ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಕ್ಟೋಬರ್ 28 ಮತ್ತು 29ರಂದು ಉಡುಪಿಯಲ್ಲಿ ನಡೆಯುವ ‘ವಿಶ್ವ ಬಂಟರ ಸಮ್ಮೇಳನ’ದಲ್ಲಿ ವಿಶ್ವ ಬಂಟರ ಕ್ರೀಡಾಕೂಟ ಮತ್ತು ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಜೊತೆಗೆ ಎರಡು ಪ್ರಮುಖ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಇವು ಸಮ್ಮೇಳನದ ನಿರ್ದಿಷ್ಟ ಆಶಯಗಳನ್ನು ಅರ್ಥಪೂರ್ಣವಾಗಿ ಬಿಂಬಿಸುವ ಉದ್ದೇಶ ಹೊಂದಿವೆ.
ಸಮ್ಮೇಳನದ ಎರಡನೇ ದಿನ ಅಕ್ಟೋಬರ 29ರಂದು ಆದಿತ್ಯವಾರ ಪೂರ್ವಾಹ್ನ 11 ಗಂಟೆಗೆ ಉಡುಪಿ ಬಂಟರ ಸಂಘದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಜರಗುವ ಉದ್ಘಾಟನಾ ಸಮಾರಂಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮುಂಬೈ ಹೇರಂಬ ಇಂಡಸ್ಟ್ರೀಸ್ ಲಿ. ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ಗೋಷ್ಠಿಗಳನ್ನು ಉದ್ಘಾಟಿಸುವರು. ಕರ್ನಾಟಕ ಜಾನಪದ – ಯಕ್ಷಗಾನ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಆಶಯ ಭಾಷಣ ಮಾಡುವರು.
ವಿಚಾರ ಸಂಕಿರಣ:
ಸಮಾಜದ ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಪೂರ್ವಾಹ್ನ ಗಂ.11:30ಕ್ಕೆ ನಡೆಯುವ ‘ಸ್ಥಿತ್ಯಂತರದಲ್ಲಿ ಬಂಟರು: ಶಿಕ್ಷಣ ಮತ್ತು ನಿರುದ್ಯೋಗ’ ಎಂಬ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಮುಂಬೈಯ ವಿಶ್ರಾತ್ ಕೆಮಿಕಲ್ಸ್ ಲಿ. ಸಿಎಂಡಿ ವಿವೇಕ್ ಶೆಟ್ಟಿ ವಹಿಸುವರು, ಆನಂದ ಎಂ. ಶೆಟ್ಟಿ ತೋನ್ಸೆ, ಕಿಶೋರ್ ಆಳ್ವ, ಅಶೋಕ್ ಕುಮಾರ್ ಶೆಟ್ಟಿ, ಡಾ. ಆರ್.ಕೆ.ಶೆಟ್ಟಿ, ಉಪೇಂದ್ರ ಶೆಟ್ಟಿ, ಡಾ.ಪೂರ್ಣಿಮಾ ಎಸ್.ಶೆಟ್ಟಿ, ಪ್ರದೀಪ್ ಕುಮಾರ್ ಐಕಳಬಾವ, ಪುರುಷೋತ್ತಮ ಭಂಡಾರಿ ಅಡ್ಯಾರ್ ವಿಷಯದ ಕುರಿತಾಗಿ ಮಾತನಾಡುವರು. ಕದ್ರಿ ನವನೀತ್ ಶೆಟ್ಟಿ ಗೋಷ್ಠಿಯ ಸಮನ್ವಯಕಾರರಾಗಿರುವರು.
ಕವಿ ಸಮಯ, ಕಾವ್ಯ ನಮನ – ಚಿತ್ತ ಚಿತ್ತಾರ:
ಅಪರಾಹ್ನ ಗಂಟೆ 2:30ರಿಂದ ಜರಗುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿ-ಲೇಖಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ವಹಿಸುವರು. ಮೂರು ವಿಭಾಗಗಳಲ್ಲಿ ನಡೆಯುವ ಕವಿ ‘ಸಮಯ-ಕಾವ್ಯ ನಮನ-ಚಿತ್ತಚಿತ್ತಾರ’ ಕಾರ್ಯಕ್ರಮದಲ್ಲಿ ಕವಿಗಳಾದ ಡಾ.ತೋನ್ಸೆ ವಿಜಯಕುಮಾರ್ ಶೆಟ್ಟಿ, ಅಶೋಕ್ ಪಕ್ಕಳ, ನಾರಾಯಣ ರೈ ಕುಕ್ಕುವಳ್ಳಿ, ಹರೀಶ್ ಸುಲಾಯ ಒಡ್ಡಂಬೆಟ್ಟು, ರೂಪಕಲಾ ಆಳ್ವ, ವಿಜಯಾ ಶೆಟ್ಟಿ ಸಾಲೆತ್ತೂರು, ಡಾ.ಮಂಜುಳಾ ಶೆಟ್ಟಿ ಮತ್ತು ಪ್ರೊ.ಅಕ್ಷಯ ಆರ್. ಶೆಟ್ಟಿ ಪೆರಾರ ಸ್ವರಚಿತ ಕನ್ನಡ-ತುಳು ಕವಿತೆಗಳನ್ನು ಓದುವರು. ಗಾಯಕರಾದ ಗಡಿನಾಡ ಕೋಗಿಲೆ ವಿಠಲ ಶೆಟ್ಟಿ ಕಾಸರಗೋಡು, ಬಬಿತಾ ಶೆಟ್ಟಿ ಮತ್ತು ವರ್ಷಾ ಶೆಟ್ಟಿ ಗೋಷ್ಠಿಯ ಕವಿತೆಗಳನ್ನು ಸ್ವರಬದ್ಧಗೊಳಿಸಿ ಹಾಡುವರು. ಇದೇ ಸಂದರ್ಭದಲ್ಲಿ ಕುಂಚ ಕಲಾವಿದೆ ಆಶ್ರಿತಾ ರೈ ಕವಿತೆಗಳ ಭಾವವನ್ನು ಗ್ರಹಿಸಿ ಚಿತ್ರ ಬರೆಯುವರು. ಡಾ.ಪ್ರಿಯಾ ಶೆಟ್ಟಿ ನಿರೂಪಿಸುವರು. ಖ್ಯಾತ ಹಿನ್ನೆಲೆ ಕಲಾವಿದರು ಸಂಗೀತ ನೀಡಿ ಕಾರ್ಯಕ್ರಮವನ್ನು ರಂಜನೀಯಗೊಳಿಸುವರು.