ಮುಂಬಯಿ : ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಮುಂಬಯಿ ಇವರ ಸಂಯುಕ್ತ ಆಶ್ರಯದಲ್ಲಿ ವ್ಯಾಸರಾಯ ಬಲ್ಲಾಳ ಶತಮಾನೋತ್ಸವ ಸಂಭ್ರಮ ಮತ್ತು ವ್ಯಾಸರಾಯ ಬಲ್ಲಾಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 01-12-2023 ಶುಕ್ರವಾರದಂದು ಮುಂಬಯಿಯ ಸಾಂತಾಕ್ರೂಜ್ ಪೂರ್ವದ ಕಲಿನಾ ಕ್ಯಾಂಪಸ್ಸಿನಲ್ಲಿರುವ ಮುಂಬಯಿ ವಿಶ್ವವಿದ್ಯಾಲಯದ ಜೆ.ಪಿ. ನಾಯಕ್ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮೊದಲ ಉಪನ್ಯಾಸ ಮೈಸೂರಿನ ಹಿರಿಯ ಸಾಹಿತಿ ಡಾ.ಕೃಷ್ಣಮೂರ್ತಿ ಹನೂರು ಇವರಿಂದ ‘ಕತೆಗಾರರಾಗಿ ವ್ಯಾಸರಾಯ ಬಲ್ಲಾಳ’ ಮತ್ತು ಖ್ಯಾತ ವಿಮರ್ಶಕರಾದ ಡಾ.ಬಿ.ಜನಾರ್ದನ ಭಟ್ ಎರಡನೇ ಉಪನ್ಯಾಸ ‘ಕಾದಂಬರಿಕಾರರಾಗಿ ಬಲ್ಲಾಳರು’ ಎಂಬ ವಿಷಯದಲ್ಲಿ ನಡೆಯಲಿದೆ. ಬಳಿಕ ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ ‘ನಾನು ಕಂಡಂತೆ ಬಲ್ಲಾಳರು’ ಎಂಬ ವಿಷಯದಲ್ಲಿ ವ್ಯಾಸರಾಯ ಬಲ್ಲಾಳರ ಮಕ್ಕಳಾದ ಪೂರ್ಣಿಮಾ ಹೆಬ್ಬಾರ್ ಮತ್ತು ಅಂಜಲಿ ಅರುಣ್, ಇವರ ಜೊತೆಗೆ ಮುಂಬಯಿಯ ಖ್ಯಾತ ಕಾದಂಬರಿಕಾರರಾದ ಮಿತ್ರಾ ವೆಂಕಟ್ರಾಜ್ ಭಾಗವಹಿಸಲಿದ್ದಾರೆ.
ಮೂರನೇ ಉಪನ್ಯಾಸ ಮುಂಬಯಿಯ ಕರ್ನಾಟಕ ಸಂಘದ ಅಧ್ಯಕ್ಷರಾದ ಡಾ. ಭರತ್ ಕುಮಾರ್ ಪೊಲಿಪು ಇವರು ‘ಬಲ್ಲಾಳರ ಕನ್ನಡ ಕೈಂಕರ್ಯ’ ಎಂಬ ವಿಷಯದಲ್ಲಿ ನಡೆಸಿಕೊಡಲಿದ್ದು, ಮುಂಬಯಿಯ ಸಾಹಿತಿ ಮತ್ತು ಪತ್ರಕರ್ತರಾದ ಶ್ರೀನಿವಾಸ ಜೋಕಟ್ಟೆ ಇವರು ‘ಪತ್ರಕರ್ತರಾಗಿ ಬಲ್ಲಾಳರು’ ಎಂಬ ವಿಷಯದಲ್ಲಿ ದಿನದ ನಾಲ್ಕನೇ ಉಪನ್ಯಾಸ ನೀಡಲಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯ ಇದರ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ನಳಿನಾ ಪ್ರಸಾದ್ ಹಾಗೂ ಅಹಲ್ಯಾ ಬಲ್ಲಾಳ ಮತ್ತು ಬಳಗದವರಿಂದ ಬಲ್ಲಾಳರ ಸಾಹಿತ್ಯದ ರಂಗ ಪ್ರಸ್ತುತಿ ನಡೆಯಲಿದೆ.
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಇದರ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಇವರ ಸಂಯೋಜನೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಇದರ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶತಮಾನೋತ್ಸವದ ಅಂಗವಾಗಿ ನೀಡಲಾಗುವ ಚೊಚ್ಚಲ ‘ವ್ಯಾಸರಾಯ ಬಲ್ಲಾಳ ಪ್ರಶಸ್ತಿ’ಯನ್ನು ಮೈಸೂರಿನ ಹಿರಿಯ ಸಾಹಿತಿ ಡಾ.ಕೃಷ್ಣಮೂರ್ತಿ ಹನೂರು ಇವರಿಗೆ ಕಥಾ ಪ್ರಶಸ್ತಿ ಮತ್ತು ಖ್ಯಾತ ವಿಮರ್ಶಕರು ಮತ್ತು ಕಾದಂಬರಿಕಾರರಾದ ಡಾ.ಬಿ.ಜನಾರ್ದನ ಭಟ್ ಇವರಿಗೆ ಕಾದಂಬರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಡಾ.ಜಿ.ಎನ್.ಉಪಾಧ್ಯ ವಿರಚಿತ ‘ವಾತ್ಸಲ್ಯಪಥದ ರೂವಾರಿ-ವ್ಯಾಸರಾಯ ಬಲ್ಲಾಳ’ ಕೃತಿ ಲೋಕಾರ್ಪಣೆಗೊಳ್ಳಲಿದೆ. ಕುಸುಮಾ ಹಾಗೂ ಅರವಿಂದ ಬಲ್ಲಾಳ ಕೃತಿ ಲೋಕಾರ್ಪಣೆಗೊಳಿಸಲಿರುವರು. ಮುಂಬಯಿಯ ಲೇಖಕರಾದ ಕಲಾ ಭಾಗ್ವತ್ ಕೃತಿಯ ಕುರಿತು ಮಾತನಾಡಲಿದ್ದು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಂಬಯಿಯ ಕಲಾವಿದರಾದ ಯಜ್ಞನಾರಾಯಣ ಸುವರ್ಣ ಭಾಗವಹಿಸಲಿರುವರು.