ಕೋಣಾಜೆ : ಮಂಗಳೂರು ವಿಶ್ವವಿದ್ಯಾನಿಲಯ, ನೆಹರೂ ಚಿಂತನ ಕೇಂದ್ರ, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಗಿಳಿವಿಂಡು ಒಕ್ಕೂಟ ಇದರ ವತಿಯಿಂದ ಕುವೆಂಪು ಜನ್ಮದಿನ ಪ್ರಯುಕ್ತ ವಿಶ್ವಮಾನವ ದಿನಾಚರಣೆ ಹಾಗೂ ವಿಶ್ವಮಾನವತೆ ಮತ್ತು ಪ್ರಜಾಸತ್ತಾತ್ಮಕತೆ ಎಂಬ ವಿಷಯದಲ್ಲಿ ವಿಚಾರಸಂಕಿರಣವು ದಿನಾಂಕ 29 ಡಿಸೆಂಬರ್ 2025ರಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ. ವಿವೇಕ್ ರೈ ವಿಚಾರ ವೇದಿಕೆಯಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ “ಸಾಹಿತ್ಯ ರಚನೆಯ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕುವೆಂಪು ಸ್ವಾತಂತ್ರ್ಯಪೂರ್ವ ಕಾಲದ ಮೌಲ್ಯಗಳು ಮತ್ತು ಸ್ವಾತಂತ್ಯೋತ್ತರ ಭಾರತದ ದುರಂತವನ್ನು ಸೂಕ್ಷ್ಮವಾಗಿ ಗ್ರಹಿಸಿದವರು” ಎಂದು ಹೇಳಿದರು.
ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಅವರು “ಕುವೆಂಪು ಏಕಮಯ ಭಾರತದ ಬದಲು ವೈವಿಧ್ಯಮಯ ಭಾರತದ ಕನಸು ಕಂಡವರು. ಅವರು ಕಂಡ ಭಾರತದಲ್ಲಿ ವಿಜ್ಞಾನದ ಮೋಹವನ್ನು ಮೀರುವ ಗುಣ. ಪ್ರಕೃತಿಯ ಜತೆಗಿನ ಆಧ್ಯಾತ್ಮಿಕ ಅನುಭೂತಿ ಗುಣವಿದೆ. ವಿಜ್ಞಾನ ಬೆಳೆದಂತೆ ಮನುಷ್ಯ ಭ್ರಮನಿರಸನಕ್ಕೊಳಗಾಗುತ್ತಾನೆ. ಬೆರಗನ್ನು ಅನುಭವಿಸುವ ಮನಸನ್ನು ಕಳಚಿಕೊಂಡಿದ್ದಾನೆ. ಪಕೃತಿಯೆದುರು ಮನುಷ್ಯನನ್ನು ನಿಲ್ಲಿಸಿದಾಗ ವಿಜ್ಞಾನ ಒಡ್ಡಿದ ಸವಾಲುಗಳನ್ನು ಎದುರಿಸಬಹುದು. ಇದನ್ನು ಅರಿತಿದ್ದ ಕುವೆಂಪು ಅವರಿಗೆ ಕಾಡು ಜಾತ್ಯತೀತ ಭಾರತದ ರೂಪಕವಾಗಿತ್ತು” ಎಂದರು.
ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಅವರು ಮಾತನಾಡಿದರು. ಎಸ್.ವಿ.ಪಿ. ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷ ಡಾ ನಾಗಪ್ಪ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನೆಹರೂ ಚಿಂತನಾ ಕೇಂದ್ರದ ನಿರ್ದೇಶಕ ಪ್ರೊ. ಪ್ರಶಾಂತ್ ನಾಯ್ಕ್ ಅವರು ಸ್ವಾಗತಿಸಿ, ಸಹಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ವಂದಿಸಿ, ಉಪನ್ಯಾಸಕ ಡಾ. ಯಶು ಕುಮಾರ್ ನಿರೂಪಿಸಿದರು.
