08 ಏಪ್ರಿಲ್ 2023, ಉಡುಪಿ: ಶ್ರೀ ಉದಯ್ ಕುಮಾರ್ ಮತ್ತು ಶ್ರೀಮತಿ ಸಂಧ್ಯಾ ದಂಪತಿಗಳ ಸುಪುತ್ರಿಯಾದ ತನುಶ್ರೀ ಪಿತ್ರೋಡಿ ಉಡುಪಿಯ ಸೈಂಟ್ ಸಿಸಿಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ. ಯೋಗ ಗುರುಗಳಾದ ಶ್ರೀ ಹರಿರಾಜ್ ಕಿನ್ನಿಗೋಳಿ ಇವರಲ್ಲಿ ಯೋಗ ಅಭ್ಯಾಸ ಮತ್ತು ನಾಟ್ಯಾಚಾರ್ಯ ಶ್ರೀ ರಾಮಕೃಷ್ಣ ಕೊಡಂಚ ಇವರಲ್ಲಿ ಭರತನಾಟ್ಯ ಅಭ್ಯಾಸವನ್ನು ಮಾಡಿ ಗುರುಗಳಿಬ್ಬರಿಗೂ ಖ್ಯಾತಿಯನ್ನು ತಂದು ಕೊಟ್ಟ ಧೀಮಂತ ಶಿಷ್ಯೆ.
ಯೋಗಾಸನದ ಮೂಲಕ 1 ಗಿನ್ನಿಸ್ ವರ್ಲ್ಡ್ ರೆಕಾರ್ಡ್, 6 ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹಾಗೂ ಪ್ರಸ್ತುತ ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮಾಡಿರುವುದು ಈಕೆಯ ಸಾಧನೆಗೆ ಸಂದ ಗೌರವ. ತನ್ನ ಎಳವೆಯಲ್ಲಿಯೇ 5ನೇ ಯೋಗ ದಿನಾಚರಣೆಯ ಸಂದರ್ಭದಲ್ಲಿ “ಯೋಗ ರತ್ನ ಪ್ರಶಸ್ತಿ” ಮತ್ತು 27-05-2018ರಂದು ಅಭಿನಯ ಕಲಾವಿದರು ಉಡುಪಿ ಇವರಿಂದ “ನಾಟ್ಯ ಮಯೂರಿ” ಬಿರುದು ಮತ್ತು 14-11-2018ರಂದು ಇಟಲಿಯ ರೋಮ್ ನಗರದಲ್ಲಿ ನಡೆದ ವಿಶ್ವ ಗಿನ್ನಿಸ್ ದಾಖಲೆಯ ಸಾಧಕರೊಂದಿಗೆ ಸೇರಿಕೊಂಡು ಯೋಗ ಪ್ರದರ್ಶನ ನೀಡಿದ್ದು ಈಕೆಯ ಆಸಕ್ತಿ, ಕಲಿಕೆಯ ಆಳ ಹಾಗೂ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ.
ಉಡುಪಿ ಜಿಲ್ಲಾಡಳಿತ ಕೊಡಮಾಡುವ “ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ”, 07-03-2021ರಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ವತಿಯಿಂದ 2020ನೇ ಸಾಲಿನ “ವಿಶೇಷ ಬಾಲ ಪ್ರತಿಭೆ ಪ್ರಶಸ್ತಿ”, 13-10-2021ರಂದು ಚಿತ್ರದುರ್ಗದ ಮುರುಘಾ ಮಠದಿಂದ “ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿ”, ಶ್ರೀ ಅದಮಾರು ಮಠ ಉಡುಪಿ ಇವರ ವಿಶ್ವಾರ್ಪಣಮ್ 2021 ಕಾರ್ಯಕ್ರಮದಲ್ಲಿ “ಯೋಗಶ್ರೀ ಪ್ರಶಸ್ತಿ” ಇವರ ಸಾಧನೆಯ ಕಿರೀಟಕ್ಕೆ ಸೇರಿದ ಮೌಲ್ಯಯುತ ಗರಿಗಳು. ಈ ಎಳೆಯ ಪ್ರಾಯದಲ್ಲಿಯೇ 215 ಸಂಘ ಸಂಸ್ಥೆಗಳಿಂದ ಸನ್ಮಾನ ಪಡೆಯುವುದು ಎಂದರೆ ಇದು ಆಕೆಯ ಪ್ರಸಿದ್ಧಿಯ ಬಗ್ಗೆ ಎಲ್ಲರೂ ಗಮನಿಸಬೇಕಾದ ವಿಚಾರ. ಇಷ್ಟೂ ಸಂಘ ಸಂಸ್ಥೆಗಳು ಸನ್ಮಾನಿಸಿವೆ ಎಂದರೆ ಈಕೆಯ ಸಾಧನೆಯನ್ನು ಮೆಚ್ಚಿ ಪ್ರೋತ್ಸಾಹಿಸಿದ್ದಾರೆ ಎಂಬುದನ್ನು ತಿಳಿಯಬೇಕು. ಹದಿನಾಲ್ಕರ ಬಾಲೆ 510 ವೇದಿಕೆಗಳಲ್ಲಿ ಈಗಾಗಲೇ ಕಾರ್ಯಕ್ರಮ ನೀಡಿರುವುದು ಶ್ಲಾಘನೀಯ.
ನಾಟ್ಯಶಾಸ್ತ್ರದ 108 ಕರಣಗಳನ್ನು 3.29 ನಿಮಿಷಗಳಲ್ಲಿ ಮಾಡುವ ಮೂಲಕ ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದು, 8ನೇ ಬಾರಿ ವಿಶ್ವದಾಖಲೆಗೆ ಭಾಜನರಾಗಿದ್ದಾರೆ. ಬನ್ನಂಜೆ ಶ್ರೀ ನಾರಾಯಗುರು ಆಡಿಟೋರಿಯಂನಲ್ಲಿ ಮಂಗಳವಾರ ನಾಟ್ಯಶಾಸ್ತ್ರದ 4ನೇ ಅಧ್ಯಾಯದ ತಾಂಡವ ಲಕ್ಷಣಂ ನೃತ್ಯದ 108 ಭಂಗಿಗಳನ್ನು ನಿಗದಿತ 4 ನಿಮಿಷದೊಳಗೆ ಪೂರ್ಣಗೊಳಿಸಿ, ಎಲ್ಲರನ್ನೂ ಚಕಿತಗೊಳಿಸಿದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ದಕ್ಷಿಣ ಭಾರತ ಪ್ರತಿನಿಧಿ ಗೌರವ್ ಮಿತ್ತಲ್ ಪ್ರಮಾಣಪತ್ರ ನೀಡಿ ಅಭಿನಂದಿಸಿದರು.
ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿ.ರಮೇಶ್, ಕಾರ್ಯಾಧ್ಯಕ್ಷ ಸೈಯದ್ ಅಪ್ಪಲ್, ಬಡಗಬೆಟ್ಟು ಸೊಸೈಟಿ ಆಡಳಿತ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ, ಬಿಲ್ಲವ ಸೇವಾಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಕಾರ್ಯದರ್ಶಿ ಆನಂದ ಪೂಜಾರಿ, ನೃತ್ಯಗುರು ರಾಮಕೃಷ್ಣ ಕೊಡಂಚ, ಗಂಗಾಧರ ಕರ್ಕೇರ, ಶ್ರೀಕಾಂತ ಶೆಣೈ, ನಟಿ ಮಾನಸಿ ಕೊಡವೂರು, ತನುಶ್ರೀ ತಂದೆ ಉದಯ ಕುಮಾರ್, ತಾಯಿ ಸಂಧ್ಯಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಧಕರಾದ ವಿದ್ವಾನ್ ಬಾಲಸುಬ್ರಹ್ಮಣ್ಯಂ, ವಿದ್ವಾನ್ ನಾರಾಯಣ ಭಟ್, ಕಮಲಾಕ್ಷ ಆಚಾರ್ಯ, ಲಕ್ಷ್ಮೀ ಕೊಡವೂರು, ಸುಧೀರ್ ರಾವ್, ಬಾಲಚಂದ್ರ ರಾವ್, ಸಂಗೀತ ಬಾಲಚಂದ್ರ ಅವರನ್ನು ಸನ್ಮಾನಿಸಲಾಯಿತು.