‘ಮೇಡಂ ನಮಸ್ತೆ’ ಎಂಬ ಧ್ವನಿ ಕಿವಿಗೆ ಬಿದ್ದಾಗ ತಲೆ ಎತ್ತಿ ನೋಡಿದರೆ ಬಾಗಿಲ ಬಳಿ ಕಂಡದ್ದು ಒಂದು ಆತ್ಮೀಯ ನಗುವಿನ ನಿಷ್ಕಲ್ಮಶ ಪ್ರೀತಿ ತುಂಬಿದ ಸುಂದರ ಮುಖದ ಪ್ರತೀಕ್ಷಾ ಪ್ರಭು. “ನನಗೊಮ್ಮೆ ಹಿಡಿಸೂಡಿ ಬೇಕಿತ್ತು ಮೇಡಂ” ವಿನಯದ ವಿನಂತಿಯದು. ಈ ಆಪ್ತ ನಗುವಿಗೆ ಮುಖ ದುಮ್ಮಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ನಯ, ವಿನಯ, ಸುಂದರ ನಗುವೇ ಪ್ರತೀಕ್ಷಾ ಪ್ರಭು ಇವರ ಆಸ್ತಿ.
2018ನೇ ಇಸವಿಯಲ್ಲಿ ನಾನು ದಕ್ಷಿಣ ಭಾರತ್ ಹಿಂದಿ ಪ್ರಚಾರ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೆ. ಹಿಂದಿ ಪ್ರಚಾರ ಸಮಿತಿಯ ಸಭಾಭವನದಲ್ಲಿ ನಡೆಯುವ ಬೇರೆ ಬೇರೆ ತರಗತಿಗಳ ವ್ಯವಸ್ಥೆಯ ಜವಾಬ್ದಾರಿಯು ನನಗಿತ್ತು. ಶ್ರೀಮತಿ ಪ್ರತೀಕ್ಷಾ ಪ್ರಭು ಸಮಿತಿಯಲ್ಲಿ ನೃತ್ಯ ತರಗತಿಗಳನ್ನು ಮಾಡುತ್ತಿದ್ದರು. ನೈರ್ಮಲ್ಯದ ಬಗ್ಗೆ ಬಹಳ ಗಮನ ಕೊಡುವ ಅವರು ನಾವು ಸಭಾಭವನವನ್ನು ಸ್ವಚ್ಛ ಮಾಡಿಸಿದ್ದರೂ, ಸ್ವಲ್ಪ ಕಸ ಕಡ್ಡಿ ಕಂಡರೆ ಅವರೇ ಸ್ವಚ್ಛಗೊಳಿಸುವ ಪರಿಪಾಠ. ಅಸಮಾಧಾನ, ಕುಹಕ, ದುರಾಸೆ, ಸ್ವಾರ್ಥ ಇವುಗಳು ಬಹುಶ ಅವರ ಬಳಿ ಸುಳಿಯಲೇ ಇಲ್ಲವೇನೋ ಎನ್ನುವಂತಿದ್ದ ಅವರ ಜೀವನ ಶೈಲಿ ಮೆಚ್ಚುವಂತದ್ದು.
ಮೂಲತಃ ಬದಿಯಡ್ಕದವರಾದ ಶ್ರೀ ಸತೀಶ್ ಶೆಣೈ ಮತ್ತು ಶ್ರೀಮತಿ ರವಿಕಲಾ ಶೆಣೈಯವರ ಮೂರು ಮಂದಿ ಮಕ್ಕಳಲ್ಲಿ ಕೊನೆಯವರು ಪ್ರತೀಕ್ಷಾ ಪ್ರಭು ಇವರು ಕುಟುಂಬ ಸಮೇತ ಸುರತ್ಕಲ್ ನಲ್ಲಿ ವಾಸವಾಗಿದ್ದರು. ಅಕ್ಕ ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದ ಕಾರಣ ತಂದೆಯವರ ಅಲ್ಪಸ್ವಲ್ಪ ಸಂಪಾದನೆ ವೈದ್ಯಕೀಯ ಔಷಧೋಪಚಾರಗಳಿಗೂ ಸಾಕಾಗುತ್ತಿರಲಿಲ್ಲ. ಬಡತನದ ಬೇಗೆಯಲ್ಲಿ ಬೆಳೆದ ಪ್ರತೀಕ್ಷಾ ಆರ್ಥಿಕ ಮುಗ್ಗಟ್ಟಿನಿಂದಾಗಿ 10ನೇ ತರಗತಿಯವರೆಗೆ ತನ್ನ ಶಾಲಾ ಶುಲ್ಕವನ್ನು ತಾನೇ ದುಡಿದು ಭರಿಸುತ್ತಿದ್ದರು. ನೃತ್ಯದ ಬಗ್ಗೆ ಅತಿಯಾದ ಒಲವಿದ್ದರೂ ಆರ್ಥಿಕ ಸಂಕಷ್ಟದಿಂದಾಗಿ ನೃತ್ಯ ಕಲಿಯುವ ಆಸೆಯನ್ನು ಕೈಬಿಟ್ಟರು. 10ನೇ ತರಗತಿಯ ನಂತರ ಎರಡು ತಿಂಗಳ ರಜಾ ಅವಧಿಯಲ್ಲಿ ಕಾಲೇಜು ಶುಲ್ಕ ಭರಿಸುವುದಕ್ಕಾಗಿ ದುಡಿಯಲು ಗೋಪಾಲ್ ಕಾಮತ್ ಅಂಡ್ ಕಂಪನಿಗೆ ಕೆಲಸಕ್ಕೆ ಸೇರಿಕೊಂಡರು. ಇಲ್ಲಿ ಇವರನ್ನು ನೋಡಿದ ಶ್ರೀ ಪ್ರಕಾಶ್ ಪ್ರಭು ಹಿರಿಯರೊಂದಿಗೆ ಮದುವೆಯ ಮಾತುಕತೆಗೆ ಇವರ ಮನೆಗೆ ಬಂದರು. ಆದರೆ ಮುಂದಿನ ಕಾಲೇಜು ವಿದ್ಯಾಭ್ಯಾಸಕ್ಕೆ ಅವರಿಂದ ಸಮ್ಮತಿ ಇರಲಿಲ್ಲ. ಪ್ರಾಪ್ತ ವಯಸ್ಕರಾಗುವವರೆಗೆ ಪ್ರತೀಕ್ಷಾರನ್ನು ಎರಡು ವರ್ಷ ಮನೆಯಲ್ಲಿ ಇರಿಸಿಕೊಂಡ ತಂದೆ ತಾಯಿ 18ನೇ ಪ್ರಾಯಕ್ಕೆ ಮದುವೆ ಮಾಡಿಕೊಟ್ಟರು. ತನ್ನ 19ನೇ ವಯಸ್ಸಿಗೆ ಮಗಳು ಪ್ರೇಕ್ಷಾ ಪಿ. ಪ್ರಭು ಜನಿಸಿದಳು. ಹೆಚ್ಚಿನ ವಿದ್ಯಾಭ್ಯಾಸ ತಾನು ಮಾಡಲಿಲ್ಲ ಎಂಬ ಕೀಳರಿಮೆಯೇ ಪ್ರತೀಕ್ಷಾರಿಗೆ ಇರಲಿಲ್ಲ, ಮತ್ತವರು ಹತಾಶರಾಗಿ ಕೈ ಕಟ್ಟಿ ಕುಳಿತುಕೊಳ್ಳಲೂ ಇಲ್ಲ. ಹತ್ತು ತಿಂಗಳ ಮಗುವನ್ನು ಬಿಟ್ಟು ಐಡಿಯಲ್ ಐಸ್ ಕ್ರೀಮ್ ನಲ್ಲಿ ತಮ್ಮ ಜವಾಬ್ದಾರಿಯುತ ಜೀವನದ ಮೊದಲ ದುಡಿಮೆಯನ್ನು ಆರಂಭಿಸಿದರು. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಠ ತೊಟ್ಟು, ಕಂಪ್ಯೂಟರ್ ತರಗತಿಗೆ ಸೇರಿಕೊಂಡರು. ಇದರ ಆಧಾರದ ಮೇಲೆ ಪೋರೆಸ್ಟ್ ಏಜೆನ್ಸೀಸ್ ನ ಮೆಡಿಕಲ್ ಡಿಸ್ಟ್ರಿಬ್ಯೂಟರ್ ಸಾಮಾನ್ಯವಾಗಿ ಉದ್ಯೋಗ ದೊರೆಯಿತು. ಇಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದ ನಂತರ ತನ್ನ ಚಿಕ್ಕಪ್ಪನ ಹೇಳಿಕೆಯಂತೆ ಅವರ ಕಚೇರಿಯಲ್ಲಿ ಕೆಲಸ ಮಾಡತೊಡಗಿದರು.
ನೃತ್ಯದ ಬಗ್ಗೆ ಯಾವುದೇ ಪ್ರಾಥಮಿಕ ಜ್ಞಾನ ಇಲ್ಲದ ಇವರಿಗೆ ಅಪಾರ ಒಲವು ಇತ್ತು. ಮಗಳು ನೃತ್ಯ ತರಗತಿಗೆ ಹೋಗುವಾಗ ಅವಳೊಂದಿಗೆ ಹೋಗಿ, ನೋಡಿ ಹೆಚ್ಚಿನ ಆಸಕ್ತಿ ಹುಟ್ಟಿಕೊಂಡಿತು. ಇದೇ ಸಂದರ್ಭದಲ್ಲಿ ಹಿರಿಯರಿಗಾಗಿ ಹಮ್ಮಿಕೊಂಡಿದ್ದ ಒಂದು ಯೋಗ ತರಗತಿಗೆ ಹೋದಾಗ ಅಲ್ಲಿ ನೃತ್ಯ ಮಾಡಬೇಕೆಂದು ಒತ್ತಾಯಿಸಿದರು. ತಾನು ನೃತ್ಯ ಮಾಡುವುದಿಲ್ಲ ಆದರೆ ಹಿರಿಯರಿಗೆ ನೃತ್ಯ ತರಬೇತಿ ನೀಡುವುದಾಗಿ ಇವರು ಹೇಳಿದಾಗ ಎಲ್ಲರೂ ಸಂತೋಷಗೊಂಡರು. ಮನೆಗೆ ಬಂದು ದೃಶ್ಯ ಮಾಧ್ಯಮಗಳನ್ನು ವೀಕ್ಷಿಸಿ, ಅದರಿಂದ ಪಡೆದ ಜ್ಞಾನಕ್ಕೆ ತನ್ನ ಪ್ರತಿಭೆಯನ್ನು ಬೆರೆಸಿ ಶ್ರಮಪಟ್ಟು ಹಿರಿಯರನ್ನು ತರಬೇತಿಗೊಳಿಸಲಾಯಿತು. ಅತ್ತಾವರ ಕೆ.ಎಂ.ಸಿ.ಯಲ್ಲಿ ಅದು ಪ್ರದರ್ಶನ ಕಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪ್ರತೀಕ್ಷಾರಿಗೆ ಅಂದು ಆದ ವಿಶೇಷ ಅನುಭವ ಹಿರಿಯರಿಂದ ‘ಟೀಚರ್’ ಎಂದು ಕರೆಸಿಕೊಂಡದ್ದು, ಇಂದಿನವರೆಗೂ ಅದು ಮುಂದುವರಿದುಕೊಂಡು ಬಂದಿದೆ. ಇದು ಇವರ ಜೀವನದ ಒಂದು ಸಂಕ್ರಮಣ ಕಾಲ ಎಂದೇ ಹೇಳಬಹುದು. ನೃತ್ಯ ತರಗತಿ ಪ್ರಾರಂಭ ಮಾಡಬೇಕೆಂದು ಅಲ್ಲಿ ಸೇರಿದ ಹಿರಿಯರ ಆಗ್ರಹದಿಂದ ಆರಂಭವಾದದ್ದು ‘ಟೀಮ್ ಉಪಾಸನಾ’ ನೃತ್ಯ ತಂಡ. ಬೇರೆ ಬೇರೆ ಜಿಲ್ಲೆಗಳ ಪ್ರತಿಷ್ಟಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ಹೆಗ್ಗಳಿಕೆ ‘ಟೀಮ್ ಉಪಾಸನಾ’ ತಂಡದ್ದಾಗಿದೆ.
ಟೀಮ್ ಉಪಾಸನಾ ಉತ್ತಮ ಉದ್ದೇಶವನ್ನು ಇಟ್ಟುಕೊಂಡು ಮುಂದುವರೆಯುತ್ತಿರುವ ಒಂದು ತಂಡ. ಇದರ ನಿರ್ದೇಶಕಿ ಪ್ರತೀಕ್ಷಾ ಪ್ರಭು ಇವರ ಅಂತರಾಳದಿಂದ ಬಂದ ಮಾತುಗಳು ಅದ್ಭುತ. “ವಿವಾಹಿತರಾಗಿ ಮಕ್ಕಳು ಮರಿಗಳಾದ ಮೇಲೆ ನಮ್ಮ ಜೀವನ ಇಷ್ಟೇ” ಎಂದು ತಿಳಿದುಕೊಳ್ಳುವ ಮಹಿಳೆಯರೇ ಹೆಚ್ಚು. ಎಷ್ಟೋ ಮಂದಿ ಬಾಲ್ಯದ ತಮ್ಮ ಆಸೆಗಳನ್ನೆಲ್ಲ ಅದುಮಿಟ್ಟು ಸಂಸಾರಕ್ಕಾಗಿ ಜೀವನ ಸವೆಸುತ್ತಾರೆ…. ಸವೆಸುತ್ತಲೇ ಇರುತ್ತಾರೆ. ಈ ಬಿಡುವಿಲ್ಲದ ದುಡಿಮೆಯ ಮಧ್ಯೆ ನಮಗಾಗಿ ಸ್ವಲ್ಪ ಸಮಯವನ್ನು ನಾವು ಕಾದಿರಿಸಬೇಕು, ಸಂತೋಷದಿಂದ ಇರಬೇಕು ಎಂಬುದನ್ನು ಮನದಟ್ಟು ಮಾಡಬೇಕೆಂಬುದೇ ಟೀಮ್ ಉಪಾಸನಾ ತಂಡದ ಉದ್ದೇಶ. ತಾನು ನೃತ್ಯದ ಗಂಧ ಗಾಳಿ ಇಲ್ಲದೆ ಮತ್ತೆ ಆಸಕ್ತಿಯಿಂದ ಅದರಲ್ಲಿ ತೊಡಗಿಸಿಕೊಂಡಂತೆ, ನೃತ್ಯದ ಬಗ್ಗೆ ಏನು ಜ್ಞಾನವಿಲ್ಲದವರಿಗೆ ತರಬೇತಿ ನೀಡುವ ಹಂಬಲ ನನ್ನದು. ಬಾಲ್ಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದು ಅವಕಾಶದಿಂದ ವಂಚಿತರಾದವರು ಈಗ ಅವಕಾಶ ಪಡೆದು ಸಂತೋಷ ಹೊಂದಬೇಕು ಎಂದು ನಿರ್ದೇಶಕಿ ಹೇಳುವ ಮಾತುಗಳು ನಮ್ಮಲ್ಲಿ ಕುತೂಹಲ ಮೂಡಿಸುತ್ತವೆ. ಏಳು ವರ್ಷದಿಂದ ಆರಂಭಿಸಿ 80 ವರ್ಷ ವಯಸ್ಸಿನವರಿಗೂ ನೃತ್ಯದ ಸವಿ ಉಣಿಸಿದವರು ಪ್ರತೀಕ್ಷಾ. ಸುಮಾರು 150ಕ್ಕೂ ಮಿಕ್ಕಿದ ನೃತ್ಯಾರ್ಥಿಗಳು ಇವರ ನಿರ್ದೇಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಟೀಮ್ ಉಪಾಸನಾದಿಂದ ಅದ್ಭುತ ಸೇವಾ ಕಾರ್ಯಗಳು ನಡೆಯುತ್ತಿವೆ ಎಂದರೆ ಎಲ್ಲರಿಗೂ ಅಚ್ಚರಿ ಅನ್ನಿಸಬಹುದು. ಪ್ರತೀಕ್ಷಾ ಅಂದರೆ ದಯೆ, ಕರುಣೆ, ಸಹನೆಗಳು ಸಮ್ಮೇಳಿತಗೊಂಡ ಮಾನವೀಯತೆಯ ಮೂರ್ತಿ. ಸುಮಾರು 10 ವರ್ಷಗಳಿಂದ ಯಾವುದೇ ಸದ್ದು ಗದ್ದಲವಿಲ್ಲದೆ ಮೂರು ರೀತಿಯಲ್ಲಿ ‘ಟೀಮ್ ಉಪಾಸನಾ’ ಸೇವಾ ಕಾರ್ಯ ನಡೆಸುತ್ತಿದೆ. ಸುಮಾರು 1,50,000 ದಷ್ಟು ಮೊತ್ತವನ್ನು ತಮ್ಮೊಳಗೆ ಸಂಗ್ರಹಿಸಿ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಸುಮಾರು 15 ಮಂದಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ವ್ಯವಸ್ಥೆ ಈ ಸಂಸ್ಥೆಯದು. ‘ಟೀಮ್ ಉಪಾಸನಾ’ ಮಾಡುವ ಇನ್ನೊಂದು ಶ್ಲಾಘನೀಯ ಕಾರ್ಯ ಆಶ್ರಮಗಳಿಗೆ ಭೇಟಿ ಅಲ್ಲಿರುವ ವಯೋವೃದ್ಧರಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಿ ಉಪಯುಕ್ತ ವಸ್ತುಗಳನ್ನು ಬಹುಮಾನ ರೂಪದಲ್ಲಿ ನೀಡುವುದು. ನವಂಬರ್ ತಿಂಗಳಲ್ಲಿ ಅನಾಥಾಶ್ರಮಗಳ ಸಂದರ್ಶನ. ಒಂದು ಬಾರಿ ಮಕ್ಕಳು ಒಣ ಹಾಕಿದ ಹರಿದ ಒಳ ಉಡುಪುಗಳನ್ನು ಕಂಡು ಬೇಸರಗೊಂಡು, ಅಂದೇ ಆಶ್ರಮದ ಮಕ್ಕಳಿಗೆ ಒಳ ಉಡುಪು ಮತ್ತು ಉಪಯುಕ್ತ ವಸ್ತುಗಳನ್ನು ನೀಡುವ ನಿರ್ಧಾರ ಮಾಡಿದ ಟೀಮ್ ಉಪಾಸನಾ ಹಲವಾರು ವರ್ಷಗಳಿಂದ ಈ ಕೆಲಸ ಮಾಡುತ್ತಿದೆ. ಚಲವಾದಿಯಾದ ಪ್ರತೀಕ್ಷಾ ಹೇಳುತ್ತಾರೆ ಜೀವನದಲ್ಲಿ ಅಸಾಧ್ಯವಾದುದು ಯಾವುದು ಇಲ್ಲ. ಆಗೋದಿಲ್ಲ ಎಂದು ಕೈಕಟ್ಟಿ ಕುಳಿತು ನಿಷ್ಕ್ರಿಯರಾಗುವುದು ಸರಿಯಲ್ಲ. ನಿರಂತರ ಪ್ರಯತ್ನ ನಮ್ಮದು ಪ್ರತಿಫಲದ ದೈವೇಚ್ಛೆ. ಅಕ್ಕ, ಅಪ್ಪ, ಅಣ್ಣ ಮಾತ್ರವಲ್ಲ ಕೈಹಿಡಿದ ಪತಿ ಹೀಗೆ ಜೀವನದಲ್ಲಿ ಬಹಳ ಮುಖ್ಯವಾದದ್ದನ್ನೇ ನಾನು ಕಳೆದುಕೊಂಡಿದ್ದೇನೆ ಎಂಬುದು ಪ್ರತೀಕ್ಷಾ ಪ್ರಭು ಇವರ ಮನ ಮಿಡಿಯುವ ಬಹಳ ನೋವಿನ ಮಾತು. ಜೀವನದಲ್ಲಿ ಯಾರ ಮುಂದೆಯೂ ಕೈಚಾಚದೆ ತಾನೇ ಸಂಪಾದಿಸಬೇಕೆಂಬುದು ಪ್ರತೀಕ್ಷಾರ ನಿರ್ಧಾರ. ವಿದ್ಯೆ ಇಲ್ಲ ಎಂಬ ಭಾವನೆಯನ್ನು ನಗಣ್ಯವಾಗಿಸಿ ಕಾರ್ಯಕ್ರಮ ನಿರೂಪಣೆಯಿಂದ ಆರಂಭಿಸಿ ತನ್ನಿಂದ ಸಾಧ್ಯವಾಗುವ ಎಲ್ಲಾ ಕಾರ್ಯಕ್ರಮಗಳನ್ನು ದಿಟ್ಟತನದಿಂದ ನಡೆಸಿಕೊಡುವ ಪ್ರತೀಕ್ಷಾ ತನ್ನ ತಾಯಿ ಮತ್ತು ಮಗಳ ಜೊತೆ ಸುಂದರ ಜೀವನ ನಡೆಸುತ್ತಿದ್ದಾರೆ.
ಪ್ರಸ್ತುತ ಕೊಡಿಯಾಲ್ ಬೈಲ್ ಇಲ್ಲಿರುವ ‘ಗಿರಿಧರ್ ರಾವ್ ಸಂಜೀವಿನಿ ಬಾಯಿ’ ವೃದ್ಧಾಶ್ರಮದಲ್ಲಿ ಸ್ವಇಚ್ಛೆಯಿಂದ ಸ್ವಯಂಸೇವಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಜೆ ತನ್ನ ನೃತ್ಯಾರ್ಥಿಗಳಿಗೆ ನೃತ್ಯ ತರಬೇತಿ, ಹಗಲು ಹೊತ್ತಿನಲ್ಲಿ ಆಶ್ರಮ ಹಿರಿಯರ ಮನಸ್ಸನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ಪ್ರತೀಕ್ಷಾ ಜೀವನದ ಸಂಜೆಯಲ್ಲಿ ಅವರಿಗೆ ಬೇಕಿರೋದು ಪ್ರೀತಿ ಮತ್ತು ಮಾತು ಎನ್ನುತ್ತಾರೆ. ಕೂದಲು ಬಾಚುವುದು, ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ಅವರ ಜೊತೆ ಕಲೆತು ಮಾತನಾಡುವುದು ಹೀಗೆ ಅವರ ಎಲ್ಲಾ ರೀತಿಯ ಆರೈಕೆ ಮಾಡುವುದು ಇವರ ದಿನನಿತ್ಯದ ಕರ್ತವ್ಯ. ರಾತ್ರಿಯಾಗಲಿ ಹಗಲಾಗಲಿ ಯಾವ ಹೊತ್ತಿಗೆ ಕರೆ ಬಂದರೂ ಅಸೌಖ್ಯದಲ್ಲಿದ್ದವರನ್ನು ಆಸ್ಪತ್ರೆಗೆ ದಾಖಲು ಮಾಡಲು ಪ್ರತೀಕ್ಷಾ ತಕ್ಷಣ ಕ್ರಿಯಾಶೀಲರಾಗುತ್ತಾರೆ. ಇದು ಪ್ರತೀಕ್ಷಾ ಇವರ ಸೇವಾ ಮನೋಭಾವಕ್ಕೆ ಸಾಕ್ಷಿ. ತನ್ನ ಎಲ್ಲಾ ನೋವುಗಳನ್ನು ಬಚ್ಚಿಟ್ಟು ಟೀಮ್ ಉಪಾಸನಾದ ಉದ್ದೇಶಕ್ಕೆ ಪ್ರಾಮುಖ್ಯತೆ ಕೊಡುವ ದಿಟ್ಟತನದ ಸ್ಪೂರ್ತಿಯ ಚಿಲುಮೆ ನೃತ್ಯ ಸಂಯೋಜಕಿ ಶ್ರೀಮತಿ ಪ್ರತೀಕ್ಷಾ ಪ್ರಭು ಇವರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.
ರತ್ನಾವತಿ ಜೆ. ಬೈಕಾಡಿ