ಮಹಿಳಾ ಯಕ್ಷರಂಗಕ್ಕೊಂದು ಮೈಲುಗಲ್ಲು. ಅದರಲ್ಲೂ ಭಾಗವತಿಕೆಗೆ ಸದಾ ಪ್ರಾತಃಸ್ಮರಣೀಯರು ಲೀಲಕ್ಕನವರು, ಅವರ ಹಿಂದೂ ಆಗಲಿಲ್ಲ; ಜೊತೆಗೆ ಇನ್ನು ಆಗುವುದೂ ದೂರದ ಮಾತು. ಹೇಳಿಕೇಳಿ ಲೀಲಕ್ಕನವರ ಯಕ್ಷ ಮೆರವಣಿಗೆಯ ಆ ಕಾಲ ತೀರಾ ಮಡಿವಂತಿಕೆಯದ್ದು. ಅದನ್ನು ಮೆಟ್ಟಿ ನಿಂತು ಸಾಧಿಸಿದ ಅಪೂರ್ವ ಮಹಿಳಾ ಭಾಗವತರು ಈಕೆ. ಯಕ್ಷರಂಗಕ್ಕೊಂದು ಅಪೂರ್ವ ದಾಂಪತ್ಯದ ಜೋಡಿ ಹರಿ-ಲೀಲಾ.
ಕಡಬದ ಹರಿನಾರಾಯಣ ಬೈಪಾಡಿತ್ತಾಯರು ಲೀಲಕ್ಕನನ್ನು ಮದುವೆಯಾದಾಗ ಲೀಲಕ್ಕನಿಗೆ ಯಕ್ಷರಂಗದ ಕಂಪು ಇರಲಿಲ್ಲ. ಆದರೆ ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದ ಮಧೂರಿನ ಪ್ರತಿಭೆ ಆಕೆ. ಪ್ರಾಯಶಃ ಆ ಸಂಗೀತ ಜ್ಞಾನವೇ ಅವರಿಂದ ಭಾಗವತಿಕೆಯನ್ನು ಮಾಡಿಸಿತು ಎಂದರೂ ಸರಿಯೇ. ಅಲ್ಲದೇ, ಆಕೆಯೊಳಗಿರುವ ಕಲಾವಿದೆಯನ್ನು ಸೊರಗಲು ಬಿಡಬಾರದು ಎಂದು ಗಂಡ ಹರಿನಾರಾಯಣ ಬೈಪಾಡಿತ್ತಾಯರು ಅವರನ್ನು ಯಕ್ಷಗಾನಕ್ಕೆ ತಂದರು. ಪತಿಯೇ ಗುರುವಾಗಿ ನಿಂತು ಕಲಿಸಿದರು. ಶ್ರದ್ದೆಯಿಂದ ಲೀಲಕ್ಕನೂ ಕಲಿತರು ಪರಸ್ಪರರ ಯಕ್ಷಗಾನಾಸಕ್ತಿ ಒಂದು ಸುಂದರ ಯಕ್ಷ ಹೂತೋಟವನ್ನು ಬೆಳೆಸಿತು. ಆ ವೃಕ್ಷ ಇಂದು ಬೃಹತ್ತಾಗಿ ಬೆಳೆದು ನಿಂತು ಅನೇಕ ಕಲಾಸಕ್ತರಿಗೆ ನೆರಳೀವ ಕಲ್ಪವೃಕ್ಷವಾಯಿತು.
ನಂತರ ಅವರ ಕುಟುಂಬ ತಲಕಳಕ್ಕೆ ಬಂದು ವಾಸ್ತವ್ಯ ಹೂಡಿತು. ಅಲ್ಲೂ ಯಕ್ಷ ಕಂಪು ಪಸರಿಸಿತು. (ಸದ್ಯದಲ್ಲಿ ಪುನರೂರಿಗೆ ಹೋಗಿ ನೆಲಸುವವರಿದ್ದಾರೆ) ಪೂರ್ಣ ರಾತ್ರಿ ಭಾಗವತಿಕೆ ನಡೆಸಬೇಕಿತ್ತು ಹಿಂದೆ. ಈಗೆಲ್ಲಾ ನಾಲ್ಕಾರು ಮಹನೀಯರ ಭಾಗವತರಾಗಿ ಬಿಡುವಿಲ್ಲದ ಕಲಾವಿದರಾಗಿದ್ದಾರೆ. ಕಾಲದ ಓಘದಲ್ಲಿ ತಾನು ತನ್ನ ಪತಿದೇವರ ಜೊತೆಗೂಡಿ ತಿರುಗಾಟ ಮಾಡಿದ ಮೇಳಗಳೆಷ್ಟೋ? ಲೆಕ್ಕವಿಲ್ಲ. ಆಗೆಲ್ಲಾ ಮಹಿಳಾ ಭಾಗವತರಿದ್ದಾರೆ ಎಂಬುದೇ ಧಣಿಗೆ ಟ್ರಂಪ್ ಕಾರ್ಡ್. ಯಜಮಾನನ ಗಲ್ಲಾಪೆಟ್ಟಿಗೆ ಟೆಂಟ್ ಮೀರಿ ಬೆಳೆದದ್ದೂ ಇದೆ. ಇವರಿರುವ ಮೇಳಗಳಲ್ಲಿ ಮಹಿಳೆ ಎಂಬ ವಿಶೇಷ ಸೌಲಭ್ಯವಿದ್ದಿದ್ದರೂ ಬೇರೆ ಬೇರೆ ಪ್ರಾಯೋಗಿಕ ಸಮಸ್ಯೆಗಳನ್ನು ಬದಿಗಿಟ್ಟು ಬೆಳಗಿದರು. ಇಬ್ಬರು ಮಕ್ಕಳು ಸಂಸಾರದ ಕಣ್ಣುಗಳಾಗಿ ಬೆಳೆವಾಗ ಮನೆಯನ್ನೂ – ಯಕ್ಷರಂಗವನ್ನೂ ಸರಿದೂಗಿಸಿಕೊಂಡು ಹೋಗಬೇಕಾದಾಗಲೂ ಬೆಚ್ಚದೆ ಎದುರಿಸಿ ಯಶಸ್ವಿ ಭಾಗವತೆ ಎನಿಸಿಕೊಂಡರು. ಅರುವ ಮೇಳ, ಬಪ್ಪನಾಡು, ತಲಕಳ….ಹೀಗೆ ಹತ್ತು ಹಲವು ಮೇಳಗಳಲ್ಲಿ ಅವಿರತವಾಗಿ ಆರು ತಿಂಗಳ ಕಾಲ ತಿರುಗಾಟ ಮಾಡಿದ ಮಹಿಳೆ ಲೀಲಕ್ಕ ಒಬ್ಬರೇ ಎಂಬುದು ಯಾರೂ ಎದೆತಟ್ಟಿ ಹೇಳಬಹುದಾದ ಮಾತು. ಅನೇಕ ಪ್ರಸಂಗಗಳು ಲೀಲಕ್ಕನಿಗೆ ಕಂಠಸ್ಥವಾಗಿದ್ದುವು. ಅದರಲ್ಲೂ ದಕ್ಷಾಧ್ವರ ಪ್ರಸಂಗದ ಹಾಡುಗಳನ್ನು ಭಾವ ಭಕ್ತಿಯಿಂದ ಹಾಡಿ ಪ್ರೇಕ್ಷಕರನ್ನು ದಿಗ್ಮೂಢಗೊಳಿಸಿಬಿಡುತ್ತಾರೆ. ನಾನೇ ಅವರ ಪದ್ಯಕ್ಕೆ ದಾಕ್ಷಾಯಿಣಿ ಮಾಡಿದ್ದೆ. ಮೂರು ವರ್ಷಗಳ ಕಾಲ ನಾವು ತಲಕಳ ಮೇಳದಲ್ಲಿ ತಿರುಗಾಟ ಮಾಡಿದ್ದವು. ಪುರಾಣ ಪ್ರಸಂಗಗಳ ಬಗೆಗೆ ಈ ಪ್ರಶಂಸೆಯ ಮಾತಾದರೆ ಕಾಲ್ಪನಿಕ ಪ್ರಸಂಗಗಳಲ್ಲಿ ಕೂಡಾ ಇವರು ಹಿಂದೆ ಬಿದ್ದಿಲ್ಲ. ಅರಿಯದಾದಾಗ ಗಂಡನಲ್ಲಿ ಕೇಳಿ ತಿಳಿದು ಹಾಡಿದ್ದಕ್ಕೆ ನಾನು ಕಣ್ಣ ಸಾಕ್ಷಿ.
ಯಕ್ಷರಂಗದಲ್ಲಿ ಆಗಿಹೋದ ಮತ್ತು ಈಗಲೂ ಅಗ್ರಸ್ಥಾನದಲ್ಲಿರುವ ಹಿರಿ ಕಿರಿಯ ಕಲಾವಿದರಿಗೆಲ್ಲಾ ಹಿರಿಯಕ್ಕನಾಗಿ ರಂಗವನ್ನು ಆಳಿದ ಪ್ರಬುದ್ಧ ಕಲಾವಿದೆ. ಲೀಲಕ್ಕ ಪ್ರಾಯಶಃ ಇವರ ಕುಟುಂಬದವರೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಕಲಾವಿದರೇ. ಅವರ ಕಿರಿಯ ಮಗ ಅವಿನಾಶ್ ಬೈಪಾಡಿತ್ತಾಯರೂ ಹಿಮ್ಮೇಳ ಕಲಾವಿದರಾಗಿ ಅಮ್ಮನ ಹಾಡಿಗೂ ಹಿಮ್ಮೇಳ ನಡೆಸಿದ್ದಾರೆ. ಬೆಂಗಳೂರಿನಲ್ಲೀಗ ಬಿಡುವಿಲ್ಲದ ಕಲಾವಿದರಾಗಿ ಯಕ್ಷ ಸೇವೆ ಮಾಡುತ್ತಿದ್ದಾರೆ. ಅನೇಕ ಮಾನ- ಸಮ್ಮಾನ ಪುರಸ್ಕಾರ ಗೌರವಾರ್ಪಣೆ…….ಎಲ್ಲವೂ ಸಂದಿದೆ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಅಬ್ಬಕ್ಕ ಪ್ರಶಸ್ತಿ, ಅಲೆವೂರಾಯ ಪ್ರತಿಷ್ಠಾನ ಪ್ರಶಸ್ತಿ, ಶ್ರೀಕೃಷ್ಣ ಯಕ್ಷಸಭಾದ ಪ್ರಶಸ್ತಿ, ಯಕ್ಷಾಂಗಣದ ಪ್ರಶಸ್ತಿ, ಕಲ್ಕೂರ ಪ್ರತಿಷ್ಠಾನದ ಪ್ರಶಸ್ತಿ,… ಇದರೊಂದಿಗೆ ವಿಶೇಷವಾಗಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ದೊರಕಿರುವುದು ಈಕೆಯ ಸಾಧನೆಯ ಕಿರೀಟಕ್ಕೆ ವಜ್ರದ ಹರಳಾಗಿ ಕಂಗೊಳಿಸುತ್ತದೆ.
ಗುರುಗಳಾಗಿ ಅನೇಕ ಶಿಷ್ಯಂದಿರ ಪ್ರೀತಿಯ ಅಕ್ಕರೆಯ ಅಮ್ಮ ಲೀಲಕ್ಕನವರು. ಅಧ್ಯಾಪಿಕೆ ಯೋಗಾಕ್ಷೀಯವರು ಪರಮಶಿಷ್ಯೆ. ಕಟೀಲಿನ ದುರ್ಗಾ ಮಕ್ಕಳ ಮೇಳಕ್ಕೂ ಇವರೇ ಹಿಮ್ಮೇಳ ಗುರುಗಳಾಗಿದ್ದರು. ಮನೆಯಲ್ಲೂ ಆಸಕ್ತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಿಮ್ಮೇಳಾಭ್ಯಾಸ ಮಾಡಿಸುತ್ತಿದ್ದರು. ‘ಹರಿಲೀಲಾ’ ಎಂಬ ವಾರ್ಷಿಕ ಯಕ್ಷ ಜಾತ್ರೆಯನ್ನು ಅವರ ಶಿಷ್ಯವೃಂದ ವಿಜ್ರಂಭಣೆಯಿಂದ ನಡೆಸುತ್ತಾ ಬರುತ್ತಿದೆ. ಮಹಿಳಾ ದಿನಾಚರಣೆಯ ಈ ಶುಭಾವಸರದಲ್ಲಿ ಲೀಲಕ್ಕನವರ ಬಗ್ಗೆ ನಾಲ್ಕಕ್ಷರ ಬರೆಯಲು ಅವಕಾಶಕೊಟ್ಟ ರೂವಾರಿ ಪತ್ರಿಕೆಗೆ, ಆಯ್ಕೆಯಾದ ಲೀಲಕ್ಕನಿಗೆ ನಾನೂ ಆಭಾರಿ. ಆ ದಂಪತಿಗೆ ಸುದೀರ್ಘ ಜೀವನ ಸೌಖ್ಯವನ್ನು ಶ್ರೀ ದೇವರು ಕರುಣಿಸಲೆಂದು ನಾವೆಲ್ಲರೂ ಹಾರೈಸೋಣ.
ಯಕ್ಷಗುರು ವರ್ಕಾಡಿ ಶ್ರೀರವಿ ಅಲೆವೂರಾಯ
ಹಿರಿಯ ಯಕ್ಷಗಾನ ಕಲಾವಿದರಾಗಿರುವ ರವಿ ಅಲೆವೂರಾಯರು ವೇಷಧಾರಿಯಾಗಿ, ಯಕ್ಷಗಾನ ಗುರುವಾಗಿ, ಸಂಘಟಕರಾಗಿ ಪ್ರಸಿದ್ಧರು. ‘ಸರಯೂ ಬಾಲ ಯಕ್ಷ ವೃಂದ’ ಇದರ ಸ್ಥಾಪಕರಾಗಿರುವ ಇವರು ಈ ಸಂಸ್ಥೆಯ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ‘ಯಕ್ಷ ಶಿಕ್ಷಣ’ ನೀಡಿ ಅವರನ್ನು ಪ್ರಬುದ್ಧ ಕಲಾವಿದರನ್ನಾಗಿ ರೂಪಿಸಿದ್ದಾರೆ. ಶ್ರೀ ಯುತರು ತುಳುಕೂಟ (ರಿ.) ಕುಡ್ಲ ಇದರ ಪ್ರಧಾನ ಕಾರ್ಯದರ್ಶಿಯಾಗಿಯೂ ಕಲಾಸೇವೆ ಸಲ್ಲಿಸುತ್ತಿದ್ದಾರೆ.