ಹಿರಿಯ ಪತ್ರಕರ್ತ, ವಿವಿಧ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಕೈಕೊಂಡ ಶ್ರೀ ಮಲಾರ್ ಜಯರಾಮ ರೈ ಅವರು ಪಾರ್ವತಿ ಜಿ. ಐತಾಳ್ ಕೃತಿ ಬಿಡುಗಡೆ ಮಾಡಿದ ರೀತಿಯನ್ನೂ, ಹಾಗೆಯೇ ಡಾ. ರಮಾನಂದ ಬನಾರಿ ಅಶರೀರವಾಣಿಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ರೀತಿಯನ್ನೂ, ಕಿರಿಯ ಕಥೆಗಾರ್ತಿಯರು ತಮ್ಮ ಸ್ವರಚಿತ ಕಥೆಗಳನ್ನು ಪ್ರಸ್ತುತ ಪಡಿಸುವುದಕ್ಕೆ ಸಿಕ್ಕ ಅವಕಾಶದ ಸದುಪಯೋಗ ಮಾಡಿಕೊಂಡದ್ದನ್ನೂ ಮೆಚ್ಚಿಕೊಂಡರು. ಅವರು ಕಂಡುಕೊಂಡಂತೆ ಮಂಜೇಶ್ವರದ ಬಾಯಿಕಟ್ಟೆಯಲ್ಲಿ ನಡೆಸಲ್ಪಟ್ಟ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಏರ್ಪಡಿಸಿದ ಈ ಸಮಾರಂಭ ವಿವಿಧ ಬಗೆಯಲ್ಲಿ ಸ್ಮರಣೀಯವೆನ್ನಿಸುವಂಥಾದ್ದು.
ಅನಿರೀಕ್ಷಿತ ದುರದೃಷ್ಟದ ಕಾರಣದಿಂದ ದ. ಕ. ದಲ್ಲಿ ಕರ್ಫ್ಯೂ ಜ್ಯಾರಿಯಾಗಿದ್ದು, ಪುಸ್ತಕ ಬಿಡುಗಡೆ ಮಾಡಬೇಕಾಗಿದ್ದ ಪಾರ್ವತಿ ಜಿ. ಐತಾಳ್ ಹೊರಟವರು ಹಿಂದಿರುಗಿದಾಗ ಅವರೊಂದಿಗೆ ಜಾಲತಾಣದ ಮೂಲಕ ಕಾರ್ಯನಿರ್ವಹಣೆ ಮಾಡುವಂತೆ ಕೇಳಿಕೊಳ್ಳಲಾಗಿತ್ತು. ಉತ್ತಮ ಸಂದೇಶಗಳ ಮೂಲಕ ಸಭಾಸದರಿಗೆ ಅವರ ಭಾಷಣ ಸಿಕ್ಕಿತು.
“ಇನ್ನೇನು ಕುಂದಾಪುರದಿಂದ ಬಸ್ಸು ಹತ್ತುವುದರಲ್ಲಿದ್ದವಳು ಹಿಂದಿರುಗಿದೆ. ನಾನು ಭಂಡಾರ್ಕಾರ್ಸ್ ನಲ್ಲಿರುತ್ತ, ಇವರ ಜೊತೆಗೆ ಹದಿನೈದು ವರ್ಷ ಒಡನಾಡಿದ ನೆನಪಿದೆ. ಆಕಾಶವಾಣಿ ನಾಟಕಗಳಲ್ಲಿ ನಮ್ಮ ಧ್ವನಿ ದಾನಮಾಡಿದ್ದೆವು. ಬಿಡಿ ಬಿಡಿಯಾಗಿ ಅವರ ಕಥೆಗಳನ್ನು ಓದಿದವಳಿದ್ದು ಹೀಗೆ ಹದಿನೈದು ಕತೆಗಳು ಪುಸ್ತಕವಾಗಿ ಬಂದಿರುವುದು ಖುಶಿ ತಂದಿದೆ. ಕಥೆಗಳಲ್ಲಿ ಲೇಖಕಿ ಅಭಿಪ್ರಾಯಿಸುವ ಸ್ವಾತಂತ್ರ್ಯವನ್ನು ಓದುಗರಿಗೇ ಬಿಟ್ಟುಕೊಡುವ ತಂತ್ರಗಾರಿಕೆ ಸೊಗಸಾಗಿದೆ. ವಿಧವಾ ವಿವಾಹವನ್ನು ಕಥಾನಾಯಕ ಬೆಂಬಲಿಸುತ್ತಾನೆ. ಹಿರಿಯರ ಒಪ್ಪಿಗೆ ಇಲ್ಲದೆ ಅವಿವಾಹಿತನಾಗಿ ಉಳಿಯುತ್ತಾನೆ. ಹೆಣ್ಣು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಚಿತ್ರಕ ಶೈಲಿ, ನಿರ್ಲಿಪ್ತವಾಗಿ, ಅಷ್ಟೇ ಜತನದಿಂದ ಎಚ್ಚರಿಕೆಯ ಅವಲೋಕನ ಮಾಡುವ ಜಾಣ್ಮೆ ಕತೆಗಾರ್ತಿಯ ಯಶಸ್ಸಿಗೆ ಕಾರಣವಾಗಿದೆ” ಎಂದರು.
ತಮ್ಮ ಮನೆಯಲ್ಲಿದ್ದುಕೊಂಡೇ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಡಾ. ರಮಾನಂದ ಬನಾರಿಯವರು ‘ವ್ಯೂಹ’ ಎಂಬ ಪದದ ಒಳಾರ್ಥವನ್ನು ವಿಶ್ಲೇಷಿಸುತ್ತ, ” ಒಂದು ರಣತಂತ್ರ ಈ ಕಾಲಘಟ್ಟದಲ್ಲಿ ಅಗತ್ಯವಿದೆ. ನಮ್ಮದು ಹೋರಾಟದ ಸನ್ನಿವೇಶ. ಆತ್ಮ ರಕ್ಷಣೆಗೂ ಆಕ್ರಮಣಕ್ಕೂ ವ್ಯೂಹಗಳನ್ನು ರಚಿಸುವ ತಂತ್ರ ಪುರಾಣಗಳಲ್ಲಿದೆ. ಸುಧನ್ವನ ಪದ್ಮವ್ಯೂಹ, ಮತ್ತೆ ಚಕ್ರವ್ಯೂಹ, ವಜ್ರವ್ಯೂಹಗಳ ಕುರಿತು ಓದಿದ್ದೇವೆ. ದೇಶ ಸುತ್ತುವುದು, ಕೋಶ ಓದುವುದೇ ಕಾಯಕವಾಗಿ ಈ ಲೇಖಕಿ ತನ್ನ ಕಥೆಗಳ ಮೂಲಕ ಬದುಕುವ ಕೌಶಲಗಳನ್ನು ಮುಂದಿಟ್ಟಿದ್ದಾರೆಂದು ಭಾವಿಸುವೆ” ಎಂದರು.
ದೀಪಬೆಳಗಿಸಿ ಶುಭ ಹಾರೈಸಿದ ರಾಧಾಕೃಷ್ಣ ಉಳಿಯತ್ತಡ್ಕ ಅವರು, ಕಿರಿಯರಿಗೂ ವಿದ್ಯಾರ್ಥಿಗಳಿಗೂ ಸ್ವರಚಿತ ಕಥೆಗಳನ್ನು ಓದುವ ಅವಕಾಶ ಸಿಕ್ಕಿ ಅವರು ಸ್ವಂತ ಶೈಲಿಯನ್ನೂ, ಪ್ರಬುದ್ಧ ಬರೆಹಗಾರರೊಂದಿಗೆ ಒಡನಾಡುವ ಅವಕಾಶವನ್ನೂ ಪಡೆದು ಲಾಭ ಪಡೆದಿರುವುದನ್ನು ಉಲ್ಲೇಖಿಸಿದರು. ಮಕ್ಕಳ ಕಥೆಗಳ ಅವಲೋಕನವನ್ನೂ ಸೂಕ್ತವಾಗಿ ಮಾಡಿದರು.
ಪ್ರಾರ್ಥನೆ ಹಾಗೂ ಭಾವಗೀತಾಗಾಯನಗಳ ಮೂಲಕ ಬಬಿತಾ ಆಚಾರ್ಯ ಹಾಗೂ ಮಾಲತಿ ಜಗದೀಶ್ ರಂಜನೆ ನೀಡಿದರು.
ಆಶಾದಿಲೀಪ್ ಸುಳ್ಯಮೆ ಕೃತಿ ಪರಿಚಯವನ್ನು ಸೂಕ್ತವಾಗಿ ನಿರ್ವಹಿಸಿದರು. ಕತೆಗಳ ಸಾರವನ್ನು ಹೇಳದೆ ಅವುಗಳ ತಿರುಳು, ಸಂದೇಶಗಳ ಕುರಿತು ವಿಶಿಷ್ಟ ರೀತಿಯಲ್ಲಿ ವಿವರಿಸಿದರು. ಲೇಖಕಿ ವಿಜಯಲಕ್ಷ್ಮೀ ಶಾನುಭೋಗ್ ಮಾತನಾಡಿ “ತಾನು ಬರೆದ ವಿವಿಧ ಪ್ರಕಾರಗಳ ಕೃತಿಗಳಿಗಿಂತ ಭಿನ್ನವಾಗಿ ಕಥೆಗಳ ರಚನೆ ಹೇಗೆ ಖುಶಿ ಕೊಟ್ಟಿವೆ” ಎಂಬುದನ್ನು ತಿಳಿಸಿದರು.
ವಿಭಿನ್ನ ಶೈಲಿ, ಸನ್ನಿವೇಶ ನಿರ್ಮಾಣ ಹಾಗೂ ಪಾತ್ರ ಚಿತ್ರಣಗಳಲ್ಲಿ ವಿಶಿಷ್ಟವೆನಿಸಿದ ವಿದ್ಯಾರ್ಥಿಗಳ ರಚನೆಗಳು ರಂಜಿಸಿದುವು. ಕು. ನಿಶ್ಮಿತಾ, ಸ್ವಾತಿ, ಧನ್ಯಶ್ರೀ, ಯಶ್ಮಿತಾ, ಅರುಂಧತಿ, ಸಾನ್ನಿಧ್ಯ ಮತ್ತು ಇಶಾನಿ ಸ್ವರಚಿತ ಕಥೆಗಳನ್ನು ಮುಂದಿಟ್ಟರೆ ಹಿರಿಯರು ಅವುಗಳ ಕುರಿತು ಅಭಿಪ್ರಾಯಗಳನ್ನು ಹೇಳುತ್ತ ನಡೆಸಿದ ಸಂವಾದ ಹೊಸ ಅನುಭವಕ್ಕೆ ಸಾಕ್ಷಿಯಾಗಿತ್ತು. ಡಾ. ಕೆ. ಪಿ. ಹೊಳ್ಳ ಹಾಗೂ ಸುಮತಿಹೊಳ್ಳರು ಸಭೆಯಲ್ಲಿ ಉಪಸ್ಥಿತರಿದ್ದು ಕಿರಿಯರನ್ನು ಹರಸಿದರು.
ಶ್ರೀ ವಿಶಾಲಾಕ್ಷ ಪುತ್ರಕಳ, ಲಕ್ಷ್ಮೀ ವಿ. ಭಟ್ ಹಾಗೂ ಸುದರ್ಶನಪಾಣಿ ಬಲ್ಲಾಳರು ಶುಭಾಶಂಸನೆ ಮಾಡಿದ್ದಲ್ಲದೆ ಭಾಷೆ, ಕಥನ ಶೈಲಿಗಳು ಲೇಖಕರಿಗೆ ಎಷ್ಟು ಅಗತ್ಯ ಎಂಬುದನ್ನು ಅಲ್ಲಲ್ಲಿ ಸೋದಾಹರಣ ವಿವರಿಸಿದ್ದು ಸಂಗತವೆನಿಸಿತು. ಕು. ಶರಧಿ ಸಹಕರಿಸಿದರು. ಪಿ. ಎನ್ ಮೂಡಿತ್ತಾಯ ಸ್ವಾಗತಿಸಿದ್ದರು