ಪಿ. ಯು. ಸಿ. ಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಅತಿಥಿಗಳಾದ ಅರವಿಂದ ಬೋಳಾರ್ ಇವರಿಗೆ ಪ್ರಥಮ ಪಿ. ಯು. ಸಿ. ವಿದ್ಯಾರ್ಥಿನಿ ರಮ್ಯಾ ಬರೆದ ಪೆನ್ಸಿಲ್ ಚಿತ್ರವನ್ನು ನೀಡಿ ಸನ್ಮಾನಿಸಲಾಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಸಚಿನ್ ಶೆಣೈ, ಸದಸ್ಯರಾದ ಡಾ. ಕೆ. ಎನ್. ಸುಬ್ರಹ್ಮಣ್ಯ, ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ, ಉಪಪ್ರಾಂಶುಪಾಲರಾದ ದೇವಿಚರಣ್ ರೈ, ಉಪನ್ಯಾಸಕ, ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. ಸಭಾಕಾರ್ಯಕ್ರಮದ ಬಳಿಕ ಪ್ರಥಮ ಪಿ. ಯು. ಸಿ.ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಭಾಗ್ಯಶ್ರೀ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಉಪನ್ಯಾಸಕಿ ದಯಾಮಣಿ ನಿರೂಪಿಸಿ, ನಳಿನಿ ಕುಮಾರಿ ವಂದಿಸಿದರು.