ಜೀವನದ ಪ್ರತಿಯೊಂದು ಖುಷಿಯಿಂದ ಅನುಭವಿಸುವ ನೋವು ನಲಿವುಗಳ ಸಮ್ಮಿಶ್ರಣದ ಹೂರಣವನ್ನು ನಗುನಗುತ್ತ ಸ್ವೀಕರಿಸುವ ಬಹುಮುಖ ಪ್ರತಿಭೆ, ಅದ್ಭುತ ವಾಕ್ ಚಾತುರ್ಯದ, ಸದಾ ಹಸನ್ಮುಖಿ, ಬಟ್ಟಲು ಕಂಗಳ ಚೆಲುವೆ, ಮಧುರ ಕಂಠದ ಡಾ. ಪ್ರತಿಭಾ ರೈ. ಕಳೆದ ಸುಮಾರು 12 ವರ್ಷಗಳ ಆತ್ಮೀಯತೆ ಹೊಂದಿದ ನಾವು, ನಮ್ಮ ಸಂಘದ ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದು ಶ್ಲಾಘನೀಯ.ಬಾಗಿದವನು ಮಾಗುತ್ತಾನೆ ಮಾಗಿದವನು ಬೀಗುವುದಿಲ್ಲ ಎಂಬಂತೆ ನಿಸ್ವಾರ್ಥ ನೇರ ನುಡಿಗಳ ಹಾಸ್ಯ ಪ್ರಜ್ಞೆಯ ವ್ಯಕ್ತಿತ್ವ ಮತ್ತು ಇವರ ಅಪ್ರತಿಮ ಹಾಡುಗಾರಿಕೆ ಎಂಥವರನ್ನೂ ಮಂತ್ರಮುಗ್ಧಗೊಳಿಸಿ ಅವರ ಹತ್ತಿರ ಸೆಳೆಯುತ್ತದೆ.
ಬೈಂದೂರಿನ ಭಾಸ್ಕರ್ ಶೆಟ್ಟಿ ಮತ್ತು ಚಂದ್ರಿಕಾ ಶೆಟ್ಟಿ ದಂಪತಿಗಳ ಜೇಷ್ಠ ಪುತ್ರಿಯಾಗಿ 1978ರಲ್ಲಿ ಜನಿಸಿದ ಪ್ರತಿಭಾ ಶೆಟ್ಟಿ, 2005ರಲ್ಲಿ ಡಾ. ಸುಭಾಶ್ಚಂದ್ರ ರೈಯವರನ್ನು ವಿವಾಹವಾದರು. ಪ್ರಾಥಮಿಕ, ಪ್ರೌಢ, ಪದವಿ ಶಿಕ್ಷಣವನ್ನು ಹುಟ್ಟೂರಿನಲ್ಲೇ ಮುಗಿಸಿಕೊಂಡು ಬಿ. ಎ. ಎಂ. ಎಸ್. ಪದವಿಯನ್ನು ಶಿವಮೊಗ್ಗದಲ್ಲಿ ಪಡೆದು ಸ್ನೇಹಿತೆಯಂತೆ ಸೇವೆ ಮಾಡುವ ಮೂಲಕ ಸಾವಿರಾರು ರೋಗಿಗಳಿಗೆ ಅಚ್ಚುಮೆಚ್ಚಿನ ವೈದ್ಯೆ ಎಂಬುದನ್ನು ಸಾಬೀತುಪಡಿಸಿದ್ದರು.
ಬಾಲ್ಯದಿಂದಲೇ ಸಂಗೀತದತ್ತ ಇದ್ದ ಒಲವು ಎಲ್ಲಾ ಪ್ರಕಾರದ ಸಂಗೀತ, ಸಾಹಿತ್ಯ, ಅಭಿನಯ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿಯೂ ತಮ್ಮ ವಿಶೇಷವಾದ ಶಬ್ದ ಸ್ಫುಟತೆ, ಸ್ವರಶುದ್ಧಿಯಿಂದ ಅಪರೂಪದ ಕಲಾವಿದೆಯಾಗಿ ಹೊರಹೊಮ್ಮಿದ್ದಾರೆ. ಅವರ ಸ್ವರ ಮಾಧುರ್ಯಕ್ಕೆ ಸಾವಿರಕ್ಕೂ ಹೆಚ್ಚು ವೇದಿಕೆಗಳಲ್ಲಿ ಅವರು ನೀಡಿದ ಕಾರ್ಯಕ್ರಮಗಳೇ ಸಾಕ್ಷಿಯಾಗಿವೆ. ಆಕಾಶವಾಣಿ ಕಲಾವಿದೆಯಾಗಿ ತಮ್ಮ ಕಲಾ ಪ್ರೌಢಿಮೆಯನ್ನು ನಿರೂಪಿಸಿದ್ದಾರೆ. ಅಷ್ಟೇ ಅಲ್ಲದೆ ಆರೋಗ್ಯ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ವ್ಯಕ್ತಿತ್ವ ವಿಕಸನ, ಜೀವನ ಮೌಲ್ಯಗಳ ಬಗ್ಗೆ ತಿಳಿಯಪಡಿಸುವ ಸಂಪನ್ಮೂಲ ವ್ಯಕ್ತಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಸ್ತ್ರೀ ಸಬಲೀಕರಣ ಸಭೆಗಳು, ಮಧ್ಯವರ್ಜನ ಶಿಬಿರಗಳಲ್ಲಿ ಸಲಹೆ, ಉಪನ್ಯಾಸ ನೀಡಿ ಸಾಮಾಜಿಕ ಕಳಕಳಿಯನ್ನು ತೋರಿದ್ದಾರೆ.
ಆಯುಷ್ ಫೆಡರೇಷನ್ ಮಂಗಳೂರು, ಸಂಸ್ಕಾರ ಭಾರತೀ ಮಂಗಳೂರು, ವೈದ್ಯಕೀಯ ಪ್ರಕೋಷ್ಠ, ಬಂಟರ ಸಂಘ, ಕಲಾವಿದ ಬಳಗ ಮುಂತಾದ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನಿಸ್ವಾರ್ಥ ಸಮಾಜ ಸೇವೆಯನ್ನು ಗೈಯುತ್ತಿರುವ ಅಪರೂಪದ ವ್ಯಕ್ತಿತ್ವ ಡಾಕ್ಟರ್ ಪ್ರತಿಭಾ ರೈಯವರದ್ದು. ಯೂಟ್ಯೂಬ್, ಧ್ವನಿ ಸುರಳಿ, ಚಲನಚಿತ್ರಗಳಲ್ಲಿ ಮಿಂಚಿರುವ ಸದಾ ಕ್ರಿಯಾಶೀಲರಾಗಿರುವ ಅಪ್ಪಟ ಕಲಾವಿದೆ ಪ್ರತಿಭಾ ರೈ. ಇವರ ಪ್ರತಿಭೆ ಹಾಗೂ ಸೇವೆಯಬಗೆಗಿನ ಕಾರ್ಯವೈಖರಿಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಮಂಗಳೂರಿನ ಎಸ್. ಡಿ. ಎಂ. ಆಸ್ಪತ್ರೆಯ ಆಡಳಿತ ಮುಖ್ಯಾಧಿಕಾರಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಅನುಭವಿಯಾದ ಇವರು ಉತ್ತಮ ವೈದ್ಯ, ಪತ್ನಿ, ತಾಯಿಯಾಗಿ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ತನ್ನ ಸಂಗೀತದ ನಾದ ಮಾಧುರ್ಯ ಹೊಮ್ಮಿಸಿ ಸಮಾಜದಲ್ಲಿ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಸಂಗೀತದ ಬಗ್ಗೆ ಅತೀವ ಒಲವಿರುವ ಡಾಕ್ಟರ್ ಪ್ರತಿಬಾ ರೈ ಇವರಿಗೆ ಮುಂದೆಯೂ ದೇವರು ಕೀರ್ತಿ ಯಶಸ್ಸು ಕರುಣಿಸಲಿ ಎಂಬ ಶುಭಹಾರೈಕೆ.
ಶ್ರೀಮತಿ ಸುಮಾ ಅರುಣ್ ಮಾನ್ವಿ
ಅಧ್ಯಕ್ಷರು ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ (ರಿ.) ಮಂಗಳೂರು