31 ಮಾರ್ಚ್ 2023, ಕೋಟ: ಕೋಟ ರಸರಂಗ ತಂಡವು ಕಾರಂತ ಥೀಂ ಪಾರ್ಕ್‌ನಲ್ಲಿ ದಿನಾಂಕ 26-03-2023ರಂದು ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ, ಹಚ್ಚೇವು ಕನ್ನಡದ ದೀಪ ಸರಣಿ ಕಾರ್ಯಕ್ರಮ -3 ಇದರ ಅಧ್ಯಕ್ಷತೆಯನ್ನು ವಹಿಸಿದ್ದ ಕ.ಸಾ.ಪ. ಬ್ರಹ್ಮಾವರ ಘಟಕದ ಅಧ್ಯಕ್ಷ, ರಂಗಕರ್ಮಿ ಗುಂಡ್ಮಿ ರಾಮಚಂದ್ರ ಐತಾಳ್ ಇವರು “ಜನರ ಬಳಿಗೇ ಹೋಗಿ ಕಾರ್ಯಕ್ರಮಗಳನ್ನು ಮಾಡಿದಾಗ ಅದು ಹೆಚ್ಚು ಹೆಚ್ಚು ಜನರನ್ನು ತಲುಪುತ್ತದೆ” ಎಂದು ನುಡಿದರು.
ಸಾಹಿತಿ ಸಂಘಟಕ ನರೇಂದ್ರ ಕುಮಾರ್ ಕೋಟ ಮಾತನಾಡಿ, ಮಕ್ಕಳ ರಂಗಭೂಮಿ ಚಟುವಟಿಕೆಗಳು ಇನ್ನೂ ಹೆಚ್ಚು ಹೆಚ್ಚು ನಡೆಯಬೇಕು ಎಂದರು. ಕಲಾವಿದೆ ಸುಶೀಲಾ ಹೊಳ್ಳ ಅವರು ಈಜಿಪ್ಟ್ ಅಭಿನೇತ್ರಿ ಸಮೀಹಾ ಅಯೌಬ್ -2023ರ ವಿಶ್ವ ರಂಗಭೂಮಿ ಸಂದೇಶ ವಾಚಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಶಿಕ್ಷಕರೂ ಕಲಾಪೋಷಕರಾದ ಶಿವಾನಂದ ಮಯ್ಯ ಉಪಸ್ಥಿತರಿದ್ದರು.
ಕನ್ನಡ ಉತ್ಸವದ ಗೌರವ ಸನ್ಮಾನವನ್ನು ನರೇಂದ್ರ ಕುಮಾರ್ ಕೋಟ ಅವರಿಗೆ, ರಾಷ್ಟ್ರೀಯ ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಹಾಗೂ ರಂಗ ಗೌರವವನ್ನು ಸುಲೋಚನಾ ನಾಯರಿ ಅವರಿಗೆ ನೀಡಲಾಯಿತು. ಉನ್ನತಿ ಹಾಗೂ ಬಳಗ ಕನ್ನಡಗೀತೆ ಹಾಡಿದರು. ರಸರಂಗದ ಅಧ್ಯಕ್ಷೆ ಸುಧಾ ಮಣೂರು ಪ್ರಸ್ತಾವಿಸಿ ಸ್ವಾಗತಿಸಿದರು. ಸದಸ್ಯೆ ಪಾರ್ವತಿ ಮಯ್ಯ ವಂದಿಸಿದರು. ವಸಂತಿ ಹ೦ದಟ್ಟು ನಿರೂಪಿಸಿದರು.
ಬಳಿಕ ರಸರಂಗದ ತಂಡದಿಂದ ಮಾಸ್ತಿ ವೆಂಕಟೇಶ ಐಯ್ಯಂಗಾರ್ ರಚನೆ, ಸುಧಾ ಮಣೂರು ನಿರ್ದೇಶನದ ‘ಯಶೋಧರಾ’ ನಾಟಕ ಪ್ರದರ್ಶನಗೊಂಡಿತು.
“ಯಶೋಧರಾ” : ಒಂದು ವ್ಯಾಖ್ಯಾನ
“.. .. .. .. .. ಎಲ್ಲಾ ಸುಖದಿ ಜೊತೆಗೆ ಕರೆದವರು ಮುಕ್ತಿಯ ಸುಖಕೆ ಒಬ್ಬರೇ ನಡೆದರಮ್ಮಾ ; ನನ್ನ ಬಿಟ್ಟು ಮರೆಯಾದರು…” ಯಶೋಧರೆಯ ಮೂಕಸಂಕಟವನ್ನೆಲ್ಲಾ ಈ ಒಂದು ನುಡಿಯಲ್ಲಿ ಮಾಸ್ತಿಯವರು ಸೂಸಿ ಹರಿಸಿದ್ದಾರೆ. ಪತಿಯೊಡನೆ ಒಂದಾಗಿ, ಪತಿಯ ಬಾಳಿನ ಬೆಳಕಾಗಿ ನಿಲ್ಲುವ ಹೆಣ್ಣು ಹೃದಯದ ಅಪಾರ ಕರುಣೆ, ಅನಂತ ವಾತ್ಸಲ್ಯ, ತುಂಬು ಹೃದಯದ ಸೌಂದರ್ಯ ವೈಭವಗಳೆಲ್ಲ ಪುರುಷನ ಮುಕ್ತಿ ಸಾಧನೆಗೆ ಬಾಧಕ ಮಾತ್ರವೇನು? ಪುರುಷನು ಪ್ರಕೃತಿಯೊಡನೊಂದುಗೂಡಿ ಅರಳಿಸುವ ಬಾಳ ಸಂಭ್ರಮ ಶಾಂತಿ ಸೌರಭಗಳನ್ನು ಧಿಕ್ಕರಿಸುವುದರಲ್ಲಿಯೇ ಆತನ ಸ್ವಾತಂತ್ರ್ಯವುಂಟೆ ? ಆ ಸ್ವಾತಂತ್ರ್ಯ ಸಾಧನೆಯಲ್ಲಿ ಸ್ತ್ರೀ ಹೃದಯದ ಆಕ್ರಂದನಕ್ಕೇನು ಅರ್ಥವಿಲ್ಲವೇನು ? ಅವಳೊಂದು ಜೀವನೆಂಬ ಕಲ್ಪನೆ ಇಲ್ಲವೇನು? ಬಾಳು ಬೇಕಾದಾಗ ಬಾಳ ರಾಣಿಯಾಗಿ ಬ೦ದ ಸ್ತ್ರೀ, ಬಾಳು ನೀಡಬಂದ ತಾಯಿ, ಬಾಳು ಬೆಳಸ ಬಂದ ಚೆಲುವಿನ ಮೂರ್ತಿ, ಪ್ರೇಮದ ನಿಧಿ, ಮುಕ್ತಿಯ ಹಂಬಲ ಹುಟ್ಟಿದಾಗ ಒಮ್ಮೆಲೇ ದೂಡಿಬಿಡಲು ಅವಳೇನು ಆಚೇತನ ವಸ್ತುವೆ ? ಈ ಸಮಸ್ಯೆಗಳು ಯಶೋಧರೆಯ ಬೆಂದ ಹೃದಯದಲ್ಲಿ ನಿರಂತರ, ಕಾದ ಸಲಾಕೆಗಳಂತೆ ತುಂಬಿ ನಿಂತಿವೆ. ಆ ಸಮಸ್ಯೆಗಳಿಗೆ ಪರಿಹಾರವೇನು? ಅವಳ ಪತಿಯಾದ ಸಿದ್ಧಾರ್ಥನು ಬುದ್ಧನಾಗಿ ಬಂದಾಗ ಯಶೋಧರೆಯ ಬಾಳ ಈ ಸಮಸ್ಯೆಯನ್ನು ಬಿಡಿಸಿದನೆ ? ಹಾಗೆ ಅವಳ ಸಮಸ್ಯೆಯ ಪರಿಹಾರವಾದಾಗ ಯಶೋಧರೆಯ ಮನಃಸ್ಥಿತಿ ಯಾವ ಬಗೆಯಲ್ಲಿ ಅಂತಃಪರಿವರ್ತನೆ ಹೊಂದಿತು? ಆ ಸ್ತ್ರೀ ಹೃದಯದ ಪರಿವರ್ತನದಲ್ಲಿ ಯಾವ ಸೂತ್ರವಿದೆ? ಎಂಬ ಮಾತುಗಳನ್ನರಿಯುವುದರಲ್ಲಿ ಶ್ರೀ ಮಾಸ್ತಿಯವರ ಯಶೋಧರಾ ಪಾತ್ರಸೃಷ್ಟಿಯ ಅರ್ಥವಾಗುತ್ತದೆ.
ಇಡಿಯ ನಾಟಕದ ತುಂಬೆಲ್ಲಾ ಎದ್ದುನಿಲ್ಲುವ ಪಾತ್ರವೆಂದರೆ ಯಶೋಧರೆಯೆ೦ದೇ ಹೇಳಬೇಕು. ನಾಟಕದ ಕೊನೆಯ ಭಾಗಗಳಲ್ಲಿ ಬುದ್ಧನ ವ್ಯಕ್ತಿತ್ವ ಪರಿಸ್ಪುಟವಾಗಿ ಬಹಳ ಸೂಕ್ಷ್ಮವಾಗಿ ಅರಳಿದರೂ, ಆ ಎಲ್ಲಾ ವ್ಯಕ್ತಿತ್ವವನ್ನು ವ್ಯಾಪಿಸಿ ನಿ೦ತ ಒ೦ದು ಸಮಸ್ಯೆಯೆಂದರೆ ಯಶೋಧರೆಯಾಗಿದ್ದಾಳೆ. ಅನಂತ ಮುಖದ ಬುದ್ಧನ ವ್ಯಕ್ತಿತ್ವದಲ್ಲಿ ಯಶೋಧರೆಗೊಂದು ವಿಶಿಷ್ಟ ಸ್ಥಾನವಿದೆ. ಆ ಸ್ಥಾನವನ್ನು ಗುರುತಿಸಿ, ಮಾಸ್ತಿಯವರು ಯಶೋಧರೆಯ ವ್ಯಥಿತ ಜೀವನ, ಅವಳ ತಪಸ್ಸು, ಆ ಸುಕುಮಾರ ಸೌಂದರ್ಯಗಳ ಸಾರ್ಥಕತೆಯೇನು ಎಂಬುದನ್ನು ಅರಳಿಸಿದ್ದಾರೆ. ಆ ದೃಷ್ಟಿಯಿಂದ ನಾಟಕದ ಉತ್ತರಾರ್ಧದಲ್ಲಿ ಯಶೋಧರೆಯ ತಪದ ಸಿದ್ಧಿಯನ್ನೇ ಕಾಣುತ್ತೇವೆ. ಅವಳ ವ್ಯಕ್ತಿತ್ವವೂ ಪೂರ್ಣತೆಯನ್ನು ಪಡೆದುದನ್ನು ಕಾಣುತ್ತೇವೆ.
ವ್ಯಕ್ತಿತ್ವದಲ್ಲಿಯೊಂದು ಸಮಸ್ಯೆಯನ್ನು ಕಾಣುವುದು ತಾತ್ವಿಕ ದೃಷ್ಟಿಯಾದರೆ, ಒ೦ದೊ೦ದು ಸಮಸ್ಯೆಯಲ್ಲೂ ಒಂದೊಂದು ವ್ಯಕ್ತಿಯ ಮುಖವನ್ನರಸುವುದು ಕಾವ್ಯದೃಷ್ಟಿ. ಈ ಎರಡು ದೃಷ್ಟಿಗಳ ಸುಂದರ ಸಮನ್ವಯವು ಮಾಸ್ತಿಯವರಲ್ಲಿದೆ. ಅ೦ತೆಯೇ ಅವರು ರಾಗವಿರಾಗಗಳ ಸಮನ್ವಯದ ಸಮಸ್ಯೆಯನ್ನು ಯಶೋಧರಾ ಬುದ್ಧರ ರೂಪದಲ್ಲಿ ಅರಳಿಸಿ ತೋರಿಸಿದ್ದಾರೆ. ಸಮಸ್ಯೆಗಳಲ್ಲಿ ಮಾನವೀಯ ಹೃದಯ, ಅದರ ಸೂಕ್ಷ್ಮ ಭಾವನೆಗಳ ಏರಿಳಿತ, ಆ ಚಿತ್ತಕ್ಷೋಭೆ, ಆದರೆ ಶಾ೦ತಿಗಳು ತೆರೆತೆರೆಯಾಗಿ ನಮ್ಮ ಕಣ್ಣು ಮುಂದೆ ರೂಪಗೊಂಡು ನಿಲ್ಲುತ್ತವೆ.
ನಾಟಕದ ಪ್ರಥಮ ದೃಶ್ಯದಲ್ಲಿ ನಾವು ಯಶೋಧರೆಯನ್ನು ಮೊದಲ ಸಲ ಕಾಣುತ್ತೇವೆ. ಪತಿ ದೂರವಾಗಿ ಹತ್ತು ವರ್ಷಗಳು ಉರುಳಿವೆ. ರಾಜವೈಭವದ ಸಮಸ್ತ ಸಂಭ್ರಮಗಳ ಮಧ್ಯದಲ್ಲಿ ಅವಳಿಗಾಗಿ ಅಗ್ನಿ ಕುಂಡವೊಂದು ನಿರ್ಮಿತವಾಗಿದೆ. ಸುಸಂಸ್ಕೃತ ಹೃದಯ, ಸುಕುಮಾರ ರಾಜಕುವರಿ, ಹತ್ತು ವರ್ಷದ ದೀರ್ಘಾವಧಿಯವರೆಗೆ ಪತಿಯಿಂದ ದೂರವಾಗಿರಬೇಕಾದಾಗ ಅವಳ ನೋವು, ಆ ನೋವಿನ ಪರಿಣಾಮವು ಆ ವ್ಯಕ್ತಿತ್ವದ ಮೇಲಾದ ಬಗೆಗಳಲ್ಲಿ ಕಂಡುಬರುವ ಮೃದುಮುಧುರ ಕರುಣರಸವನ್ನು, ನಾವು ಪ್ರಾರಂಭದಲ್ಲಿಯೇ ಅನುಭವಿಸುತ್ತೇವೆ. ಸಂಭಾಷಣೆ ಕೃತ್ರಿಮವಾಗದ೦ತೆ ವ್ಯಕ್ತಿತ್ವದ ಹಿನ್ನೆಲೆಯನ್ನು ಬಹು ಸುಂದರವಾಗಿ ನಿರೂಪಿಸುವ ಕಲಾವಂತಿಕೆಯನ್ನು ಪ್ರಥಮ ದೃಶ್ಯದಲ್ಲಿಯೇ ನೋಡುತ್ತೇವೆ. ಪತಿಯನ್ನಗಲಿದ ಹತ್ತನೆಯ ವರ್ಷ ಪತಿಯ ಚಿತ್ರಪಟವನ್ನು ನೋಡುತ್ತ ಯಶೋಧರೆ ಕುಳಿತಿದ್ದಾಳೆ. ಅ ಚಿತ್ರಪಟವೇ ಅವಳ ವ್ಯಥೆಯನ್ನು ಉದ್ದೀಪನಗೊಳಿಸುವುದಕ್ಕೆ ಸಾಕಾಗಿದೆ. ಇಂಥದರಲ್ಲಿ ಘೋರ ಸ್ವಪ್ನ ಬೇರೆ. ಮರವೊಂದು ಬಿಳಲಿನಿಂದ ದೂರ ಸರಿದುದಲ್ಲದೆ ತನ್ನ ಎಳೆಯನನ್ನೂ ಕೈಮಾಡಿ ಕರೆದು ಮಾತೃಹೃದಯದ ಎದೆಗಿಚ್ಚನ್ನು ಇನ್ನಿಷ್ಟು ಕೆದರುತ್ತಿರುವ ಸಾಂಕೇತಿಕ ಸ್ವಪ್ನವದು. ಸಿದ್ಧಾರ್ಥ ಮರೆಯಾದ ! ಇನ್ನು ಎಳೆಯ ಕಂದನಿಗೂ ಆ ವಿರಾಗದ ಉರಿಗಾಳಿ ಬಡಿಯುವದೇ? ಈ ಆಘಾತವನ್ನು ಆ ಬೆಂದ ಕರುಳು ತಡೆಯಬಹುದೆ ? ಈಗಾಗಲೇ ಪತಿಯಗಲಿಕೆಯ ನೋವು ದಿನದಿನಕ್ಕೆ ಹೊಸಹೊಸತಾಗಿ “ಉಪವನದ ಅಶ್ವತ್ಥ ನೆಲೆಯ ಕಟ್ಟೆಯ ಕದರಿ ಬೇರೂರಿ ಬೆಳೆದಂತೆ, ನನ್ನ ಜೀವನ ಸೀಳಿ ಬೆಳೆಯುತ್ತಿರುವುದು ತಾಯಿ; ತಡೆಯಲಾರೆನು ನಾನು: ತಡೆಯಲಾರೆ; ನಾನು ತಡೆಯಲಾರೆ.” ಬಹುಕಾಲ ಒತ್ತಿ ಒತ್ತಿ ಹತ್ತಿಕ್ಕಿದ ಕೊರಗು ಆಗಾಗ ಕರುಳು ಹಿಂಡಿ ಮರುಕಳಿಸುವಂತೆ “ನನ್ನ ಜೀವ ಸೀಳಿ ಬೆಳೆಯುತಿರುವುದು ತಾಯಿ, ತಡೆಯಲಾರೆನು ನಾನು….” ಎ೦ದು ಉಕ್ಕಿಬರುತ್ತಿದೆ. ನೊಂದ ಮನಕ್ಕೆ ನೋವೇ ಒಂದು ಕತ್ತಲೆಯ ಕೋಟೆಯಾಗಿ ಒಳಗಿದ್ದ ಆನಂದವನ್ನೆಲ್ಲ ಮುತ್ತಿಬಿಡುತ್ತದೆ. ನೂರೆಂಟು ದುಃಸ್ವಪ್ನಗಳು, ನೂರೆಂಟು ಕಹಿನೆನಹುಗಳು ಕೋಟಿ ಕೋಟಿ ಸಂಖ್ಯೆಯಲ್ಲಿ ಮುತ್ತಿಕೊಂಡು ಬರುವ ನಿರಾಶೆಯ ಕಾರ್ಮುಗಿಲುಗಳು, ಅಂತರಂಗವನ್ನು ತುಂಬಿ ನಿಲ್ಲುತ್ತವೆ. ಅವು “ಲೋಕಕೇ ಶಾ೦ತಿಯನ್ನು ತರುವ ಚಂದ್ರನ ಕಾಂತಿ ನನ್ನೊಳಗೆ ಬೆಳಗದೆವೊಲೆನ್ನ ಹೃದಯದ ಮಧ್ಯೆ ಕತ್ತಲೆಯ ಕೋಟೆಯನು ಕಟ್ಟಿದವು.”
ಪುನಃ ಪುನಃ ಒಂದು ಪ್ರಶ್ನೆ ಅವಳಿಗೆದುರಾಗಿ ಉತ್ತರ ಸಿಕ್ಕದೆ ವೃಥೆ ಮೂಡುತ್ತಿದೆ. ಪತಿ ತನ್ನನ್ನು ತೊರೆದನೇಕೆ ? ಅವನಿಗೆ ತಾನೆಲ್ಲಿ ಆತಂಕಳಾಗುತ್ತಿದ್ದೆ ? ರಾಹುಲನಂತಹ ಮುದ್ದು ಕುವರನನ್ನು ಅವರ ಬಾಳಿಗಿತ್ತು ಜೀವನವನ್ನೊ೦ದು ಆನಂದಸ್ರೋತವನ್ನಾಗಿ ಮಾಡಿದ ತನ್ನ ಸಹಸಂಗಾತಿಯನ್ನು ತೊರೆದು ಮುಕ್ತಿಗೆ ತಾವು ಏಕಾಂಗಿಯಾಗಿ ಹೋದರಲ್ಲ. ಆ ವ್ಯಥೆ, ಪತಿವರ್ಜಿತಳೆಂಬ ಕೊರಗು, ಬಹು ಆಳವಾಗಿದೆ. “ಎಲ್ಲಾ ಸುಖದಿ ಜೊತೆಗೆ ಕರೆದವರು ಮುಕ್ತಿಯ ಸುಖಕೆ ಒಬ್ಬರೇ ನಡೆದರಮ್ಮಾ ; ನನ್ನ ಬಿಟ್ಟು ಮರೆಯಾದರು….”
ಯಶೋಧರೆಯ ಅ೦ತರಾಳದಲ್ಲಿ ನೆಲೆಸಿದ ಈ ಒ೦ದು ವ್ಯಥೆಯೇ ನಾನಾ ಮುಖವಾಗಿ ಅವಳ ನಡೆನುಡಿಯಲ್ಲಿ ವ್ಯಕ್ತವಾಗುತ್ತದೆ. ಒಮ್ಮೆ ಸ್ವಾಭಿಮಾನವಾಗಿ, ಒಮ್ಮೆ ಹಟವಾಗಿ, ಮತ್ತೊಮ್ಮೆ ಕೊಂಕುನುಡಿಯಾಗಿ, ಮಗುದೊಮ್ಮೆ ಅಣಕವಾಗಿ, ಕೊನೆಯಲ್ಲಿ ಎದೆಕೊರೆವ ನಿಟ್ಟುಸಿರಾಗಿ ಹೊರ ಬರುತ್ತಿದೆ. ಈ ಪಾತ್ರ ಸೃಷ್ಟಿಯಲ್ಲಿ ಕಂಡುಬರುವ ಉದ್ದೀಪನ ವಿಭಾವಗಳ ಸೂಕ್ಷ್ಮತೆಯನ್ನೂ, ಅನುಭಾವಗಳ ವರ್ಣಮಯ ಸೌಕುಮಾರ್ಯವನ್ನೂ ನಾಟಕದುದ್ದಕ್ಕೂ ನಾವು ಕಾಣುತ್ತೇವೆ.