ಸಕಾರಾತ್ಮಕ ಚಿಂತನೆಗಳು ಮಾತ್ರ ನಮ್ಮನ್ನು ಗುರಿಯಡೆಗೆ ತಲುಪಿಸುವುದಿಲ್ಲ, ಅದರೊಂದಿಗೆ ಕಠಿಣ ಪರಿಶ್ರಮವೂ ಬೇಕು ಎಂಬ ಮಾತಿದೆ. ಬಹುಶ: ನಂದಾವರ ದಂಪತಿಗಳಲ್ಲಿ ಇಂದು ಇಂತಹ ಕಠಿಣ ಪರಿಶ್ರಮವು ಜೊತೆಗಿತ್ತು ಎಂದರೆ ತಪ್ಪಾಗಲಾರದು. ಸುಂದರಿ ಮತ್ತು ವಾಮನ ಮೇಷ್ಟ್ರ ಹಿರಿಯ ಮಗಳಾಗಿ ದಿನಾಂಕ 21 ನವೆಂಬರ್ 1950ರಲ್ಲಿ ನಮ್ಮೆಲ್ಲರ ಪ್ರೀತಿಯ ಕೆ.ವಿ. ಚಂದ್ರಕಲಾ ಮೇಡಂ ಜನಿಸಿದರು. ಮುನಿಸಿಪಲ್ ಹಾಯರ್ ಪ್ರೈಮರಿ ಶಾಲೆ, ಕಾಪಿಕಾಡು ಇಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಬೆಸೆಂಟ್ ಬಾಲಿಕಾ ಪ್ರೌಢಶಾಲೆ ಕೊಡಿಯಾಲ್ ಬೈಲಿನಲ್ಲಿ ಪೂರೈಸಿದರು. ಪದವಿ ಪೂರ್ವ ಶಿಕ್ಷಣವನ್ನು ನಗರದ ಸರಕಾರಿ ಕಾಲೇಜಿನಲ್ಲಿ ಪಡೆದ ಇವರು ನಂತರ ಹಿಂದಿ ರಾಷ್ಟ್ರಭಾಷಾ ಪ್ರವೀಣ ಪರೀಕ್ಷೆಯಲ್ಲಿ ದ್ವಿತೀಯ ಶ್ರೇಣಿ ಹಾಗೂ ಸಂಸ್ಕೃತ ಕೋವಿದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡರು. ಮೈಸೂರು ವಿಶ್ವವಿದ್ಯಾನಿಲಯದ ಎರಡು ವರ್ಷದ ಕನ್ನಡ ಡಿಪ್ಲೋಮಾ ಪದವಿಯನ್ನು ಮೂರನೇಯ ರ್ಯಾಂಕ್ ನೊಂದಿಗೆ ಉತ್ತಿರ್ಣರಾದ ನಂತರ ಬಜ್ಪೆಯ ಹೋಲಿ ಫ್ಯಾಮಿಲಿ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ವೃತ್ತಿಗೆ ಸೇರಿಕೊಂಡರು. ಮಂಗಳ ಗಂಗೋತ್ರಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಕನ್ನಡ ಎಂ.ಎ. ಪದವಿ ಮುಗಿಸಿದ ಕೆ.ವಿ. ಚಂದ್ರಕಲಾ ಹಿಂದಿ ಮತ್ತು ಕನ್ನಡ ಉಪನ್ಯಾಸಕಿಯಾಗಿ ಗಣಪತಿ ಪದವಿ ಪೂರ್ವ ಕಾಲೇಜಿಗೆ ಸೇರ್ಪಡೆಯಾದರು. ಇದೇ ಸುಮಾರಿಗೆ ತುಳು ಕನ್ನಡ ವಿದ್ವಾಂಸರಾಗಿರುವ ಡಾ.ವಾಮನ ನಂದಾವರರೊಂದಿಗೆ ವಿವಾಹವಾಗಿ ಚಂದ್ರಕಲಾ ನಂದಾವರ ಎನ್ನಿಸಿಕೊಂಡರು.
ಶಿಕ್ಷಕರು, ಹರಿದಾಸರು ಆಗಿ ಖ್ಯಾತರಾಗಿದ್ದ ತಂದೆಯ ನೆರಳಿನಲ್ಲಿ ಬೆಳೆದ ಚಂದ್ರಕಲಾ ಅವರಿಗೆ ಗಮಕ ಕಾವ್ಯದ ಬಗ್ಗೆ ಸೆಳೆತವಿತ್ತು. ಈ ಸೆಳೆತ ದಂಪತಿಗಳಿಬ್ಬರೂ ಗಮಕ ವಿದ್ವಾನ್ ಪರೀಕ್ಷೆ ಬರೆಯಲು ಪ್ರೇರಣೆ ನೀಡಿತು. ಇದರಲ್ಲಿ ಪ್ರಥಮ ಸ್ಥಾನದೊಂದಿಗೆ ಉತ್ತೀರ್ಣರಾದ ಚಂದ್ರಕಲಾ ನಂದಾವರ ನಂತರ ಹಲವಾರು ವೇದಿಕೆಗಳಲ್ಲಿ ಗಮಕ ಕಾವ್ಯ ವಾಚನವನ್ನು ಮಾಡಿ ಖ್ಯಾತರಾದರು. ಆದರೆ ದಂಪತಿಗಳಿಬ್ಬರ ಪ್ರಥಮ ಒಲವು ಸಾಹಿತ್ಯವೇ ಆಗಿದ್ದರಿಂದ ಹೇಮಾಂಶು ಪ್ರಕಾಶನವನ್ನು ಸ್ಥಾಪಿಸಿ ಉಪನ್ಯಾಸ ವೃತ್ತಿಯ ಜೊತೆ ಜೊತೆಗೆ ಇದನ್ನು ಮುನ್ನಡೆಸುತ್ತಾ ಹಲವಾರು ಉದಯೋನ್ಮುಖ ಪ್ರತಿಭೆಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುವುದಕ್ಕೆ ಕಾರಣೀಭೂತರಾದರು. ವೃತ್ತಿ ಜೀವನದಲ್ಲಿ ಹಲವು ಮಕ್ಕಳ ತಾಯಿಯಾಗಿ ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕಿಯಾಗಿ, ಬಡ ಮಕ್ಕಳು ಶಿಕ್ಷಣದಲ್ಲಿ ಮುಂದುವರಿದು, ಬದುಕಿನಲ್ಲಿ ನೆಲೆ ನಿಲ್ಲಲು ತನ್ನ ಕೈಯಲ್ಲಿ ಸಾಧ್ಯವಾದ ಸಹಾಯ ಮಾಡುತ್ತ, ದಾನಿಗಳನ್ನು ಹುಡುಕಿ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಧನ ಸಹಾಯ ಒದಗಿಸುತ್ತ ಆ ಮಕ್ಕಳ ಬಾಳಿಗೆ ಬೆಳಕಾದರು. ಗಣಪತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸಂಸ್ಥೆಯನ್ನು ಮುನ್ನಡೆಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಸಹೋದ್ಯೋಗಿಗಳಿಗೆ ಮಾರ್ಗದರ್ಶನ ನೀಡಿದರು. ಇಬ್ಬರು ಮಕ್ಕಳಿರುವ ಸಂತೃಪ್ತ ಕುಟುಂಬದ ದಂಪತಿಗಳಾದ ವಾಮನ ನಂದಾವರ ಮತ್ತು ಚಂದ್ರಕಲಾ ನಂದಾವರ ಸಾಹಿತ್ಯದ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಪ್ರಕಾಶನದ ಪುಸ್ತಕಗಳನ್ನು ಮಾರುವ ವ್ಯವಸ್ಥೆ ಮಾಡುತ್ತಿದ್ದರು. ಹೆತ್ತವರ ಸಾಹಿತ್ಯ ಸೇವೆಯಲ್ಲಿ ಮಕ್ಕಳು ಕೈಜೋಡಿಸುತ್ತಿದ್ದರು.
“ನನ್ನೂರು ನನ್ನ ಜನ” ಚಂದಕಲಾ ನಂದಾವರ ಇವರು ವಾರ್ತಾಭಾರತಿ ದೈನಿಕದಲ್ಲಿ ಬರೆದಿದ್ದ ಅಂಕಣ ಬರಹ. ಇದು ಅವರ ಐದು ದಶಕಗಳ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ, ಸಾಂಸ್ಕೃತಿಕ, ಸಾಹಿತ್ಯ ಲೋಕದ ಅವಿಸ್ಮರಣಿಯ ಅನುಭವಗಳನ್ನು ಅನಾವರಣಗೊಳಿಸಿದೆ. ಸಾಹಿತಿಯಾಗಿ, ಸಂಘಟಕಿಯಾಗಿ ಮತ್ತು ಪ್ರಾಂಶುಪಾಲರಾಗಿ ಚಂದ್ರಕಲಾ ನಂದಾವರ ಪ್ರತಿನಿಧಿಸಿದ ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದ ಹಿರಿಮೆ ಇವರದು. ಕವಿಯಾಗಿ, ಕಥೆಗಾರ್ತಿಯಾಗಿ, ಲೇಖಕಿಯಾಗಿ ಜನ ಮಾನಸವನ್ನು ಗೆದ್ದ ಚಂದ್ರಕಲಾ ಮೇಡಂ ಕಿರಿಯರ ಪುಸ್ತಕಗಳನ್ನು ಪರಿಚಯಿಸಿ ಅವರು ಕನ್ನಡ ಸಾಹಿತ್ಯದಲ್ಲಿ ನೆಲೆ ನಿಲ್ಲುವುದಕ್ಕೆ ಸಾಕ್ಷಿಯಾದವರು. ಸಾಹಿತ್ಯದಲ್ಲಿ ಆಗಷ್ಟೇ ಕಣ್ಣು ಬಿಡುತ್ತಿದ್ದ ನನ್ನ ಮೊದಲ ಕವನ ಸಂಕಲನ ‘ಮುಸ್ಸಂಜೆ’ಯನ್ನು ಪರಿಚಯ ಮಾಡುವ ಮೂಲಕ ನನ್ನೊಳಗೆ ಶಕ್ತಿ ತುಂಬಿದವರು. ಇವರು ಹಲವಾರು ಸಂಘಟನೆಗಳಲ್ಲಿ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ನಿರ್ವಹಿಸಿದ ಜವಾಬ್ದಾರಿಗಳು ಅಸಮಾನ್ಯವಾದವು.
ಚಂದ್ರಕಲಾ ನಂದಾವರ ಅವರ ಕವನ ಸಂಕಲನಗಳು ಒಂದು ರೀತಿಯಲ್ಲಿ ಅವರ ಆತ್ಮಾವಲೋಕನದ ಮುತ್ತುಗಳು. ‘ನಾವು ಪ್ರಾಮಾಣಿಕರೇ’, ‘ಮತ್ತೆ ಚಿತ್ತಾರ ಬರೆ ಗೆಳತಿ’, ‘ಮುಸ್ಸಂಜೆಯ ತೆರೆಗಳು’ ಇವರ ಕವನ ಸಂಕಲನಗಳಾದರೆ ‘ಮುಖ ಮುಖಿ’ ಕಥಾ ಸಂಕಲನ. ‘ಹೊಸ್ತಿಲಿನಿಂದ ಈಚೆಗೆ’ ಲೇಖನ ಸಂಕಲನ. ಇವರ ಒಟ್ಟು ಹತ್ತಕ್ಕೂ ಮಿಕ್ಕಿದ ಕೃತಿಗಳು ಇವರದೇ ಹೇಮಾಂಶು ಪ್ರಕಾಶನದ ಮೂಲಕ ಪ್ರಕಟಗೊಂಡಿವೆ. ಮಂಗಳೂರು ನಗರದಲ್ಲಿ ಸಂಘಟಕಿಯಾಗಿ ಚಂದ್ರಕಲಾ ನಂದಾವರ ಅವರದು ದೊಡ್ಡ ಹೆಸರು. ಮಂಗಳೂರು ಕನ್ನಡ ಸಂಘ (ರಿ.) ಇದರಲ್ಲಿ ಕಾರ್ಯದರ್ಶಿಯಾಗಿ ಇವರು ಮಾಡಿದ ಸಾಹಿತ್ಯ ಸೇವೆ ಅವಿಸ್ಮರಣೀಯವಾದದ್ದು. ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.)ವನ್ನು ಕಟ್ಟಿ ಬೆಳೆಸಿದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿರುವ ಚಂದ್ರಕಲಾ ನಂದಾವರ ಅಲ್ಲಿ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದ್ದು ಮಾತ್ರವಲ್ಲದೆ 2006ರಿಂದ 2009ರವರೆಗೆ ಅಧ್ಯಕ್ಷರಾಗಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಮಂಗಳೂರು ಕನ್ನಡ ಸಂಘದಲ್ಲಿ ಕಾರ್ಯದರ್ಶಿಯಾಗಿ ಇವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು. ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರ ಒಕ್ಕೂಟದ ಜೊತೆ ಕಾರ್ಯಕರ್ತ ಕಾರ್ಯದರ್ಶಿಯಾಗಿ, ಮಂಗಳೂರು ಶಿಕ್ಷಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಹತ್ತು ವರ್ಷಗಳ ಕಾಲ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದಾರೆ . ಪದವಿ ಪೂರ್ವ ಇಲಾಖೆಯ ರಾಜ್ಯಮಟ್ಟದ ಎನ್.ಎಸ್. ಎಸ್. ಘಟಕದಲ್ಲಿ ಸಲಹಾ ಸಮಿತಿಯ ಸದಸ್ಯರಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ದಕ್ಷಿಣ ಕನ್ನಡ ಜಿಲ್ಲಾ ಜಾಗೃತಿ ಸಮಿತಿಯಲ್ಲಿ ಒಂಬತ್ತು ವರ್ಷಗಳ ಕಾಲ ಮತ್ತು ಕನಕ ಅಧ್ಯಯನ ಪೀಠದಲ್ಲಿ ಮಂಗಳೂರು ವಿ. ವಿ.ನಿಲಯದ ಸದಸ್ಯರಾಗಿಯೂ ಸೇವೆ ಸಲ್ಲಿಸಿರುತ್ತಾರೆ.
ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ವೀರರಾಣಿ ಅಬ್ಬಕ್ಕ ಪ್ರಶಸ್ತಿ,ಕ. ಸಾ. ಪ. ಜಿಲ್ಲಾ ಘಟಕದಿಂದ ಮತ್ತು ಕಲ್ಕೂರ ಸಾಹಿತ್ಯ ಪ್ರತಿಷ್ಠಾನದಿಂದ ‘ಸಾಹಿತಿ ದಂಪತಿ ಪ್ರಶಸ್ತಿ, ಆಲ್ ಇಂಡಿಯಾ ಕಾನ್ಫರೆನ್ಸ್ ನೀಡುವ ಕೌದೆ ಅಂಡಾಳ್ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರ ಕೇಶಂ ಭಾಸ್ಕರ್ ಆಚಾರ್ಯ ಬಹುಮಾನ, ಆಳ್ವಾಸ್ ಎಜುಕೇಶನ್ ಟ್ರಸ್ಟ್ ಇವರಿಂದ 2008ರ ಶಿಕ್ಷಕ ಪ್ರಶಸ್ತಿ, ಗುರುಪುರದಲ್ಲಿ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ 2017ರಲ್ಲಿ ಆಯ್ಕೆಯಾಗಿದ್ದಾರೆ. ಇವರ ಕಥೆಗಳಿಗೆ ರಾಜ್ಯ ಮಟ್ಟದ ಬಹುಮಾನಗಳು ಬಂದಿವೆ.ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಇವರಿಂದ ಶ್ರೀ ಮತಿ ಕೆ. ಟಿ. ಬನಶಂಕರಮ್ಮ ಪ್ರಶಸ್ತಿ, ವಾಮನ ನಂದಾವರ ಚಂದ್ರಕಲಾ ದಂಪತಿಗೆ ಇತ್ತೀಚೆಗೆ ಎಸ್. ವಿ. ಪರಮೇಶ್ವರ ಭಟ್ಟರ ಸ್ಮರಣೆಯಲ್ಲಿ ಕೊಡಲಾಗುವ ‘ಎಸ್. ವಿ. ಪರಮೇಶ್ವರ ಭಟ್ಟ ಪ್ರಶಸ್ತಿ’ ಸಂದಾಯವಾಗಿರುವುದು ದಂಪತಿಗಳಿಗೆ ಸಂತಸ ತಂದಿದೆ. ಚಂದ್ರಕಲಾ ನಂದಾವರ ಬದುಕಿನ ಧನ್ಯತೆಯಲ್ಲಿ ಇದು ಒಂದು. ಸಾಹಿತ್ಯ ಸಂಘಟನೆಯ ಸೇವೆಗೆ ಗುರುಗಳ ಹೆಸರಿನಲ್ಲಿ ಸಂದಿರುವ ಈ ಗೌರವ ಅವರೇ ಸ್ವತಃ ಬಂದು ಹರಸಿದಂತೆ ಆಯ್ತು ಎನ್ನುವ ಮೂಲಕ ಚಂದ್ರಕಲಾ ನಂದಾವರ ಇವರು ಒಟ್ಟು ಪ್ರಕ್ರಿಯೆಯ ಹಿನ್ನೆಲೆಯ ಘನತೆಯನ್ನು ಹೆಚ್ಚಿಸಿದ್ದಾರೆ.
ಹಲವಾರು ಸಾಮಾಜಿಕ ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ನ್ಯಾಯದ ಪರವಾದ ತನ್ನ ತುಡಿತವನ್ನು ತಣಿಸಿಕೊಂಡವರು ಚಂದ್ರಕಲಾ ಮೇಡಂ. ಬಹಳ ಹಿಂದೆ ಮಂಗಳೂರಿನ ಆಶ್ರಮ ಒಂದರಲ್ಲಿ ನಡೆಯುತ್ತಿದ್ದ ಲೈಂಗಿಕ ಹಗರಣದ ವಿರುದ್ಧ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಸಂಘಟಿಸಿ ಮುಂದಾಳತ್ವ ತಾನೇ ವಹಿಸಿಕೊಂಡು ಯಶಸ್ವಿಗೊಳಿಸಿದ್ದು, ಮಾತ್ರವಲ್ಲದೆ ಇಲ್ಲಿ ನೊಂದ ಹೆಣ್ಣು ಮಕ್ಕಳಿಗೆ ರಕ್ಷಣೆಯ ವ್ಯವಸ್ಥೆ ಒದಗಿಸುವಲ್ಲಿ ಇವರು ತೋರಿಸಿದ ಕಾಳಜಿ ಇತರರಿಗೆ ಮಾದರಿಯಾಗುವಂತಹದ್ದು. ಜೀವಪರ ಸಂವೇದನೆಗಳಿಗೆ ಸದಾ ಸ್ಪಂದಿಸುವ ಪ್ರಾಮಾಣಿಕ ಕವಿ ಹೃದಯ ಇವರದು. ಇವರ ಸಮಾಜಮುಖಿ ಕಾಳಜಿ, ವ್ಯಕ್ತಿತ್ವ ನೊಂದವರ ಧ್ವನಿಯಾಗಿ ಮೂಡಿ ಬಂದದ್ದು ಮಾತ್ರವಲ್ಲದೆ ಇವರ ಹೆಚ್ಚಿನ ಬರಹಗಳಲ್ಲಿ ಒಡ ಮೂಡಿವೆ ಕೂಡ. ಹಿರಿಯ ಸಾಹಿತಿ ದಂಪತಿಗಳಾಗಿ ಇವರು ಕಿರಿಯ ಲೇಖಕ-ಲೇಖಕಿಯರನ್ನು ಆದರಿಸಿ ಬೆಳೆಸಿದ, ಪ್ರೀತಿಯ ಋಣ ನಮ್ಮ ಕಾಲದ ಬಹುತೇಕ ಲೇಖಕರಿಗೆ ಇದೆ. ಉತ್ತಮ ವಾಗ್ಮಿಯಾದ ಚಂದ್ರಕಲಾ ನಂದಾವರ ನಗರದಲ್ಲಿ ನಡೆಯುವ ಮಹಿಳಾ ದಿನಾಚರಣೆಯಿರಲಿ ಮಹಿಳೆಯರಿಗೆ ಸಂಬಂಧಿಸಿದ ಯಾವುದೇ ಪ್ರತಿಭಟನೆ ಇರಲಿ,ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ವಿವಾದಗಳಿರಲಿ,ಕಾರ್ಯಕ್ರಮಗಳಿರಲಿ ಸದಾ ಅದರಲ್ಲಿ ತೊಡಗಿಸಿಕೊಂಡವರು. ಕಳೆದ ಆರು ದಶಕಗಳಿಂದ ತಮ್ಮ ಸಂಪರ್ಕಕ್ಕೆ ಬಂದ ಮಕ್ಕಳ ಮಹಿಳೆಯರ ಕಷ್ಟಕ್ಕೆ ಸ್ಪಂದಿಸುವ ಇವರು ಈ ಕಾರಣಕ್ಕಾಗಿ ಸಂಪಾದಿಸಿಕೊಂಡ ಸ್ನೇಹ ದೊಡ್ಡದು. ವ್ಯಕ್ತಿಯಿಂದ ವ್ಯಕ್ತಿಗೆ ಪರಿಚಯವಾದ ಸ್ನೇಹ ಪ್ರೀತಿ ಸಂಬಂಧಗಳು ಕಣ್ಣಿಂದ ದೂರವಾಗುವ ತನಕ ಮಾತ್ರ ಉಳಿಯಬಹುದು. ಆದರೆ ಒಂದು ಮನಸ್ಸಿನಿಂದ ಇನ್ನೊಂದು ಮನಸ್ಸಿಗೆ ಪರಿಚಯವಾದ ಸ್ನೇಹ ಪ್ರೀತಿ ನಮ್ಮ ಬದುಕಿನ ಉದ್ದಕ್ಕೂ ದೂರವಾಗದೆ ಜೊತೆಯಾಗಿರುತ್ತದೆ ಎಂಬ ಮಾತಿದೆ. ಪ್ರೀತಿ ಸ್ನೇಹದ ಸಂಬಂಧಗಳಿಗೆ ತೆರೆದ ಮನೆಯಂತಿದ್ದ ನಂದಾವರ ದಂಪತಿಗಳ ಕುಟೀರದ ಪ್ರೀತಿಯ ಸವಿಯನ್ನುಂಡು ಬೆಳೆದವರು ನಾವು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗಳನ್ನು ನಾವು ಮಹಿಳೆಯರೆಲ್ಲ ಒಂದು ಎನ್ನುವ ಭಾವದಲ್ಲಿ ಮಲ್ಲಿಗೆ ಘಮಲಿನೊಂದಿಗೆ ಪೋಣಿಸಿ ಅದು ಮಹಿಳಾ ಶಕ್ತಿಯಾಗಿ ಗುರುತಿಸಿಕೊಳ್ಳುವಲ್ಲಿ ಕೊಡುಗೆ ನೀಡಿದವರು ಚಂದ್ರ ಕಲಾ ನಂದಾವರ. ಅವಿಭಜಿತ ದಕ್ಷಿಣ ಕನ್ನಡದಲ್ಲಿ, ಕರ್ನಾಟಕದಲ್ಲಿ ಈ ಕಾರಣಕ್ಕಾಗಿ ಇವರು ಮುಖ್ಯವಾಗುತ್ತಾರೆ, ಮಾರ್ಚ್ 8 ಎಂದಾಕ್ಷಣ ತಕ್ಷಣ ನೆನಪಾಗುತ್ತಾರೆ. ಈ ನೆವದಲ್ಲಿ ಅವರನ್ನು ಮತ್ತೊಮ್ಮೆ ನೆನಪಿಸಿಕೊಂಡು ಈ ಕ್ರಿಯಾಶೀಲ ಚೇತನಕ್ಕೆ ಶುಭ ಹಾರೈಸುವ ಹರುಷ ನನ್ನದು ಕೂಡ.
ಶ್ರೀಮತಿ ದೇವಿಕಾ ನಾಗೇಶ್
ಕವಯತ್ರಿ, ಸಮಾಜ ಸೇವಕಿ