ಮೊದಲನೋಟದಲ್ಲಿ ಆಕೆಯನ್ನು ನೋಡಿದಾಗ ಅವರೊಬ್ಬ ಬಹು ದೊಡ್ಡ ಸಾಧಕಿ- ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ ದೊಡ್ದ ನೃತ್ಯಗುರು ಎಂದು ತಿಳಿಯುವುದೇ ಇಲ್ಲ. ಮಮತೆಯ ತಾಯಿಯಂಥ ಆರ್ದ್ರ ಮುಖಭಾವ. ಮುಗ್ಧ ನಗು. ಯಾವ ಹಮ್ಮು-ಬಿಮ್ಮುಗಳಿರದ ಅತ್ಯಂತ ಸರಳ ಸ್ವಭಾವದ, ಬಹುಮುಖ ವ್ಯಕ್ತಿತ್ವದ, ಆಳವಾದ ಅನುಭವ-ಪಾಂಡಿತ್ಯ ಹೊಂದಿದ ಇವರೇ ನೃತ್ಯಕ್ಷೇತ್ರದ ದಿಗ್ಗಜ ನಾಟ್ಯಗುರು ಶ್ರೀಮತಿ ರಾಧಾ ಶ್ರೀಧರ್. ಕಲಾಸೇವೆಗೆ, ದೇಶದ ಅತ್ಯುನ್ನತ ಪುರಸ್ಕಾರ- ಕೇಂದ್ರ ಸಂಗೀತ – ನಾಟಕ ಅಕಾಡೆಮಿಯ ಪ್ರಶಸ್ತಿ, ಶಾಂತಲಾ ಪ್ರಶಸ್ತಿ, ನಾದನಿಧಿ ಮುಂತಾದ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಕುಟದಲ್ಲಿ ಧರಿಸಿದ ರಾಧಾ ಶ್ರೀಧರ್ ಅವರ ಸಾಧನೆ ಅಪಾರ. ನೂರಾರು ಉತ್ತಮ ನೃತ್ಯಕಲಾವಿದರನ್ನು ನಾಟ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಇವರ ಅಸಂಖ್ಯಾತ ಶಿಷ್ಯರು ಇಂದು ವಿಶ್ವದ ಉದ್ದಗಲಕ್ಕೂ ಹರಡಿ ಹೋಗಿದ್ದಾರೆ. ನಾಲ್ಕು ಪೀಳಿಗೆಯನ್ನು ಬೆಳೆಸಿದ ನೃತ್ಯ ಸಂತತಿ ಇವರದು. ಹೆಣ್ಣುಮಕ್ಕಳಿಗೆ ಬಹಳ ದಿಗ್ಬಂಧನವಿದ್ದ, ಅಷ್ಟಾಗಿ ಸ್ವಾತಂತ್ರ್ಯವಿರದ ಕಾಲದಲ್ಲಿ ರಾಧಾ ಅವರು ಪದವೀಧರೆಯಾಗಿ, ನೃತ್ಯ-ಮೃದಂಗ-ಗಾಯನಗಳಲ್ಲಿ ಅಮಿತ ಆಸಕ್ತಿಯಿಂದ ಪರಿಶ್ರಮಿಸಿ ಪರಿಪೂರ್ಣ ಕಲಾವಿದೆಯಾಗಿ ಸಮಗ್ರ ಬೆಳವಣಿಗೆ ಪಡೆದ ವಿಶೇಷ ಅಸ್ಮಿತೆಯುಳ್ಳವರು . ಇಂದಿನ ಹಾಗೆ ಸರ್ವ ಅನುಕೂಲ ಇರುವ, ಮುಂದುವರೆದ ಕಾಲಘಟ್ಟವಾಗಿರಲಿಲ್ಲ ಆಗ. ಅನೇಕ ಎಡರು-ತೊಡರುಗಳನ್ನೆದುರಿಸಿ, ನಿಜವಾದ ಕಲಾಸಕ್ತಿ-ಭಕ್ತಿಯಿಂದ ವಿದ್ಯೆ ಅರ್ಜಿಸುವ ಸಂಕಲ್ಪವಿತ್ತು ಅವರಲ್ಲಿ. ನೃತ್ಯ ಕಲಾವಿದೆಯರು ವಿರಳವಾಗಿದ್ದ ಅಂದಿನ ಕಾಲದಿಂದ ಇಂದಿನವರೆಗಿನ ಇವರ ನೃತ್ಯ ಪಯಣ ನಿಜಕ್ಕೂ ರೋಚಕ- ಸ್ಮರಣೀಯ.
ಸುಮಾರು ಏಳೆಂಟು ವಯಸ್ಸಿನಲ್ಲೇ ರಾಧಾ ಅವರ ನೃತ್ಯಾಸಕ್ತಿ, ಅಭಿನಯ ಪ್ರತಿಭೆ ಮನೆಯವರ ಗಮನಕ್ಕೆ ಬಂದಿತ್ತಂತೆ. ಶಾಲೆಯಲ್ಲಿ ಪದ್ಯವಾಚನ ಮಾಡುವಾಗ, ನೃತ್ಯ- ಅಭಿನಯಗಳನ್ನು ಬೆರೆಸಿ ನಿರೂಪಿಸುತ್ತಿದ್ದ ವಿಶಿಷ್ಟ ಬಗೆ ಅವರು ನೃತ್ಯ ಕಲಿಯುವತ್ತ ನಡೆಸಿತ್ತು. ಪ್ರಾರಂಭಕ್ಕೆ, ಆ ಕಾಲದ ಖ್ಯಾತ-ಹಿರಿಯ ನಾಟ್ಯಾಚಾರ್ಯ ಹೆಚ್.ಆರ್. ಕೇಶವಮೂರ್ತಿಯವರಲ್ಲಿ ಭರತನಾಟ್ಯ ಮತ್ತು ಕಥಕ್ ಎರಡೂ ಬಗೆಯ ನೃತ್ಯಶೈಲಿಯಲ್ಲಿ ತರಬೇತಿಯನ್ನು ರಾಧಾ, ಹಲವಾರು ವರ್ಷಗಳು ಪಡೆದುಕೊಂಡರು. ಅನಂತರ ಹಿರಿಯ ನಾಟ್ಯಗುರು ಯು.ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ ದಂಪತಿಗಳ ಬಳಿ ಭರತನಾಟ್ಯಾಭ್ಯಾಸ ಮುಂದುವರಿಕೆ. ಮುಂದೆ ಮುತ್ತಯ್ಯ ಪಿಳ್ಳೈ, ವೆಂಕಟಲಕ್ಷಮ್ಮ ಅವರಲ್ಲಿ ಹೆಚ್ಚಿನ ನೃತ್ಯ ಶಿಕ್ಷಣ. ಕೆಲವು ಕಾಲ ಆಚಾರ್ಯಲು ಅವರಿಂದ ಕುಚುಪುಡಿ ನೃತ್ಯಶೈಲಿಯನ್ನೂ ಅಭ್ಯಾಸ ಮಾಡಿದರು. ಹೀಗಾಗಿ ರಾಧಾ ಅವರಿಗೆ ಮೂರು ನೃತ್ಯಶೈಲಿಗಳ ಕಲಿಕೆ ಲಭಿಸಿದ್ದು ಅವರ ವೈಶಿಷ್ಟ್ಯ. ಜೊತೆಜೊತೆಗೆ ಕರ್ನಾಟಕ ಸಂಗೀತವನ್ನು ಪಲ್ಲವಿ ಚಂದ್ರಸಿಂಗ್ ಅವರ ಬಳಿ ಹತ್ತಾರುವರ್ಷ ಕಲಿತು ಸೊಗಸಾಗಿ ಹಾಡಲು ಶಕ್ತರಾದರು. ಮೌಂಟ್ ಕಾರ್ಮಲ್ ಕಾಲೇಜಿನಿಂದ ಬಿ.ಎ. ಪದವೀಧರೆಯೂ ಆದರು. ಜೊತೆಗೆ ಬಿ.ಎಡ್.ಪದವಿಯೂ ಲಭ್ಯ. ಅಷ್ಟರಲ್ಲಿ ಮದುವೆಯೂ ಆಗಿ, ಮಕ್ಕಳಾದ ಮೇಲೂ ಪತಿಯ ಪ್ರೋತ್ಸಾಹದಿಂದ ನೃತ್ಯ ಕಲಿಕೆಯನ್ನು ಮುಂದುವರಿಸಿದರು. ಕಲಾಪ್ರೇಮಿಯಾಗಿದ್ದ ಅವರ ಪತಿ ಶ್ರೀಧರ್ ಬೆನ್ನೆಲುಬಾಗಿ ನಿಂತು ಅವರ ಕಲಾರಾಧನೆಗೆ ಸಂಪೂರ್ಣ ಸಹಕಾರ-ಪ್ರೋತ್ಸಾಹ ನೀಡಿದ್ದನ್ನು ಆಕೆ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ. ಇದರಿಂದ ಅವರ ಮನೆಯೇ ಕಲೆಯ ತವರಾಗಿ ರೂಪುಗೊಂಡು ಅವರ ಹೆಣ್ಣುಮಕ್ಕಳು, ಇಂದ್ರಾಣಿ ಪಾರ್ಥಸಾರಥಿ ಮತ್ತು ರಾಗಿಣಿ ಶ್ರೀಧರ್ ಇಂದು ವಿದೇಶದಲ್ಲಿ ನೃತ್ಯಶಾಲೆಗಳನ್ನು ಸ್ಥಾಪಿಸಿ, ನೂರಾರು ವಿದ್ಯಾರ್ಥಿಗಳಿಗೆ ಇಂದು ನೃತ್ಯ ಶಿಕ್ಷಣ ನೀಡುತ್ತ ತಾಯಿ ರಾಧಾ ಶ್ರೀಧರ್ ಹೆಸರನ್ನು ಪ್ರಜ್ವಲಗೊಳಿಸಿದ್ದಾರೆ.
ಪರಿಪೂರ್ಣ ಕಲಾವಿದರೆನಿಸಿಕೊಳ್ಳಲು ಕಲಾವಿದರಾದವರಿಗೆ ಎಲ್ಲ ಕಲೆಗಳ ಸಮಗ್ರ ಪರಿಚಯವೂ ಅತ್ಯಗತ್ಯ ಎಂದು ಒತ್ತಿ ಹೇಳುವ ರಾಧಾ ಶ್ರೀಧರ್, ತಮ್ಮ ಸಂಗೀತ- ನೃತ್ಯ ಸಾಧನೆಗಳೊಂದಿಗೆ, ಅವರು, ಪ್ರಸಿದ್ಧ ಮೃದಂಗ ವಿದ್ವಾನ್ ಟಿ.ಎ.ಎಸ್.ಮಣಿಯವರಿಂದ ಮೃದಂಗ ವಾದನವನ್ನೂ ಕಲಿತು ಸಂಪೂರ್ಣ ಲಯಜ್ಞಾನ-ತಾಳಜ್ಞಾನಗಳ ಮೇಲೆ ಹತೋಟಿ ಪಡೆದುಕೊಂದಿರುವುದು ಅವರ ವೈಶಿಷ್ಟ್ಯ.
ವಿದ್ಯಾರ್ಥಿ ದೆಸೆಯಲ್ಲಿಯೇ ನಾಡಿನ ಹಲವಾರು ಕಡೆ ಪ್ರತಿಷ್ಠಿತ ನೃತ್ಯೋತ್ಸವಗಳಲ್ಲಿ ಏಕವ್ಯಕ್ತಿ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆದಿದ್ದವರು ಈಕೆ . ಕೆಲವೇ ಮಂದಿ ನುರಿತ ನೃತ್ಯಗುರುಗಳಿದ್ದ ಅಂದಿನ ಕಾಲಘಟ್ಟದಲ್ಲಿ, ಸಹಜವಾಗಿ, ರಾಧಾ ಶ್ರೀಧರ್ ಅವರಂಥ ಹಿರಿಯ-ನಿಷ್ಠ ಕಲಾವಿದರಿಗೆ ಸರ್ಕಾರದಿಂದ ಹಿಡಿದು ಖಾಸಗಿ ಸಂಸ್ಥೆಗಳವರೆಗೂ ಉತ್ತಮ ಆದ್ಯತೆ, ಪ್ರೋತ್ಸಾಹ ಮತ್ತು ಅವಕಾಶಗಳು ದೊರೆತವು. ಹಲವು ನೃತ್ಯಶೈಲಿಗಳ ಸಂಗಮವಾದ ಇವರು, 1969 ರಲ್ಲಿ , ಐವತ್ತೈದು ವರ್ಷಗಳ ಹಿಂದೆಯೇ ತಮ್ಮದೇ ಆದ `ವೆಂಕಟೇಶ ನಾಟ್ಯ ಮಂದಿರ’ ಎಂಬ ನೃತ್ಯಶಾಲೆಯನ್ನು ತೆರೆದು, ಶುದ್ಧ ಶಾಸ್ತ್ರೀಯ ಭರತನಾಟ್ಯವನ್ನು ಹೇಳಿಕೊಡತೊಡಗಿದರು. ಇದುವರೆಗೂ ಸಾವಿರಾರು ನೃತ್ಯಪಟುಗಳನ್ನು ತಯಾರು ಮಾಡಿದ ಕೀರ್ತಿ ಇವರದು. ಇವರ ಅನೇಕ ಜನ ಶಿಷ್ಯರು ಪ್ರಖ್ಯಾತಿ ಗಳಿಸಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇವರ ಗುರು ಪರಂಪರೆಯ ಹೆಸರು ಉಳಿಸಿ, ಅಮೇರಿಕಾ, ಆಸ್ಟ್ರೆಲಿಯಾದ್ಯಂತ ನಾಟ್ಯಶಾಲೆಗಳನ್ನು ಸ್ಥಾಪಿಸಿ, ನೃತ್ಯಗುರುಗಳಾಗಿ ಹೆಸರು ಪಡೆದಿದ್ದಾರೆ.
ಕೇಂದ್ರ ಸರ್ಕಾರದ ಸಂಗೀತ-ನಾಟಕ ಅಕಾಡೆಮಿ, ‘ಶಾಂತಲಾ’ ಉನ್ನತ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕಲಾಶ್ರೀ, ಅನನ್ಯ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ನೂರಾರು ಪ್ರತಿಷ್ಠಿತ ಪ್ರಶಸ್ತಿಗಳು ಇವರ ಪ್ರತಿಭೆಯ ಮುಕುಟಕ್ಕೇರಿದ ಹೆಮ್ಮೆಯ ಗರಿಗಳು. ಇದರೊಂದಿಗೆ, ‘ಕರ್ನಾಟಕ ಕಲಾತಿಲಕ’ , ಮೈಸೂರು ದಸರಾ ಪ್ರಶಸ್ತಿ, `ನಾಟ್ಯವಿಶಾರದೆ, ‘ಭರತ’, `ನಾಟ್ಯ ಶಿರೋಮಣಿ’, `ಆರ್ಯಭಟ’ ಮುಂತಾದ ನೂರಾರು ಪ್ರಶಸ್ತಿ-ಗೌರವಗಳಿಂದ ಸನ್ಮಾನಿತರಾಗಿರುವ ರಾಧಾ ಶ್ರೀಧರ್ ಅವರಿಂದ ನೃತ್ಯರಂಗಕ್ಕೆ ಸಂದಿರುವ ಸೇವೆ ಅನುಪಮ ಹಾಗೂ ಅಮೂಲ್ಯವಾದದ್ದು.
ಹಲವಾರು ಬರಿ ಅಮೇರಿಕಾದ್ಯಂತ ತಮ್ಮ ತಂಡದೊಡನೆ ನೃತ್ಯ ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆ ಇವರದು. ಅಮೆರಿಕಾದ ಚಿಕಾಗೋ, ಪಿಟ್ಸ್ ಬರ್ಗ್, ಪೋರ್ಟ್ ಲ್ಯಾಂಡ್,ಸ್ಯಾನ್ಹೂಸೆ , ಹ್ಯೂಸ್ಟನ್, ಕ್ಲೀವ್ಸ್ ಲ್ಯಾಂಡ್, ವೆಸ್ಟ್ ವರ್ಜೀನಿಯಾ, ವಾಶಿಂಗ್ಟನ್ ಡಿ.ಸಿ., ಯು.ಎ.ಇ.-ಅಬುದಾಬಿ ಮತ್ತು ದುಬಾಯ್, ಗ್ರೇಟ್ ಬ್ರಿಟನ್ ಮ್ಯಾಂಚೆಸ್ಟರ್ ಮತ್ತು ಅಮೆರಿಕಾದ ಹ್ಯೂಸ್ಟನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನಗಳಲ್ಲಿ, ನ್ಯೂಜರ್ಸಿಯಾ ಅಕ್ಕ ಸಮ್ಮೇಳನದಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಹಂಪಿ, ಕದಂಬ, ಪಟ್ಟದಕಲ್ಲು , ಮೇಲುಕೋಟೆ, ಸರ್ವಧರ್ಮ ಸಮ್ಮೇಳನ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ, ಸ್ವಾತಂತ್ರ್ಯೋತ್ಸವ ಮುಂತಾಗಿ ಸರ್ಕಾರ ನಡೆಸುವ ಎಲ್ಲ ಉತ್ಸವಗಳಲ್ಲಿ ಇವರ ಪ್ರತಿಭೆಗೆ ಅತ್ಯುತ್ತಮ ಗೌರವ, ಅವಕಾಶಗಳು ಒದಗಿವೆ.
ಇವರ ಪ್ರಮುಖ ಹಾಗೂ ಸ್ಮರಣೀಯ ಕೊಡುಗೆ ಎಂದರೆ, ದೂರದರ್ಶನದ ಐತಿಹಾಸಿಕ ಖ್ಯಾತಿ ಪಡೆದ `ನೆಕ್ಟರ್ ಇನ್ ಸ್ಟೋನ್ ‘ ಮತ್ತು `ಸಾಂಗ್ಸ್ ಆಫ್ ಸೋಮನಾಥ್ ಪುರ್‘ ಗೆ ನೀಡಿದ ಅಪೂರ್ವ ನೃತ್ಯ ಸಂಯೋಜನೆ. ದೂರದರ್ಶನದ ಇಪ್ಪತ್ತು ಕಂತುಗಳ ಜನಪ್ರಿಯ ಧಾರಾವಾಹಿ ‘ ಕೃಷ್ಣ ನೀ ಬೇಗನೆ ಬಾರೋ’ ಗೆ ನೃತ್ಯ ನಿರ್ದೇಶನ ಇವರದೇ. ಚಂದನ ವಾಹಿನಿಗೆ `ಚಾಮುಂಡೇಶ್ವರಿ ಪಾಲಯಮಾಂ’ ಮುಂತಾದ ಅನೇಕ ನೃತ್ಯರೂಪಕಗಳನ್ನು ನಿರ್ಮಿಸಿ, ಪ್ರದರ್ಶಿಸಿದ್ದಾರೆ. ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ಸದಸ್ಯೆಯಾಗಿ ಸೇವೆ ಸಲ್ಲಿಸಿದ ಇವರು, ಬೆಂಗಳೂರು ವಿಶ್ವ ವಿದ್ಯಾಲಯ ಮತ್ತು ಕರ್ನಾಟಕ ಸರ್ಕಾರದ ಅನೇಕ ನೃತ್ಯ ಪರೀಕ್ಷೆಗಳಿಗೆ ಪರೀಕ್ಷಕರು, ದಕ್ಷಿಣ ವಲಯದ ಕಲಾಕೇಂದ್ರ ನಾಗಪುರದ ಸಂಸ್ಥೆಗೆ ಸೇವೆ ಸಲ್ಲಿಸಿದ ಗೌರವ ಇವರ ವಿಶೇಷ.
ಶ್ರೀಮತಿ ರಾಧಾ ಶ್ರೀಧರ್ ನೃತ್ಯ ಸಂಯೋಜಿಸಿದ ಖ್ಯಾತ ನೃತ್ಯ ನಾಟಕಗಳೆಂದರೆ – ಗೀತಗೋವಿಂದ, ಹನುಮದ್ವಿಲಾಸ,ರಾಮಾಯಣ, ನೀಲಾಂಜನೆ, ನೀಲಾ ಮಾಧವ, ಶ್ರೀನಿವಾಸ ಕಲ್ಯಾಣ, ನವವಿಧ ಭಕ್ತಿ, ಬುದ್ಧ ಮತ್ತು ಆಮ್ರಪಾಲಿ, ವಿಕ್ರಮೋರ್ವಶೀಯ, ಛತ್ರಪತಿ ಶಿವಾಜಿ, ಅತ್ತಿಮಬ್ಬೆ, ಶಾಂತಲಾ, ಮೋಹಿನಿ ಭಸ್ಮಾಸುರ ಮುಂತಾದವು.
ಆರು ದಶಕಗಳ ನೃತ್ಯಶಿಕ್ಷಣದ ದೀರ್ಘಾನುಭವವುಳ್ಳ , ಈ ಎಂಭತ್ತೇಳರ ವಯಸ್ಸಿನಲ್ಲೂ, ಹೊಸ ಪ್ರಯೋಗ-ಪರಿಕಲ್ಪನೆಯ ನೃತ್ಯನಾಟಕಗಳ ಸಂಯೋಜನೆ-ನಿರ್ಮಾಣಗಳಲ್ಲಿ ತೊಡಗಿಕೊಂಡಿರುವ ಉತ್ಸಾಹೀಚೇತನ ಇವರದು. ಭಾರತೀಯ ಸಂಸ್ಕೃತಿಯ ರಕ್ಷಣೆಯ ಬಗ್ಗೆ ಅಪಾರ ಕಾಳಜಿ- ಆಸ್ಥೆ – ಉತ್ತಮಾಭಿರುಚಿಯುಳ್ಳ ರಾಧಾ ಶ್ರೀಧರ್, ತಮ್ಮ ಮನೆಯಲ್ಲಿ ಪ್ರತಿವರ್ಷ ಪ್ರದರ್ಶಿಸುವ ಶತಮಾನ ಕಂಡ ಬೊಂಬೆಗಳ ವೈವಿಧ್ಯ ಮತ್ತು ಕೃಷ್ಣ ಜನ್ಮಾಷ್ಟಮಿಯಂದು ಮೈದಾಳುವ ಕೃಷ್ಣಲೋಕವನ್ನು ವೀಕ್ಷಿಸಲು ಎರಡು ಕಣ್ಣುಗಳು ಸಾಲವು.
ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.