ಮುಂಬೈ : ಮುಂಬೈ ವಿವಿ ಕನ್ನಡ ವಿಭಾಗ, ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಮತ್ತು ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಮುಂಬೈ ಇವರ ಸಂಯುಕ್ತ ಆಯೋಜನೆಯಲ್ಲಿ ಮುಂಬಯಿಯ ಸಾಂತಾಕ್ರೂಜ್ ಪೂರ್ವದ ಕಲಿನಾ ಕ್ಯಾಂಪಸ್ಸಿನಲ್ಲಿರುವ ಮುಂಬಯಿ ವಿಶ್ವವಿದ್ಯಾಲಯದ ಜೆ.ಪಿ. ನಾಯಕ್ ಭವನದಲ್ಲಿ ‘ವ್ಯಾಸರಾಯ ಬಲ್ಲಾಳ ಶತಮಾನೋತ್ಸವ ಸಂಭ್ರಮ’ ಕಾರ್ಯಕ್ರಮವು ದಿನಾಂಕ 01-12-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ವ್ಯಾಸರಾಯ ಬಲ್ಲಾಳ ಚೊಚ್ಚಲ ‘ಕಥಾ ಪ್ರಶಸ್ತಿ’ ಸ್ವೀಕರಿಸಿದ ಹಿರಿಯ ಸಾಹಿತಿ ಪ್ರೊ. ಕೃಷ್ಣಮೂರ್ತಿ ಹನೂರ ಅವರು ಅಂದು ‘ಕತೆಗಾರರಾಗಿ ವ್ಯಾಸರಾಯ ಬಲ್ಲಾಳ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. “ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ ಅವರಂತಹ ದೊಡ್ಡ ದೊಡ್ಡ ಲೇಖಕರೆಲ್ಲ ತಮ್ಮ ಬರಹಗಳಲ್ಲಿ ಬದುಕಿನ ಪ್ರಯಾಣದ ಕುರಿತಾಗಿ ನಿರಂತರವಾಗಿ ಬರೆಯುತ್ತಾರೆ. ಬಲ್ಲಾಳರು ತಮ್ಮ ಕೃತಿಗಳಲ್ಲಿ ತಮ್ಮ ತೊಳಲಾಟಗಳನ್ನು, ಪಯಣವನ್ನು, ಅನುಭವಗಳನ್ನು ಬರೆಯುತ್ತಾ ಅದರ ಮೂಲಕ ಓದುಗರನ್ನು ಜಾಗೃತಗೊಳಿಸುವ ಮತ್ತು ಬದುಕಿನ ಪಥದಲ್ಲಿ ಒಳ್ಳೆಯದನ್ನು ಗುರುತಿಸುವ ಪ್ರಯತ್ನವನ್ನು ಮಾಡುತ್ತಾರೆ. ಕ್ಷಮಿಸುವುದರಲ್ಲಿಯೇ ಘನತೆ, ದೊಡ್ಡಸ್ತಿಕೆ ಇದೆಯೆಂಬ ಭಾವ ಅವರ ಎಲ್ಲಾ ಕತೆಗಳಲ್ಲಿ ಓತಪ್ರೋತವಾಗಿ ಹರಿದಿದೆ. ಅವರು ಹೇಳುವ ಕತೆಗಳು ಬರಿಯ ಘಟನೆಗಳಾಗದೆ ರೂಪಕಗಳಾಗಿವೆ. ಕರ್ನಾಟಕದಲ್ಲಿ ಕನ್ನಡ ಭಾಷೆ ಸೊರಗುತ್ತಿರುವ ಸಂದರ್ಭದಲ್ಲಿ ಮುಂಬೈ ವಿವಿ ಕನ್ನಡ ವಿಭಾಗದಿಂದ ಇಷ್ಟೊಂದು ಕನ್ನಡ ಕೈಂಕರ್ಯಗಳು, ಪ್ರಕಟಣೆಗಳು ಆಗುತ್ತಿರುವುದು ತನಗೆ ಕುತೂಹಲ ಮತ್ತು ಅಭಿಮಾನ ಮೂಡಿಸಿದೆ. ಬಲ್ಲಾಳರ ಶತಮಾನೋತ್ಸವ ಸಮಾರಂಭವನ್ನು ಆಯೋಜಿಸಿರುವ ಕನ್ನಡ ವಿಭಾಗ ಮತ್ತು ಬಲ್ಲಾಳರ ಕುಟುಂಬ ವರ್ಗವನ್ನು ಶ್ಲಾಘಿಸಿದ ಡಾ.ಹನೂರ ಅವರು ಹಿರಿಯರನ್ನು ನೆನಪಿಸಿ ಅಂತಹವರ ಸಂಗದಲ್ಲಿ ಕಲಿತಿರುವುದನ್ನು ಮುಂದಿನ ಪರಂಪರೆಗೆ ಹೇಳುವುದು ಮುಖ್ಯ” ಎಂದು ಹೇಳಿದರು.
‘ವ್ಯಾಸರಾಯ ಬಲ್ಲಾಳ ಕಾದಂಬರಿ ಪ್ರಶಸ್ತಿ’ಯನ್ನು ಸ್ವೀಕರಿಸಿ ಮಾತನಾಡಿದ ಕನ್ನಡದ ಖ್ಯಾತ ವಿಮರ್ಶಕ, ಕಾದಂಬರಿಕಾರ ಡಾ.ಬಿ. ಜನಾರ್ದನ ಭಟ್ ಅವರು ‘ಕಾದಂಬರಿಕಾರರಾಗಿ ಬಲ್ಲಾಳರು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. “ವ್ಯಾಸರಾಯ ಬಲ್ಲಾಳ ಅವರು ತಮ್ಮ ಕಾದಂಬರಿಗಳಲ್ಲಿ ಎರಡು ತಲೆಮಾರುಗಳ ಹಿಂದಿನ ಮುಂಬಯಿಯ ದರ್ಶನ ಮಾಡಿಸಿದ್ದರು. ಕನ್ನಡ ಸಾಹಿತ್ಯಕ್ಕೆ ಜಾಗತಿಕವಾಗಿಯೂ ಮುಖ್ಯವಾದ ಕೊಡುಗೆ ನೀಡಿರುವ ಅವರು ನವ್ಯರಿಗಿಂತ ಮುಂಚೆಯೇ ನವ್ಯ ಕಾದಂಬರಿಗಳನ್ನು ಬರೆದವರು. ಅವರು ಶ್ರದ್ಧೆಯಿಂದ, ತಪಸ್ಸಿನ ಹಾಗೆ ಸಮಾಜವನ್ನು ಅಭ್ಯಾಸ ಮಾಡಿ ಪ್ರತಿಯೊಂದು ಕಾದಂಬರಿಯನ್ನೂ ಬರೆದವರು. ಕನ್ನಡ ಕಾವ್ಯಕ್ಕೆ ಗೋಪಾಲಕೃಷ್ಣ ಅಡಿಗರು ಹೇಗೋ ಹಾಗೆ ಕನ್ನಡ ಕಾದಂಬರಿಗಳ ಮಾರ್ಗದರ್ಶಕ ಎಂದು ಅವರನ್ನು ಕರೆಯಬಹುದು. ಅವರ ಎಂಟೂ ಕಾದಂಬರಿಗಳು ಕನ್ನಡದ ಪಥದರ್ಶಕ ಕಾದಂಬರಿಗಳು” ಎಂದು ಅವರು ಕೊಂಡಾಡಿದರು. ಡಾ.ಭಟ್ ಅವರು ವ್ಯಾಸರಾಯ ಬಲ್ಲಾಳ ಅವರ ಎಲ್ಲಾ ಕಾದಂಬರಿಗಳನ್ನು ವಿಶ್ಲೇಷಿಸಿ, ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಂಬೈ ವಿವಿ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರೂ ಆದ ಡಾ. ಜಿ.ಎನ್. ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, “ಸರ್ವಕುತೂಹಲಿಯಾಗಿ ಅನೇಕ ನೆಲೆಗಳಲ್ಲಿ ಕನ್ನಡ ಸಾಹಿತ್ಯವನ್ನು ಸಂಪನ್ನಗೊಳಿಸಿದವರು ವ್ಯಾಸರಾಯ ಬಲ್ಲಾಳರು. ಮುಂಬೈ ಬಲ್ಲಾಳರ ಕರ್ಮಭೂಮಿ. ಈ ನಗರದ ಸಂಘರ್ಷದಲ್ಲಿ ಜೀವಂತಿಕೆಯ ಬೆಳಕನ್ನು ಕಂಡವರು ಅವರು. ಐದು ದಶಕಗಳ ಕಾಲ ಮುಂಬೈಯಲ್ಲಿ ನೆಲೆಸಿ ಸಾಕ್ಷಿಪ್ರಜ್ಞೆಯಾಗಿ ಕನ್ನಡವನ್ನು ಬೆಳೆಸಿದವರು. ಜನಪ್ರಿಯ ಕಾದಂಬರಿಕಾರರಾಗಿ, ಕತೆಗಾರರಾಗಿ, ಸತ್ವಶಾಲಿ ಅಂಕಣಕಾರರಾಗಿ, ವಿಚಾರಸಾಹಿತ್ಯದ ನಿರ್ಮಾಪಕರಾಗಿ, ಪತ್ರಿಕೋದ್ಯಮಿಯಾಗಿ ಆಧುನಿಕ ಕನ್ನಡ ಸಾಹಿತ್ಯಕ್ಕೆ ನೂತನ ಆಯಾಮ ನೀಡಿದ ವ್ಯಾಸರಾಯ ಬಲ್ಲಾಳ ಅವರು ವಿಭಾಗದ ಸ್ಥಾಪನೆಯಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದವರು” ಎಂದು ಬಲ್ಲಾಳರನ್ನು ನೆನಪಿಸಿಕೊಂಡರು.
ಜನ್ಮಶತಮಾನ ಸಂಭ್ರಮದ ಕಾರ್ಯಕ್ರಮಕ್ಕೆ ಆಗಮಿಸಿ ‘ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ’ ಕೊಡಮಾಡುವ ‘ವ್ಯಾಸರಾಯ ಬಲ್ಲಾಳ ಕಥಾ ಪ್ರಶಸ್ತಿ’ ಪಡೆದ ನಾಮಾಂಕಿತ ಸಾಹಿತಿ, ಲೇಖಕರು, ವಿಮರ್ಶಕರು, ಚಿಂತಕರು ಆದ ಪ್ರೊ. ಕೃಷ್ಣಮೂರ್ತಿ ಹನೂರ ಮತ್ತು ‘ವ್ಯಾಸರಾಯ ಬಲ್ಲಾಳ ಕಾದಂಬರಿ ಪ್ರಶಸ್ತಿ’ ಪಡೆದ ಖ್ಯಾತ ವಿಮರ್ಶಕ, ಕಾದಂಬರಿಕಾರ, ಆಂಗ್ಲಭಾಷಾ ಪ್ರಾಧ್ಯಾಪಕರು ಆದ ಡಾ. ಬಿ. ಜನಾರ್ದನ ಭಟ್ ಅವರನ್ನು ಅಭಿನಂದಿಸಿದರು. ‘ವ್ಯಾಸರಾಯ ಬಲ್ಲಾಳ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ’ವನ್ನು ಮುಂಬೈ ವಿವಿ ಕನ್ನಡ ವಿಭಾಗ ಎಂ.ಎ. ದ್ವಿತೀಯ ವರ್ಷದ ವಿದ್ಯಾರ್ಥಿ ವಿದ್ಯಾ ರಾಮಕೃಷ್ಣ ಅವರಿಗೆ ನೀಡಲಾಯಿತು. ಸನ್ಮಾನಿತರಿಗೆ ಶಾಲು ಹೊದಿಸಿ, ಫಲಕ, ನಗದು ಮತ್ತು ಕೃತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಡಾ. ಜಿ.ಎನ್. ಉಪಾಧ್ಯ ವಿರಚಿತ ‘ವಾತ್ಸಲ್ಯಪಥದ ರೂವಾರಿ- ವ್ಯಾಸರಾಯ ಬಲ್ಲಾಳ’ ಕೃತಿಯನ್ನು ಅರವಿಂದ ಬಲ್ಲಾಳ ಮತ್ತು ಕುಸುಮ ಬಲ್ಲಾಳ ಲೋಕಾರ್ಪಣೆಗೈದರು. ಬಲ್ಲಾಳರ ಪುತ್ರಿ ಪೂರ್ಣಿಮಾ ಹೆಬ್ಬಾರ್ ಅನುವಾದಿಸಿರುವ ಬಲ್ಲಾಳರ ‘ಅನುರಕ್ತೆ’ ಕಾದಂಬರಿಯ ಆಂಗ್ಲಾನುವಾದವನ್ನು ಅಂದು ಬಿಡುಗಡೆಗೊಳಿಸಲಾಯಿತು. ವಿಭಾಗದ ಸಂಶೋಧನಾ ವಿದ್ಯಾರ್ಥಿ ಕಲಾ ಭಾಗ್ವತ್ ಅವರು ‘ವಾತ್ಸಲ್ಯಪಥದ ರೂವಾರಿ- ವ್ಯಾಸರಾಯ ಬಲ್ಲಾಳ’ ಕೃತಿಯನ್ನು ಪರಿಚಯಿಸಿದರು. ‘ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ’ವು ಏರ್ಪಡಿಸಿದ್ದ ‘ವ್ಯಾಸರಾಯ ಬಲ್ಲಾಳ ಕಥಾ ಸ್ಪರ್ಧೆ’ಯ ವಿಜೇತರ ಹೆಸರುಗಳನ್ನು ತೀರ್ಪುಗಾರರಾದ ಮಿತ್ರಾ ವೆಂಕಟ್ರಾಜ್ ಅವರು ಘೋಷಿಸಿದರು.
‘ಬಲ್ಲಾಳರ ಕನ್ನಡ ಕೈಂಕರ್ಯ’ ವಿಷಯದ ಕುರಿತು ಕರ್ನಾಟಕ ಸಂಘ ಮುಂಬೈ ಇದರ ಅಧ್ಯಕ್ಷರಾದ ಭರತ್ ಕುಮಾರ್ ಪೊಲಿಪು, ‘ಪತ್ರಕರ್ತರಾಗಿ ಬಲ್ಲಾಳರು’ ಎಂಬ ವಿಷಯದ ಕುರಿತು ಮುಂಬೈ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರು ಉಪನ್ಯಾಸವನ್ನು ನೀಡಿದರು. ‘ನಾನು ಕಂಡಂತೆ ಬಲ್ಲಾಳ’ ಸಂವಾದ ಕಾರ್ಯಕ್ರಮದಲ್ಲಿ ಮುಂಬೈಯ ಹಿರಿಯ ಸಾಹಿತಿ, ಕಾದಂಬರಿಕಾರರಾದ ಮಿತ್ರಾ ವೆಂಕಟ್ರಾಜ್, ಡಾ. ಸುನೀತಾ ಶೆಟ್ಟಿ, ವ್ಯಾಸರಾಯ ಬಲ್ಲಾಳರ ಮಕ್ಕಳಾದ ಅರವಿಂದ ಬಲ್ಲಾಳ, ಪೂರ್ಣಿಮಾ ಹೆಬ್ಬಾರ್, ಅಂಜಲಿ ಅರುಣ್ ಮತ್ತಿತರರು ಪಾಲ್ಗೊಂಡರು. ಬಲ್ಲಾಳರ ಸಾಹಿತ್ಯ ಪ್ರಸ್ತುತಿಯನ್ನು ಅಹಲ್ಯಾ ಬಲ್ಲಾಳ್, ಮೋಹನ್ ಮಾರ್ನಾಡ್, ಅಂಜಲಿ ಅರುಣ್, ಕುಸುಮ ಬಲ್ಲಾಳ್, ನಳಿನಾ ಪ್ರಸಾದ್, ಸೂರಿ ಮಾರ್ನಾಡ್, ರಿತ್ವಿಕ್ ಬಲ್ಲಾಳ್, ಸುಶೀಲಾ ದೇವಾಡಿಗ ಮೊದಲಾದವರು ನೆರವೇರಿಸಿಕೊಟ್ಟರು.
ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಸರ್ವರಿಗೂ ಕೃತಿಯೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಿರಿಯ ಸಾಹಿತಿ ಡಾ. ಜೀವಿ ಕುಲಕರ್ಣಿ, ಯಜ್ಞನಾರಾಯಣ ಸುವರ್ಣ, ಡಾ. ಉಮಾ ರಾಮರಾವ್, ನಗರದ ಇನ್ನಿತರ ಅನೇಕ ಗಣ್ಯರು, ಬಲ್ಲಾಳರ ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಈ ಕಾರ್ಯಕ್ರಮವು ವಿಭಾಗದ ಸಹಪ್ರಾಧ್ಯಪಕರಾದ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರ ಸಂಯೋಜನೆಯಲ್ಲಿ ನಡೆಯಿತು. ಕಾರ್ಯಕ್ರಮದ ನಿರೂಪಣೆಯಲ್ಲಿ ಕಲಾ ಭಾಗ್ವತ್ ಅವರು ಸಹಕರಿಸಿದರು.