ಉಡುಪಿ : ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಕರಕುಶಲ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿ. ಪುತ್ತೂರು ಇವರ ನೇತೃತ್ವದಲ್ಲಿ 25 ದಿನಗಳ ಅವಧಿಯ ಅಳಿವಿನಂಚಿನ ಕಾವಿ ಕಲೆಯ ವಿನ್ಯಾಸಗಳ ಅಭಿವೃದ್ಧಿ ಕಾರ್ಯಾಗಾರವು ದಿನಾಂಕ 14 ಡಿಸೆಂಬರ್ 2025ರಂದು ಹಾವಂಜೆಯ ಭಾಸ ಗ್ಯಾಲರಿ ಮತ್ತು ಸ್ಟುಡಿಯೋದಲ್ಲಿ ಸಂಪನ್ನಗೊಂಡಿತು.


ಹಾವಂಜೆ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಆಶಾ ಪೂಜಾರಿಯವರು “ನಮ್ಮ ಗ್ರಾಮದಲ್ಲಿ ಈ ರೀತಿಯ ಕಾರ್ಯಾಗಾರಗಳು ನಡೆಯುತ್ತಿರುವುದು ಬಹಳ ಸಂತೋಷದ ವಿಷಯ, ಕಾವಿ ಕಲಾವಿದ ಜನಾರ್ದನ ಹಾವಂಜೆ ನಮ್ಮೂರಿನ ಹೆಮ್ಮೆ. ಸ್ಥಳೀಯ ಕರಕುಶಲಕರ್ಮಿಗಳು ಇನ್ನಷ್ಟು ಈ ಕಲಾಪ್ರಕಾರದಲ್ಲಿ ತೊಡಗಿಸಿಕೊಂಡು ನಮ್ಮ ಗ್ರಾಮದ ಅಭಿವೃದ್ಧಿಯೂ ಆಗಲಿ” ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕರಕುಶಲ ಅಭಿವೃದ್ಧಿ ಮಂಡಲಿಯ ಸಹ ನಿರ್ದೇಶಕಿ ರಾಜೇಶ್ವರಿಯವರು “ಗ್ರಾಮೀಣ ಭಾಗದಲ್ಲಿನ ಕುಶಲಕರ್ಮಿಗಳಿಗೆ ಈ ರೀತಿಯ ವಿನ್ಯಾಸಗಳನ್ನು ಬೆಳೆಸುವ ವಿವಿಧ ರೀತಿಯ ಕಾರ್ಯಕ್ರಮಗಳು ದಿನಭತ್ಯೆಯೊಂದಿಗೆ ನಡೆಸಲ್ಪಡುತ್ತದೆ. ಅಲ್ಲದೇ ಮಾರುಕಟ್ಟೆಗೆ ಸಹಕಾರ ನೀಡುವ ಪ್ರದರ್ಶನಗಳೂ ಇಲಾಖೆಯಲ್ಲಿದೆ. ಪ್ರಸ್ತುತ ಅಳಿವಿನಂಚಿನ ಕಾವಿ ಕಲೆಯನ್ನು ಕರಾವಳಿಯ ಭಾಗದಲ್ಲಿ ಅದರಲ್ಲೂ ಉಡುಪಿಯ ಹಾವಂಜೆಯಲ್ಲಿ ಒಂದು ಸೆಕ್ಟರ್ ಆಗಿ ಬೆಳೆಸುತ್ತಿರುವುದು ಸತೋಷದ ಸಂಗತಿ. ಶೀಘ್ರದಲ್ಲಿ ಇದಕ್ಕೆ ಜಿಐಟ್ಯಾಗ್ ಲಭಿಸಲಿ” ಎಂಬುದಾಗಿ ಹಾರೈಸಿದರು.


ಕೈಯಿಂದಲೇ ತಯಾರಿಸಿದ ವಿವಿಧ ರೀತಿಯ ಸ್ಮರಣಿಕೆಗಳು, ಮಣ್ಣಿನ ವಿವಿಧ ವಿನ್ಯಾಸಗಳ ಮಡಕೆ ಹಾಗೂ ಮಣ್ಣಿನಿಂದಲೇ ತಯಾರಿಸಿದ ಉತ್ಪನ್ನಗಳು, ಅಂಗಿ, ಕುರ್ತಾ, ದಿಂಬಿನ ಬಟ್ಟೆ, ಟೀಕೋಸ್ಟರ್, ಸ್ಮರಣಿಕೆ ನೀಡಬಹುದಾದ ಬಾಕ್ಸ್ ಹಾಗೂ ಮರದಿಂದ ವಿವಿಧ ವಿನ್ಯಾಸಗಳ ದಿನ ಬಳಕೆಯ ವಸ್ತುಗಳು ಮೊದಲಾದ ವಿವಿಧ ಮಾಧ್ಯಮದಲ್ಲಿ ಕಾವಿ ಕಲೆಯ ವಿನ್ಯಾಸಗಳನ್ನು ಈ ಕಾರ್ಯಾಗಾರದಲ್ಲಿ ವಿನ್ಯಾಸಗೊಳಿಸಲಾಗಿತ್ತು.


ಈ ಕಾರ್ಯಾಗಾರದ ಮುಖೇನ ಕಾವಿ ಕಲೆಯ ವಿನ್ಯಾಸಗಳನ್ನು ದಿನಬಳಕೆಯ ವಸ್ತುಗಳಲ್ಲಿ ತರಲಾಗಿದೆ. ಇನ್ನಷ್ಟು ಈ ತೆರನಾದ ಪ್ರಯೋಗ ಪ್ರಯತ್ನಗಳು ಈ ಕಲೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಲಿದೆಯಲ್ಲದೇ ಸ್ಥಳೀಯರು ಈ ದಿಸೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ. ಆದಷ್ಟು ಶೀಘ್ರದಲ್ಲಿ ನಮ್ಮ ಉಡುಪಿಯ ಭಾಗಕ್ಕೆ ಕಾವಿ ಕಲೆಗೆ ಜಿಐಟ್ಯಾಗ್ ದೊರಕಲಿದೆ, ಇದಕ್ಕಾಗಿ ಈಗಾಗಲೇ ಅರ್ಜಿ ಹಾಕಲಾಗಿದ್ದು, ಗೋವಾ ಹಾಗೂ ನಮ್ಮ ಕರಾವಳಿಯ ಭಾಗಕ್ಕೆ ಜಂಟಿಯಾಗಿ ದೊರಕುವ ನಿರೀಕ್ಷೆಯಿದೆ” ಎಂಬುದಾಗಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಹಾಗೂ ಕಾವಿ ಕಲಾವಿದ ಡಾ. ಜನಾರ್ದನ ಹಾವಂಜೆ ವಿವರಿಸಿದರು.

ದೆಹಲಿಯ ಹಿರಿಯ ವಿನ್ಯಾಸಗಾರ ಬ್ರಿಜೇಶ್ ಜೈಸ್ವಾಲ್ ಈ ಕಾರ್ಯಾಗಾರದಲ್ಲಿ ಕಲಾವಿದರುಗಳ ವಿನ್ಯಾಸಗಳ ಬೆಳವಣಿಗೆಗೆ ಸಹಕರಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಕಲಾವಿದರುಗಳಿಗೆ ಪ್ರಮಾಣಪತ್ರ ನೀಡಲಾಯಿತು. ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜನಾರ್ದನ ಮೂಲ್ಯ, ನಿರ್ದೇಶಕರಾದ ಗಣೇಶ ಕುಲಾಲ್ ಹಾಗೂ ಶೇಷಪ್ಪ ಕುಲಾಲ, ಕಾವಿ ಆರ್ಟ್ ಫೌಂಡೇಶನ್‌ನ ಮಂಜುನಾಥ ರಾವ್ ಉಪಸ್ಥಿತರಿದ್ದರು.

ಡಾ. ಜನಾರ್ದನ ಹಾವಂಜೆ
9845650544
