ತೀರ್ಥಹಳ್ಳಿ : ಕಳೆದ ನವೆಂಬರ್ 2023ಕ್ಕೆ ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮರು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಕರ್ನಾಟಕ ಸಂಭ್ರಮ – 50 – ‘ಹೆಸರಾಯಿತು ಕನ್ನಡ, ಉಸಿರಾಗಲಿ ಕನ್ನಡ’ ಎಂಬ ಘೋಷಣೆಯೊಂದಿಗೆ ನಿರಂತರ ಒಂದು ವರ್ಷ ಕನ್ನಡದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ – ಕನ್ನಡಿಗ ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ರ ಆಯವ್ಯಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದರು.
ಈ ಹಿನ್ನಲೆಯಲ್ಲಿ ಅಭಿಯಾನದ ನಿಮಿತ್ತವಾಗಿ 1 ನವೆಂಬರ್ 2023ರಿಂದ ನವೆಂಬರ್ 2024ರವರೆಗೆ ರಾಜ್ಯಾದ್ಯಂತ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಇದರ ಅಂಗವಾಗಿ 2 ನವೆಂಬರ್ 2023ರಂದು ವಿಜಯನಗರ ಜಿಲ್ಲೆಯ ಹಂಪಿಯಿಂದ ಪ್ರಾರಂಭವಾದ ಕರ್ನಾಟಕ ಸಂಭ್ರಮ –50 ಜ್ಯೋತಿ ರಥ ಯಾತ್ರೆಗೆ ಮುಖ್ಯಮಂತ್ರಿ ಚಾಲನೆ ನೀಡಿದ್ದರು.
ಈ ಕರ್ನಾಟಕ- ಸಂಭ್ರಮ-50 ಜ್ಯೋತಿ ರಥಯಾತ್ರೆಯು 13 ಅಕ್ಟೋಬರ್ 2024ರಂದು ತೀರ್ಥಹಳ್ಳಿಗೆ ಹೊಸನಗರದಿಂದ ಆಗಮಿಸಿತು. ಇದನ್ನು ತಾಲೂಕು ಆಡಳಿತ, ಪಟ್ಟಣ ಪಂಚಾಯತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇತರ ಕನ್ನಡ ಪರ ಸಂಘ ಸಂಸ್ಥೆಗಳು, ನಾಗರಿಕರು ಆಗುಂಬೆ ಹಾಗೂ ಸಾಗರ ರಸ್ತೆ ಕೂಡುವ ವೃತ್ತದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾಜಿ ಗೃಹ ಸಚಿವರೂ ಹಾಲಿ ಶಾಸಕರಾಗಿರುವ ಆರಗ ಜ್ಞಾನೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ತಹಸಿಲ್ದಾರ್ ಜಕ್ಕಣ್ಣನವರ್, ಸರ್ಕಾರದ ಗ್ಯಾರಂಟಿ ಯೋಜನೆಯ ತಾಲೂಕು ಅನುಷ್ಟಾನ ಸಮಿತಿಯ ಅಧ್ಯಕ್ಷ ನಾಬಳ ಶಚ್ಚೀಂದ್ರ ಹೆಗ್ಡೆ, ಉಪ ತಹಸೀಲ್ದಾರ್ ಸತ್ಯಮೂರ್ತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಕ.ಸಾ.ಪ.ದ ಆರ್.ಎಂ. ಧರ್ಮಕುಮಾರ್, ಟಿ.ಜಿ. ಸೋಮಶೇಖರ್, ಪ್ರಸನ್ನ ತಿರಳೇಬೈಲು, ನಿರಂಜನ, ಪ.ಪಂ. ಸದಸ್ಯರಾದ ಸಂದೇಶ್ ಜವಳಿ, ರವೀಶ್ (ಬಾಬಿ) ಮುಂತಾದವರು ಉಪಸ್ಥಿತರಿದ್ದರು.