ಶ್ರೇಷ್ಠ ಕವಿ ಕಲಾವಿದರಿಗೆ ಪ್ರಕೃತಿ ಸೃಷ್ಟಿಯೇ ಪ್ರೇರಣೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಪ್ರಕೃತಿಯಲ್ಲಿ ಯಾವುದೇ ವಸ್ತು ನಗಣ್ಯವಲ್ಲ. ಅದರದೇ ಆದ ಸೃಷ್ಟಿ ವಿಶೇಷತೆಯನ್ನು ಹೊಂದಿರುತ್ತದೆ. ನಮ್ಮ ಸುತ್ತಮುತ್ತ ಅದೆಷ್ಟೋ ಪುಷ್ಪ-ಪತ್ರೆಗಳು ಅರಳಿ, ಒಣಗಿ ಬಿದ್ದು ಭೂ ಮಡಿಲಲ್ಲಿ ಜೀರ್ಣವಾಗಿ ಹೋಗುವುದು ಪ್ರಕೃತಿ ಕ್ರಿಯೆ, ನಿಯಮ. ಇವೆಲ್ಲ ಸಾಮಾನ್ಯ ಕಸವಾಗಿ, ಅನುಪಯುಕ್ತ ವಸ್ತುವಾಗಿ ಕಂಡರೂ, ಚಿತ್ರ ಕಲಾವಿದನ ದೃಷ್ಟಿ, ಚಿಂತನೆ ಬೇರೆಯೇ ಇರುವುದು. ಅವುಗಳನ್ನೆ ಆಯ್ದು, ಹೆಕ್ಕಿ, ಉಪಯೋಗಿಸಿಕೊಂಡು ಒಂದೊಂದಾಗಿ ಸಂಯೋಜಿಸಿ, ಕಲಾವಿದನ ಅದ್ಭುತ ಕೈಚಳಕದಿಂದ ಸೃಷ್ಟಿಸಲ್ಪಡುವ ಕೃತಿಗಳು ಜನ ಸಾಮಾನ್ಯರ ಊಹೆಗೂ ನಿಲುಕದ್ದು ; ಇಂತಹ ವಸ್ತುಗಳನ್ನು ಉಪಯೋಗಿಸಿಕೊಂಡು ಸೃಷ್ಟಿಸಿದ ಚಿತ್ರಕಲಾ ಕೃತಿಗಳಿಗೂ ಹೊಸ ರೂಪ, ಜೀವಂತಿಕೆ ಕೊಡಬಹುದೆಂಬುದನ್ನು ಕಂಡು ಅರೆ ಘಳಿಗೆ ಮೂಕ ವಿಸ್ಮಿತರಾಗುವುದು ಸಹಜವೇ. ಇಂತಹ ವಿಶಿಷ್ಟ ಪುಷ್ಪ-ಚಿತ್ರ ಕಲಾವಿದೆ ತಮ್ಮ ಅಪೂರ್ವ ಚಿತ್ರಕಲಾ ಸಾಧನೆಯಿಂದಲೇ ಕಳೆದ ಐದು ವರ್ಷಗಳಲ್ಲಿ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದವರು ನಮ್ಮ ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಪಡುಬಿದ್ರೆ ಶ್ರೀಮತಿ ರೂಪಾ ವಸುಂಧರ ಆಚಾರ್ಯರು.
ಸಂಸ್ಕಾರಯುತ, ವಿದ್ಯಾವಂತ, ಸಾಹಿತ್ಯ ಕಲಾ ಅಭಿರುಚಿಯಿರುವ ಕಲಾ ಪೋಷಕರೂ ಆದ ಉಡುಪಿ ಸಾಲಿಗ್ರಾಮದ ಮಹಾಬಲೇಶ್ವರ ಆಚಾರ್ಯ ಮತ್ತು ಪ್ರೇಮ ಆಚಾರ್ಯ ದಂಪತಿಗಳ ಸುಪುತ್ರಿ. ಈ ಹಿನ್ನೆಲೆಯಿಂದ ಬಂದ ಇವರು ತಮ್ಮ ಶಾಲಾ ದಿನಗಳಲ್ಲೇ ಚಿತ್ರಕಲೆ, ಸಂಗೀತ, ಸಾಹಿತ್ಯದಲ್ಲಿ ಹೆಚ್ಚಿನ ಒಲವು ಇದ್ದುದರಿಂದ ಬಿ.ಎಸ್ಸ್.ಸಿ. ಪದವಿ ಕಾಲೇಜು ವರ್ಷಗಳಲ್ಲಿ ಮಂಗಳೂರಿನ ಹೆಸರಾಂತ ಬಿ.ಜಿ.ಎಂ. ಚಿತ್ರಕಲಾ ಶಾಲೆಯಲ್ಲಿ ಚಿತ್ರಕಲೆಯ ವಿವಿಧ ಪ್ರಕಾರಗಳಲ್ಲಿ ಹೆಚ್ಚಿನ ಪ್ರಾವೀಣ್ಯತೆಯನ್ನೂ, ಜೊತೆಗೆ ಚಿತ್ರಕಲೆಯಲ್ಲಿ ಮೂರು ವರ್ಷಗಳ ಉನ್ನತ ಶಿಕ್ಷಣವನ್ನು ದುಬಾಯಿಯಲ್ಲಿ ಪಡೆದುದು ಪ್ರಮುಖವಾಗಿ ಅವರ ಕಲಾ ಸಾಧನೆಗೆ ಬುನಾದಿಯಾಯ್ತು.
ಮದುವೆಯಾದ ನಂತರದಲ್ಲಿ ಪತಿಯ ಉದ್ಯೋಗದ ನಿಮಿತ್ತ ಶಾರ್ಜಾದಲ್ಲಿ ನೆಲೆಸಿ, ಪ್ರತಿಷ್ಟಿತ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರೂ ತನ್ನ ಇಷ್ಟವಾದ ಚಿತ್ರಕಲೆಯನ್ನು ಬಿಡದೆ ಮುಂದುವರಿಸಿದರು. ಶಾರ್ಜಾ, ದುಬಾಯಿಯಲ್ಲಿ ನೆಲೆಸಿರುವ ದಕ್ಷಿಣ ಭಾರತೀಯ ವಿವಿಧ ಸಮಾಜ, ಸಮುದಾಯಗಳ ಮಕ್ಕಳಿಗೆ ಚಿತ್ರಕಲೆ ಹಾಗೂ ಇತರೇ ಧರ್ಮ ಸಂಸ್ಕಾರಗಳ ತರಬೇತಿ, ತರಗತಿಗಳನ್ನು ಉಚಿತವಾಗಿ ಹದಿಮೂರು ವರ್ಷಗಳಲ್ಲಿ ನಡೆಸಿಕೊಂಡು ಬಂದಿರುವುದು ಚಿತ್ರಕಲೆ ಹಾಗೂ ನಮ್ಮ ಸಂಸ್ಕೃತಿಗಳ ಬಗೆಗಿನ ಕಳಕಳಿಯನ್ನು ಎತ್ತಿ ತೋರಿಸುತ್ತದೆ. ದುಬಾಯಿಯ ಪ್ರತಿಷ್ಠಿತ ಜೆಮ್ಸ್ ವಿದ್ಯಾ ಸಂಸ್ಥೆ ಮತ್ತು ದೆಹಲಿ ಹರಿಯಾಣದ ಸನ್ ಸಿಟಿ ವರ್ಲ್ಡ್ ವಿದ್ಯಾ ಸಂಸ್ಥೆಗಳಲ್ಲಿ ತಲಾ ಮೂರು ವರ್ಷಗಳಂತೆ ಕಲಾ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸಿರುವುದು ಮಹತ್ತರವಾದುದು.
ಸದ್ಯ ಕಳೆದ ಎಂಟು ವರ್ಷಗಳಿಂದ ತನ್ನ 23 ವರ್ಷಗಳ ಚಿತ್ರಕಲಾ ಸೇವಾ ಅನುಭವದೊಂದಿಗೆ ಕಲಾ ಸೇವೆಯನ್ನು ಪಡುಬಿದ್ರೆಯ ತನ್ನ ಸ್ವಗ್ರಹವನ್ನೇ ಕೇಂದ್ರವಾಗಿಸಿಕೊಂಡು, ಮನೆಯ ತಾರಸಿಯಲ್ಲೇ ಕುಸುಮ ಬಾಲೆಯ ಮಾದರಿ ಹೂತೋಟ, ವಿಶಿಷ್ಟ ವಿನ್ಯಾಸದ ಗಿಡ ಬಳ್ಳಿಗಳ, ವಿವಿಧ ಜಾತಿ ಪ್ರಭೇದಗಳ ಹೂ ಗಿಡಗಳ, ವರ್ಟಿಕಲ್ ಗಾರ್ಡನಿಂಗ್, ಮಿನಿಯೇಚರ್ ಗಾರ್ಡನಿಂಗ್ ಮತ್ತು ಒಣ ಪುಷ್ಪ ಚಿತ್ರಕಲೆಗಳ ಬಗ್ಗೆ ಹೊಸ ಹೊಸ ಆಯಾಮಗಳಲ್ಲಿ ಆವಿಷ್ಕಾರವನ್ನು ಮಾಡುತ್ತಿದ್ದಾರೆ.
ಮನೆಯನ್ನೇ ಬೃಂದಾವನ್ನಾಗಿಸಿಕೊಂಡು ಸಂಶೋಧನ ಕೇಂದ್ರವಾಗಿಸಿ ಪುಷ್ಪ ಚಿತ್ರಕಲಾ ಪ್ರದರ್ಶನ ಕೇಂದ್ರವಾಗಿ ಚಿತ್ರಕಲಾ ಶಿಬಿರಗಳನ್ನಲ್ಲದೆ ತರಬೇತಿ, ತರಗತಿಗಳನ್ನೂ ನಡೆಸುತ್ತಿದ್ದಾರೆ. ಹೊಸ ಪ್ರತಿಭೆಗಳಿಗೆ ಪೂರ್ಣ ಪ್ರಮಾಣದಲ್ಲಿ ಮಾರ್ಗದರ್ಶನ, ಪ್ರೋತ್ಸಾಹ, ಮಾನವೀಯತೆಯ ಸಹಾಯ ಹಸ್ತ ನೀಡುತ್ತಿರುವುದು ಹೆಗ್ಗಳಿಕೆ. ತಾಯಿಯಿಂದ ಬಳುವಳಿಯಾಗಿ ಬಂದ ಹೂಮಾಲೆ ಕಟ್ಟುವ ಕಲೆ, ಅಲಂಕಾರಿಕ ಮಾಲೆ ಜೋಡಿಸುವುದನ್ನು ತಾನೂ ಕಲಿತು ಆಸಕ್ತರಿಗೆ ಕಲಿಸಿ, ತರಬೇತು ನೀಡುವುದರ ಜೊತೆಗೆ ಹೂಮಾಲೆಗಳನ್ನು ಕಲಾ ಪ್ರಕಾರದಲ್ಲಿ ಕಾಪಿಡುವ ಪ್ರಯತ್ನವನ್ನೂ ಮಾಡುತ್ತಿರುವುದು ವಿಶೇಷ. ಬಿಡುವಿನ ವೇಳೆಯಲ್ಲಿ ತನ್ನನ್ನು ಈ ಎತ್ತರಕ್ಕೇರಿಸಿದ ಕುಂಚ ಕಲೆಯ ಕಲಾಕೃತಿಗಳನ್ನು ಜಲವರ್ಣ, ಅಕ್ರಲಿಕ್ ವರ್ಣ, ಮಧುಬನಿ ಮುಂತಾದ ಪ್ರಕಾರಗಳಲ್ಲಿ ರಚಿಸುತ್ತಿದ್ದಾರೆ. ಪ್ರತಿ ಅವಕಾಶವನ್ನು ಸದಾವಕಾಶವಾಗಿ ಪರಿವರ್ತಿಸಿಕೊಂಡು ಸಾಧನೆಯ ಮೆಟ್ಟಿಲಾಗಿ ಹಂತ ಹಂತವಾಗಿ ಈ ಹೊಸ ಪುಷ್ಪ ಚಿತ್ರಕಲಾ ಮಾದರಿ ಉದ್ಯಮ ಕ್ಷೇತ್ರದಲ್ಲಿ ತಳವೂರುತ್ತಿರುವುದು ಸಂತಸ. ತಮ್ಮ ಸರಳತೆಯಿಂದ ಹೆಚ್ಚು ಕಲಾಸಕ್ತರಿಗೆ ಮುಟ್ಟುವಂತೆ ಕಾರ್ಯ ನಿರ್ವಹಿಸುವುದು. ವ್ಯವಸ್ಥಿತ ರೀತಿಯಲ್ಲಿ ಸಮಯ ಪಾಲನೆ, ಸಮಯ ವಿನಿಯೋಗ ಮಾಡುವ ರೀತಿ, ಶೈಲಿ ಇತರೇ ಉದ್ಯಮಾಕಾಂಕ್ಷಿಗಳಿಗೆ ಕಲಾವಿದರಿಗೆ ಮಾದರಿ.
ಕೇಂದ್ರ ಸರಕಾರದ ಇತರೇ ಮೂಲಗಳಲ್ಲಿ ಸಿಗುವ ಸವಲತ್ತು, ಸದಾವಕಾಶಗಳನ್ನು ಸದುಪಯೋಗಿಸುವುದರೊಂದಿಗೆ ಈ ವಿಶಿಷ್ಟ ಪುಷ್ಪ ಚಿತ್ರಕಲಾ ಪ್ರಕಾರಗಳನ್ನು ‘ರೂಪಾ ಕ್ರಿಯೇಷನ್ಸ್’ ಎಂಬ ಹೆಸರಿನಡಿ ಉದ್ಯಮವನ್ನಾಗಿ ಸ್ಥಾಪಿಸಿ, ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬಹುದಾದ ಅವಕಾಶ ಸಾಧ್ಯತೆಗಳನ್ನು ಸಾಧಿಸಿ ತೋರಿಸಿಕೊಟ್ಟಿದ್ದಾರೆ.
ಗೌರವ ಸನ್ಮಾನಗಳು :
ಕರ್ನಾಟಕ ಯುವ ರತ್ನ ಪ್ರಶಸ್ತಿ -2023
ಕರ್ನಾಟಕ ಕಲಾ ರತ್ನ ಪುರಸ್ಕಾರ -2023
ಗುರುಕುಲ ಕಲಾ ಕೌಸ್ತುಭ ಪ್ರಶಸ್ತಿ ಹಂಪಿ -2023
ಜಿಲ್ಲಾ – ರಾಜ್ಯ ಮಟ್ಟದಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳು, ಕಮ್ಮಟಗಳಲ್ಲಿ ಭಾಗವಹಿಸಿರುವುದು ಸುಮಾರು 8 ಪ್ರದರ್ಶನಗಳು
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಡಳಿತ ಮಂಡಳಿಯಿಂದಲೇ ಬೃಹತ್ ಚಿತ್ರಕಲಾ ಕೃತಿಗಳ ಶಾಶ್ವತ ಪ್ರದರ್ಶನಗೊಳ್ಳುತ್ತಿರುವುದು ಇವರ ಪರಿಶ್ರಮಕ್ಕೆ ದೊರೆತ ಗೌರವ.
ಸಮಾಜದ ಅದೆಷ್ಟೋ ಮಾತೃ ಸಾಧಕರು, ಪ್ರತಿಭೆಗಳು ಸಂಸಾರ ಜಂಜಾಟ, ಯಾಂತ್ರಿಕ ಜೀವನ, ಉದ್ಯೋಗಗಳಲ್ಲಿ ಎಲೆಮರೆಯ ಕಾಯಿಯಾಗಿಯೇ ಕಮರಿ ಹೋಗುತ್ತಿರುವ ಪ್ರಸ್ತುತ ಸ್ಥಿತಿಯಲ್ಲಿ ವಿಶಿಷ್ಟ ಪುಷ್ಪ ಚಿತ್ರಕಲಾ ಕಲಾವಿದೆಯಾಗಿ ಸಾಗಿ ಬಂದ ಹಾದಿ ಎಲ್ಲರಿಗೂ ಮಾದರಿ. ಶ್ರೀಮತಿ ರೂಪಾ ವಸುಂಧರ ಆಚಾರ್ಯರ ಪರಿಶ್ರಮ, ಪ್ರಯತ್ನ, ತಾಳ್ಮೆ, ಕರ್ಮ ಶೃದ್ಧೆಗಳೇ ಅವರ ಪ್ರತಿ ಕೃತಿಯ ನೈಜತೆಯ ಜೀವಂತಿಕೆಯಲ್ಲಿ ಕಾಣುವುದು. ಅವರ ಹೊಸತನ ಸ್ವಂತಿಕೆಯ ಪ್ರತಿರೂಪ. ಇವರು ತನ್ನ ಕಲಾ ಸಾಧನೆಯ ಹಾದಿಯಲ್ಲಿ ಕಲಾ ಮಾತೆಯ ಸೇವೆಯೊಂದಿಗೆ ಉತ್ತುಂಗವನ್ನೇರಲಿ ಎಂಬುದೇ ಸಮಾಜದ ಕಲಾಭಿಮಾನಿಗಳ ಹೃದ್ಯಭರಿತ ಆಶಯ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು.
ಕುಂಡೋವು ಉಪೇಂದ್ರ ಆಚಾರ್ಯ
ಬಿ. ಇ. ಎಲೆಕ್ಟ್ರಿಕಲ್ ಎಂಡ್ ಎಲೆಕ್ಟ್ರಾನಿಕ್ಸ್ ವ್ಯಾಸಂಗ ಮಾಡಿರುವ ಇವರು ಭಾರತೀಯ ಪ್ರಾಚೀನ ಇತಿಹಾಸ, ಚಿತ್ರಕಲೆ, ಕರ್ನಾಟಕ ಶಿಲ್ಪ ಮತ್ತು ಶಿಲ್ಪಿಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ ಮತ್ತು ಈ ಬಗ್ಗೆ ಬರವಣಿಗೆಯನ್ನೂ ಮಾಡಿದ್ದಾರೆ . ಶ್ರೀಯುತರು ಬ್ರಾಹ್ಮಿ ಹೆಲ್ತ್ ಕೇರ್ ಟೆಕ್ನಾಲಜೀಸ್ ಎಲ್. ಐ. ಸಿ. ದುಬೈ ಇದರ ವ್ಯಾಪಾರ ಪಾಲುದಾರರಾಗಿದ್ದು, ಪ್ರಸ್ತುತ ಮಂಗಳೂರಿನ ವಾಸವಿ ಹೆಲ್ತ್ ಕೇರ್ ಟೆಕ್ನಾಲಜೀಸ್ ಕಂಪನಿಯ ಮಾಲೀಕರಾಗಿದ್ದಾರೆ. ಶ್ರೀ ವಿಶ್ವಕರ್ಮ ಸೇವಾ ಸಮಿತಿ ಯು. ಎ.ಇ. ಇದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ.
2 Comments
Wish u good luck
ರೂಪಾ ವಸುಂಧರ ಆಚಾರ್ಯರ ಆಸಕ್ತಿ, ಪ್ರತಿಭೆ ಮತ್ತು ಸಾಧನೆಗಳ ಚಿತ್ರಣ ಚೆನ್ನಾಗಿದೆ. ಉತ್ತಮ ಮಾಹಿತಿ.