ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೊಂಬತ್ತನೇ ಉಪನ್ಯಾಸ ಕಾರ್ಯಕ್ರಮ ಉಡುಪಿಯ ಕಟಪಾಡಿಯ, ತ್ರಿಶಾ ವಿದ್ಯಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ದಿನಾಂಕ 12 ಅಕ್ಟೋಬರ್ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ “ಆತ್ಮವಿಶ್ವಾಸ ಮತ್ತು ಧೈರ್ಯದ ಹಾದಿಯಲ್ಲಿ ಜಾಗೃತರಾಗಿ ಮತ್ತು ಚೈತನ್ಯಭರಿತರಾಗಿ” ಎಂಬ ವಿಷಯದ ಕುರಿತು ಮಾತನಾಡಿದ ಭಾರತೀಯ ಸೇನೆಯ ನಿವೃತ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ “ಜೀವನದಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ಎರಡು ಮಹತ್ವದ ಶಕ್ತಿಗಳು – ಆತ್ಮವಿಶ್ವಾಸ ಮತ್ತು ಧೈರ್ಯ. ಆತ್ಮವಿಶ್ವಾಸವಿಲ್ಲದೆ ಯಾರೂ ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಿಲ್ಲ. ಧೈರ್ಯವಿಲ್ಲದೆ ಯಾವುದೇ ಗುರಿ ಸಾಧಿಸಲಾಗದು. ಸ್ವಾಮಿ ವಿವೇಕಾನಂದರು ಹೇಳಿದಂತೆ “Education is the manifestation of perfection already within you” — ಅಂದರೆ ಪರಿಪೂರ್ಣತೆ ನಮ್ಮೊಳಗೇ ಇದೆ, ಅದನ್ನು ಹೊರತರುವುದು ಶಿಕ್ಷಣದ ಉದ್ದೇಶ. ಈ ನಂಬಿಕೆಯೇ ಆತ್ಮವಿಶ್ವಾಸದ ಮೂಲ. ಯುವಕರು ತಮ್ಮೊಳಗಿನ ಶಕ್ತಿಯನ್ನು ಅರಿತು, ಅಜ್ಞಾನ, ಭಯ ಮತ್ತು ನಕಾರಾತ್ಮಕ ಚಿಂತನೆಗಳ ವಿರುದ್ಧ ಹೋರಾಡಬೇಕು -ಇದೇ “ಶತ್ರುಬುದ್ಧಿ ವಿನಾಶಾಯ”. ಜೀವನದ ಸವಾಲುಗಳು ಅಡ್ಡಿ ಅಲ್ಲ; ಅವು ನಮ್ಮ ಧೈರ್ಯವನ್ನು ಪರೀಕ್ಷಿಸುವ ಅವಕಾಶಗಳು. ಧೈರ್ಯಶಾಲಿಯಾಗಿರುವವರು ಎಂದಿಗೂ ಸೋಲುವುದಿಲ್ಲ, ಏಕೆಂದರೆ ಅವರು ತಮ್ಮ ಮನಸ್ಸನ್ನು ಗೆದ್ದಿರುತ್ತಾರೆ. ವಿವೇಕಾನಂದರು ಹೇಳಿದಂತೆ – “ಎದ್ದೇಳಿ! ಜಾಗೃತರಾಗಿ! ಗುರಿ ಸಾಧನೆಯವರೆಗೆ ನಿಲ್ಲಬೇಡಿ.” ಈ ಮಾತು ಪ್ರತಿಯೊಬ್ಬ ಯುವಕನ ಜೀವನದ ದೀಪವಾಗಬೇಕು. ಜೀವನದ ನಿಜವಾದ ಅರ್ಥ ‘ಸ್ವಂತಕ್ಕಷ್ಟೇ ಬದುಕುವುದು’ ಅಲ್ಲ; “They alone live who live for others” ಎಂಬ ತತ್ವದ ಪ್ರಕಾರ, ಇತರರ ಹಿತಕ್ಕಾಗಿ ಬದುಕುವವರೇ ನಿಜವಾಗಿ ಜೀವಂತರು. ಆತ್ಮವಿಶ್ವಾಸ ಮತ್ತು ಧೈರ್ಯದ ಹಾದಿಯಲ್ಲಿ ಸಾಗುವ ಯುವಕರು ತಮ್ಮೊಳಗಿನ ಶಕ್ತಿಯನ್ನು ಅರಿತು, ಸಮಾಜದ ಬೆಳಕಾಗುತ್ತಾರೆ. ಇಂತಹ ಯುವ ಚೈತನ್ಯವೇ ನಾಡಿನ ಭವಿಷ್ಯವನ್ನು ನಿರ್ಮಿಸುತ್ತದೆ” ಎಂದುರು.
ಈ ಸಂದರ್ಭದಲ್ಲಿ, ತ್ರಿಶಾ ವಿದ್ಯಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಸಿ. ಎ. ಗೋಪಾಲಕೃಷ್ಣ ಭಟ್, ತ್ರಿಶಾ ವಿದ್ಯಾ ವಾಣಿಜ್ಯ ಮತ್ತು ನಿರ್ವಹಣಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿಘ್ನೇಶ್ ಹಾಗೂ ಉಪನ್ಯಾಸಕರು ಮತ್ತು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ವಿದ್ಯಾರ್ಥಿನಿಯಾದ ಗ್ರೀಷ್ಮಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ತ್ರಿಶಾ ವಿದ್ಯಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಧ್ಯಾಪಕರಾದ ಪ್ರೋ. ರಾಮದಾಸ್ ನಾಯ್ಕ್ ವಂದಿಸಿದರು.