15 ಏಪ್ರಿಲ್ 2023, ಮಂಗಳೂರು: ಕೆ.ಕೆ. ಹೆಬ್ಬಾರ್ (ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್) ರು ಜೂನ್ 15,1911ರಂದು ಉಡುಪಿಯ ಕಟ್ಟoಗೇರಿಯಲ್ಲಿ ತುಳು ಭಾಷಿಕ ಬ್ರಾಹ್ಮಣ ಕುಟುಂಬದಲ್ಲಿ ಶ್ರೀ ನಾರಾಯಣ ಹೆಬ್ಬಾರ್ ಮತ್ತು ಸೀತಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. 1935ರಲ್ಲಿ ಶ್ರೀಮತಿ ಯಮುನಾರೊಂದಿಗೆ ಇವರ ವಿವಾಹವಾಯಿತು. ಮೂವರು ಮಕ್ಕಳಲ್ಲಿ ಮಗ ‘ರನ್ನ’, ಹೆಣ್ಣು ಮಕ್ಕಳು ರೇಖಾ ಮತ್ತು ರಜನಿ. ತಮ್ಮ ತಂದೆಯವರು ಆಗೊಮ್ಮೆ ಈಗೊಮ್ಮೆ ಗಣೇಶ ವಿಗ್ರಹಗಳನ್ನು ನಿರ್ಮಿಸುತ್ತಿದ್ದುದ್ದನ್ನು ಗಮನಿಸುತ್ತಿದ್ದ ಬಾಲಕ ಕೃಷ್ಣ ಹೆಬ್ಬಾರ್ ಆಗಿನಿಂದಲೇ ಕಲೆಯತ್ತ ಒಲವು ಬೆಳೆಸಿಕೊಂಡಿದ್ದರು. ಕಲಾವಿದರ ಕುಟುಂಬದಲ್ಲಿ ಜನಿಸಿದ ಕೃಷ್ಣ ಹೆಬ್ಬಾರ್ 1940ರಿಂದ 1945ರ ತನಕ ಮುಂಬಯಿಯ ಪ್ರತಿಷ್ಠಿತ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ಕಲಾ ಪದವಿ ಪಡೆದು, ಪ್ಯಾರಿಸ್ ನಲ್ಲಿ ಹೆಚ್ಚಿನ ಕಲಾ ಅಧ್ಯಯನ ನಡೆಸಿದರು.
ತಮ್ಮ ಜೀವನದುದ್ದಕ್ಕೂ ಹೆಬ್ಬಾರ್ ಹಲವು ಪ್ರಶಸ್ತಿಗಳನ್ನು ಗಳಿಸಿದರು. ಭಾರತ ಸರಕಾರದಿಂದ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ಜೊತೆಗೆ ‘ಅಕ್ಯಾಡಮಿ ಆಫ್ ಫೈನ್ ಆರ್ಟ್ಸ್’ (ಕೊಲ್ಕತ್ತಾ), ‘ದಿ ಮುಂಬಯಿ ಆರ್ಟ್ ಸೊಸೈಟಿ ಪ್ರಶಸ್ತಿ’, ‘ಮುಂಬಯಿ ಸ್ಟೇಟ್ ಪ್ರಶಸ್ತಿ’, ‘ಲಲಿತ್ ಕಲಾ ಅಕಾಡೆಮಿ ಪ್ರಶಸ್ತಿ’, ‘ವರ್ಣಶಿಲ್ಪಿ ಕೆ.ವೆಂಕಟಪ್ಪ ಪ್ರಶಸ್ತಿ’, ‘ಮೈಸೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಡಾಕ್ಟರೆಟ್’, ‘ಸೋವಿಯತ್ ಲ್ಯಾಂಡ್ ನೆಹ್ರೂ ಪ್ರಶಸ್ತಿ’ ಪಡೆದುಕೊಂಡಿದ್ದಾರೆ. ತೈಲವರ್ಣ, ನವ್ಯಚಿತ್ರಗಳಲ್ಲಿ ಅವರದ್ದೇ ಶೈಲಿಗಳನ್ನು ಸ್ಥಾಪಿಸುವುದರ ಜೊತೆಗೆ ರೇಖಾ ಚಿತ್ರಗಳಲ್ಲಿ ಹೆಚ್ಚು ಕೈಕುಣಿಸಿದ ಶ್ರೇಷ್ಠ ಸಾಧಕರು ಇವರು. ‘ಮುಂಬಯಿನ ಜೆಹಾಂಗೀರ್ ಆರ್ಟ್ ಗ್ಯಾಲರಿ’ ಪ್ರಾರಂಭಿಸುವಲ್ಲಿ ಕೆ.ಕೆ.ಹೆಬ್ಬಾರರ ಪಾತ್ರ ಅಮೋಘವಾದುದು.
ಹೆಬ್ಬಾರರ ಆರಂಭದ ಕಲಾಕೃತಿಗಳನ್ನು ಕೇರಳ ಹಂತ ಎನ್ನಲಾಗಿತ್ತು. ಏಕೆಂದರೆ ಅವರ ಕಲೆಯಲ್ಲಿ ಮಲಬಾರ್ ಮತ್ತು ತುಳುನಾಡು ಪ್ರಾಂತ್ಯದ ನಿರಂತರ ಶ್ರೇಣಿಯನ್ನು ಆಗಾಗ್ಗೆ ವಿವರಿಸಲಾಗುತ್ತಿತ್ತು. ಆನಂತರ ಅವರು ತಮ್ಮ ಕಲೆಯಲ್ಲಿ ಇತರೆ ವಿಷಯಗಳೊಂದಿಗೆ ಪ್ರಯೋಗ ನಡೆಸಿದರು. ಇವರ ಕಲಾಕೃತಿಗಳು ಪಾಲ್ ಗಾಗ್ವಿನ್ ಮತ್ತು ಅಮೃತಾ ಷರ್-ಗಿಲ್‌ರ ಕಲಾಕೃತಿಗಳಿಂದ ಪ್ರೇರಿತವಾಗಿದ್ದವು. ಆಗ 1965ರಲ್ಲಿ ಲಂಡನ್ ಮತ್ತು ಬ್ರಸೆಲ್ಸ್‌ನಲ್ಲಿ ನಡೆದ ‘ಆರ್ಟ್ ನೌ ಇನ್ ಇಂಡಿಯಾ’ ಕಲಾ ಪ್ರದರ್ಶನದಲ್ಲಿ ಪ್ರದರ್ಶಿಸಲಾದ ತಮ್ಮ ಚಿತ್ರಕಲೆಗಳ ಮೂಲಕ ಅಂತರರಾಷ್ಟ್ರೀಯ ಅಭಿಮಾನಿಗಳನ್ನು ಗಳಿಸಿಕೊಂಡರು. ಇಂದು ಹೆಬ್ಬಾರ್‌ರ ಕಲಾಕೃತಿಗಳನ್ನು ಭಾರತೀಯ ಕಲಾ ಇತಿಹಾಸದಲ್ಲಿ ಬಹಳಷ್ಟು ಪ್ರಭಾವಿ ಎಂದು ಪರಿಗಣಿಸಲಾಗಿದೆ. ವೆನಿಸ್ ಬಯೆನ್ನೇಲ್, ಸಾವೊ ಪಾಲೊ ಆರ್ಟ್ ಬಯೆನ್ನಿಯಲ್ ಹಾಗೂ ಟೊಕಿಯೊ ಬಯೆನ್ನೇಲ್ ಸೇರಿದಂತೆ ವಿಭಿನ್ನ ಅಂತರರಾಷ್ಟ್ರೀಯ ಕಲಾ ಪ್ರದರ್ಶನಗಳಲ್ಲಿ ಹೆಬ್ಬಾರ್ ಭಾಗವಹಿಸಿದ್ದರು.
‘ಇದು ನನ್ನ ಹಾಗಿಲ್ಲ’.. ಕೆ.ಕೆ. ಹೆಬ್ಬಾರರನ್ನು ನಾನು ಕಂಡ ಕತೆ.
1993ರಲ್ಲಿ (ಹೆಬ್ಬಾರರಿಗೆ 83) ಕುಂದಾಪುರದ ಕೋಟದಲ್ಲಿ ‘ ಕಾರಂತ 90’ ರ ಮೂರು ದಿನಗಳ ಸಂಭ್ರಮದಲ್ಲಿ ನನಗೆ ಕೆ.ಕೆ. ಹೆಬ್ಬಾರರನ್ನು ಮುಟ್ಟುವ ಅವಕಾಶ ಸಿಕ್ತು. ನಾವು ‘ನಿರತನಿರಂತ’ ತಂಡದವರು ಮೋಹನ್ ಸೋನಾ, ಎಂ ಜಿ ಕಜೆ, ನಳಿನಿ ಕಜೆ, ಸುರೇಶ್ ಹಂದಾಡಿ ಮತ್ತು ನಾನು ಅಲ್ಲಿ ಕಾರಂತರ ಚಿತ್ರ ರಚಿಸಿ ಪ್ರದರ್ಶನಕ್ಕೆ ಇಟ್ಟಿದ್ದೆವು. ಮೊದಲ ದಿನ ಚಿತ್ರ ಪ್ರದರ್ಶನದ ಕೋಣೆಗೆ ಶಿವರಾಮ ಕಾರಂತರು ಮತ್ತು ಕೆ.ಕೆ.ಹೆಬ್ಬಾರರು ಬಂದೇ ಬಿಟ್ರು. ಕಾರಂತರ ಮತ್ತು ಹೆಬ್ಬಾರರ ಬಗ್ಗೆ ನಾನು ಉಗುರಿನಿಂದ ರಚಿಸಿದ ಉಬ್ಬು ಚಿತ್ರವನ್ನು ಹೆಬ್ಬಾರರ ಕೈಗೆ ಕೊಟ್ಟೆ. ಕಾರಂತರ ಚಿತ್ರವನ್ನು ಹೆಬ್ಬಾರರು ನೋಡಿ ಇದು ಚೆನ್ನಾಗಿದೆ ಅಂದ್ರು. ಹೆಬ್ಬಾರರ ಚಿತ್ರ ಕಾರಂತರು ನೋಡಿ ಇದು ಚೆನ್ನಾಗಿದೆ ಅಂದ್ರು. ಹೆಬ್ಬಾರರು ತನ್ನ ಚಿತ್ರ ನೋಡಿ.. ಇದು ನನ್ನ ಹಾಗೆ ಇಲ್ಲ. ಇದಕ್ಕೆ ನಾನು ಸೈನ್ ಹಾಕಲ್ಲ ಅಂದ್ರು. ನಾನು ಸೈನ್ ಹಾಕಲು ಕೊಟ್ಟದ್ದು ಅಲ್ಲ ಅಂದೆ. ಹಾಗೆ ಹೇಳಿದ್ದಕ್ಕೆ ಹೆಬ್ಬಾರರು ನನ್ನ ಕೈಹಿಡಿದು ಎಳೆದು ಹತ್ತಿರ ನಿಲ್ಲಿಸಿಕೊಂಡು.. (ಸೆಲ್ಫಿ ತೆಗೆಯುವ ಕಾಲ ಆಗಿರಲಿಲ್ಲ..ಅಯ್ಯೋ..ದಾಖಲೆಯೇ ಇಲ್ಲದಾಯಿತು.) ಚಿತ್ರ ಚೆನ್ನಾಗಿ ಮಾಡಿದ್ದೀರಿ. ಆದರೆ ಇದು ನನ್ನ ಹಾಗೆ ಕಾಣೋದೇ ಇಲ್ಲಾ ಅಂತ ಹೇಳ್ತಾ ಚಿತ್ರ ತಗೊಂಡು ಹೋದ್ರು.
ಅವರ ಚಿತ್ರ ಅವರಿಗೆ ಚೆನ್ನಾಗಿ ಕಾಣದ್ದಕ್ಕೆ ನನಗೆ ಆದ ಲಾಭ ಏನು ಗೊತ್ತಾ..?. ನಾನು ರಚಿಸಿದ ಚಿತ್ರವನ್ನು ಅವರು ಬೆಳಗಿನಿಂದ ಸಂಜೆವರೆಗೂ ಸಿಕ್ಕವರಿಗೆಲ್ಲ ತೋರಿಸುತ್ತಾ.. ‘ಇದು ನಾನಂತೆ, ಇದು ನಾನಂತೆ’ ಅಂತ ಹೇಳಿ ನಗುತ್ತಿದ್ದರು. ಹಾಗಂತ ನನಗೆ ಹೇಳಿದ್ದು.. ಆ ದಿನ ಅವರ ಜೊತೆಗೇ ಇದ್ದ ಪ್ರಜಾವಾಣಿಯ ವರದಿಗಾರರಾಗಿದ್ದ ರಾಜಶೇಖರ್. ಗೋಪಾಡ್ಕರ್ ಈ ದಿನ ನಿಮಗೆ ಕೆ ಕೆ ಹೆಬ್ಬಾರರು ತುಂಬಾ ಪ್ರಚಾರ ಕೊಟ್ಟಿದ್ದಾರೆ. ನೀವು ರಚಿಸಿದ ಅವರ ಚಿತ್ರ ನೋಡಿದವರೆಲ್ಲರೂ.. ನಿಮ್ಮ ಹಾಗೆ ಇದೆ ಅಂತ ಹೇಳಿದಾಗಲೆಲ್ಲ ಹೆಬ್ಬಾರರು ಮತ್ತೊಮ್ಮೆ ನೋಡುತ್ತಿದ್ದರು..ಅಂತ ಸಂತಸದಿಂದ ಹೇಳಿಕೊಂಡರು.
ಹೌದು.. ಹೌದು.. ಆ ದೃಶ್ಯ ನಾನೂ ಅಡಗಿ ನಿಂತು ನೋಡಿದ್ದೆ.
ಆ ವೀಡಿಯೋ ಚಿತ್ರ ಬೇಕಿತ್ತು. ಇಂದು ಆಗಾಗ ನೋಡ್ತಿದ್ದೆ.
ಕೆ.ಕೆ.ಹೆಬ್ಬಾರರು ದೇಶದ ಶ್ರೇಷ್ಠ ಕಲಾವಿದರು.
ಉಡುಪಿಯ ‘ಕಟ್ಟಿಂಗೇರಿ’ ತನ್ನ ಊರ ಹೆಸರನ್ನು ಜಗತ್ತಿಗೇ ಕೊಂಡು ಹೋದ ಕೆ.ಕೆ.ಹೆಬ್ಬಾರರು ಈಗ ನಮ್ಮೊಂದಿಗಿಲ್ಲ. ಎರಡು ವರ್ಷಗಳ ಕಾಲ ಕಾಯಿಲೆಯಿಂದ ಬಳಲಿ 1996 ಮಾರ್ಚ್ 26ರಂದು ತಮ್ಮ 85ರ ವಯಸ್ಸಿನಲ್ಲಿ ಮುಂಬೈಯ ಮಹಾರಾಷ್ಟ್ರದಲ್ಲಿ ವಿಧಿವಶರಾದರು.
- ಗೋಪಾಡ್ಕರ್ ಸ್ವರೂಪ
ಕಲಾವಿದರು, ಶಿಕ್ಷಣ ಚಿಂತಕರು.